ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಂಕಟನ ಸಂಕ್ರಮಣ

Last Updated 25 ಜುಲೈ 2013, 19:59 IST
ಅಕ್ಷರ ಗಾತ್ರ

1995ನೇ ಇಸವಿಯ ಒಂದು ಮುಸ್ಸಂಜೆ. ಸ್ಥಳ: ರವೀಂದ್ರ ಕಲಾಕ್ಷೇತ್ರ. ಎಲ್. ಹನುಮಂತಯ್ಯನವರು ರಚಿಸಿದ, ಸಿ.ಜಿ.ಕೆ. ನಿರ್ದೇಶನದ `ಅಂಬೇಡ್ಕರ್' ನಾಟಕ ಪ್ರದರ್ಶನ. ನಾಟಕ ಮುಗಿಸಿ ಗಾಂಧಿ ಪಾತ್ರಧಾರಿ ಕೊಠಡಿಯಲ್ಲಿ ವಸ್ತ್ರ ಕಳಚುತ್ತಿದ್ದಾಗ ಅಲ್ಲಿಗೆ ಬಂದ ವಿಚಾರವಾದಿ ಎಚ್. ನರಸಿಂಹಯ್ಯ, `ನಿನಗೆ ವಯಸ್ಸೆಷ್ಟು' ಎಂದು ಪಾತ್ರಧಾರಿಯನ್ನು ಪ್ರಶ್ನಿಸಿದ್ದರು.

ಆತ `ನನಗೆ 17 ವರ್ಷ ಎಂದಾಗ `ನೀನು ಯುವಕ, ಮುದುಕನ ಪಾತ್ರವನ್ನು ಇಷ್ಟೊಂದು ಚೆನ್ನಾಗಿ ಮಾಡುತ್ತೀಯ! ನಾನು ಮುದುಕ, ನಾನೇಕೆ ಯುವಕನ ಪಾತ್ರ ಮಾಡಬಾರದು' ಎಂದು ಪಾತ್ರಧಾರಿಯ ಬೆನ್ನುತಟ್ಟಿ ಗಲ್ಲ ಸವರಿದ್ದರು.

ಎಚ್ಚೆನ್ ಅವರಿಂದ ಬೆನ್ನುತಟ್ಟಿಸಿಕೊಂಡ ತರುಣನ ಹೆಸರು ವೆಂಕಟರಾಜು. ವೆಂಕಟರಾಜು ಅವರೊಂದಿಗೆ ಕಿರುತೆರೆ ವೀಕ್ಷಕರಿಗೆ ನೆನಪಾಗುವುದು `ಅಣ್ಣ ಬಸವಣ್ಣ' ಧಾರಾವಾಹಿಯ ಚೆನ್ನಬಸವಣ್ಣ, `ವಧುದಕ್ಷಿಣಿ'ಯ ಪ್ರಶಾಂತ್, `ಪಾಪ ಪಾಂಡು'ವಿನ `ಹಳ್ಳಿರಂಗ'.

ಧಾರಾವಾಹಿಗಳ ಜೊತೆಗೆ ಅನೇಕ ಸಿನಿಮಾಗಳಲ್ಲೂ ನಟಿಸಿದ್ದಾರೆ. ಬರಗೂರು ರಾಮಚಂದ್ರಪ್ಪನವರ ಚಿತ್ರಗಳ ಕಾಯಂ ಸದಸ್ಯ ಎನ್ನುವಂತೆ `ಭಾಗೀರತಿ', `ಶಬರಿ', `ಅಂಗೂಲಿಮಾಲ' ಚಿತ್ರಗಳಲ್ಲಿ ನಟಿಸಿದ್ದಾರೆ. ರವೀಂದ್ರನಾಥ ಸಿರಿವರ ಅವರ `ಗಾಂಧಿ ಜಯಂತಿ'ಯಲ್ಲೂ ಅವರಿದ್ದಾರೆ. ತೆರೆಕಾಣಬೇಕಿರುವ `ಟೋನಿ' ಹಾಗೂ ಸೆಟ್ಟೇರಬೇಕಿರುವ `ಅಂಬರೀಷ' ಚಿತ್ರಗಳಲ್ಲಿ ಒಳ್ಳೆಯ ಪಾತ್ರಗಳಿವೆಯಂತೆ. 

ರಂಗದ ಮೇಲಿನ ಸಿಹಿ ಗಳಿಗೆಗಳನ್ನು ನೆನಪಿಸಿಕೊಳ್ಳುತ್ತಲೇ ಕಹಿಯ ಅನುಭವಗಳನ್ನೂ ಅವರು ಬಿಚ್ಚಿಡುತ್ತಾರೆ. ಮರೆಯಲಾಗದ ಕಹಿ ಘಟನೆಗಳೇ ಅವರಲ್ಲಿ ನಟನೆಯ ಬಗ್ಗೆ ವಿಶ್ವಾಸ ಮೂಡಿಸಿವೆಯಂತೆ. ರಂಗಭೂಮಿಯ ಅನೇಕ ಪ್ರಮುಖ ನಿರ್ದೇಶಕರ ಗರಡಿಯಲ್ಲಿ ವೆಂಕಟರಾಜು ಕೆಲಸ ಮಾಡಿದ್ದಾರೆ.

ಮೊದಲ ಬಾರಿ ಅವರು ಬಣ್ಣ ಹಚ್ಚಿದ್ದು ನಟ ದಿ. ವಿಷ್ಣುವರ್ಧನ್ ಅವರ ಅಣ್ಣ ರವಿಕುಮಾರ್ ಅಭಿನಯದ `ಮೂಕಬಲಿ' ನಾಟಕದ ಮಲ್ಲನ ಪಾತ್ರಧಾರಿಯಾಗಿ. ವೆಂಕಟರಾಜು ಬಣ್ಣ ಹಚ್ಚಲು ಪ್ರೇರಣೆ ಅವರ ತಂದೆ. ವೃತ್ತಿ ರಂಗಭೂಮಿ ಕಲಾವಿದರಾದ ಪಿ. ರಾಮರಾಜು ಬಾಲ್ಯದಲ್ಲಿಯೇ ಮಗನಿಗೆ ರಂಗದ ಗೀಳು ಬೆಳೆಸಿದವರು.

`ಪಂಪ ಭಾರತ'ದಲ್ಲಿ ವೆಂಕಟರಾಜು ನಿರ್ವಹಿಸಿದ ಪಂಪನ ಪಾತ್ರ ಅವರಿಗೆ ಹೆಸರು ತಂದುಕೊಟ್ಟಿತ್ತು. ಈಗಲೂ ರಂಗಭೂಮಿಯಲ್ಲಿ ಅವರನ್ನು ಗುರುತಿಸುವುದು ಪಂಪನಾಗಿಯೇ. `ಅಂಧಯುಗದೊಳಗೊಬ್ಬ ಅಶ್ವತ್ಥಾಮ' ಎನ್ನುವ ಒಂದೂವರೆ ಗಂಟೆಯ ಏಕವ್ಯಕ್ತಿ ಪ್ರದರ್ಶನ ಅವರ ರಂಗಚಟುವಟಿಕೆಗೊಂದು ಗರಿಮೆ. ಸದ್ಯ `ಪಂಪ ಸಾಂಸ್ಕೃತಿಕ ತಂಡ'ದಲ್ಲಿ ವೆಂಕಟರಾಜು ಸಕ್ರಿಯರು.
-ಡಿ.ಎಂ.ಕುರ್ಕೆ ಪ್ರಶಾಂತ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT