ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿ... ಪ್ರೀತಿಯ ನಡುವೆ

Last Updated 26 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನಾಟ್ಯಾಧಿದೇವತೆ ನಟರಾಜ `ಪುರುಷ'ನಾದರೂ ನೃತ್ಯ ಕ್ಷೇತ್ರದಲ್ಲಿ ಮಾತ್ರ ಮಹಿಳೆಯರದೇ ಮೇಲುಗೈ. ಇಂದು ನೃತ್ಯವನ್ನೂ ಜೊತೆಯಾಗಿ ಇಟ್ಟುಕೊಂಡು ಬೇರೆ ಬೇರೆ ಕ್ಷೇತ್ರಗಳಲ್ಲಿ ವೃತ್ತಿಪರರಾಗಿರುವ ಮಹಿಳೆಯರು ಹಲವರು.
   
`ನೀವು ಡಾನ್ಸರ್ರಾ? ಡಾಕ್ಟರ್ರಾ? ಪೇಷಂಟ್ ನೋಡೋದೇ ಇಲ್ವಾ, ಅಥ್ವಾ ನೀವು ಪಿ.ಎಚ್.ಡಿ. ಡಾಕ್ಟ್ರಾ?'

`ನಿಮಗೇನಪ್ಪ, ಡಾಕ್ಟ್ರು? ಬೇರೆ ನೃತ್ಯಗಾರರ ಕಷ್ಟಗಳೇನೂ ನಿಮಗೆ ಇಲ್ವಲ್ಲ?'

`ನನಗೂ ನಿಮ್ಮ ಹಾಗೆ ಡಾಕ್ಟ್ರು- ಡಾನ್ಸರ್ರು ಎರಡೂ ಆಗಬೇಕು ಮೇಡಂ. ನೀವು ಹೇಗೆ ಇದನ್ನು ಮಾಡಿದ್ರಿ ಅಂತ ಸ್ವಲ್ಪ ಹೇಳಿಕೊಡ್ತೀರಾ?'

ನೃತ್ಯ ಕಲಾವಿದೆಯೂ- ವೈದ್ಯಳೂ ಆಗಿರುವ ನಾನು ಸಾಮಾನ್ಯವಾಗಿ ಎದುರಿಸುವ ಪ್ರಶ್ನೆಗಳಿವು.

`ಇವರು ವೃತ್ತಿಯಿಂದ ವೈದ್ಯೆ, ಪ್ರವೃತ್ತಿಯಿಂದ ನೃತ್ಯ ಕಲಾವಿದೆ' ಎಂಬ ಪರಿಚಯದಿಂದ ನಾನು `ಇವೆರಡೂ ಇವರಿಗೆ ವೃತ್ತಿಗಳು' (`ಮಹಿಳೆ' ಎಂಬ ಮುಖ್ಯ ವೃತ್ತಿಯೂ ಸೇರಿದಂತೆ!) ಎಂಬಲ್ಲಿಗೆ ಬಂದು ಹಲವು ವರ್ಷಗಳಾಗಿವೆ. ಆದರೆ ವಿಜ್ಞಾನವಾದ ವೈದ್ಯಕೀಯ ವೃತ್ತಿಗೂ, ಕಲೆಯಾದ ನೃತ್ಯಕ್ಕೂ ಇರಬಹುದಾದ ನಂಟನ್ನು ನಾನು ಮತ್ತೆ ಮತ್ತೆ ಶೋಧಿಸುತ್ತಲೇ ಇದ್ದೇನೆ. ಹೊಸ ಹೊಸ ಸತ್ಯಗಳನ್ನು ಕಂಡುಕೊಳ್ಳುತ್ತಲೇ ಇದ್ದೇನೆ.

ನಾನು ನೃತ್ಯ ಕಲಿಯಲಾರಂಭಿಸಿದ್ದು 7ನೇ ವಯಸ್ಸಿನಲ್ಲಿ. ನನ್ನ ನೃತ್ಯ ಗುರುವಿಗೆ 15 ಶಿಷ್ಯರನ್ನು ಹೇಗಾದರೂ ಕೊಡಿಸಿಕೊಡುತ್ತೇನೆ ಎಂಬ ನನ್ನಮ್ಮನ ಮಾತಿನಿಂದ. 15ಕ್ಕೆ ಒಂದು ಕಡಿಮೆ ಇದ್ದ ಸಂದರ್ಭದಲ್ಲಿ ಆ ಸಂಖ್ಯೆಯನ್ನು ಪೂರ್ಣಗೊಳಿಸಲು ನೃತ್ಯಕ್ಕೆ ಸೇರಿಕೊಂಡವಳು. ಆದರೆ ನೃತ್ಯದ ಶಿಸ್ತು, ಕ್ರಮಬದ್ಧ ಕಲಿಕೆ, ಅದು ಅಪೇಕ್ಷಿಸುವ ವೈವಿಧ್ಯಮಯ ಜ್ಞಾನದ ಬಗ್ಗೆ ಇದ್ದ ಆಸಕ್ತಿ ನನ್ನನ್ನು ನೃತ್ಯ ಕಲಿಕೆ ಮುಂದುವರಿಸುವಂತೆ ಮಾಡಿತು. ಹವ್ಯಾಸವಾಗಿಯಷ್ಟೇ ಬಿಡದೆ ವೃತ್ತಿಯಾಗಿ ಅದನ್ನು ಕೈಗೆತ್ತಿಕೊಳ್ಳುವಂತೆ ಮಾಡಿತು.

ಅದೇ ವೈದ್ಯಕೀಯ ವಿಜ್ಞಾನ? ತಂದೆ `ಮನೋವೈದ್ಯ'ರಾದ್ದರಿಂದ ಮನೋವೈದ್ಯಕೀಯ ಕ್ಷೇತ್ರವನ್ನು ಹತ್ತಿರದಿಂದ ಕಂಡಿದ್ದೆ. ವೈದ್ಯಕೀಯ ಕ್ಷೇತ್ರದಲ್ಲೇ ವಿಶಿಷ್ಟ ಕ್ಷೇತ್ರ ಮನೋವೈದ್ಯಕೀಯ. ಅದು ವಿಜ್ಞಾನವಾದರೂ ಮನಸ್ಸು- ಸಂಬಂಧಗಳನ್ನು ವಿಶ್ಲೇಷಿಸುವ ಕಲೆ! ಹಾಗಾಗಿ ಎಂ.ಬಿ.ಬಿ.ಎಸ್. ಪದವಿಯ ನಂತರದ ನನ್ನ ಆಯ್ಕೆ ಸಹಜವಾಗಿ ಮನೋವೈದ್ಯಕೀಯವಾಗಿತ್ತು. ವಿಜ್ಞಾನವನ್ನು ಬಿಡಲೊಲ್ಲದ, ಕಲೆಯನ್ನು ಮುಂದುವರಿಸುವ ಪ್ರಬಲ ಆಸೆ ನನ್ನದಾಗಿತ್ತು.

ನೃತ್ಯ- ಸಂಗೀತ ಕ್ಷೇತ್ರದ ಆಳವಾದ ಪರಿಚಯ ಇರದವರಿಗೆ ಗೊತ್ತಿರದ ವಿಷಯಗಳು ಹಲವು. ಒಬ್ಬ ನೃತ್ಯ ಕಲಾವಿದೆ- ಸಂಗೀತ ಕಲಾವಿದೆಯಾಗಿ ಬೆಳೆಯುವುದು ಒಬ್ಬ ವೈದ್ಯೆ- ಇಂಜಿನಿಯರ್ ಆಗುವುದಕ್ಕಿಂತ ಹೆಚ್ಚು ಕಷ್ಟ. ವೈದ್ಯರಾಗಲು- ಇಂಜಿನಿಯರ್ ಆಗಲು ಇರುವ ಮಾರ್ಗಗಳು ಸುಪರಿಚಿತ. ತಕ್ಕಷ್ಟು ಕಷ್ಟ ಪಟ್ಟರೆ ಹಾದಿ ಸುಗಮವೇ. ಅದೇ ನೃತ್ಯ- ಸಂಗೀತ, ಅದರಲ್ಲೂ ನೃತ್ಯ ಎಲ್ಲ ರೀತಿಯಿಂದ ಶ್ರೀಮಂತ! ಅದರಲ್ಲಿ ದುಡ್ಡು ಖರ್ಚಾಗದೆ, ನಮಗೇ ದುಡ್ಡು ಕೈತುಂಬಾ ಸಿಗುವುದು ಒಂದು ಹಂತ ತಲುಪಿದ ನಂತರವೇ. ಆ ಹಂತ ತಲುಪುವ ಮಾರ್ಗ, ಅವಕಾಶಗಳ ಬಗ್ಗೆ  ನಿರ್ದಿಷ್ಟತೆಯಿಲ್ಲ. ಯಾವ ಗುರುವಿನಿಂದಲೂ ಈ ಶಿಕ್ಷಣ ಸಿಗುವುದು ಕಷ್ಟ. ಆದರೆ ಈ ಅನುಭವಗಳಿಗಾಗಿಯೇ ನೃತ್ಯವನ್ನು ಕಲಿಯಬೇಕು ಎನ್ನುವುದು ನಾನು! ಪ್ರತಿ ನೃತ್ಯ ಕಾರ್ಯಕ್ರಮವೂ ಹೊಸತನ್ನು ಕಲಿಸುತ್ತದೆ.

ಗುರುವಿನಿಂದ ಕಲಿಕೆ, ಶಿಷ್ಯರಿಂದ ಕಲಿಕೆ, ಹಿಮ್ಮೇಳದವರ ನಿರ್ವಹಣೆ, ಧ್ವನಿಮುದ್ರಿತ ಸಂಗೀತದ ಸ್ಟುಡಿಯೊ ಮುದ್ರಣ, ಆಯೋಜಕರೊಂದಿಗೆ ವ್ಯವಹಾರ, ವೈವಿಧ್ಯಮಯ ಪ್ರೇಕ್ಷಕ ವರ್ಗದವರಿಗಾಗಿ ಪ್ರದರ್ಶನ, ರದ್ದಾದ- ತಡವಾದ ಕಾರ್ಯಕ್ರಮಗಳನ್ನು ಸಹಿಸುವ ಕಷ್ಟ ಸಹಿಷ್ಣುತೆ ಹೀಗೆ ನೃತ್ಯ ಕೊಡುವ ಜೀವನ ಶಿಕ್ಷಣ ಅನನ್ಯ.

ಒಬ್ಬ ವೈದ್ಯಳಾಗಿ ಪಡುವ ಶ್ರಮಕ್ಕೆ ಸಮಾನವಾದ ಶ್ರಮವನ್ನು ಕಲೆಯಲ್ಲೂ ನಾನು ವ್ಯಯಿಸುತ್ತೇನೆ. ನನ್ನ ಮಟ್ಟಿಗೇ ನಾನು ಎರಡೂ ವೃತ್ತಿಗಳ ನಡುವಣ ಕೊಂಡಿ ಹುಡುಕಿದಾಗ ನನಗೆ ಕಾಣುವ ಸಮಾನ ಸಂಬಂಧ ಇದು. ವೈದ್ಯಳಾಗಿ ಒಂದು ಬಾರಿಗೆ ಒಬ್ಬ ರೋಗಿಗೆ ನಾನು ಚಿಕಿತ್ಸೆ ನೀಡುತ್ತೇನಷ್ಟೆ. ಅದೇ ವೇದಿಕೆಯ ಮೇಲೆ ನರ್ತಿಸುವಾಗಲೂ ನನ್ನದು ವೈದ್ಯಕೀಯ ಕೆಲಸವೇ! ನೃತ್ಯವೇ ಔಷಧಿ, ಆದರೆ ಚಿಕಿತ್ಸೆ ನೀಡುತ್ತಿರುವುದು ಒಂದು ಬಾರಿ ಒಬ್ಬರಿಗಲ್ಲ, ಒಮ್ಮೆಲೇ ನೂರಾರು ಜನರಿಗೆ. ವ್ಯತ್ಯಾಸವಿಷ್ಟೇ!

ನೃತ್ಯ ನನ್ನನ್ನು, ನನ್ನ ಇಡೀ ವ್ಯಕ್ತಿತ್ವವನ್ನು ಹಲವು ವಿಧದಲ್ಲಿ ಮಾರ್ಪಡಿಸಿದೆ. ರೋಗಿಗಳ, ಅವರ ಆತ್ಮೀಯರ ನೋವು- ನಲಿವುಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ, ಮೂಕ ಸಂವಹನದಲ್ಲಿ, ದೇಹ ಭಾಷೆಯಲ್ಲಿ ನನ್ನ ನೃತ್ಯ ಪ್ರಜ್ಞೆ ಉಪಯುಕ್ತ. ಹಾಗೆಯೇ ಅಲಂಕರಿಸಿಕೊಳ್ಳುವ ಕಲೆ, ತೂಕ, ಆರೋಗ್ಯ ಕಾಯ್ದುಕೊಳ್ಳುವಿಕೆಯ ಮಹತ್ವವನ್ನು ವೈದ್ಯಳಾದರೂ ನಾನು ಹೆಚ್ಚು ಅರಿತದ್ದೇ ನೃತ್ಯದಿಂದ. ನೃತ್ಯದಂತೆ ಮನೋವೈದ್ಯಕೀಯವೂ ನನ್ನ ಜೀವನದ ಗುಣಮಟ್ಟ ಹೆಚ್ಚಿಸಿದೆ, ನೃತ್ಯದ ಗುಣವನ್ನು ಹೆಚ್ಚಿಸಿದೆ. ಕಾವ್ಯ- ಸಾಹಿತ್ಯಗಳ ವಿಶ್ಲೇಷಣೆ, ಸಂಬಂಧಗಳ ಶೋಧನೆಗಳನ್ನು ಸಾಧ್ಯವಾಗಿಸಿದೆ.

ಹಾಗಿದ್ದರೆ ಎರಡು ವೃತ್ತಿಗಳ ನಿರ್ವಹಣೆ ಅಷ್ಟು ಸುಲಭವೇ? ಹೇಳಿದಷ್ಟು ಸುಲಭವಲ್ಲ. ರೋಗಿಯ ಸಂಕಟವನ್ನು ಬದಿಗಿರಿಸಿ, ನಿರ್ಲಕ್ಷಿಸಿ ಕಾರ್ಯಕ್ರಮ ನೀಡುವ ಮನಃಸ್ಥಿತಿ ಪ್ರಾಮಾಣಿಕ ವೈದ್ಯನಿಗೆ ಕಷ್ಟ. ಪರಿಣಾಮವಾಗಿ, ಭಾನುವಾರ ಕಾರ್ಯಕ್ರಮ ನೀಡಿ ಹೊರ ಊರಿಂದ ಧಾವಿಸಿ, ಸೋಮವಾರ ಬೆಳಿಗ್ಗೆ ಎದ್ದು ರೋಗಿಯ ತಪಾಸಣೆ- ಚಿಕಿತ್ಸೆಗೆ ಬೆಳಿಗ್ಗೆ ಎದ್ದು ಆಸ್ಪತ್ರೆಗೆ ಓಡುವ ಅನಿವಾರ್ಯತೆ. ಇತರ ವೈದ್ಯರಂತೆ ಭಾನುವಾರವೂ ವಿಶ್ರಾಂತಿಯಿಲ್ಲ. ಅದೇ ಬೇರೆ ಕಲಾವಿದರಂತೆ ಕಾರ್ಯಕ್ರಮದ ನಂತರದ ದಿನ ಆರಾಮವಾಗಿರುವ ಹಾಗೂ ಇಲ್ಲ. ಹಾಗೆಯೇ ವೈದ್ಯೆ ಎಂಬ ಕಾರಣದಿಂದ `ನೃತ್ಯ ಇವರಿಗೆ ಹವ್ಯಾಸವಷ್ಟೆ' ಎಂಬ ಅನುಮಾನದಿಂದ ಆಳವಾಗಿ ಅಧ್ಯಯನ ಮಾಡಿ ಪ್ರಸ್ತುತಪಡಿಸುವ ರೂಪಕವೂ ನಿರ್ಲಕ್ಷ್ಯಕ್ಕೀಡಾದ ಸಂದರ್ಭಗಳೂ ಇಲ್ಲದಿಲ್ಲ.

ಆದರೂ ಮಹಿಳೆಯಾಗಿ ನನ್ನ ಕುಟುಂಬ- ಈ ಎರಡೂ ವೃತ್ತಿಗಳು ಮೂರನ್ನೂ ಸೇರಿ ಒಂದು ಪರಸ್ಪರ ಸಂಬಂಧವುಳ್ಳ ಮೂರು ವರ್ತುಲಗಳ ಆಕೃತಿಯನ್ನಾಗಿ ನಾನು ಕಲ್ಪಿಸಿಕೊಳ್ಳಬಲ್ಲೆ. ನೃತ್ಯ- ವೈದ್ಯಕೀಯ- ಕುಟುಂಬ ಮತ್ತು ಸ್ವತಃ ನನ್ನ ಆರೋಗ್ಯ. ಇವೆಲ್ಲದರ ನಡುವಿನ ನಿರಂತರ ಚಲನಶೀಲ ಪಾರಸ್ಪರಿಕ ಸಂವಹನ ಕೆಲವೊಮ್ಮೆ ಒಂದನ್ನೊಂದು ವರ್ಧಿಸುತ್ತಾ, ಒಂದಕ್ಕೊಂದು ಅಡ್ಡಿ ಮಾಡುತ್ತಾ, ಮತ್ತೊಮ್ಮೆ ಜೊತೆಜೊತೆಗೇ ನಡೆಯುತ್ತಾ ಬಂದಿವೆ. ಇವೆಲ್ಲಕ್ಕೂ ಕೇಂದ್ರ ಬಿಂದು ನನಗೆ ಈ ಎಲ್ಲದರ ಮೇಲಿರುವ ಪ್ರೀತಿ, ನನಗೆ ನನ್ನ ಮೇಲಿರುವ ಪ್ರೀತಿ!

ವಿಶ್ವ ನೃತ್ಯ ದಿನದ ಈ ಸಂದರ್ಭದಲ್ಲಿ ನಾವು ಮಹಿಳೆಯರು ನೆನಪಿಸಿಕೊಳ್ಳಬೇಕಾದ ಸಂಗತಿಗಳು ಹಲವು. ಕಲೆ, ನೃತ್ಯ- ಸಂಗೀತ- ಚಿತ್ರಕಲೆ ಯಾವುದೇ ಇರಬಹುದು, ಅದು ನಮ್ಮ ಬಗ್ಗೆ ನಮಗೆ ಅರಿವು ಮೂಡಿಸುತ್ತದೆ. ಬೇರೆಯವರನ್ನು ನಿಭಾಯಿಸುವ ಕಲೆ ಕಲಿಸುತ್ತದೆ.

ನಮಗೆ ಅವಶ್ಯವಾಗಿ ಬೇಕಾದ `ನಮ್ಮ ಸ್ವಂತ ಸಮಯ'ವನ್ನು ನೀಡುತ್ತದೆ. ಹೀಗಾಗಿ `ನಮ್ಮ ಮನೆಯವರು ಬಿಡಲ್ಲ, ನಮಗೆ ಮಧ್ಯದಲ್ಲಿ ಸಂಗೀತ/ ನೃತ್ಯ ಬಿಡಿಸಿಬಿಟ್ರು' ಎಂಬ ನೆಪಗಳನ್ನು ಬದಿಗಿರಿಸಿ ಕಷ್ಟಪಟ್ಟು ಕಲಿಯುವ, ಕಲಿತದ್ದನ್ನು ಸಿಕ್ಕ ಅವಕಾಶದಲ್ಲಿ ಮುಂದುವರಿಸುವ ಛಲ ಪ್ರತಿ ಮಹಿಳೆಯದೂ ಆಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT