ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃಷಭಲಿಂಗೇಶ್ವರ ಅಮೃತ ಶಿಲಾಮೂರ್ತಿ ಪ್ರತಿಷ್ಠಾಪನೆ, ದೀಪೋತ್ಸವ

Last Updated 13 ಡಿಸೆಂಬರ್ 2012, 8:29 IST
ಅಕ್ಷರ ಗಾತ್ರ

ತಾಂಬಾ: ಸದ್ಗುರು ಸಂಗನಬಸವ ಶಿವಯೋಗಿಗಳು ಜೀವಿಸಿದ್ದು 72 ವರ್ಷಗಳ ಕಾಲ. ತಮ್ಮ ಜೀವಿತ ಅವಧಿಯಲ್ಲಿ 50 ವರ್ಷಗಳಷ್ಟು ದೀರ್ಘಕಾಲ ಪ್ರವಚನ, ಧರ್ಮಜಾಗೃತಿ, ಶೈಕ್ಷಣಿಕ ಪ್ರಗತಿಗಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರು ಲಚ್ಯಾಣ ಮಠವು ಗುರುಪೀಠಕ್ಕೆ ದೊರೆತ ವರದಾನ. 1933ರಲ್ಲಿ  63 ಪುರಾತನ ಸ್ಮರಣೆಗಾಗಿ ಮಂಟಪ ಪೂಜಾ ಮಹೋತ್ಸವ ನಡೆಸಿದರು.

ಅದಕ್ಕೆ ಪೂರ್ವಭಾವಿಯಾಗಿ ತಿಂಗಳ ಪೂರ್ತಿ ಬಸವ ಪುರಾಣ ನಡೆಸಿದರು. ಜನ ಜಾಗೃತರಾದಾಗ ಶೈಕ್ಷಣಿಕ ಮಹತ್ವ ಅರುಹಿಸಿದರು. ಸ್ವಾತಂತ್ರ್ಯ ಸಾಧನೆಯ ಅವಶ್ಯಕತೆ ಬಿಂಬಿಸಿದರು. ಬ್ರಿಟಿಷರ ಕೆಂಗಣ್ಣು ಮೇಲಿದ್ದರೂ ಜನಾನುರಾಗದ ಮುಂದೆ ಅವರ ಆಟ ನಡೆಯಲಿಲ್ಲ. ಲಚ್ಯಾಣವು ಶೈಕ್ಷಣಿಕ ಕ್ಷೇತ್ರವಾಗಲು ಶಿವಯೋಗಿಗಳು ಭದ್ರ ಬುನಾದಿ ಹಾಕಿದರು.

ವಿಜಾಪುರದ ಬಿ.ಎಲ್.ಡಿ.ಇ. ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರಾದ, ವಚನ ಪಿತಾಮಹ ಫ.ಗು. ಹಳಕಟ್ಟಿ ಅವರು ಶಿವಯೋಗಿಗಳನ್ನು ಆಹ್ವಾನಿಸಿ ಸಂಸ್ಥೆಯ ಭಾರವನ್ನು ಅವರ ಹೆಗಲಿಗೇರಿಸಿದ್ದರು. ವಿಜಾಪುರ ಸಿದ್ಧೇಶ್ವರ ಸಂಸ್ಥೆಯ ಆಶ್ರಯದಲ್ಲಿ ಪುರಾಣ ಪ್ರವಚನಗಳ ಮೂಲಕ ಶಿವಯೋಗಿಗಳು ಜಿಲ್ಲೆಯ ಜನತೆಯಲ್ಲಿ ಶೈಕ್ಷಣಿಕ ವಾತಾವರಣ ನಿರ್ಮಿಸಿದರು. ಸಿದ್ಧೇಶ್ವರರ ಉಚಿತ ಪ್ರಸಾದ ನಿಲಯಕ್ಕೆ ಜನ್ಮ ನೀಡಿದರು. ಅದು ಜಿಲ್ಲೆಯ ಎಲ್ಲ ಧರ್ಮಗಳ ಬಡ ವಿದ್ಯಾರ್ಥಿಗಳಿಗೆ ನೆರವಾಯಿತು. ಶ್ರೀ ಸಿದ್ಧೇಶ್ವರ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಮೆಟ್ರಿಕ್‌ವರೆಗೆ ಶಿಕ್ಷಣದ ಅವಕಾಶ ಕಲ್ಪಿಸಿತು. ಉನ್ನತ ಶಿಕ್ಷಣಕ್ಕಾಗಿ ಕಾಲೇಜು ಪ್ರಾರಂಭಿಸುವ ಯೋಜನೆಗೆ ಶಿವಯೋಗಿಗಳು ಪುರಾಣ ಪ್ರಾರಂಭಿಸಿದರು.

ಕನ್ನಾಳ, ಅತಾಲಟ್ಟಿ, ತಂಗುಳ, ಕಾಕಾನಗರ, ಅಥರ್ಗಾ, ಶಿವಣಗಿ, ಉಕ್ಕಲಿ, ಆಲಮೇಲ, ಮೊದಲಾದ ಗ್ರಾಮದ ಗೌಡರು, ಶ್ರೀಮಂತರು ಮಹಾದಾನಕ್ಕೆ ಮುಂದಾದರು ವಿಜಯ ಕಾಲೇಜು ಆರಂಭವಾಯಿತು. ಶೈಕ್ಷಣಿಕ ಸಂಸ್ಥೆಗಳ ನಿರ್ಮಾಣಕ್ಕಾಗಿ ವಿಜಾಪುರದ ಬಂಗಾರೆಮ್ಮ ಸಜ್ಜನ (ದಾನ ಚಿಂತಾಮಣಿ) ಅವರು ತಮ್ಮ ಭೂಮಿಯನ್ನು ಸ್ವಾಮಿಗಳ ಪಾದಕ್ಕೆ ಅರ್ಪಿಸಿ ನಮಸ್ಕರಿಸಿದಳು. ಇಂದು ಬಿ.ಎಲ್.ಡಿ.ಇ. ಸಂಸ್ಥೆಯ ತಾಂತ್ರಿಕ ವೈದ್ಯಕೀಯ, ವಾಣಿಜ್ಯ, ವಿಜ್ಞಾನ, ಕಲೆಯ ವಿವಿಧ ಕಾಲೇಜುಗಳ ಆ ಪುಣ್ಯ ಭೂಮಿಯಲ್ಲಿ ಶೋಭಿಸುತ್ತಿವೆ.

1954ರಲ್ಲಿ ವಿಜಾಪುರದಲ್ಲಿ  ಜರುಗಿದ 770 ಅಮರ ಗಣಂಗಳ  ಸ್ಮಾರಕ ಮಂಟಪ ಪೂಜಾ ಮಹೋತ್ಸವದಲ್ಲಿ ಐದು ಲಕ್ಷ ಯಾತ್ರಿಕರು ಸಾವಿರಾರು ಜನ ಸ್ವಾಮೀಜಿಗಳು ಮೇಳೈಸಿದರು. ಇದು ಭಾರತದ ತುಂಬ ಪ್ರತಿಷ್ಠೆಯನ್ನು ಪಡೆಯಿತು. ಈ ಐತಿಹಾಸಿಕ ಸಂಘಟನೆಯಿಂದ ಸಂದಾಯವಾದ ಲಕ್ಷಾಂತರ ರೂಪಾಯಿ ಕಾಣಿಕೆಯನ್ನು ಶಿಕ್ಷಣ ಸಂಸ್ಥೆಗೆ ಶ್ರೀಗಳವರು ಸಮರ್ಪಿಸಿದರು.

ಪ್ರಸಾದ ನಿಲಯ ಶಿವಾನುಭವ ಮಂಟಪ, ಕಲ್ಯಾಣಕೇಂದ್ರ , ಗರಡಿಮನೆ, ಧರ್ಮಶಾಲೆ, ವಾಚನಾಲಯ ಹೀಗೆ ಸಾರ್ವಜನಿಕ ಸಂಸ್ಥೆಗಳ ನಿರ್ಮಾತೃಗಳೆಸಿದರು. ಬಳ್ಳಾರಿ, ಗುಲಬರ್ಗಾ, ಬೀದರ್, ಸೋಲಾಪುರ, ಬೆಳಗಾವಿ, ಮುಂಬೈ, ಪುಣೆ, ರಾಯಚೂರು, ರಾಜ್ಯಗಳ ಗಡಿದಾಟಿದ ಶೈಕ್ಷಣಿಕ ಕ್ರಾಂತಿಯ ಮಹಾಚೇತನ ಎನಿಸಿದರು. ಆಲಮಟ್ಟಿಯಲ್ಲಿ ಹರ್ಡೇಕರರ ಮಂಜಪ್ಪನವರ ಮಹಾವಿದ್ಯಾಲಯದ ಮಹಾ ಪೋಷಕರಾಗಿ ಅವರ ಬೆನ್ನೆಲುಬು ಬಾಗಿನಿಂತ, ಏಕಮೇವ ಮಠಾಧೀಶರು.

ಕಾರ್ಯಕ್ರಮಗಳು: 13ರಂದು ಬೆಳಿಗ್ಗೆ 9ಕ್ಕೆ ಕರ್ತುೃ ಶ್ರೀಗದ್ದುಗೆಗೆ ಮಹಾರುದ್ರಾಭಿಷೇಕ ಮತ್ತು ಮೃತ್ಯುಂಜಯ ಹೋಮ ಮಧ್ಯಾಹ್ನ 2ಕ್ಕೆ ಶ್ರೀಮಠದ ಭಕ್ತ ನಿವೃತ್ತ ಪ್ರಾಧ್ಯಾಪಕ ಸಿದ್ದಪ್ಪ ಕೆಂಗನಾಳ ಅವರು ಸಮರ್ಪಿಸಿದ ಸಂಗನಬಸವ ಶಿವಯೋಗಿಗಳ ಅಮೃತ ಶಿಲಾ ಮೂರ್ತಿಯ ಭವ್ಯ ಮೆರವಣಿಗೆ  ನಡೆಯಲಿದೆ. ಕಲ ವಾದ್ಯವೃಂದ ಹಾಗೂ ಕುಂಭ ಕಲಶಗಳೊಂದಿಗೆ ಸಂಜೆ 5ಕ್ಕೆ ಅಮೃತ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ, ರಾತ್ರಿ 7ಕ್ಕೆ ಕಾರ್ತಿಕೋತ್ಸವದ ನಿಮಿತ್ತ ದೀಪೋತ್ಸವ. ರಾತ್ರಿ 10ಕ್ಕೆ ಜಮಖಂಡಿಯ ಶಿವಲಿಂಗೇಶ್ವರ ನಾಟ್ಯ ಸಂಘದಿಂದ `ದೇವರು ಕೊಟ್ಟ ವರ' ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT