ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆನಿಲ್ಲಾ- ಧಾರಣೆ ಇದೆ; ಬೆಳೆ ಇ್ಲ್ಲಲ್ಲ

Last Updated 14 ಡಿಸೆಂಬರ್ 2012, 10:56 IST
ಅಕ್ಷರ ಗಾತ್ರ

ಸಿದ್ದಾಪುರ: `ಹಲ್ಲು ಇದ್ದಾಗ ಕಡಲೆಯಿಲ್ಲ, ಕಡಲೆ ಇದ್ದಾಗ ಹಲ್ಲಿಲ್ಲ' ಎಂಬ ಮಾತು ವೆನಿಲ್ಲಾ ಬೆಳೆಗಾರರಿಗೆ ಸರಿಯಾಗಿಯೇ ಅನ್ವಯವಾಗುತ್ತಿದೆ. ವೆನಿಲ್ಲಾ ಧಾರಣೆ ಗಗನಕ್ಕೇರಿದಾಗ ತಾಲ್ಲೂಕಿನ ಕೆಲವೇ ರೈತರು ಅದರ ಲಾಭ ಪಡೆದರು. ಆಗ ಹಲವರ ಬಳಿ ವೆನಿಲ್ಲಾ ಇರಲಿಲ್ಲ. ನಂತರ ಎಲ್ಲ ರೈತರೂ ವೆನಿಲ್ಲಾ ಬೆಳೆಯತೊಡಗಿದಾಗ ಧಾರಣೆ ನೆಲಕಚ್ಚಿತು. ಈಗ ಪುನಃ ಧಾರಣೆಯಲ್ಲಿ ಚೇತರಿಕೆ ಉಂಟಾಗಿದ್ದರೂ,ರೈತರ ಬಳಿ ವೆನಿಲ್ಲಾ ಮಾತ್ರ ಇಲ್ಲ.

ಈ ವರ್ಷ ತಾಲ್ಲೂಕಿನ ವೆನಿಲ್ಲಾ ಖರೀದಿ ಕೇಂದ್ರಗಳು ಬಿಕೋ ಎನ್ನುತ್ತಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅರ್ಧದಷ್ಟು ವೆನಿಲ್ಲಾ ಬೀನ್ಸ್ ಮಾತ್ರ ಈ ಸಾರಿ ಖರೀದಿದಾರರಿಗೆ ದೊರೆತಿದೆ. ಹೋದ ವರ್ಷ ಸುಮಾರು ರೂ 100ರ ಆಸುಪಾಸಿನಲ್ಲಿದ್ದ ಮೊದಲನೆ ದರ್ಜೆಯ ಒಂದು ಕೆ.ಜಿ. ವೆನಿಲ್ಲಾ ಬೀನ್ಸ್ ಧಾರಣೆ, ಈ ಸಾರಿ ರೂ 300 ಕ್ಕೆ ಏರಿದೆ. ಅದರಂತೆ ಸಂಸ್ಕರಣಗೊಳಿಸಿದ ವೆನಿಲ್ಲಾ ಧಾರಣೆ  ಕೆ.ಜಿ.ಗೆ ರೂ 1300(ಕಳೆದ ವರ್ಷ ರೂ 800) ರಷ್ಟಿದೆ. ಆದರೂ ನಿರೀಕ್ಷೆಯಷ್ಟು ವೆನಿಲ್ಲಾ ಮಾತ್ರ ಮಾರುಕಟ್ಟೆಗೆ ಬಂದಿಲ್ಲ. ಸೊರಗು ರೋಗದಿಂದ ವೆನಿಲ್ಲಾ ನಾಶವಾಗಿರುವುದು ಇದಕ್ಕೆ ಕಾರಣ.

`ಪ್ರಸ್ತುತ ತಾಲ್ಲೂಕಿನ ದೊಡ್ಮನೆ ಮತ್ತು ಮಾವಿನಗುಂಡಿ ಪ್ರದೇಶದಿಂದ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ವೆನಿಲ್ಲಾ ನಮ್ಮ ಮಾರುಕಟ್ಟೆಗೆ ಬರುತ್ತಿದೆ. ಸಾಗರ ತಾಲ್ಲೂಕಿನ ಕೆಲವೊಂದು ಪ್ರದೇಶದಿಂದಲೂ ವೆನಿಲ್ಲಾ ಬರುತ್ತಿದೆ. ವರ್ಷದ ಎಲ್ಲ ದಿನಗಳಲ್ಲಿಯೂ ವೆನಿಲ್ಲಾ ಖರೀದಿ ಮಾಡುವ ಕೇಂದ್ರ ನಮ್ಮದು' ಎನ್ನುತ್ತಾರೆ ಪಟ್ಟಣದ ಮಹಾಬಲ ವೆನಿಲ್ಲಾ ಕ್ಯೂರಿಂಗ್ ಕೇಂದ್ರದ ಸಿಬ್ಬಂದಿ.

`ತಾಲ್ಲೂಕಿನ ಬಹಳಷ್ಟು ರೈತರು ವೆನಿಲ್ಲಾ ಬೆಳೆಯ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಾರೆ. ನೆಲಕಚ್ಚಿದ ಧಾರಣೆ ಮತ್ತು ಹತೋಟಿ ಮಾಡಲು ಅಸಾಧ್ಯವಾಗಿರುವ ಸೊರಗು ರೋಗದ ಹಾವಳಿಯಿಂದ ರೈತರಿಗೆ ವೆನಿಲ್ಲಾ ಬಗ್ಗೆ ನಿರಾಸಕ್ತಿ ಉಂಟಾಗಿರುವುದು ಮೇಲ್ನೋಟಕ್ಕೆ ಕಂಡು ಬರುವ ಸಂಗತಿ. ವೆನಿಲ್ಲಾ ಗಿಡ ಹೂ ಬಿಟ್ಟ ಸಂದರ್ಭದಲ್ಲಿಯೂ ಅದರ  ಕೃತಕ ಪರಾಗಸ್ಪರ್ಶವನ್ನು ಪೂರ್ಣ ಪ್ರಮಾಣದಲ್ಲಿ ರೈತರು ಮಾಡಿಲ್ಲ' ಎಂಬುದು ವೆನಿಲ್ಲಾ ವ್ಯವಹಾರ ನಡೆಸುತ್ತಿರುವವರ ಅಭಿಪ್ರಾಯ. `ಸರಿಯಾಗಿ ಕೃತಕ ಪರಾಗಸ್ಪರ್ಶ ಮಾಡಿದ್ದರೇ ಇನ್ನೂ ಸುಮಾರು 20 ಕ್ವಿಂಟಲ್ ಹೆಚ್ಚು ವೆನಿಲ್ಲಾಬೀನ್ಸ್ ದೊರೆಯಬಹುದಿತ್ತು ಎನ್ನುತ್ತಾರೆ' ಅವರು.

`ಚಿನ್ನದ ಬೆಳೆ' ಎಂಬ ಖ್ಯಾತಿಗೆ ಒಳಗಾಗಿದ್ದ ವೆನಿಲ್ಲಾ, ಧಾರಣೆ ಕುಸಿದ ನಂತರ ಆ ಹೆಗ್ಗಳಿಕೆಯನ್ನು ಕಳೆದುಕೊಂಡಿತು. ಆದರೂ ಅಡಿಕೆ ಗಿಡಗಳೊಂದಿಗೆ  ಅಡಿಕೆ ತೋಟದಲ್ಲಿ  ಮಿಶ್ರ ಬೆಳೆಯಾಗಿ ವೆನಿಲ್ಲಾ ಇರುತ್ತದೆ ಎಂಬ ದೂರದ ಆಸೆ ರೈತರಿಗಿತ್ತು. ಈಗ ಸೊರಗು ರೋಗದ ಕಾರಣದಿಂದ ಅಡಿಕೆಯೊಡನೆ ಮಿಶ್ರ ಬೆಳೆಯ  ಸ್ಥಾನವನ್ನೂ ವೆನಿಲ್ಲಾ  ಕಳೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT