ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಂಕಟಗಿರಿಕೋಟೆ: ನೂರಾರು ಮಂದಿ ಅಸ್ವಸ್ಥ

Last Updated 1 ಜೂನ್ 2013, 13:04 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಮತ್ತು ದೇವನಹಳ್ಳಿ ತಾಲ್ಲೂಕುಗಳ ಗಡಿಯಲ್ಲಿರುವ ವೆಂಕಟಗಿರಿಕೋಟೆ ಗ್ರಾಮದಲ್ಲಿ ನಿಗೂಢ ವಿಷಮ ಜ್ವರ ಆವರಿಸಿಕೊಂಡಿದ್ದು, 200ಕ್ಕೂ ಹೆಚ್ಚು ಮಂದಿ ಜ್ವರದಿಂದ ಬಳಲುತ್ತಿದ್ದಾರೆ. 15 ದಿನಗಳಿಂದ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ನಿರಂತರವಾಗಿ ಚಿಕಿತ್ಸೆ ನೀಡುತ್ತಿದ್ದರೂ ಜ್ವರ ಹರಡುವಿಕೆ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಮಕ್ಕಳು, ಮಹಿಳೆಯರು, ವೃದ್ಧರೆನ್ನದೇ ಬಹುತೇಕ ಮಂದಿ ಜ್ವರ ಮತ್ತು ತೀವ್ರ ಮೈಕೈ ನೋವಿನಿಂದ ನರಳುತ್ತಿದ್ದು, ಪ್ರಾಣಾಪಾಯದ ಭೀತಿ ಎದುರಿಸುತ್ತಿದ್ದಾರೆ.

ಪ್ರತಿ ದಿನ ನೂರಕ್ಕೂ ಹೆಚ್ಚು ಮಂದಿ ಸಮೀಪದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಜ್ವರ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಕೆಲವರು ಚಿಕ್ಕಬಳ್ಳಾಪುರ, ದೇವನಹಳ್ಳಿ ಮತ್ತು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 'ಎಷ್ಟೆಲ್ಲ ಗುಳಿಗೆ, ಔಷಧಿ ತೆಗೆದುಕೊಂಡರೂ ಜ್ವರ ಕಡಿಮೆಯಾಗುತ್ತಿಲ್ಲ. ಮೊದಲಿಗೆ ಕೆಲವಷ್ಟು ಜನರಿಗೆ ಮಾತ್ರವೇ ಜ್ವರ ಕಾಣಿಸಿಕೊಂಡಿತ್ತು. ಆದರೆ ಈಗ ಗ್ರಾಮ ಪೂರ್ತಿ ಆವರಿಸಿಕೊಂಡಿದೆ. ಯಾರದ್ದೇ ಮನೆಗೆ ಭೇಟಿ ನೀಡಿದರೂ ಜ್ವರಪೀಡಿತರು ಸಿಗುತ್ತಾರೆ' ಎಂದು ಗ್ರಾಮಸ್ಥರು ಆತಂಕದಿಂದ ಹೇಳುತ್ತಾರೆ.

ಗ್ರಾಮದ ಗಂಗಾಭವಾನಿ (ಅಂಬೇಡ್ಕರ್) ಕಾಲೊನಿಯೊಂದರಲ್ಲೇ ನೂರಕ್ಕೂ ಹೆಚ್ಚು ಜ್ವರಪೀಡಿತರಿದ್ದು, ಒಂದೆರಡು ವರ್ಷದ ಮಕ್ಕಳಿಗೂ ಜ್ವರ ಕಾಡುತ್ತಿದೆ. ಬಹುತೇಕ ಕೂಲಿಕಾರ್ಮಿಕರೇ ವಾಸವಿರುವ ಈ ಕಾಲೊನಿಯಲ್ಲಿ ಸಂಪೂರ್ಣ ಜನಜೀವನ ಅಸ್ತವ್ಯಸ್ತಗೊಂಡ್ದ್ದಿದಾರೆ. 'ಕುಟುಂಬದ ಒಬ್ಬ ಸದಸ್ಯರಿಗೆ ಇವತ್ತು ಜ್ವರ ಬಂದರೆ, ಇನ್ನೆರಡು ದಿನಗಳಲ್ಲಿ ಮಕ್ಕಳು ಸೇರಿದಂತೆ ಕುಟುಂಬದ ಇತರೆ ಸದಸ್ಯರಿಗೂ ಜ್ವರ ಬರುತ್ತದೆಯೆಂದೇ ಅರ್ಥ' ಎನ್ನುತ್ತಾರೆ ಗ್ರಾಮಸ್ಥರು.

'ನೂರಾರು ಜನರಲ್ಲಿ ದಿಢೀರನೇ ಜ್ವರ ಕಾಣಿಸಿಕೊಳ್ಳಲು ಏನು ಕಾರಣವೆಂಬುದು ಗೊತ್ತಾಗುತ್ತಿಲ್ಲ. ಚಿಕೂನ್ ಗುನ್ಯಾ ರೀತಿಯಲ್ಲೇ ಜ್ವರ ಮತ್ತು ಮೈಕೈ ನೋವು ಕಾಡುತ್ತಿದೆ. ಒಂದು ಹೆಜ್ಜೆ ನಡೆದಾಡಲು ಆಗುವುದಿಲ್ಲ. ಹಾಸಿಗೆಯಿಂದ ಮೇಲೆ ಏಳಲು ಆಗುವುದಿಲ್ಲ. ನಮ್ಮ ಗ್ರಾಮದಲ್ಲಿ ವಾಸವಿರುವ ಬಹಳಷ್ಟು ಮಂದಿ ಜ್ವರದಿಂದ ಬಳಲುತ್ತಿದ್ದು, ಕೆಲಸಕ್ಕೆ ಹೋಗಿಲ್ಲ. ದುಡಿಮೆಯಿಲ್ಲದೇ ಮತ್ತು ಗುಣಮುಖವೂ ಆಗದೇ ಗ್ರಾಮಸ್ಥರೆಲ್ಲ ಕಂಗಾಲು ಆಗಿದ್ದಾರೆ. ಇದು ಯಾವ ಜ್ವರ ಮತ್ತು ಏಕಕಾಲಕ್ಕೆ ನೂರಾರು ಜನರಿಗೆ ಏಕೆ ಬಂತು ಎಂಬುದರ ಬಗ್ಗೆ ವೈದ್ಯರು ಸಹಾ ಸರಿಯಾಗಿ ಮಾಹಿತಿ ಕೊಡುತ್ತಿಲ್ಲ' ಎಂದು ಗ್ರಾಮಸ್ಥ ವೆಂಕಟೇಶ್ 'ಪ್ರಜಾವಾಣಿ'ಗೆ ತಿಳಿಸಿದರು.

`15 ದಿನಗಳಿಂದ ಬಹಳಷ್ಟು ಜನರಿಗೆ ಜ್ವರ ಕಾಡುತ್ತಿದ್ದರೂ ಯಾರೂ ಜನಪ್ರತಿನಿಧಿ ಅಥವಾ ವೈದ್ಯರಾಗಲಿ ಸ್ಥಳಕ್ಕೆ ಭೇಟಿ ನೀಡಿರಲಿಲ್ಲ. ವಿಷಯ ತಿಳಿದ ನಂತರ ಸ್ಥಳೀಯ ಶಾಸಕರು ಮತ್ತು ಜಿಲ್ಲಾ ಆರೋಗ್ಯಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿದರು. ಆದರೆ ಜ್ವರ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಎಷ್ಟೇ ಮುಂಜಾಗ್ರತಾ ಕ್ರಮ ವಹಿಸಿದರೂ ಜ್ವರ ಹರಡುವುದು ನಿಲ್ಲುತ್ತಿಲ್ಲ. ಇವತ್ತು ನನ್ನ ಒಂದು ವರ್ಷದ ಮಗಳಿಗೆ ಜ್ವರ ಬಂದಿದ್ದು, ನನಗೆ ದಿಕ್ಕೇ ತೋಚದಂತಾಗಿದೆ. ಇಲ್ಲಿನ ಜ್ವರಪೀಡಿತರನ್ನು ನೋಡಿದರೆ, ಗ್ರಾಮವನ್ನೇ ಬಿಟ್ಟು ಹೋಗಬೇಕಂತ ಅನ್ನಿಸುತ್ತದೆ' ಎಂದು ಅವರು ನೊಂದು ಹೇಳಿದರು.

ಜ್ವರಪೀಡಿತರಿಗೆ ಚಿಕಿತ್ಸೆ ನೀಡಲೆಂದೇ ವೈದ್ಯರು ಮತ್ತು ಸಿಬ್ಬಂದಿ ಬೆಳಿಗ್ಗೆಯಿಂದ ಸಂಜೆಯವರೆಗೆ ಗ್ರಾಮದಲ್ಲೇ ಬೀಡುಬಿಟ್ಟಿದ್ದಾರೆ. ಆದರೆ ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳಿಗೆ ಹೋಗುತ್ತಿರುವ ಜ್ವರಪೀಡಿತರು ಪ್ರತಿ ದಿನ ರೂ 500 ರಿಂದ 700 ಖರ್ಚು ಮಾಡುತ್ತಿದ್ದಾರೆ. `ಜ್ವರ ಹರಡಿರುವುದನ್ನೇ ನೆಪ ಮಾಡಿಕೊಂಡಿರುವ ಕೆಲ ಕ್ಲಿನಿಕ್‌ಗಳ ವೈದ್ಯರು ಜ್ವರಪೀಡಿತರಿಂದ ದುಬಾರಿ ವೈದ್ಯಕೀಯ ಶುಲ್ಕ ಪಡೆಯುತ್ತಿದ್ದಾರೆ. ಉದ್ದನೆಯ ಚೀಟಿ ಬರೆದುಕೊಟ್ಟು ಇಂತಿಷ್ಟು ಖರ್ಚು ಎಂದು ಹೇಳಿಕೊಂಡು ರೂ500 ರಿಂದ 700 ತೆಗೆದುಕೊಳ್ಳುತ್ತಿದ್ದಾರೆ' ಎಂದು ಗ್ರಾಮಸ್ಥರು ದೂರುತ್ತಾರೆ.

ನಿಗೂಢ ಜ್ವರ: `ಈ ಜ್ವರವನ್ನು ಚಿಕುನ್ ಗುನ್ಯಾ ಅಥವಾ ಡೆಂಗೆ ಎಂಬುದನ್ನು ನಿಖರವಾಗಿ ಹೇಳಲಾಗುತ್ತಿಲ್ಲ ಎಂದು ಕಾರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಯದುಪತಿ ತಿಳಿಸಿದರು.

ಅಂಗನವಾಡಿ ಕೇಂದ್ರ ಬಂದ್!
ವೆಂಕಟಗಿರಿಕೋಟೆ ಗ್ರಾಮ ಪೂರ್ತಿ ಜ್ವರ ಹರಡಿದ ದಿನದಿಂದ ಅಂಗನವಾಡಿ ಕೇಂದ್ರಕ್ಕೆ ಮಕ್ಕಳೇ ಬಂದಿಲ್ಲ. ಅಂಗನವಾಡಿ ಕಾರ್ಯಕರ್ತೆ ಮಾಳಗಮ್ಮ ಜ್ವರದಿಂದ ಬಳಲುತ್ತಿದ್ದು, ಇನ್ನೂ ಗುಣಮುಖರಾಗಿಲ್ಲ. ಅಂಗನವಾಡಿ ಕೇಂದ್ರದ ಬಾಗಿಲು ತೆಗೆದಿದ್ದರೂ ಮಕ್ಕಳು ಕೇಂದ್ರಕ್ಕೆ ಬರುತ್ತಿಲ್ಲ.

`ಮುಂಜಾಗ್ರತಾ ಕ್ರಮಗಳನ್ನು ವಹಿಸಿಕೊಂಡರೂ ಮತ್ತು ಆರೋಗ್ಯವಂತರಾಗಿ ಇರಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ನನಗೂ ಜ್ವರ ಬಂದಿದ್ದು, ಓಡಾಡುವ ಶಕ್ತಿ ಕಳೆದುಕೊಂಡಿದ್ದೇನೆ. ಜ್ವರ ಹರಡುವಿಕೆ ಭೀತಿಯಿಂದ ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ಬರುತ್ತಿಲ್ಲ. ಕೆಲವಷ್ಟು ಮಕ್ಕಳಿಗೆ ಈಗಾಗಲೇ ಜ್ವರ ಬಂದುಬಿಟ್ಟಿದೆ' ಎಂದು ಅಂಗನವಾಡಿ ಕಾರ್ಯಕರ್ತೆ ಮಾಳಗಮ್ಮ ತಿಳಿಸಿದರು.

ಆಶಾ ಕಾರ್ಯಕರ್ತೆಗೆ ಜ್ವರ!
ಚಿಕುನ್‌ಗುನ್ಯಾ ಮತ್ತು ಡೆಂಗೆ ಕುರಿತು ಜಾಗೃತಿ ಮೂಡಿಸಲು ವೆಂಕಟಗಿರಿಕೋಟೆ ಗ್ರಾಮಕ್ಕೆ ಬಂದಿದ್ದ ಆಶಾ ಕಾರ್ಯಕರ್ತೆ ನಿರ್ಮಲಾ ಅವರಿಗೆ ಜ್ವರ ಕಾಡುತ್ತಿದೆ. ಗ್ರಾಮಸ್ಥರಿಗೆ ಮುಂಜಾಗ್ರತಾ ಕ್ರಮಗಳನ್ನು ತಿಳಿಸಲು ಮತ್ತು ಅರಿವು ಮೂಡಿಸಲು ಗ್ರಾಮದಲ್ಲಿ ಮೂರು ಸುತ್ತುಗಳನ್ನು ಹಾಕಿದ ಅವರಿಗೆ ಈಗ ಜ್ವರ ಕಾಡುತ್ತಿದ್ದು, ಅವರೇ ಚಿಕಿತ್ಸೆ ಪಡೆಯುತ್ತಿದ್ದಾರೆ.

'ಹಿರಿಯ ಆರೋಗ್ಯಾಧಿಕಾರಿ ಸೂಚನೆ ಮೇರೆಗೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲು ಗ್ರಾಮ ಪೂರ್ತಿ ಮೂರು ಸುತ್ತು ಹಾಕಿದೆ. ಆದರೆ ಈಗ ನನಗೆ ಜ್ವರ ಕಾಡುತ್ತಿದೆ. ನಡೆದಾಡಲು ಆಗುತ್ತಿಲ್ಲ ಮತ್ತು ಔಷಧಿ ಪಡೆದುಕೊಂಡರೂ ಜ್ವರ ಮಾತ್ರ ಕಡಿಮೆಯಾಗುತ್ತಿಲ್ಲ' ಎಂದು ನಿರ್ಮಲಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT