ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇತನ ಪಾವತಿಗೆ ಆಗ್ರಹಿಸಿ ಧರಣಿ

Last Updated 7 ಜನವರಿ 2014, 8:24 IST
ಅಕ್ಷರ ಗಾತ್ರ

ಬಳ್ಳಾರಿ: ಬಾಕಿ ವೇತನ ಪಾವತಿ ಮಾಡುವಂತೆ ಹಾಗೂ ಹೊರಗುತ್ತಿಗೆ ಪದ್ಧತಿ ರದ್ದುಗೊಳಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯ್ತಿಯ ಡಾಟಾ ಎಂಟ್ರಿ ಆಪರೇಟರ್‌ಗಳ ಸಂಘದ ಸದಸ್ಯರು ಸೋಮವಾರ ಜಿಲ್ಲಾ ಪಂಚಾಯ್ತಿ ಆವರಣದಲ್ಲಿ ಧರಣಿ ನಡೆಸಿದರು.

ತಾಲ್ಲೂಕಿನ 12 ಗ್ರಾಮ ಪಂಚಾಯ್ತಿಗಳ ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಕಳೆದ 17 ತಿಂಗಳಿಂದ ವೇತನ ಪಾವತಿಸಿಲ್ಲ. ಆಪರೇಟರ್‌ಗಳ ಕೆಲಸವನ್ನು ಖಾಸಗಿ ಸಂಸ್ಥೆಗಳಿಗೆ ಗುತ್ತಿಗೆ ನೀಡಿರುವುದರಿಂದ ವೇತನ ಪಾವತಿ ವಿಳಂಬ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಹೊರ ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಿ ಸಂಕಷ್ಟದಲ್ಲಿರು­ವವರಿಗೆ ಶೀಘ್ರ ವೇತನ ಪಾವತಿಸಬೇಕು ಎಂದು ಧರಣಿನಿರತರು ಆಗ್ರಹಿಸಿದರು.

ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಜಿಲ್ಲೆಯ ಕೆಲವೆಡೆ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯ ಅನುದಾನದಲ್ಲಿ ಆಯಾ ಗ್ರಾಮ ಪಂಚಾಯ್ತಿಯಿಂದಲೇ ವೇತನ ನೀಡಲಾಗುತ್ತಿದ್ದು, ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಇದೇ ಪದ್ಧತಿ ಜಾರಿಯಲ್ಲಿದೆ. ಆದರೆ, ಕೆಲವು ತಾಲ್ಲೂಕುಗಳಲ್ಲಿ ಮಾತ್ರ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಪಡೆಯುತ್ತಿರುವುದರಿಂದ ಸಿಬ್ಬಂದಿಗೆ ಸಮಸ್ಯೆ ಎದುರಾಗುತ್ತಿದೆ ಎಂದು ಅವರು ಹೇಳಿದರು.

‘ಸಕಾಲ’ ಯೋಜನೆ ಅಡಿ ಪ್ರಮಾಣಪತ್ರ ಪಡೆಯುವ ಸಾರ್ವಜನಿಕರಿಗೆ ಗ್ರಾಮ ಪಂಚಾ­ಯ್ತಿಗಳಲ್ಲಿ ಕೆಲಸ ಮಾಡುವ ಕಂಪ್ಯೂಟರ್‌ ಆಪರೇ­ಟರ್‌ಗಳ ನೆರವು ಪಡೆದು, ಸೇವೆ ಸಲ್ಲಿಸಬೇಕು. ಯಾವುದೇ ಕಾರಣಕ್ಕೂ ಹೊರಗುತ್ತಿಗೆ ಪದ್ಧತಿ ಅಡಿ ವೇತನ ನೀಡದೆ, ಉದ್ಯೋಗ ಖಾತರಿ ಯೋಜನೆಯ ಅನುದಾನದಡಿ ಸಂಬಳ ನೀಡಬೇಕು ಎಂದು ಇತ್ತೀಚೆಗೆ ನಗರಕ್ಕೆ ಆಗಮಿಸಿದ್ದ ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು ಸೂಚಿಸಿದ್ದು, ಎಲ್ಲ ತಾಲ್ಲೂಕುಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಏಕರೂಪದ ಸಂಬಳ ನೀಡಬೇಕು ಎಂದು ಅವರು ಕೋರಿದರು.


ಸಂಘದ ಸದಸ್ಯರಾದ ಕುಮಾರಗೌಡ, ದಾದಾಸಾಹೇಬ್, ಎಂ.ಸುರೇಶಗೌಡ, ಪಂಪಾಪತಿ, ಶಿವಯೋಗಿ, ಸಂತೋಷ್‌, ಡಿ.ಪಿ. ನಾಯ್ಕ, ಜ್ಯೋತಿ, ಸುಧಾ, ಅನ್ನಪೂರ್ಣಾ, ಎಸ್‌.ಕೆ. ರೂಪಾ, ಅನಿತಾ, ಶೇಕ್ಷಾವಲಿ, ಖ್ವಾಜಾಸಾಬ್‌, ಯಲ್ಲಪ್ಪ, ಗಂಗಾಧರ, ಶ್ರವಣಕುಮಾರ್‌, ಬಸವರಾಜ ಸ್ವಾಮಿ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT