ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇತನ ತಾರತಮ್ಯ ನಿವಾರಣೆ ಉಪನ್ಯಾಸಕರ ಪ್ರತಿಭಟನೆ

Last Updated 6 ಸೆಪ್ಟೆಂಬರ್ 2011, 9:35 IST
ಅಕ್ಷರ ಗಾತ್ರ

ಚಾಮರಾಜನಗರ: ವೇತನ ತಾರತಮ್ಯ ಸರಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದ ಜಿಲ್ಲಾಡಳಿತ ಭವನದ ಮುಂಭಾಗ ಸೋಮವಾರ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದಿಂದ ಶಿಕ್ಷಕರ ದಿನಾಚರಣೆಯನ್ನು ಕರಾಳ ದಿನವನ್ನಾಗಿ ಆಚರಿಸಲಾಯಿತು.

4 ಮತ್ತು 5ನೇ ವೇತನ ಆಯೋಗದಲ್ಲಿ ಆಗಿರುವ ತಾರತಮ್ಯ ಸರಿಪಡಿಸಲು ರಾಜ್ಯ ಸರ್ಕಾರ ಮುಂದಾಗಿಲ್ಲ. 1998ರಿಂದಲೂ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಹೋರಾಟ ಮಾಡುತ್ತಿದ್ದಾರೆ. ಆದರೆ, ಯಾವುದೇ ಫಲಶ್ರುತಿ ಸಿಕ್ಕಿಲ್ಲ. ಕಳೆದ ಏಪ್ರಿಲ್‌ನಲ್ಲಿ ದ್ವಿತೀಯ ಪಿಯು ಮೌಲ್ಯಮಾಪನ ಬಹಿಷ್ಕರಿಸಲಾಯಿತು. ಆ ವೇಳೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ತಾರತಮ್ಯ ಸರಿಪಡಿಸಲಾಗುವುದೆಂದು ಭರವಸೆ ನೀಡಿದ್ದರು. ಇಂದಿಗೂ ಪರಿಹಾರ ಸಿಕ್ಕಿಲ್ಲ ಎಂದು ದೂರಿದರು.

ವೇತನ ತಾರತಮ್ಯ ಅಧ್ಯಯನ ಸಮಿತಿಯ ವರದಿ ಆಧರಿಸಿ ಸಮಸ್ಯೆ ಬಗೆಹರಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಪ್ರಸ್ತುತ ಸಮಿತಿಯಿಂದ ವರದಿ ಸಲ್ಲಿಸಲಾಗಿದೆ. 2 ತಿಂಗಳು ಕಳೆದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು.

ಶೀಘ್ರವೇ, 2005ರ ಜು. 1ರಿಂದ ಪೂರ್ವಾನ್ವಯವಾಗುವಂತೆ 7,400 ರೂ ಮೂಲವೇತನ ಶ್ರೇಣಿಗೆ ಸಮಾನಾಂತರವಾಗಿ ಪ್ರಾಂಶುಪಾಲರಿಗೆ 14,050 ರೂ ಹಾಗೂ ಉಪನ್ಯಾಸಕರಿಗೆ 18,050 ರೂ ನಿಗದಿಪಡಿಸಬೇಕು. ಉಪನ್ಯಾಸಕರಿಗೆ ಪದವಿ ಕಾಲೇಜುಗಳಿಗೆ ಬಡ್ತಿ ನೀಡುವ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡು 1991ರಲ್ಲಿ ಸಕ್ರಮಗೊಂಡಿರುವ ಉಪನ್ಯಾಸಕರ ಕಾಲ್ಪನಿಕ ವೇತನ ಬಡ್ತಿ ಹಿಂದಕ್ಕೆ ಪಡೆಯುವುದಾಗಿ ಸರ್ಕಾರ ಹೇಳಿದೆ. ಇದು ಅಕ್ಷಮ್ಯವಾದುದು. ಕೂಡಲೇ, ಈ ಆದೇಶವನ್ನು ರದ್ದುಪಡಿಸಬೇಕು. ಜತೆಗೆ, ಅನುದಾನಿತ ಪಿಯು ಕಾಲೇಜುಗಳಲ್ಲಿ ಸೇವೆ ಸಲ್ಲಿಸಿರುವ ಸಾಕಷ್ಟು ಉಪನ್ಯಾಸಕರಿದ್ದಾರೆ. ಪ್ರಸ್ತುತ ಅಂಥ ಕಾಲೇಜುಗಳು ಅನುದಾನಕ್ಕೆ ಒಳಪಟ್ಟಿವೆ. ಹೀಗಾಗಿ, ಆ ಉಪನ್ಯಾಸಕರಿಗೆ ಸೇವೆಗೆ ಸೇರಿದ ಅವಧಿಯಿಂದ ಕಾಲ್ಪನಿಕ ವೇತನ ಬಡ್ತಿ ನೀಡಬೇಕು ಎಂದರು.

ಅರೆಕಾಲಿಕ ಉಪನ್ಯಾಸಕರಿಗೆ ಅವರ ಹಿಂದಿನ ಸೇವೆ ಪರಿಗಣಿಸಿ ಪಿಂಚಣಿ ಸೌಲಭ್ಯ ಕಲ್ಪಿಸಬೇಕು. ಸರ್ಕಾರ ಬೇಡಿಕೆ ಈಡೇರಿಸಲು ಹಿಂದೇಟು ಹಾಕಿದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಂಗಾರನಾಯಕ, ಮಾಣಿಕ್ಯಂ, ಬಿ.ಜಿ. ಮಹೇಶ್ ಇತರರು ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು. ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾ ಘಟಕದಿಂದಲೂ ಹೋರಾಟಕ್ಕೆ ಬೆಂಬಲ ವ್ಯಕ್ತವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT