ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿಗೆ ಮರಳಲು ಮಹಿಳಾ ವಿಜ್ಞಾನಿಗಳಿಗೆ ಕರೆ

Last Updated 3 ಜನವರಿ 2012, 19:30 IST
ಅಕ್ಷರ ಗಾತ್ರ

ಭುವನೇಶ್ವರ: ಕೌಟುಂಬಿಕ ಕಾರಣಕ್ಕಾಗಿ ವೃತ್ತಿಯನ್ನು ಮಧ್ಯದಲ್ಲಿಯೇ ತೊರೆದ ನೂರಾರು ಮಹಿಳಾ ವಿಜ್ಞಾನಿಗಳು ಮತ್ತೆ ತಮ್ಮ ಕ್ಷೇತ್ರಗಳಿಗೆ ಮರಳಲು ಎಲ್ಲ ರೀತಿಯ ಅನುಕೂಲ ಒದಗಿಸಲಾಗುವುದು ಎಂದು ಪ್ರಧಾನಿ ಮನಮೋಹನ್ ಸಿಂಗ್ ಅಭಯ ನೀಡಿದರು.

ಮಹಿಳಾ ವಿಜ್ಞಾನಿಗಳಿಗೆ ಹೆಚ್ಚಿನ ಸೌಕರ್ಯ ಒದಗಿಸಲಾಗುತ್ತದೆ ಹಾಗೂ ಸಂಸ್ಥೆಗಳಲ್ಲಿ ಲಿಂಗ ಸೂಕ್ಷ್ಮತೆಯನ್ನು ಗಮನದಲ್ಲಿ ಇಟ್ಟುಕೊಂಡು  ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತದೆ ಎಂದೂ ಅವರು 99ನೇ ಭಾರತೀಯ ವಿಜ್ಞಾನ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಮಂಗಳವಾರ ಹೇಳಿದರು.

ಅರ್ಧದಲ್ಲಿ ವೃತ್ತಿ ತೊರೆದ ಮಹಿಳಾ ವಿಜ್ಞಾನಿಗಳು ಪುನಃ ತಮ್ಮ ಕ್ಷೇತ್ರಗಳಿಗೆ ಮರಳಲು ನೆರವಾಗುವ ಉದ್ದೇಶದಿಂದ ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯು (ಡಿಎಸ್‌ಟಿ) `ದಿಶಾ~ ಎನ್ನುವ ವಿನೂತನ ಯೋಜನೆಯನ್ನು ರೂಪಿಸುತ್ತಿದೆ. ಇದರ ಅಡಿಯಲ್ಲಿ ಮಹಿಳಾ ವಿಜ್ಞಾನಿಗಳನ್ನು ಮರಳಿ ಕೆಲಸಕ್ಕೆ ಕರೆದುಕೊಳ್ಳಲು ಸಾರ್ವಜನಿಕ ಧನಸಹಾಯದಿಂದ ಕಾರ್ಯ ನಿರ್ವಹಿಸುವ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದಲ್ಲಿ 1000 ಹುದ್ದೆಗಳನ್ನು ಸೃಷ್ಟಿಸಲಾಗುತ್ತದೆ ಎಂದು ವಿವರಿಸಿದರು.

 ಅಲ್ಲದೆ 2,000 ಮಹಿಳಾ ವಿಜ್ಞಾನಿಗಳು ತಮ್ಮ ವೃತ್ತಿಗೆ ಮರಳಲು ಅನುಕೂಲವಾಗುವಂತೆ ಸರ್ಕಾರ ಸಕಲ ಸಿದ್ಧತೆ ಮಾಡಿದೆ.  ನೂತನ ಯೋಜನೆ ಅಡಿಯಲ್ಲಿ, ಮದುವೆಯಾದ ಮಹಿಳಾ ವಿಜ್ಞಾನಿಗಳಿಗೆ ಬೇರೆ ನಗರಗಳಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ ಎಂದು ಪ್ರಧಾನಿ ಹೇಳಿದರು.

 ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರು ಒಂದು ಜಾಗದಿಂದ ಇನ್ನೊಂದೆಡೆ ಸ್ಥಳಾಂತರಗೊಂಡಾಗ ಅವರಿಗೆ ಒಟ್ಟು ವೇತನಕ್ಕೆ ಹೊಂದುವಂತೆ ಫೆಲೋಶಿಪ್ ನೀಡಲಾಗುತ್ತದೆ ಎಂದೂ ತಿಳಿಸಿದರು.

`ಪಿಎಚ್.ಡಿ ಮಾಡಿರುವ ಸುಮಾರು 2,000 ಮಹಿಳೆಯರಲ್ಲಿ ಶೇ 60ರಷ್ಟು ಮಹಿಳೆಯರು ನಿರುದ್ಯೋಗಿಗಳು ಎಂದ ಅವರು, `ಈ ಕ್ಷೇತ್ರದಲ್ಲಿ ಮಹಿಳೆಯರ ಪ್ರಾತಿನಿಧ್ಯವು ಗಣನೀಯವಾಗಿ ಕಡಿಮೆಯಾಗಿರುವುದಕ್ಕೆ ಮುಖ್ಯ ಕಾರಣ ಉದ್ಯೋಗಾವಕಾಶದ ಕೊರತೆ. ಸಂಸ್ಥೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಹೆಚ್ಚಿನ ಪಾರದರ್ಶಕತೆಯ ಅಗತ್ಯವನ್ನು ಈ ಅಂಶವು ಎತ್ತಿ ತೋರಿಸುತ್ತದೆ~ ಎಂದು ವಿಶ್ಲೇಷಿಸಿದರು.

ವಿಶ್ವ ದರ್ಜೆಯ ತಂತ್ರಜ್ಞಾನ: ಜನರಲ್ ಎಲೆಕ್ಟ್ರಾನಿಕ್ ಹಾಗೂ ಮೋಟೊರೋಲಾ ಕಂಪೆನಿಗಳು ಭಾರತದಲ್ಲಿ ವಿಶ್ವ ದರ್ಜೆಯ ತಂತ್ರಜ್ಞಾನ ಜಾಲವನ್ನು ಸೃಷ್ಟಿಸಿವೆ. ಆದರೆ ನಮ್ಮ ಉದ್ದಿಮೆಗಳು ಈ ನಿಟ್ಟಿನಲ್ಲಿ ಹಿಂದೆ ಬಿದ್ದಿರುವುದು ವಿಪರ್ಯಾಸ ಎಂದು ಪ್ರಧಾನಿ  ತೀವ್ರ ಕಳವಳ ವ್ಯಕ್ತಪಡಿಸಿದರು.

12ನೇ ಪಂಚವಾರ್ಷಿಕ ಯೋಜನೆ ಅವಧಿಯಲ್ಲಿ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಹೊಸ ಪ್ರಯೋಗಾತ್ಮಕ ಸೌಲಭ್ಯಗಳನ್ನು ಕಲ್ಪಿಸಲಿದೆ ಹಾಗೂ `ಮಾನ್ಸೂನ್ ಮಿಷನ್~ನಂಥ ರಾಷ್ಟ್ರೀಯ ವೈಜ್ಞಾನಿಕ ಯೋಜನೆಗಳನ್ನು ಆರಂಭಿಸಲಿದೆ.

ಈ ಪೈಕಿ, ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯು 5,000 ಕೋಟಿ ರೂಪಾಯಿ ವೆಚ್ಚದಲ್ಲಿ ಅನುಷ್ಠಾನಗೊಳಿಸುತ್ತಿರುವ `ನ್ಯಾಶನಲ್ ಸೂಪರ್ ಕಂಪ್ಯೂಟಿಂಗ್ ಕೆಪಾಸಿಟಿ~ ಯೋಜನೆಯೂ ಒಂದಾಗಿದೆ ಎಂದು ಹೇಳಿದರು.

ವಿಜಾಪುರದ ಮಹಿಳಾ ವಿವಿ ಕುಲಪತಿ ಗೀತಾ ಬಾಲಿ ಅಧ್ಯಕ್ಷತೆ ವಹಿಸಿದ್ದರು. ಇವರು ಈವರೆಗಿನ ಸಮಾವೇಶಗಳ ಅಧ್ಯಕ್ಷತೆ ವಹಿಸಿರುವ ನಾಲ್ಕನೇ ಮಹಿಳೆ.

ಸಂಶೋಧನೆ, ಅಭಿವೃದ್ಧಿಗೆ ಹೆಚ್ಚು ಹಣ
ಸಂಶೋಧನೆ ಹಾಗೂ ಅಭಿವೃದ್ಧಿಗೆ ರಾಷ್ಟ್ರೀಯ ಒಟ್ಟು ಉತ್ಪನ್ನದಲ್ಲಿ (ಜಿಡಿಪಿ) ಅತ್ಯಂತ ಕಡಿವೆು ಮೊತ್ತವನ್ನು ವಿನಿಯೋಗಿಸಲಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಪ್ರಸ್ತುತ ಈ ಪ್ರಮಾಣವು ಸುಮಾರು ಶೇ 0.9 ರಷ್ಟು ಇದೆ. 12ನೇ ಪಂಚವಾರ್ಷಿಕ ಯೋಜನೆ ಅಂತ್ಯದೊಳಗೆ ಈ ಮೊತ್ತವನ್ನು ಶೇ 2ರಷ್ಟು ಹೆಚ್ಚಿಸಲು ಉದ್ದೇಶಿಸಿದ್ದು, ಉದ್ದಿಮೆಗಳು ಮನಸ್ಸು ಮಾಡಿದರೆ ಮಾತ್ರ ಈ ಗುರಿ ಸಾಧನೆ ಸಾಧ್ಯ ಎಂದಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT