ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆನ್ಲಾಕ್ ಆಸ್ಪತ್ರೆಗೆ ಕುದ್ಮುಲ್ ರಂಗರಾವ್ ಹೆಸರು

Last Updated 3 ಜುಲೈ 2012, 10:00 IST
ಅಕ್ಷರ ಗಾತ್ರ

ಮಂಗಳೂರು: `ಗಳಿಸಿದ ಸರ್ವ ಸಂಪತ್ತನ್ನು ಪರಿಶಿಷ್ಟ ಜನರ ಏಳಿಗೆಗಾಗಿ ತ್ಯಾಗ ಮಾಡಿದ ಕುದ್ಮುಲ್ ರಂಗರಾವ್ ಅವರ ಹೆಸರಿನಲ್ಲಿ ನಗರದಲ್ಲಿ ಯಾವುದೇ ಸ್ಮಾರಕಗಳಿಲ್ಲ. ಲಕ್ಷಾಂತರ ಮಂದಿಗೆ ಉಚಿತ ಚಿಕಿತ್ಸೆ ನೀಡುತ್ತಿರುವ ವೆನ್ಲಾಕ್ ಆಸ್ಪತ್ರೆಗೆ ಅವರ ಹೆಸರು ಇಡಬೇಕು~ ಎಂದು ವಿಧಾನಸಭೆ ಉಪಸಭಾಧ್ಯಕ್ಷ ಎನ್.ಯೋಗಿಶ್ ಭಟ್ ಹೇಳಿದರು.

ಅಖಿಲ ಭಾರತ ಮುಂಡಾಲ ಯುವ ವೇದಿಕೆ ಆಶ್ರಯದಲ್ಲಿ ಇಲ್ಲಿನ ಎಸ್‌ಡಿಎಂ ಕಾನೂನು ಕಾಲೇಜು ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡ ಕುದ್ಮುಲ್ ರಂಗರಾವ್ ಅವರ 153ನೇ ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು `ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ನಿರ್ಣಯ ಕೈಗೊಳ್ಳಲಾಗುವುದು~ ಎಂದರು.

`ಗಾಂಧೀಜಿ ಅವರಿಗೆ ದಲಿತರ ಬಗ್ಗೆ ವಿಶೇಷ ಒಲವು ಮೂಡುವುದಕ್ಕೆ ಕುದ್ಮುಲ್ ರಂಗರಾವ್ ಅವರ ದಲಿತ ಸೇವೆ ಪ್ರೇರಣೆ ಒದಗಿಸಿತ್ತು. ಅವರನ್ನು ಗಾಂಧೀಜಿ ಗುರುಸ್ವರೂಪಿಯಾಗಿ ಸ್ವೀಕರಿ ಸಿದ್ದರು. ಇದು ನಮ್ಮ ಜಿಲ್ಲೆಗೆ ಸಂದ ಹೆಮ್ಮೆ~ ಎಂದರು.

`ದಲಿತರು ಉತ್ತಮ ಶಿಕ್ಷಣ ಪಡೆದು, ಜಿಲ್ಲಾಧಿಕಾರಿ ಆಗಿ, ಅವರು ಕಾರಿನಲ್ಲಿ ಓಡಾಡುವಾಗ ಏಳುವ ಧೂಳು ನನ್ನ ಸಮಾಧಿ ಮೇಲೆ ಬಿದ್ದರೆ ನನ್ನ ಜನ್ಮ ಸಾರ್ಥಕ ಎಂದು ಹೇಳಿಕೊಂಡ ಧೀಮಂತ ರಂಗರಾವ್~ ಎಂದು ಭಟ್ ಅವರು ಸ್ಮರಿಸಿದರು.

`ಅಮೃತ ಬಿಂದು ಕುದ್ಮುಲ್ ರಂಗರಾವ್~ ಪುಸ್ತಕ ಬಿಡುಗಡೆ ಮಾಡಿದ ಶಾಸಕ ಯು.ಟಿ.ಖಾದರ್ ಮಾತನಾಡಿ, `ಸುಶಿಕ್ಷಿತ ದಲಿತರು ಕುದ್ಮುಲ್ ರಂಗರಾವ್ ಅವರು ಶೋಷಿತರ ಏಳಿಗೆಗಾಗಿ ಶ್ರಮಿಸಿದ ಶೇ 10ರಷ್ಟಾದರೂ ಪ್ರಯತ್ನಪಟ್ಟು, ಗ್ರಾಮೀಣ ಪ್ರದೇಶದ ಹಿಂದುಳಿದ ದಲಿತರ ಅಭಿವೃದ್ಧಿಗೆ ದುಡಿಯಬೇಕು~ ಎಂದರು.

ಕಚ್ಚೂರು ಮಾಲ್ದಿದೇವಿ ಬಬ್ಬುಸ್ವಾಮಿ ಮೂಲಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಗೋಕುಲ್‌ದಾಸ್ ಅಖಿಲ ಭಾರತ ಮುಂಡಾಲ ಯುವ ವೇದಿಕೆಯ ವೆಬ್‌ಸೈಟ್  ಉದ್ಘಾಟಿಸಿದರು.

ಪಾಲಿಕೆ ಆಯುಕ್ತ ಹರೀಶ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಅರುಣ್ ಫುರ್ಟಾಡೊ, ಉಳ್ಳಾಲ ಪುರಸಭೆ ಉಪಾಧ್ಯಕ್ಷೆ ಭವಾನಿ, ದಲಿತ ಸಂಘರ್ಷ ಸಮಿತಿ ಮುಖಂಡ ಕೇಶವ ಪುತ್ತೂರು, ವೇದಿಕೆ ಅಧ್ಯಕ್ಷ ರಜನೀಶ್ ಮತ್ತಿತರರಿದ್ದರು. ಖಜಾಂಚಿ ರಘುವೀರ್ ಸ್ವಾಗತಿಸಿದರು.

ಕೆಕೆ. ಪೇಜಾವರ್ ಕಾರ್ಯಕ್ರಮ ನಿರೂಪಿಸಿದರು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಮುಂಡಾಲ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT