ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿಪರ ಶಿಕ್ಷಣಕ್ಕೆ ಆದ್ಯತೆ

Last Updated 9 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಶಿಕ್ಷಣದಿಂದ ವ್ಯಕ್ತಿತ್ವ ವಿಕಸನ, ಆತ್ಮೋದ್ಧಾರ, ಜೀವನ್ಮುಕ್ತಿ ಎಂಬ ಹಲವು ಉದ್ದೇಶಗಳನ್ನು ತಜ್ಞರು ವ್ಯಾಖ್ಯಾನಿಸುತ್ತಿದ್ದರೂ ದೇಶದ ಜನಸಂಖ್ಯೆ ಮತ್ತು ಉತ್ಪಾದನೆ ಕ್ಷೇತ್ರವನ್ನು ಗಮನಿಸಿದರೆ ಶಿಕ್ಷಣದಿಂದ ಬದುಕನ್ನು ಕಂಡುಕೊಳ್ಳುವುದಕ್ಕೆ ನೆರವಾಗಬೇಕು ಎಂಬುದು ಹೆಚ್ಚು ಪ್ರಸ್ತುತವಾದ ಉದ್ದೇಶ.
 
ಮೊದಲ ತರಗತಿಗೆ ಪ್ರವೇಶ ಪಡೆಯುವ 20 ಕೋಟಿ ಮಕ್ಕಳ ಸಂಖ್ಯೆ ಹನ್ನೆರಡನೆಯ ತರಗತಿಗೆ ಬರುವಷ್ಟರಲ್ಲಿ ಕೇವಲ ಎರಡು ಕೋಟಿಗೆ ಇಳಿದಿರುತ್ತದೆ; ಉಳಿದ ಮಕ್ಕಳಿಗೆ ಹಲವು ಬಗೆಯ ಸಾಮಾಜಿಕ, ಆರ್ಥಿಕ ಮತ್ತು ನೈಸರ್ಗಿಕ ಕಾರಣಗಳಿಂದ ಶಿಕ್ಷಣವನ್ನು ಮುಂದುವರಿಸುವುದಕ್ಕೆ ಸಾಧ್ಯವಾಗುತ್ತಿಲ್ಲ.

ಇದು ದೇಶ ಸ್ವಾತಂತ್ರ್ಯ ಗಳಿಸಿದ ಆರೂವರೆ ದಶಕಗಳ ನಂತರವೂ ಉಳಿದುಕೊಂಡಿರುವ ವಾಸ್ತವ ಸಂಗತಿ. ಹತ್ತನೆಯ ತರಗತಿಗೆ ಬರುವಷ್ಟರಲ್ಲಿ ಸ್ವಂತ ಬದುಕನ್ನು ರೂಪಿಸಿಕೊಳ್ಳುವಂಥ ಶಿಕ್ಷಣವನ್ನು ಪಡೆಯುವಂತೆ ಬೋಧನಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಕೇಂದ್ರದ ಮಾನವ ಸಂಪನ್ಮೂಲ ಇಲಾಖೆ ಮುಂದಾಗಿದೆ.
 
ಈ ಹಂತದಲ್ಲಿಯೇ, ಅಂದರೆ ಒಂಬತ್ತನೆಯ ತರಗತಿಯಿಂದಲೇ ವೃತ್ತಿ ಶಿಕ್ಷಣ ಬೋಧನೆ ಆರಂಭಿಸಲು ನಿರ್ಧರಿಸಿದೆ. ಬಡಿಗತನ, ಕಮ್ಮಾರಿಕೆ, ಗಾರೆಯಂಥ ಸ್ಥಳೀಯ ವೃತ್ತಿ ಪರಿಣಿತಿಯೂ ಇದರಲ್ಲಿ ಸೇರಲಿದೆ.
 
ಸಾಮಾನ್ಯ ಶಿಕ್ಷಣದ ಜೊತೆಗೆ ವಿದ್ಯಾರ್ಥಿ ತನಗೆ ಒಪ್ಪುವಂಥ, ಒಗ್ಗುವಂಥ ಇಂಥ ಯಾವುದಾದರೂ ವೃತ್ತಿಯಲ್ಲಿ ಶಿಕ್ಷಣವನ್ನು ಪಡೆಯುವುದರಿಂದ, ಮುಂದೆ ಕಲಿಯುವುದಕ್ಕೆ ಅಡ್ಡಿಯಾದರೂ ಅಲ್ಲಿಯವರೆಗಿನ ಕಲಿಕೆಯಿಂದ ಸ್ವಾವಲಂಬಿಯಾಗುವ ಅವಕಾಶವನ್ನು ಕಲ್ಪಿಸುವುದು ಈ ಸುಧಾರಣೆಯ ಉದ್ದೇಶ.

ಖಾಸಗಿ ಉತ್ಪಾದನಾ ರಂಗದಲ್ಲಿ ಅವಶ್ಯಕವಾಗಿರುವ ನುರಿತ ಕುಶಲಕರ್ಮಿಗಳ ಬೇಡಿಕೆಯನ್ನು ಈ ಮೂಲಕ ಪೂರೈಸಬಹುದಾಗಿದೆ. ನಿರುದ್ಯೋಗ ನಿವಾರಣೆಯಲ್ಲಿ ಇದು ಮಹತ್ವದ ಹೆಜ್ಜೆಯಾಗಬಲ್ಲದು.

ಮಾಹಿತಿ ತಂತ್ರಜ್ಞಾನ, ಅಟೊಮೊಬೈಲ್, ದೂರಸಂಪರ್ಕ, ಮನರಂಜನೆ, ಸಂವಹನ, ಪ್ರವಾಸೋದ್ಯಮ, ಆತಿಥ್ಯ, ಕಟ್ಟಡ ನಿರ್ಮಾಣ ಮತ್ತು ಮೂಲಸೌಕರ್ಯಗಳೂ ಸೇರಿದಂತೆ ಹಲವು ಬಗೆಯ ವೃತ್ತಿ ಕೌಶಲ್ಯಗಳನ್ನು ಅಂತರರಾಷ್ಟ್ರೀಯ ಗುಣಮಟ್ಟ ಮತ್ತು ಉತ್ಪಾದನಾ ಮಾನದಂಡಗಳಿಗೆ ಅನುಗುಣವಾಗಿ ಬೋಧನಾ ಕ್ರಮದಲ್ಲಿ ಅಳವಡಿಸುತ್ತಿರುವುದರಿಂದ ಈ ಶಿಕ್ಷಣ ಪಡೆದವರಿಗೆ ಉದ್ಯೋಗ ಸಿಗುವುದು ಕಷ್ಟವಲ್ಲ.

ವೃತ್ತಿಶಿಕ್ಷಣಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ರೂಪಿಸುವ ಸುಧಾರಣೆಗಳನ್ನು ಕೇಂದ್ರ ಪಠ್ಯಕ್ರಮ ಎಂಬ ನೆಪ ಒಡ್ಡಿ ರಾಜ್ಯಗಳು ಅನುಷ್ಠಾನಗೊಳಿಸದಿದ್ದರೆ ಈ ಸುಧಾರಣೆಗಳ ಲಾಭ ಸೀಮಿತವಾಗುತ್ತದೆ.

ದೇಶದಾದ್ಯಂತ ಏಕರೂಪದ ಪಠ್ಯಕ್ರಮ ಜಾರಿಗೆ ಬಂದರಷ್ಟೆ ಈ ಸುಧಾರಣೆಗಳ ಪ್ರಯೋಜನ. ರಾಜಕೀಯ ಕಾರಣಗಳಿಗಾಗಿ ರಾಜ್ಯ ಸರ್ಕಾರಗಳು ನಿರಾಸಕ್ತಿ ತಾಳಿದರೆ ಸುಧಾರಣೆಗಳು ಕೇವಲ ಕಾಗದದಲ್ಲಷ್ಟೆ ಉಳಿದುಬಿಡುತ್ತವೆ.

ಎಸ್ಸೆಸ್ಸೆಲ್ಸಿ ನಂತರ ಎರಡು ವರ್ಷಗಳ ವೃತ್ತಿ ಶಿಕ್ಷಣ ಕೋರ್ಸನ್ನು (ಜೆಒಸಿ) ಆರಂಭಿಸಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿದ್ದ ಕರ್ನಾಟಕ ಸರ್ಕಾರ, ಹಂಗಾಮಿ ನೆಲೆಯಲ್ಲಿದ್ದ ಜೆಒಸಿ ಬೋಧಕ ಸಿಬ್ಬಂದಿಯನ್ನು ಕಾಯಂಗೊಳಿಸುವ ಕಾರಣ ನೀಡಿ ಜೆಒಸಿ ವ್ಯವಸ್ಥೆಯನ್ನೇ ರದ್ದುಗೊಳಿಸುವ ಮೂಲಕ ಜನೋಪಯೋಗಿ ಶಿಕ್ಷಣ ತನ್ನ ಆದ್ಯತೆ ಅಲ್ಲವೆಂದು ಸಾಬೀತುಪಡಿಸಿದೆ.
 
ಕೇಂದ್ರವು ಜಾರಿಗೊಳಿಸುತ್ತಿರುವ ವೃತ್ತಿಶಿಕ್ಷಣದ ಅಂಶಗಳನ್ನಾದರೂ ರಾಜ್ಯದ ಪಠ್ಯಕ್ರಮದಲ್ಲಿ ಅಳವಡಿಸಿಕೊಂಡು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ರಾಜ್ಯ ಸರ್ಕಾರ, ಶಿಕ್ಷಣ ಅರ್ಥಪೂರ್ಣವಾಗಲು ಕ್ರಮ ಕೈಗೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT