ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವುಡ್‌ಲ್ಯಾಂಡ್ಸ್‌ನಲ್ಲಿ ಕರಕುಶಲ ವಸ್ತು ಪ್ರದರ್ಶನ

Last Updated 7 ಡಿಸೆಂಬರ್ 2013, 8:10 IST
ಅಕ್ಷರ ಗಾತ್ರ

ಮಂಗಳೂರು: ಕರಕುಶಲ ವಸ್ತುಗಳನ್ನು ಇಷ್ಟಪಡುವವರಿಗೊಂದು ಅವಕಾಶ ಇಲ್ಲಿದೆ. ಮಂಗಳೂರಿನ ವುಡ್‌ಲ್ಯಾಂಡ್ಸ್‌ ಹೋಟೆಲ್‌ ಹಿಂಭಾಗದ ಹಾಲ್‌ನಲ್ಲಿ ‘ಕಾಟೇಜ್‌ ಮೇಳ–2013’ ಆಯೋಜಿಸ­ಲಾಗಿದೆ. 10 ವರ್ಷಗಳ ನಂತರ ಈ ಕಾಟೇಜ್‌ ಮೇಳವನ್ನು ನಗರದಲ್ಲಿ ಆಯೋಜಿಸಲಾಗಿದ್ದು ರಫ್ತು ಗುಣಮಟ್ಟದ ಸುಂದರ ವಸ್ತುಗಳು ಗ್ರಾಹಕರ ಆಯ್ಕೆಗಾಗಿ ಇವೆ.

ದೇಶದ ವಿವಿಧೆಡೆಗಳಿಂದ ಬಂದ ಮಾರಾಟಗಾರರು ಇಲ್ಲಿದ್ದಾರೆ. ಕೇಂದ್ರ ಸರ್ಕಾರದ ಸೆಂಟ್ರಲ್‌ ಕಾಟೇಜ್‌ ಇಂಡಸ್ಟ್ರಿ ಎಂಪೋರಿಯಂ (ಸಿಸಿಐಇ) ವತಿಯಿಂದ ಈ ಪ್ರದರ್ಶನ ನಡೆಯುತ್ತಿದೆ.

ಹೈದರಾಬಾದ್‌ ಮುತ್ತಿನ ಸಂಗ್ರಹ, ಹಳೇ ಶೈಲಿಯ ಒಡವೆಗಳು, ಸಾವಯವ ಪರಿಕಲ್ಪನೆಯಲ್ಲಿ ತಯಾರಿಸಿದ ಕೇರಳದ ಬೆಡ್‌ಶೀಡ್‌ಗಳು, ದೆಹಲಿಯ ಮರದ ಕೆತ್ತನೆಯ ವಸ್ತುಗಳು, ಕೋಲ್ಕತ್ತ ಸೀರೆಗಳು ಕಾಶ್ಮೀರಿ ಕುರ್ತಾ ಮತ್ತು ಜಮಖಾನೆಗಳ ಸುಂದರ ಆಯ್ಕೆಗಳಿವೆ. ರಫ್ತು ಗುಣಮಟ್ಟದ ಟೆರ್ರಾಕೋಟಾ ಅಲಂಕಾರಿಕ ವಸ್ತುಗಳು ಕೂಡ ಇವೆ.

ಟೆರ್ರಾಕೋಟಾ ವಸ್ತುಗಳ ಮಾರಾಟ ಮಳಿಗೆಯಲ್ಲಿ ಮಂಗಳೂರಿನವರೇ ಆದ ಮರ್ಲಿನ್‌ ರಸ್ಕಿನಾ, ‘ಅತ್ಯುತ್ತಮ ತರಬೇತಿಗಳನ್ನು ಪಡೆದ ಬಳಿಕ ಟೆರ್ರಾಕೋಟಾ ವಸ್ತುಗಳ ತಯಾರಿಕೆಯ ಕ್ಷೇತ್ರಕ್ಕೆ ಇಳಿದೆ. ಕಳೆದ 20 ವರ್ಷಗಳಿಂದ ಇಂತಹ ತರಬೇತಿಗಳನ್ನು ನಾನೂ ಆಯೋಜಿಸುತ್ತಿದ್ದೇನೆ’ ಎಂದು  ‘ಪ್ರಜಾವಾಣಿ’ಯೊಂದಿಗೆ ಮಾತನಾಡುತ್ತ ಹೇಳಿದರು.

ಕಾಶ್ಮೀರದ ಸಜ್ಜದ್‌ ಖಾನ್‌, ಕಾಶ್ಮೀರಿ ಶೈಲಿಯ ಬೆಳ್ಳಿಯ ಆಭರಣಗಳ ಮಾರಾಟ ಮಳಿಗೆಯನ್ನು ತೆರೆದಿದ್ದಾರೆ. ‘ಕೃತಕ ಬೆಳ್ಳಿಯ ಆಭರಣಗಳಿಂದ ಚರ್ಮಕ್ಕೆ ತೊಂದರೆಯಾಗುವುದಾಗಿ ಮಹಿಳೆಯರು ಆಕ್ಷೇಪ ವ್ಯಕ್ತಪಡಿಸುವುದುಂಟು. ಆದರೆ ಬೆಳ್ಳಿಯ ಈ ಆಭರಣಗಳು ಫ್ಯಾಶನ್‌­ಗೂ ಸೈ. ಆರೋಗ್ಯಕ್ಕೂ ಸೈ. ಕೈಯಲ್ಲೇ ತಯಾರಿಸಿದ ಈ ಕುಸುರಿ ಆಭರಣಗಳ ದರ ಸುಮಾರು ₨ 1000 ಆಸುಪಾಸಿನಲ್ಲಿವೆ’ ಎನ್ನುತ್ತಾರೆ ಅವರು.

ಕೇರಳದ ಮುರಳೀಧರ್‌ ತಂಬಿ ಸಾವಯವ ಪರಿಕಲ್ಪನೆಯ ಬೆಡ್‌ಶೀಟ್‌­ಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಸುಮಾರು 400 ರೂಪಾಯಿಗಳಿಂದ ಆರಂಭವಾಗುವ ಬೆಡ್‌ಶೀಟ್‌ಗಳು ಕಿಂಗ್‌ ಸೈಜ್‌ ಮಂಚಗಳಿಗೂ ಹೊಂದುವಂತಹ ಗಾತ್ರದಲ್ಲಿ ಲಭ್ಯ.

‘ಎರಡು ವರ್ಷಕ್ಕೊಮ್ಮೆ ಈ ರೀತಿಯ ವಸ್ತುಪ್ರದರ್ಶನ ಮತ್ತು ಮೇಳ’ ನಡೆಸಲಾಗುತ್ತದೆ. ಇಂತಹ ಪ್ರದರ್ಶನಗಳು ಬಹುತೇಕ ಬೆಂಗಳೂರಿನಲ್ಲಿಯೇ ನಡೆಯುತ್ತವೆ. 2003ರಲ್ಲಿ ಮಂಗಳೂರಿನಲ್ಲಿ ನಡೆದ ಪ್ರದರ್ಶನಕ್ಕೆ ಒಳ್ಳೆ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸೆಂಟ್ರಲ್‌ ಕಾಟೇಜ್‌ ಇಂಡಸ್ಟ್ರಿ ಎಂಪೋರಿಯಂನ ಘಟಕವನ್ನು ಮಂಗಳೂರಿನಲ್ಲಿ ತೆರೆಯುವ ಉದ್ದೇಶದೊಂದಿಗೆ ಪ್ರಸ್ತಾವನೆಯನ್ನು ಕಳುಹಿಸಿದಾಗ, ಇಲ್ಲಿನ ಜನರ ಆಸಕ್ತಿಯನ್ನು ಗಮನಿಸಲು ಮತ್ತೊಮ್ಮೆ ಪ್ರದರ್ಶನ ಆಯೋಜಿಸುವಂತೆ ಸರ್ಕಾರ ಸೂಚಿಸಿದೆ.  ಆದ್ದರಿಂದ ಈ ಪ್ರದರ್ಶನ ಆಯೋಜಸಿದ್ದೇವೆ’ ಎನ್ನುತ್ತಾರೆ ಆಯೋಜಕರಾದ ಇನಾಯತ್‌ ಶಾ.

ಬಸ್ತರ್‌ನ ಪೀಠೋಪಕರಣ, ಢೋಕ್ರಾ ಕಂಚಿನ ಕುಸುರಿ ವಸ್ತುಗಳು, ದೆಹಲಿಯ ಪೀಠೋಪಕರಣ, ಮಹಾರಾಷ್ಟ್ರದ ವರ್ಲಿ ಕಲೆ, ವರ್ಲಿ ಮತ್ತು ಬಸ್ತರ್‌ ಕಲೆಯ ಸಮ್ಮಿಲನದ ವಸ್ತುಗಳು, ಬಿಹಾರದ ಮಧುಬನಿ ಚಿತ್ರಕಲೆಗಳ ವಸ್ತುಗಳು ಇಲ್ಲಿ ಲಭ್ಯ. ವಸ್ತು ಪ್ರದರ್ಶನ ಡಿ. 15ರವರೆಗೆ ತೆರೆದಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT