ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿಧರ್ಮದ ಗೌರವ ಕಾಪಾಡಲು ಸಲಹೆ

Last Updated 17 ಸೆಪ್ಟೆಂಬರ್ 2013, 4:33 IST
ಅಕ್ಷರ ಗಾತ್ರ

ಹೊಸಪೇಟೆ: ನೈತಿಕ ಮೌಲ್ಯಗಳು ಇಂದಿನ ಯುವ ಪೀಳಿಗೆಯಲ್ಲಿ ಕುಸಿಯುತ್ತಿರುವುದರ ದ್ಯೋತಕವಾಗಿ ದಿನೇ ದಿನೇ ನಡೆಯುತ್ತಿರುವ ಅತ್ಯಾಚಾರ, ಮಹಿಳಾ ದೌರ್ಜನ್ಯ ಸಾಕ್ಷಿಯಾಗಿದ್ದು ಅವುಗಳನ್ನು ತಡೆಯಲು ಶಿಕ್ಷಕ ವೃಂದ ತಮ್ಮ ಹೊಣೆಗಾರಿಕೆಯನ್ನು ಪ್ರದರ್ಶಿಸ ಬೇಕಾಗಿದೆ ಎಂದು  ಸಾರ್ವಜನಿಕ ಶಿಕ್ಷಣ ಇಲಾಖೆಯ ಗುಲ್ಬರ್ಗ ವಿಭಾಗದ ಪದ ನಿಮಿತ್ತ ಜಂಟಿ ನಿರ್ದೇಶಕ ಹಾಗೂ ಪ್ರಾಚಾರ್ಯ ಡಾ. ಎಚ್.ಬಾಲರಾಜ್ ಸಲಹೆ ನೀಡಿದರು.        
                            
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ರೋಟರಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ   ಸೋಮವಾರ ಜರುಗಿದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮುಖ್ಯಗುರುಗಳ ತಾಲ್ಲೂಕು ಮಟ್ಟದ ಶೈಕ್ಷಣಿಕ ಕಾರ್ಯಾಗಾರ- –2013ರಲ್ಲಿ  ಸನ್ಮಾನಗೊಂಡ ಡಾ. ಎಚ್. ಬಾಲರಾಜ್‌ ಮಾತನಾಡಿ ಶಿಕ್ಷಕರಾದ ವರು ಆತ್ಮವಂಚನೆಗೊಳಗಾಗದೆ, ವೃತ್ತಿ ಧರ್ಮದ ಗೌರವನ್ನು ಏತ್ತಿಹಿಡಿಯುವ ಮೂಲಕ ತಮ್ಮ ಕೌಶಲ್ಯಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸುವ ಕಾರ್ಯ ನಿರ್ವಹಿಸಬೇಕಾಗಿದೆ. ವಿದ್ಯಾರ್ಥಿಗಳಲ್ಲಿ ಇಚ್ಛಾಶಕ್ತಿ ತುಂಬುವ ಕಾರ್ಯ ಮಾಡಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ವಿಜಯನಗರ ಕ್ಷೇತ್ರದ ಶಿಕ್ಷಣ ಸಂಯೋಜಕ ಅಶೋಕ ಜೀರೆ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳಾ ಗುತ್ತಿದ್ದು ಅವುಗಳನ್ನು ಅರಿತು ತಮ್ಮ ಸಾಮರ್ಥ್ಯ ವೃದ್ಧಿಯೊಂದಿಗೆ   ಪೋಷಕರಿಗಿಂತಲೂ, ಶಿಕ್ಷಕರ ಮೇಲಿಯೇ ಜವಾಬ್ದಾರಿ ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟರು.

ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿ ಶರಣಪ್ಪ ವಟಗಲ್‌ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.  ಕ್ಷಿಪ್ರ ಗತಿಯಲ್ಲಿ ಬದಲಾಗುತ್ತಿರುವ ಶಿಕ್ಷಣ ಕ್ಷೇತ್ರದಲ್ಲಿನ ಮೌಲ್ಯಗಳ ಕುಸಿತಕ್ಕೆ ಕಾರಣವೇನು ಎನ್ನುವ ಆತ್ಮಾವಲೋಕನೆ ನಮ್ಮದಾಗ ಬೇಕು. 'ಶಿಕ್ಷಣದೆಡೆಗೆ - ನಮ್ಮೆಲ್ಲರ ನಡಿಗೆ' ಎನ್ನುವ ಆಶಯದಂತೆ ಶಿಕ್ಷಕರು ಕಾರ್ಯತತ್ಪರರಾಗಬೇಕು ಎಂದರು.

ಶಿಕ್ಷಣ ಕ್ಷೇತ್ರದಲ್ಲಿನ ಸಮಸ್ಯೆಗಳ ಕುರಿತ ವಿಚಾರ ಸಂಕೀರ್ಣದಲ್ಲಿ ಪಾಲ್ಗೊಂಡ ಹಂಸಾಂಬ ಶಾರದಾಶ್ರಮದ ಅಧ್ಯಕ್ಷರಾದ ಮಾತಾಜಿ ಪ್ರಭಾವತಿ ಯವರು ‘ಶಿಕ್ಷಣದ ಮೌಲ್ಯಗಳು’ ಕುರಿತು  ಮತ್ತು ಪ್ರಾಚಾರ್ಯ ವಿ.ಎನ್. ರಾಜಶೇಖರ್‌ ಅವರು  ‘ಶಿಕ್ಷಣದಲ್ಲಿ ನಾಯಕತ್ವದ ಬಲವರ್ಧನೆ’ ಕುರಿತು  ತಮ್ಮ ವಿಚಾರಗಳನ್ನು ಮಂಡಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸುನಂದಾ ಅಧ್ಯಕ್ಷತೆ ವಹಿಸಿದ್ದರು, ರೋಟರಿ ಕ್ಲಬ್ ಅಧ್ಯಕ್ಷ ಹೆಚ್.ಶ್ರೀನಿವಾಸ್‌ರಾವ್, ಕಾರ್ಯದರ್ಶಿ ಸೈಯದ್ ಮಹಮ್ಮದ್, ಹೂಡಾ ಆಯುಕ್ತ ಎಲ್.ಡಿ.ಜೋಶಿ, ಶ್ರೀಮತಿ ಬಾಲರಾಜ್ ಸೇರಿದಂತೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು, ತಾಲ್ಲೂಕಿನ ಸರ್ಕಾರಿ, ಖಾಸಗಿ ಮತ್ತು ಅನುದಾನಿತ ಶಾಲೆಯ ಮುಖ್ಯ ಗುರುಗಳು ಹಾಜರಿದ್ದರು. ಇಲಾಖಾಧಿಕಾರಿಗಳಾದ ಪದ್ಮನಾಭ ಕರಣಂ, ಟಿ.ವಿಶ್ವನಾಥ, ಜೀವನ್‌ ವಾಲೇಕಾರ ಕಾರ್ಯಕ್ರಮ ನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT