ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃದ್ಧಾಪ್ಯ ವೇತನ ಹೆಚ್ಚಿಸಲು ಆಗ್ರಹ

Last Updated 1 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಚಿತ್ರದುರ್ಗ: ವೃದ್ಧಾಪ್ಯ ವೇತನ ಹೆಚ್ಚಿಸಬೇಕು ಮತ್ತು ಅದನ್ನು ಶಾಸನ ಬದ್ಧ ಹಕ್ಕನ್ನಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿ ಕರುನಾಡ ರಕ್ಷಣಾ ವೇದಿಕೆ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

 ನಗರದ ಪ್ರಮುಖ ರಸ್ತೆ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ನಿಜವಾದ ಫಲಾನುಭವಿಗಳನ್ನು ಗುರುತಿಸುವ ನೆಪದಲ್ಲಿ ಸುಮಾರು 5-6 ತಿಂಗಳಿಂದ ಮಾಸಾಶನ ವಿತರಿಸಿಲ್ಲ. ಆದ್ದರಿಂದ ತಕ್ಷಣ ಮಾಸಾಶನ ಮಂಜೂರು ಮಾಡಿ ಅರ್ಹ ಫಲಾನುಭವಿಗಳಿಗೆ ಪ್ರತಿ ತಿಂಗಳ ಮೊದಲನೇ ವಾರದಲ್ಲಿ ಮಾಸಾಶನ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವೃದ್ಧರನ್ನು ಅನೇಕರು ಹೊರೆ ಎಂದು ಕಾಣುತ್ತಿರುವ ಸನ್ನಿವೇಶ ಸಾಮಾನ್ಯವಾಗಿದೆ. ವೃದ್ಧಾಪ್ಯ ವೇತನವನ್ನು ಜೀವನಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಕೂಡಲೇ, ಸರ್ಕಾರ ಅಲ್ಪ ತಿಂಗಳ ಪಿಂಚಣಿಯನ್ನು ರೂ 400ರಿಂದ 2ಸಾವಿರಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
 
ರಾಜ್ಯದಲ್ಲಿ ಸುಮಾರು 50 ಲಕ್ಷದಷ್ಟು ಹಿರಿಯ ನಾಗರಿಕರಿದ್ದಾರೆ. ಅದರಲ್ಲಿ ಶೇಕಡಾ 70ರಷ್ಟು ಜನ ತಮ್ಮ ಜೀವನದ ಪ್ರಮುಖ 40 ವರ್ಷಗಳನ್ನು ಬೆವರು ಸುರಿಸಿ ಸಮಾಜದ ಅಭಿವೃದ್ಧಿಗಾಗಿ ದುಡಿದಿದ್ದಾರೆ. ಅಸಂಘಟಿತ ಕಾರ್ಮಿಕರು ಜೀವನದ ಪ್ರತಿ ಹೆಜ್ಜೆಯನ್ನು ಸಮಾಜ, ಸಮುದಾಯ ಹಾಗೂ ಕುಟುಂಬದ ಅಭಿವೃದ್ಧಿಗಾಗಿ ನೀಡಿರುವ ಕೊಡುಗೆ ಅಪಾರವಾಗಿದೆ. ಕೃಷಿ, ನಗರ ಸ್ವಚ್ಛತೆ, ಮನೆಗೆಲಸ, ರಸ್ತೆ ಹಾಗೂ ಕಟ್ಟಡ ನಿರ್ಮಾಣದಂತ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನಿರಂತರ ಪರಿಶ್ರಮದಿಂದ ದೇಹದಲ್ಲಿರುವ ಶಕ್ತಿ ಕಳೆದುಕೊಂಡು ದುಡಿಯುವ ಸಾಮರ್ಥ್ಯವಿಲ್ಲದ ಕಾಲದಲ್ಲಿ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ ಎಂದು ದೂರಿದರು.

 ಪ್ರತಿಭಟನೆಯಲ್ಲಿ ರಾಜ್ಯ ಘಟಕದ ಅಧ್ಯಕ್ಷ ಸೈಯದ್ ಇಸ್ಮಾಯಿಲ್, ಪ್ರಧಾನ ಕಾರ್ಯದರ್ಶಿ ದಾದಾಪೀರ್, ಜಿಲ್ಲಾ ಘಟಕದ ಅಧ್ಯಕ್ಷ ಚಿಕ್ಕಾಲಘಟ್ಟ ಈ. ರಂಗಸ್ವಾಮಿ, ಆರ್.ಕೆ. ಮರುಳಸಿದ್ದಪ್ಪ, ಬಸಂತಪ್ಪ ಶಿವನಕೆರೆ, ಅಜ್ಜಯ್ಯ ಇಟಗಿ, ನಿರಂಜನ್, ಮಹಾಂತೇಶ್ ಕಬ್ಬಿಗೆರೆ, ರೇಖಾ ಮರುಳಸಿದ್ಧಪ್ಪ, ಸಿದ್ದಬಸಪ್ಪ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT