ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಗವೆಂದರೆ ನನಗೆ ತುಂಬಾ ಇಷ್ಟ: ವರುಣ್ ಆ್ಯರನ್

Last Updated 27 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಈಗ ಎಲ್ಲರೂ ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ಕೆಲವರು ಹೊಗಳುತ್ತಿದ್ದಾರೆ. ಇನ್ನು ಕೆಲವರು ಹೊಗಳಿಕೆಯೊಂದಿಗೆ ಎಚ್ಚರಿಕೆಯ ಮಾತು ಹೇಳುತ್ತಿದ್ದಾರೆ. ಹಾಗಾಗಿ ಖುಷಿ ಜೊತೆ ಆತಂಕವೂ ಇದೆ. ಇದೇ ರೀತಿ ಪ್ರದರ್ಶನ ಮುಂದುವರಿಸಿಕೊಂಡು ಹೋಗುವುದು ನನ್ನ ಮುಂದಿರುವ ಸವಾಲು~

-ಪದಾರ್ಪಣೆಯ ಪಂದ್ಯದ್ಲ್ಲಲಿಯೇ ವೇಗದ ಬೌಲಿಂಗ್ ಮೂಲಕ ಭರವಸೆ ಮೂಡಿಸಿರುವ ಭಾರತ ಕ್ರಿಕೆಟ್ ತಂಡದ ವರುಣ್ ಆ್ಯರನ್ ಗುರುವಾರ `ಪ್ರಜಾವಾಣಿ~ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ವಿಷಯ ತಿಳಿಸಿದರು.

ಜಾರ್ಖಂಡ್ ತಂಡದ ಆ್ಯರನ್ `ವಿಜಯ ಹಜಾರೆ ಟ್ರೋಫಿ~ ಟೂರ್ನಿ ಫೈನಲ್‌ನಲ್ಲಿ 153.4 ಕಿ.ಮೀ. ವೇಗದಲ್ಲಿ ಬೌಲ್ ಮಾಡಿ ಗಮನ ಸೆಳೆದಿದ್ದರು. ಅದು ಭಾರತದ ಬೌಲರ್‌ಗಳ ಮಟ್ಟಿಗೆ ದಾಖಲೆ. ಇಂಗ್ಲೆಂಡ್ ವಿರುದ್ಧದ ಮುಂಬೈ ಪಂದ್ಯದಲ್ಲಿ 3 ವಿಕೆಟ್ ಕಬಳಿಸಿದ್ದ ಬೆಂಗಳೂರಿನ ಜೈನ್ ವಿವಿ ವಿದ್ಯಾರ್ಥಿ ವರುಣ್ ಕೋಲ್ಕತ್ತ ಪಂದ್ಯದಲ್ಲಿ ಕುಕ್ ವಿಕೆಟ್ ಪಡೆದು ಮಹತ್ವದ ತಿರುವು ನೀಡಿದ್ದರು.

ಎರಡು ವರ್ಷಗಳ ಹಿಂದೆಯಷ್ಟೇ ರಣಜಿಗೆ ಪದಾರ್ಪಣೆ ಮಾಡಿದ್ದ ಆ್ಯರನ್ ಅಷ್ಟೇನು ಗಮನ ಸೆಳೆದ ಬೌಲರ್ ಅಲ್ಲ. ಆದರೆ ಆಸ್ಟ್ರೇಲಿಯಾದಲ್ಲಿ ನಡೆದ ಉದಯೋನ್ಮುಖ ಆಟಗಾರರ ಸರಣಿಯಲ್ಲಿ ಮಿಂಚಿದ್ದು ಹಾಗೂ ವೇಗದ ಎಸೆತಗಳ ಮೂಲಕ ಗಮನ ಸೆಳೆದಿದ್ದು ರಾಷ್ಟ್ರ ತಂಡದಲ್ಲಿ ಬಹುಬೇಗನೇ ಸ್ಥಾನ ಸಿಗಲು ಕಾರಣವಾಯಿತು.

ಈ ಸರಣಿ ಎರಡು ಪಂದ್ಯಗಳಲ್ಲಿ ಅವರ ಕೆಲ ಎಸೆತಗಳು 145 ಕಿ.ಮೀ. ವೇಗದಿಂದ ಕೂಡಿದ್ದವು. ಪತ್ರಿಕೆ ಜೊತೆ 21ರ ಹರೆಯದ ಆ್ಯರನ್ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅವರ ಸಂದರ್ಶನದ ವಿವರ ಇಂತಿದೆ.

* ವೇಗದ ಬೌಲರ್ ಆಗಬೇಕು ಎನಿಸಿದ್ದು ಏಕೆ?

ಈಗ ವೇಗವೆಂದರೆ ನನಗೆ ತುಂಬಾ ಇಷ್ಟ. ಅದು ನನ್ನ ಆಸ್ತಿ ಕೂಡ. ಕ್ರಿಕೆಟ್ ಆಡಲು ಶುರು ಮಾಡಿದಾಗ ನಾನು ಬ್ಯಾಟ್ಸ್‌ಮನ್ ಆಗಬೇಕೆಂದಿದ್ದೆ. ಆಗ ನನಗೆ 13ರ ಹರೆಯ. ತಂದೆಯೊಂದಿಗೆ ಕ್ರಿಕೆಟ್ ಆಡಲು ತೆರಳುತ್ತಿದ್ದೆ. ಆ ಸಂದರ್ಭದಲ್ಲಿ ನೆಟ್ಸ್‌ನಲ್ಲಿ ಬೌಲಿಂಗ್ ಮಾಡುತ್ತಿದ್ದೆ. ವೇಗವಾಗಿ ಬೌಲ್ ಮಾಡಲು ತಂದೆ ಹುರಿದುಂಬಿಸುತ್ತಿದ್ದರು. ಅಲ್ಲಿಂದಲೇ ವೇಗದ ಬೌಲರ್ ಆಗಬೇಕು ಎನಿಸಿತು. ಬಳಿಕ ಚೆನ್ನೈನ ಎಂಆರ್‌ಎಫ್ ಫೇಸ್ ಪ್ರತಿಷ್ಠಾನದಲ್ಲಿ ತರಬೇತಿಗೆ ಆಯ್ಕೆಯಾದೆ.

* ನಾಯಕ ದೋನಿ ಅವರಿಂದ ಯಾವ ರೀತಿ ನೆರವು ಲಭಿಸುತ್ತಿದೆ?
ಯುವ ಆಟಗಾರರನ್ನು ಯಾವ ರೀತಿ ಬಳಸಿಕೊಳ್ಳಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಎರಡೂ ಪಂದ್ಯಗಳಲ್ಲಿ ನನಗೆ ಸಂಪೂರ್ಣ ಬೆಂಬಲ ನೀಡಿದರು. ನನ್ನ ಬೌಲಿಂಗ್ ವೇಳೆ ಅವರು ರೂಪಿಸುತ್ತಿದ್ದ ಫೀಲ್ಡಿಂಗ್ ಯೋಜನೆ ಅದ್ಭುತ. ಕೋಲ್ಕತ್ತ ಪಂದ್ಯದಲ್ಲಿ ಕೀಸ್ವೆಟರ್ ಹಾಗೂ ಕುಕ್ ಜೊತೆಯಾಟ ಮುರಿಯಲು ಇದರಿಂದ ಸಹಾಯವಾಯಿತು.

* ಜಾರ್ಖಂಡ್ ಈಗ ಭಾರತದ ಕ್ರಿಕೆಟ್‌ನಲ್ಲಿ ಮಿಂಚುತ್ತಿದೆ. ಕಾರಣ?

ಹೌದು, ದೋನಿ, ಸೌರಭ್ ತಿವಾರಿ ಹಾಗೂ ನಾನು ಜಾರ್ಖಂಡ್‌ನಿಂದ ಬಂದವರು. ಅ್ಲ್ಲಲೀಗ ಉತ್ತಮ ಸೌಕರ್ಯಗಳಿವೆ. ದೇಶಿ ಕ್ರಿಕೆಟ್‌ನಲ್ಲಿ ಮಿಂಚುತ್ತಿದೆ. ಅಲ್ಲಿ ಇನ್ನೂ ಪ್ರತಿಭಾವಂತ ಆಟಗಾರರಿದ್ದಾರೆ.

* ಅತಿ ವೇಗದ ಎಸೆತ (153.4 ಕಿ.ಮೀ) ಹಾಕಿದ್ದೀರಿ ಎಂಬುದು ಗೊತ್ತಾದ ಆ ಕ್ಷಣ ಹೇಗಿತ್ತು?
ತಕ್ಷಣ ನನಗೆ ಆ ವಿಷಯ ಗೊತ್ತಾಗಲಿಲ್ಲ. ಆದರೆ ಸಂಜೆ ಡ್ರೆಸ್ಸಿಂಗ್ ಕೊಠಡಿಯಲ್ಲಿ ಆ ಪಂದ್ಯದ ಅಧಿಕಾರಿಯೊಬ್ಬರು ನನಗೆ ಈ ವಿಷಯ ತಿಳಿಸಿದರು. ಸಹಜವಾಗಿಯೇ ಖುಷಿಯಾಯಿತು.

* ಬೆಂಗಳೂರು ಹಾಗೂ ನಿಮ್ಮ ನಡುವಿನ ಸಂಬಂಧ ಯಾವ ರೀತಿಯದ್ದು?
ನನ್ನ ತಂದೆ ಹುಟ್ಟಿ ಬೆಳೆದಿದ್ದು ಉದ್ಯಾನ ನಗರಿಯಲ್ಲಿ. ಆದರೆ ಕೆಲ ದಿನಗಳ ಹಿಂದೆ ಅವರು ಪುಣೆಗೆ ವರ್ಗವಾದರು. ಅವರು ಅಲ್ಲಿ ಬಾಷ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯಲ್ಲಿ ನಾನು ಹೆಚ್ಚಿನ ಸಮಯ ಕಳೆದಿದ್ದೇನೆ.

* ಚೊಚ್ಚಲ ಪಂದ್ಯದಲ್ಲಿಯೇ ಎಲ್ಲರ ಗಮನ ಸೆಳೆದಿದ್ದೀರಿ. ಹೇಗಿತ್ತು ಆ ಅನುಭವ?

ಕೊಂಚ ಒತ್ತಡಕ್ಕೆ ಒಳಗಾಗಿದ್ದು ನಿಜ. ಆದರೆ ಸಹ ಆಟಗಾರರು ಪೂರ್ಣ ಬೆಂಬಲ ನೀಡಿದರು. ಮೊದಲ ಮೂರು ಓವರ್‌ಗಳಲ್ಲಿ ವಿಕೆಟ್ ಸಿಗಲಿಲ್ಲ. ಆದರೆ ನಾಯಕ ದೋನಿ ನನಗೆ ಮತ್ತೆ ಚೆಂಡು ನೀಡಿದರು. ಮೂರು ವಿಕೆಟ್ ಲಭಿಸಿದವು. ನನ್ನ ಮೊದಲ ಪಂದ್ಯದಲ್ಲಿ ಭಾರತ ಗೆದ್ದಿದ್ದು ಖುಷಿ ತಂದಿದೆ.

* ಇಂಗ್ಲೆಂಡ್ ವಿರುದ್ಧ 5-0 ಸರಣಿ ಗ್ದ್ದೆದ ಸಂಭ್ರಮವನ್ನು ಡ್ರೆಸ್ಸಿಂಗ್ ಕೋಣೆಯಲ್ಲಿ ಯಾವ ರೀತಿ ಆಚರಿಸಿದಿರಿ?
ಡ್ರೆಸ್ಸಿಂಗ್ ಕೋಣೆಯಲ್ಲಿ ಮಾತ್ರವಲ್ಲ; ಹೋಟೆಲ್‌ನಲ್ಲೂ ನಮ್ಮ ಸಂಭ್ರಮಮುಂದುವರಿಯಿತು. ಶನಿವಾರ ನಡೆಯಲಿರುವ ಟ್ವೆಂಟಿ-20 ಪಂದ್ಯದಲ್ಲೂ ಗೆಲ್ಲುವ ಭರವಸೆ ಇದೆ.

* ಭಾರತ ತಂಡದಲ್ಲಿ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇತ್ತಾ?
ಇಷ್ಟು ಬೇಗ ಸಿಗಬಹುದು ಎಂಬ ನಿರೀಕ್ಷೆ ಇರಲಿಲ್ಲ. ಆದರೆ ಹಿರಿಯ ಆಟಗಾರರು ವಿವಿಧ ಕಾರಣ ಅಲಭ್ಯರಾದ ಕಾರಣ ಬಹುಬೇಗನೇ ಅವಕಾಶ ಒಲಿದುಬಂತು. ಜೊತೆಗೆ ಇತ್ತೀಚೆಗೆ ವಿವಿಧ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT