ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇತನ ಪರಿಷ್ಕರಣೆಗೆ ಬ್ಯಾಂಕ್‌ ನೌಕರರ ಆಗ್ರಹ

Last Updated 19 ಡಿಸೆಂಬರ್ 2013, 6:44 IST
ಅಕ್ಷರ ಗಾತ್ರ

ಕಾರವಾರ: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಕಾರವಾರ ತಾಲ್ಲೂಕು ಬ್ಯಾಂಕ್‌ ನೌಕರರ ಸಂಘದ ಸದಸ್ಯರು ಬುಧವಾರ ನಗರದ ಕೆನರಾ ಬ್ಯಾಂಕ್‌ ಎದುರು ಪ್ರತಿಭಟನೆ ನಡೆಸಿದರು.

ಅಖಿಲ ಭಾರತ ಬ್ಯಾಂಕ್‌ ಉದ್ಯೋಗಿಗಳ ಮತ್ತು ಅಧಿಕಾರಿ ಸಂಘಟನೆಗಳ ಒಕ್ಕೂಟ (ಯುಎಫ್‌ಬಿಯು) ಕರೆ ನೀಡಿರುವ ಬ್ಯಾಂಕ್‌ ನೌಕರರ ಮುಷ್ಕರಕ್ಕೆ ಇಲ್ಲಿನ ನೌಕರರು ಬೆಂಬಲ ವ್ಯಕ್ತಪಡಿಸಿದರು.

‘2012ರ ನವೆಂಬರ್‌ ತಿಂಗಳಿಂದ ಪೂರ್ವಾನ್ವಯವಾಗಿ ವೇತನ ಪರಿಷ್ಕರಣೆಯ 10ನೇ ದ್ವಿಪಕ್ಷೀಯ ಒಪ್ಪಂದದ ಮಾತುಕತೆಗಳು ಸರ್ಕಾರ ಮತ್ತು ವ್ಯವಸ್ಥಾಪಕ ಮಂಡಳಿಯ ವಿಳಂಬ ಧೋರಣೆಯಿಂದಾಗಿ ಅನಾವಶ್ಯಕ ವಿಳಂಬವಾಗಿದೆ. ಕೇಂದ್ರ ಸರ್ಕಾರ ತಕ್ಷಣ ವೇತನ ಪರಿಷ್ಕರಿಸಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

‘ವಾರದಲ್ಲಿ ಐದು ಕೆಲಸದ ದಿನಗಳು, ಅನುಕಂಪ ಆಧಾರಿತ ನೇಮಕಾತಿ, ರಜಾದಿನಗಳಲ್ಲೂ ಕೆಲಸಕ್ಕೆ ಒತ್ತಾಯಿಸಬಾರದು, ಡಿಪಾಸಿಟ್‌ ಸಂಗ್ರಾಹಕರಿಗೆ ನೌಕರರ ಸ್ಥಾನಮಾನ ನೀಡಬೇಕು’ ಎಂದು ಒತ್ತಾಯಿಸಿದರು

‘ಸುಧಾರಣೆಯ ನೆಪದಲ್ಲಿ ಸರ್ಕಾರ ನೀಡುತ್ತಿರುವ ಬ್ಯಾಂಕಿಂಗ್‌ ಸುಧಾರಣಾ ನೀತಿ ಮತ್ತು ರಿಸರ್ವ್‌ ಬ್ಯಾಂಕಿನ ಹೊಸ ಬ್ಯಾಂಕ್‌ ಪರವಾನಗಿ ನೀತಿಯು ಜನವಿರೋಧಿಯಾಗಿದೆ. ಬ್ಯಾಂಕ್‌ಗಳ ಸೇವೆಯು ಖಾಸಗಿ ಮತ್ತು ವಿದೇಶಿ ಬಂಡವಾಳಶಾಹಿಗಳ ಪಾಲಾಗುವಂತೆ ಸರ್ಕಾರವೇ ಮುಂದಾಗಿ ನೀತಿ ರೂಪಿಸುತ್ತಿರುವುದು ಸರಿಯಲ್ಲ. ಸಾರ್ವಜನಿಕ ಬ್ಯಾಂಕುಗಳು ದೇಶದ ಆಸ್ತಿ. ವಿಲೀನಿಕರಣ, ಖಾಸಗೀಕರಣದ ಮೂಲಕ ಬ್ಯಾಂಕ್‌ಗಳನ್ನು ಶ್ರೀಮಂತ ವಿದೇಶಿ ಬಂಡವಾಳಶಾಹಿಗಳ ವಶಕ್ಕೆ ನೀಡುವ ಚಿಂತನೆಯನ್ನು ಸರ್ಕಾರ ಕೈಬಿಡಬೇಕು’ ಎಂದು ಆಗ್ರಹಿಸಿದರು.

ಕಾರವಾರ ತಾಲ್ಲೂಕು ಬ್ಯಾಂಕ್‌ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ವಾಸುದೇವ ಶೇಟ್‌, ಅಧ್ಯಕ್ಷ ಆನಂದ್‌ ಜಿ. ನಾಯ್ಕ, ಸ್ಟೇಟ್‌ ಬ್ಯಾಂಕ್‌ ಯೂನಿಯನ್‌ ಕಾರ್ಯದರ್ಶಿ ಜಿ. ವೀಣಾ, ಕಾರ್ಪೊರೇಷನ್‌ ಬ್ಯಾಂಕ್‌ನ ವಿನೋದ್‌ ಬಾಂದೇಕರ, ಅಧಿಕಾರಿಗಳ ಸಂಘದ ಕಾರ್ಯದರ್ಶಿ ಜನಾರ್ದನ ಭಟ್ಕಳ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT