ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇತನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ

Last Updated 17 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: ವೇತನ ಹೆಚ್ಚಳ ಮತ್ತಿತರ ಬೇಡಿಕೆಗಳಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಶಾಲಾ ಕಾಲೇಜು ಕಂಪ್ಯೂಟರ್ ಶಿಕ್ಷಕರ ಸಂಘದ ಸದಸ್ಯರು ಸಾರ್ವಜನಿಕ ಶಿಕ್ಷಣ ಇಲಾಖೆಯ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷೆ ಎಸ್.ವರಲಕ್ಷ್ಮಿ, `ರಾಜ್ಯದ ಸರ್ಕಾರಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಕಂಪ್ಯೂಟರ್ ಶಿಕ್ಷಣಕ್ಕಾಗಿ 2007ರಲ್ಲಿ ಸರ್ಕಾರ ಹೊರ ಗುತ್ತಿಗೆ ಆಧಾರದಲ್ಲಿ ಶಿಕ್ಷಕರನ್ನು ನೇಮಿಸಿಕೊಂಡಿತು. ಸರ್ಕಾರ ಪ್ರತಿ ತಿಂಗಳು ಶಾಲೆಗಳಿಗೆ ನೀಡುವ ನಿರ್ವಹಣಾ ವೆಚ್ಚ 16 ಸಾವಿರ ರೂಪಾಯಿಯಲ್ಲೇ ನಮಗೆ 3,350 ರೂಪಾಯಿ ವೇತನ ನೀಡಲಾಗುತ್ತಿದೆ. ಇದನ್ನು ಬಿಟ್ಟರೆ ಬೇರೆ ಯಾವುದೇ ಸೌಲಭ್ಯ ನಮಗೆ ಸಿಗುತ್ತಿಲ್ಲ' ಎಂದರು.

`ಕಂಪನಿಯವರು ಕೇವಲ ಐದು ವರ್ಷಗಳ ವರೆಗೆ ಮಾತ್ರ ಕೆಲಸವನ್ನು ಮಾಡಿಸಿಕೊಂಡು ಕೈತೊಳೆದುಕೊಳ್ಳುತ್ತಿದೆ. ಹಲವಾರು ಬಾರಿ ಮುಖ್ಯಮಂತ್ರಿ, ಶಿಕ್ಷಣ ಸಚಿವರಿಗೆ ಮನವಿಯನ್ನು ಸಲ್ಲಿಸಿದರು ಭರವಸೆಯ ಮಾತುಗಳನ್ನು ಆಡಿ ಕೈತೊಳೆದುಕೊಂಡಿದ್ದಾರೆ. ಸರ್ಕಾರ ಕಂಪ್ಯೂಟರ್ ನಿರ್ವಹಣೆಗೆ 16 ಸಾವಿರ ರೂಪಾಯಿ ನೀಡುವ ಹಣದಲ್ಲಿ ಕೇವಲ 3,350 ರೂಪಾಯಿ ಮಾತ್ರ ನೀಡುತ್ತಿದೆ. ಉಳಿದ ಹಣ ಕಂಪೆನಿಗಳ ಪಾಲಾಗುತ್ತಿದೆ' ಎಂದು ಆರೋಪಿಸಿದರು.

`ರಜೆಯನ್ನು ಕೆಳಿದಾಗ ರಜೆ ನೀಡದೇ, ಕೆಲಸದ ಸಮಯದಲ್ಲಿ ತೀವ್ರವಾದ ಶೋಷಣೆಯಯನ್ನು ಮಾಡುತ್ತಿದ್ದಾರೆ. ಹೆರಿಗೆ ಭತ್ಯೆಯನ್ನು ನೀಡಬೇಕೆಂಬ ನಿಯಮ ಇದ್ದರೂ ನೀಡುತ್ತಿಲ್ಲ. ರಾಜ್ಯದಲ್ಲಿ ಎರಡು ಮೂರು ಪದವಿಯನ್ನು ಪಡೆದವರು ಶೇ 80 ರಷ್ಟು ನೌಕರಿಯನ್ನು ಮಾಡುತ್ತಿದ್ದಾರೆ' ಎಂದು ತಿಳಿಸಿದರು.

`ಸರ್ಕಾರ ಕಂಪೆನಿಯ ಗುತ್ತಿಗೆಯನ್ನು ರದ್ದು ಪಡಿಸಿ ಸರ್ಕಾರವೇ ಶಿಕ್ಷಕರನ್ನು ನೇಮಕ ಮಾಡಬೇಕು, ಸೂಕ್ತವಾದ ಭದ್ರತೆಯನ್ನು ನೀಡಬೇಕು, ಬಾಕಿ ಇರುವ ನಾಲ್ಕು ತಿಂಗಳ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು, ಸಮಸ್ಯೆಯನ್ನು ಬಗೆಹರಿಸಿ ಸೂಕ್ತ ನ್ಯಾಯವನ್ನು ಕಲ್ಪಿಸಿಕೊಡಿ ಎಂದು ಸರ್ಕಾರವನ್ನು ಒತ್ತಾಯಿಸಿದರು.

ಯಾದಗಿರಿ ಜಿಲ್ಲೆಯ ಕಂಪ್ಯೂಟರ್ ಶಿಕ್ಷಕ ಆಂಜನೇಯ ಟಿ.ದೇವರಮನಿ ಮಾತನಾಡಿ `ಕಡಿಮೆ ವೇತನದಿಂದ ಜೀವನ ನಡೆಸುವುದು ಕಷ್ಟವಾಗಿದೆ. ಸರ್ಕಾರ ನೀಡುವ ವೇತನದಿಂದ ಶಾಲೆಗೆ ಹೋಗಿ ಬರುವ ಬಸ್‌ನ ಖರ್ಚಿಗೂ ಸಾಲುವುದಿಲ್ಲ. ಇನ್ನು ಜೀವನ ನಡೆಸುವುದಾರೂ ಹೇಗೆ, ಈ ಕುರಿತು ಶಿಕ್ಷಣ ಇಲಾಖೆಯ ಆಯುಕ್ತರಲ್ಲಿ ಸಮಸ್ಯೆಯ ಕುರಿತು ಕೇಳಿದಾಗ ಸಚಿವರ ಎದುರು ಚರ್ಚೆ ಮಾಡೋಣ ಎನ್ನುವ ಹಾರಿಕೆಯ ಮಾತುಗಳನ್ನು ಆಡಿದರು' ಎಂದು ಅಳಲನ್ನು ತೊಡಿಕೊಂಡರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT