ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇತನದಲ್ಲಿ ಸಿದ್ಧಾರೂಢರ ದೇವಸ್ಥಾನ

ಭಕ್ತಿ ಪರಾಕಾಷ್ಠೆ ಮೆರೆದ ಶಿಕ್ಷಕ ಶಿವಪ್ಪ
Last Updated 5 ಸೆಪ್ಟೆಂಬರ್ 2013, 6:49 IST
ಅಕ್ಷರ ಗಾತ್ರ

ಶಿಗ್ಗಾವಿ: ಶಿಕ್ಷಕರ ಬದುಕು ಇತರರಿಗೆ ಮಾದರಿಯಾಗಬೇಕು ಆಗ ರಾಷ್ಟ್ರ ನಿರ್ಮಾಪಕರು ಶಿಕ್ಷಕರು ಎಂಬರ್ಥ ಸಾರ್ಥಕಗೊಳ್ಳಲು ಸಾಧ್ಯ. ಅಂಥವರ ಸಾಲಿನಲ್ಲಿ ಶಿಗ್ಗಾವಿ ತಾಲ್ಲೂಕಿನ ಕುಂದೂರ ಗ್ರಾಮದ ನಿವೃತ್ತ ಶಿಕ್ಷಕ ಶಿವಪ್ಪ ಹಾವಣಗಿ ಒಬ್ಬರು.

ತಾಲ್ಲೂಕಿನ ಕುಂದೂರ ಗ್ರಾಮದಲ್ಲಿ ಹುಟ್ಟಿ ಬೆಳೆದ ಶಿಕ್ಷಕ ಶಿವಪ್ಪ ಅವರು ನವಲಗುಂದ ತಾಲ್ಲೂಕಿನ ಮೊರಬ ಯೋಗೇಶ್ವರ ವಿದ್ಯಾಮಂದಿರ ಪ್ರೌಢಶಾಲೆಯಲ್ಲಿ 1938ರಲ್ಲಿ ಸೇವೆ ಆರಂಭಿಸಿ 36 ವರ್ಷ ಸೇವೆ ಸಲ್ಲಿಸಿದ್ದಾರೆ. ಸಿದ್ಧಾರೂಢರ ಭಕ್ತರಾದ ಅವರು ಪಾಠ ಬೋಧನೆ ಜೊತೆಗೆ ನಿತ್ಯ ಜಪ ತಪಗಳಲ್ಲಿ ನಿರತರಾಗಿದ್ದಾರೆ.

ಮಠ-ಮಂದಿರಗಳಲ್ಲಿ ಸಿಗುವ ಶಾಂತಿ, ನೆಮ್ಮದಿ ಬೇರೆಲ್ಲೂ ದೊರೆಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಡುವ ಅವರು ಹುಟ್ಟೂರಾದ ಕುಂದೂರ ಗ್ರಾಮದಲ್ಲಿ ಸಿದ್ಧಾರೂಢರ ದೇವಸ್ಥಾನವನ್ನು ನಿರ್ಮಿಸಬೇಕೆಂಬ ಕನಸು ಕಂಡು ತಮ್ಮ ವೇತನದ ಅಲ್ಪ ಹಣವನ್ನು ದೇವಸ್ಥಾನದ ನಿರ್ಮಾಣಕ್ಕೆ ವಿನಿಯೋಗಿಸುತ್ತ ಬಂದಿದ್ದಾರೆ.

ಅವರ ಆದರ್ಶ ವಿಚಾರಕ್ಕೆ ಸ್ಪಂದಿಸಿ ಮೊರಬ ಮತ್ತು ಕುಂದೂರ ಗ್ರಾಮಸ್ಥರು ಸಹ ಅಲ್ಪಸ್ವಲ್ಪ ಹಣ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಹ ಈ ದೇವಸ್ಥಾನಕ್ಕೆ ಹಿಂದೆ ಧನಸಹಾಯ ಮಾಡಿದ್ದಾಗಿ ಅವರು ತಿಳಿಸುತ್ತಾರೆ.

ಇಲ್ಲಿಯವರೆಗೆ ದೇವಸ್ಥಾನಕ್ಕೆ ಹಣ ಖರ್ಚು ಮಾಡಿದ್ದೀರಿ ಎಂಬ ಪ್ರಶ್ನೆಗೆ ಈವರೆಗೆ ಊಟ ಮಾಡಿರುವುದಕ್ಕೆ ಲೆಕ್ಕ ಹಾಕದ್ದನ್ನು ದಾನ ಮಾಡಿರುವುದಕ್ಕೆ ಲೆಕ್ಕ ಏಕೆ ಎಂದು ಮರು ಪ್ರಶ್ನಿಸುತ್ತಾರೆ.

ದೇವಸ್ಥಾನ ಪೂರ್ಣಗೊಳಿಸಬೇಕು. ಸರ್ಕಾರದಿಂದ ಈ ದೇವಸ್ಥಾನಕ್ಕೆ ಪಹಣಿ ಪತ್ರ ನೀಡಬೇಕು ಜೊತೆಗೆ ಭಕ್ತ ಸಮೂಹದ ಸಹಕಾರ ಇನ್ನಷ್ಟು ಹೆಚ್ಚಾಗಬೇಕಾಗಿದೆ. ಆದ್ದರಿಂದ ಈ ದೇವಸ್ಥಾನ ಇನ್ನಷ್ಟು ಬೆಳೆಯುವ ಮೂಲಕ ಸುತ್ತಲ್ಲಿನ ಗ್ರಾಮದಲ್ಲಿ ಖ್ಯಾತಿ ಪಡೆದಲ್ಲಿ ತಮ್ಮ ಜೀವನ ಸಾರ್ಥಕವಾಗುತ್ತದೆ ಎಂಬುದು ಅವರ ಆಶೆಯಾಗಿದೆ.

ನಿವೃತ್ತಿ ಶಿಕ್ಷಕ ಹಾವಣಗಿ ಬರೀ ದೈವಭಕ್ತನಷ್ಟೇ ಅಲ್ಲ ಉತ್ತಮ ಪರಿಸರವಾದಿ ಕೂಡ. ಅರಣ್ಯ ಇಲಾಖೆ ಒಪ್ಪಿಗೆ ಪಡೆದು ದೇವಸ್ಥಾನದ ಸುತ್ತಲೂ ಸುಮಾರು 40ಕ್ಕೂ ಹೆಚ್ಚಿನ ಔಷಧೀಯ ತಳಿ ಗಿಡಗಳನ್ನು ಬೆಳೆಸಿದ್ದಾರೆ. ಇಲ್ಲಿರುವ ಔಷಧೀಯ ಗಿಡಗಳು ರೋಗಗಳನ್ನು ನಿವಾರಣೆ ಮಾಡಬಲ್ಲವು. ಆದರೆ ಅವುಗಳ ಸದುಪಯೋಗ ಪಡೆಯಲು ಇಂದಿನ ಯುವಜನ ಮುಂದಾಗಬೇಕಾಗಿದೆ ಎಂದು ಶಿಕ್ಷಕ ಶಿವಪ್ಪ ಹೇಳುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT