ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿಪರ ಕೋರ್ಸ್‌: ಶುಲ್ಕ ನಿಗದಿಗೆ ಸಮಿತಿ

Last Updated 10 ಡಿಸೆಂಬರ್ 2013, 19:53 IST
ಅಕ್ಷರ ಗಾತ್ರ

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಶುಲ್ಕ ನಿಗದಿ ಮತ್ತು ಪ್ರವೇಶ ಮೇಲ್ವಿಚಾರಣೆಗೆ ಎರಡು ಪ್ರತ್ಯೇಕ ಸಮಿತಿಗಳನ್ನು ರಚಿಸಲಾಗಿದ್ದು, ಮುಂಬರುವ ಶೈಕ್ಷಣಿಕ ಸಾಲಿನಿಂದ ಕಾಲೇಜುಗಳ ಗ್ರೇಡ್‌ ಆಧಾರದ ಮೇಲೆ ಪ್ರತ್ಯೇಕ ಶುಲ್ಕ ನಿಗದಿಯಾಗಲಿದೆ.

ಶುಲ್ಕ ನಿಗದಿ ಸಮಿತಿಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಜಿತ್‌ ಗುಂಜಾಳ್‌ ಅಧ್ಯಕ್ಷರಾಗಿ­ದ್ದಾರೆ. ಇದು ಕಾಲೇಜುಗಳಿಂದ ಬರುವ ಮಾಹಿತಿ ಆಧರಿಸಿ ಶುಲ್ಕ ನಿಗದಿ ಮಾಡಲಿದೆ. ತಪ್ಪು ಮಾಹಿತಿ ನೀಡಿರುವುದು ಕಂಡುಬಂದರೆ, ಕಾಲೇಜುಗಳಿಗೆ ಭೇಟಿ ನೀಡಿ ವಸ್ತುಸ್ಥಿತಿಯನ್ನು ಅಧ್ಯಯನ ಮಾಡುತ್ತದೆ.

ನಿವೃತ್ತ ನ್ಯಾಯಮೂರ್ತಿ ವಿ.ಜಗನ್ನಾಥನ್‌ ಅಧ್ಯಕ್ಷತೆಯಲ್ಲಿ ಮೇಲ್ವಿಚಾರಣಾ ಸಮಿತಿ ರಚಿಸಲಾ­ಗಿದೆ. ಪ್ರವೇಶ ಸಂದರ್ಭದಲ್ಲಿ ಅಧಿಕ ಶುಲ್ಕ ಪಡೆದರೆ, ಸೀಟು ನಿರಾಕರಿಸಿದರೆ ಸಮಿತಿಗೆ ದೂರು ನೀಡ­ಬಹುದು.

ವೈದ್ಯಕೀಯ, ದಂತವೈದ್ಯಕೀಯ, ಎಂಜಿನಿಯರಿಂಗ್‌ ಮತ್ತಿತರ ವೃತ್ತಿಪರ ಕೋರ್ಸ್‌ಗಳನ್ನು ಹೊಂದಿರುವ ಕಾಲೇಜುಗಳು ಈ ತಿಂಗಳ 31ರ ಒಳಗೆ ಶುಲ್ಕ ನಿಗದಿ ಸಮಿತಿಗೆ ಸಂಪೂರ್ಣ ಮಾಹಿತಿ ನೀಡಬೇಕು. ಕಾಲೇಜಿನಲ್ಲಿ ಲಭ್ಯವಿರುವ ಕೋರ್ಸ್, ಕಳೆದ ಮೂರು ವರ್ಷಗಳಲ್ಲಿ ಪಡೆದಿರುವ ಶುಲ್ಕ, ಸಿಬ್ಬಂದಿ ವಿವರ ಇತ್ಯಾದಿ ಮಾಹಿತಿ ನೀಡುವಂತೆ ಕಾಲೇಜುಗಳ ಆಡಳಿತ ಮಂಡಳಿಗಳಿಗೆ ಸೂಚಿಸಲಾಗಿದೆ.

ಕಾಲೇಜಿನಲ್ಲಿರುವ ಸೌಲಭ್ಯಗಳು, ಒಟ್ಟು ವಿದ್ಯಾರ್ಥಿಗಳ ಸಂಖ್ಯೆ, ಸಿಬ್ಬಂದಿಗೆ ನೀಡುವ ಸಂಬಳ, ಸಿಬ್ಬಂದಿಯ ವಿದ್ಯಾರ್ಹತೆ, ಕಾಲೇಜಿನಲ್ಲಿ ಯಾವ ಯಾವ ಕೋರ್ಸ್‌ಗಳಿವೆ ಎಂಬುದು ಸೇರಿದಂತೆ ವಿವರವಾದ ಮಾಹಿತಿ ನೀಡಬೇಕಾಗುತ್ತದೆ.

2006ರಲ್ಲೇ ಕಾಯ್ದೆಯನ್ನು ರೂಪಿಸಲಾಗಿತ್ತು. ಆದರೆ, ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಪ್ರತಿ ವರ್ಷ ಸರ್ಕಾರ ಮತ್ತು ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳು ಪರಸ್ಪರ ಮಾತುಕತೆ ಮೂಲಕ ಶುಲ್ಕ ಮತ್ತು ಸೀಟು ಹಂಚಿಕೆ ಸಂಬಂಧ ಒಪ್ಪಂದ ಮಾಡಿ­ಕೊಳ್ಳು­ತ್ತಿದ್ದವು. ಆದರೆ, ಖಾಸಗಿ ಕಾಲೇಜುಗಳು ಪ್ರತಿ ವರ್ಷ ಹೆಚ್ಚಿನ ಶುಲ್ಕ ನೀಡುವಂತೆ ಪಟ್ಟು ಹಿಡಿಯು­ತ್ತಿದ್ದರಿಂದ ಸರ್ಕಾರ ಮತ್ತು ಕಾಲೇಜುಗಳ ನಡುವೆ ಸಂರ್ಘಷ ಏರ್ಪಡುತ್ತಿತ್ತು. ಇದಕ್ಕೆ ಇತಿಶ್ರೀ ಹಾಡುವ ಉದ್ದೇಶದಿಂದ 2006ರ ಕಾಯ್ದೆ ಅನುಷ್ಠಾನ­ಗೊಳಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT