ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃದ್ಧರಿಗೆ ಆಶ್ರಯಕ್ಕಿಂತ ಪ್ರೀತಿ ಮುಖ್ಯ

Last Updated 19 ಅಕ್ಟೋಬರ್ 2011, 8:30 IST
ಅಕ್ಷರ ಗಾತ್ರ

ದಾವಣಗೆರೆ: ವೃದ್ಧರಿಗೆ ಆಶ್ರಯ, ಊಟ, ವಸತಿ ನೀಡುವುದಕ್ಕಿಂತ ಪ್ರೀತಿ ತೋರುವುದು ಮುಖ್ಯ. ಈ ಉದ್ದೇಶದಿಂದಲೇ ಆಶ್ರಯ ಹಿರಿಯ ವನಿತೆಯರ ಆನಂದಧಾಮ ಸ್ಥಾಪಿಸಲಾಗಿದೆ ಎಂದು ಮಾಜಿ ಸಚಿವೆ ಸಿ. ನಾಗಮ್ಮ ಕೇಶವಮೂರ್ತಿ ತಿಳಿಸಿದರು.

ನಗರದ ವನಿತಾ ಸಮಾಜದ ಸತ್ಯಸಾಯಿ ರಂಗ ಮಂದಿರದಲ್ಲಿ ಮಂಗಳವಾರ ಆಶ್ರಯ ಹಿರಿಯ ವನಿತೆಯರ ಆನಂದಧಾಮ ಹಾಗೂ ಶಿಲ್ಪಾಲಯ ಹಿರಿಯ ವನಿತೆಯರ ವಸತಿ ನಿಲಯ ಆಶ್ರಯದಲ್ಲಿ ಆಯೋಜಿಸಿದ್ದ ಹಿರಿಯ ನಾಗರಿಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಅನಾಥಾಲಯ ನಡೆಸಬಹುದು. ಆದರೆ, ವೃದ್ಧಾಶ್ರಮ ನಡೆಸುವುದು ಕಷ್ಟ. ಮಕ್ಕಳನ್ನು ಬಗ್ಗಿಸಬಹುದು. ಹಿರಿಯರಾದರೆ ಅವರ ಮನಸ್ಥಿತಿ ಸಿದ್ಧವಾಗಿಬಿಟ್ಟಿರುತ್ತದೆ. ಅವರದೇ ಆದ ಅಭ್ಯಾಸಗಳು ರೂಢಿಯಾಗಿರುತ್ತವೆ. ಅವರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

ಆನಂದಧಾಮದಲ್ಲಿ ಜಾತಿ, ಮತ ನೋಡದೆ ಆಶ್ರಯ ಕೊಟ್ಟಿದ್ದೇವೆ. ಯಾವುದೇ ಅನುದಾನ ದೊರೆಯದೆ ಇದ್ದರೂ ಯಾವ ಸೌಲಭ್ಯಕ್ಕೂ ಕೊರತೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಆನಂದಧಾಮ ನಿವಾಸಿ ರಾಧಮ್ಮ ಮಾತನಾಡಿ, ನನಗೆ ಚಿಕುನ್‌ಗುನ್ಯಾ ಬಂದಿತ್ತು. ಇಲ್ಲಿ ಆಶ್ರಯ ಕೇಳಿದೆ. ನಾಲ್ಕು ವರ್ಷಗಳಿಂದ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಎದೆಯಲ್ಲಿ ಗಡ್ಡೆ ಕಾಣಿಸಿಕೊಂಡಿತ್ತು. ಶಸ್ತ್ರಚಿಕಿತ್ಸೆಯನ್ನು ಮಾಡಿಸಿದ್ದರಿಂದ ಈಗ ಚೆನ್ನಾಗಿದ್ದೀನಿ ಎಂದು ತಿಳಿಸಿದಾಗ ನೆರೆದಿದ್ದವರ ಕಣ್ಣಾಲಿಗಳು ತುಂಬಿ ಬಂದವು.

ಬಟ್ಟೆ, ಅನ್ನ, ತರಕಾರಿ, ಹಣ್ಣು ಎಲ್ಲವೂ ಇಲ್ಲಿ ದೊರೆಯುತ್ತಿದೆ. ಯಾವುದೇ ಚಿಂತೆ ಬಾರದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಮತ್ತೊಬ್ಬ ನಿವಾಸಿ ಪ್ರಮೀಳಮ್ಮ ತಿಳಿಸಿದರು.

ಇದೇ ಸಂದರ್ಭ ಹಿರಿಯ ವನಿತೆಯರಿಗೆ ಸೀರೆ, ಚೆಕ್ ಮತ್ತು ಬಹುಮಾನ ವಿತರಿಸಲಾಯಿತು. ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಟ್ರಸ್ಟ್ ಅಧ್ಯಕ್ಷ ಚನ್ನಗಿರಿ ವಿರೂಪಾಕ್ಷಪ್ಪ, ಶಿಲ್ಪಾಲಯ ಟ್ರಸ್ಟ್ ಅಧ್ಯಕ್ಷೆ ಮಂಜುಳಾ ಬಸವಲಿಂಗಪ್ಪ, ಶಿಲ್ಪಾಲಯ ಅಧ್ಯಕ್ಷೆ ನಾಗರತ್ನಾ ಕುಸುಮ ಶೆಟ್ಟಿ ಉಪಸ್ಥಿತರಿದ್ದರು. ಡಾ.ಶಾರದಾ ಶೆಟ್ಟಿ ಸ್ವಾಗತಿಸಿದರು. ಶೋಭಾ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT