ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇತನ ಆಯೋಗ ಶಿಫಾರಸು ಜಾರಿಗೆ ಆಗ್ರಹ

Last Updated 11 ಫೆಬ್ರುವರಿ 2011, 8:40 IST
ಅಕ್ಷರ ಗಾತ್ರ

ಹಿರೇಕೆರೂರ: ಪಟ್ಟಣದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಬುಧವಾರ ತಹಸೀಲ್ದಾರ್ ಎನ್.ಎಂ. ಅಕ್ಬರ್ ಅವರಿಗೆ ಮನವಿ ಸಲ್ಲಿಸಿ, ಆರನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿ  ಮಾಡಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಯಿತು.

ಕೇಂದ್ರ ಸರ್ಕಾರವು ತನ್ನ ನೌಕರರಿಗೆ ಈಗಾಗಲೇ ಆರನೇ ವೇತನ ಆಯೋಗದ ಶಿಫಾರಸ್ಸುಗಳನ್ನು 1ನೇ ಏಪ್ರಿಲ್ 2006ರಿಂದ ಅನ್ವಯವಾಗುವಂತೆ ಜಾಗಿಗೊಳಿಸಿದೆ. ತಮಿಳನಾಡು, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ಸರ್ಕಾರಗಳು ನೌಕರರಿಗೆ ಕೇಂದ್ರ ಸರ್ಕಾರದ ಮಾದರಿಯಲ್ಲಿ ವೇತನ ಹಾಗೂ ಭತ್ಯೆಗಳನ್ನು ಪರಿಷ್ಕರಿಸಿವೆ. ರಾಜ್ಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ವೇತನ ಹಾಗೂ ಭತ್ಯೆಗಳಲ್ಲಿ ಭಾರಿ ತಾರತಮ್ಯವಿದ್ದು, ಕೇಂದ್ರ ಸರ್ಕಾರದ ಸರಿಸಮಾನ ಸವಲತ್ತು ಕಲ್ಪಿಸಲು ರಾಜ್ಯ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದ್ದು, ಕೂಡಲೇ 6ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸಬೇಕು ಎಂದು ನೌಕರರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಜಿಲ್ಲೆಯಿಂದ ಜಿಲ್ಲೆಗೆ ವರ್ಗಾವಣೆಗೊಳ್ಳುವ ಶಿಕ್ಷಕರಿಗೆ ಹಿಂದಿನ ಜಿಲ್ಲೆಯ ಸೇವೆಯನ್ನು ಪರಿಗಣಿಸಬೇಕು. ವರ್ಗಾವಣೆ ಕಾಯ್ದೆ ರೂಪಿಸಬೇಕು. ಸರ್ಕಾರಿ ಆಸ್ಪತ್ರೆಗಳನ್ನು ಸ್ವಾಯತ್ತ ಸಂಸ್ಥೆಗಳಾಗಿ ಘೋಷಣೆ ಮಾಡುವ ನಿರ್ಧಾರ ಕೈಬಿಡಬೇಕು. ಆರೋಗ್ಯ ಭಾಗ್ಯ ಯೋಜನೆಯಲ್ಲಿ ನೌಕರರಿಗೆ ನಗದುರಹಿತ ಚಿಕಿತ್ಸೆ ಯೋಜನೆ ಜಾರಿ ಮಾಡಬೇಕು ಎಂದು ಮನವಿ ಮಾಡಿಕೊಂಡರು.

ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ತುಷಾರ ಹೊಸೂರ, ರಾಜ್ಯ ಪರಿಷತ್ ಸದಸ್ಯ ಡಾ.ಗೋಪಿನಾಥ, ಪ್ರಧಾನ ಕಾರ್ಯದರ್ಶಿ ಡಾ.ಗಿರೀಶ ಎಸ್.ಕೆ, ಪಿ.ಬಿ.ನಿಂಗನಗೌಡ್ರ, ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಪಿ. ಬಿದರಿ, ವಿ.ಎಸ್. ಹಿರೇಮಠ, ಆರ್.ಎನ್.ಕೆಂಗಟ್ಟಿ, ಸಿ.ಎಚ್. ಬಾಲಣ್ಣನವರ, ಎನ್.ಎಸ್. ಚಿಕ್ಕನರಗುಂದಮಠ, ಜೆ.ಬಿ. ಮರಿಗೌಡ್ರ, ಎಸ್.ಆರ್. ಅಣ್ಣಯ್ಯನವರ, ಆರ್.ಬಿ. ಹಿರೇಕೆರೂರ, ಸಿ.ಎಸ್.ಹಾರ್ನಳ್ಳಿ, ಝಡ್.ಎಂ. ಹಾವೇರಿ, ಜೆ.ಬಿ. ಜೋಗಿಹಳ್ಳಿ, ಎಸ್.ವಿ. ಸೊರಟೂರ, ಎ.ಎಫ್. ಬನ್ನಿಕೊಪ್ಪ,  ಎಸ್.ಎಸ್. ಬಣಕಾರ ಮೊದಲಾದವರು ಹಾಜರಿದ್ದರು.

ಸೇವಾದಲ ಮಕ್ಕಳ ಮೇಳ ನಾಳೆ
ಹಿರೇಕೆರೂರ: ಪಟ್ಟಣದ ಗುರು ಭವನದಲ್ಲಿ ಫೆ.12ರಂದು ಬೆಳಿಗ್ಗೆ 9.30ಕ್ಕೆ ಭಾರತ ಸೇವಾದಲದ ಬೃಹತ್ ಮಕ್ಕಳ ಮೇಳ ಹಮ್ಮಿಕೊಳ್ಳಲಾಗಿದೆ. ಶಾಸಕ ಬಿ.ಸಿ. ಪಾಟೀಲ ಮೇಳವನ್ನು ಉದ್ಘಾಟಿಸುವರು. ಸೇವಾದಲದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಡಿ. ದೀವಿಗಿಹಳ್ಳಿ ಅಧ್ಯಕ್ಷತೆ ವಹಿಸುವರು. ಬಿಇಓ ಶಿವನಗೌಡ ಪಾಟೀಲ ಮಕ್ಕಳ ರ್ಯಾಲಿ ಉದ್ಘಾಟಿಸುವರು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT