ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದಿಕೆ ಹಂಚಿಕೊಂಡರೂ ಕರಗದ ಮುನಿಸು...!

Last Updated 25 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಭೋಪಾಲ್‌ (ಪಿಟಿಐ): ಗುಜರಾತ್‌ ಮುಖ್ಯ­ಮಂತ್ರಿ ನರೇಂದ್ರ  ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಯನ್ನಾಗಿ ಬಿಜೆಪಿ  ಘೋಷಿಸಿದ ಬಳಿಕ ಇದೇ ಮೊದಲ ಬಾರಿ  ಅವರು ಹಿರಿಯ ಮುಖಂಡ ಎಲ್‌.. .ಕೆ.ಅಡ್ವಾಣಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದು ವಿಶೇಷ. ಆದರೆ ಇಬ್ಬರ ನಡುವಿನ ಮುನಿಸು ಮಾತ್ರ ಇನ್ನೂ ಕರಗಿಲ್ಲ.

ಬುಧವಾರ ಇಲ್ಲಿ ನಡೆದ ಪಕ್ಷದ ರಾಲಿಯಲ್ಲಿ ಮೋದಿ ಹಾಗೂ ಅಡ್ವಾಣಿ  ವೇದಿಕೆ ಹಂಚಿಕೊಂಡಿದ್ದೇನೋ ಸರಿ. ಆದರೆ ಪರಸ್ಪರ ಶುಭಕೋರಿಕೊಂಡಾಗ ಅಲ್ಲಿ ಆತ್ಮೀಯತೆಯ ಬದಲು ತೋರಿಕೆ ಭಾವ ಎದ್ದು ಕಾಣುತ್ತಿತ್ತು.  

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಪಾದ ಮುಟ್ಟಿ ನಮಸ್ಕರಿಸಿದಾಗ ಅಡ್ವಾಣಿ   ಕೂಡಲೇ ಪ್ರತಿಕ್ರಿಯೆ ನೀಡಿದರು. ಆದರೆ  ಶಿರಬಾಗಿ ವಂದಿಸಿದ ಮೋದಿ ಅವರನ್ನು ಅಪ್ಪಿತಪ್ಪಿ ಕೂಡ ನೋಡದೇ ಕೇವಲ ತೋರಿಕೆಗೆ ಕೈ ಮುಗಿದಿದ್ದು ಇಬ್ಬರ ನಡುವಿನ ಶೀತಲ ಸಮರವನ್ನು ಎತ್ತಿ ತೋರಿಸಿ ದಂತಿತ್ತು.

ಪಕ್ಷದ ಕಾರ್ಯಕರ್ತರು ಪ್ರಮುಖ ಮುಖಂಡರನ್ನು ಒಂದೆಡೆ ಸೇರಿಸಿ ದೊಡ್ಡ ಹಾರ ಹಾಕಲು ಮುಂದಾದಾಗ ಕೂಡ  ಅಡ್ವಾಣಿ ಹಾಗೂ ಮೋದಿ ಕೊಂಚ ದೂರವೇ ನಿಂತಿದ್ದರು. ಮುಜುಗರ ತಪ್ಪಿಸಿಕೊಳ್ಳುವುದಕ್ಕೋ ಏನೋ ತಮ್ಮಿಬ್ಬರ ಮಧ್ಯೆ ನಿಂತುಕೊಳ್ಳುವಂತೆ ರಾಜನಾಥ್‌ ಸಿಂಗ್‌ ಅವರನ್ನು ದುಂಬಾಲು ಬೀಳುತ್ತಿದ್ದುದು ಕಂಡು ಬಂತು.

ನಂತರದಲ್ಲಿ ಮಾತನಾಡಿದ ರಾಜನಾಥ್‌ ಸಿಂಗ್‌ ಅವರು, ‘ಪಕ್ಷದ ಕಾರ್ಯಕರ್ತರು ಅವಿರತ ಪ್ರಯತ್ನ ಮಾಡಿದಲ್ಲಿ ಮೋದಿ ಅವರು ಈ ದೇಶದ ಪ್ರಧಾನಿಯಾಗ ಬಹುದು; ಶಿವರಾಜ್‌ ಸಿಂಗ್‌ ಅವರು ಮತ್ತೆ ರಾಜ್ಯದ ಚುಕ್ಕಾಣಿ ಹಿಡಿಯಬಹುದು’ ಎಂದು ನುಡಿದರು.

ಶಿವರಾಜ್‌ ಸಿಂಗ್‌ ಅವರನ್ನು ಮತ್ತೊಂದು ಅವಧಿಗೆ ಗೆಲ್ಲಿಸಬೇಕೆಂದು ಪಕ್ಷದ ನಾಯಕಿ ಉಮಾ ಭಾರತಿ ಅವರು ಜನರಲ್ಲಿ ಮನವಿ ಮಾಡಿಕೊಂಡರು.

‘ನುರಿತ ಮಾನವ ಸಂಪನ್ಮೂಲ ಇಲ್ಲ’ 
(ಗಾಂಧಿ ನಗರ ವರದಿ):  ‘ಕೇಂದ್ರ ಸರ್ಕಾರವು ನುರಿತ ಮಾನವ ಶಕ್ತಿ ಅಭಿವೃದ್ಧಿ ಯಲ್ಲಿ ವಿಫಲವಾಗಿದೆ’ ಎಂದೂ ಮೋದಿ ಆರೋಪಿಸಿದ್ದಾರೆ.
ಕೌಶಲ ಅಭಿವೃದ್ಧಿಗೆ ಸಂಬಂಧಿಸಿ ಗುಜರಾತ್‌ನ ಗಾಂಧಿ ನಗರದಲ್ಲಿ ಬುಧವಾರ ನಡೆದ ರಾಷ್ಟ್ರಿಯ ಸಮಾವೇಶದಲ್ಲಿ ಮಾತನಾಡಿ, ‘ ಕೌಶಲ ಅಭಿವೃದ್ಧಿ ವಿಷಯದಲ್ಲಿ ಕೇಂದ್ರ ಸರ್ಕಾರಕ್ಕೆ ದೂರದೃಷ್ಟಿಯೇ ಇಲ್ಲ’ ಎಂದರು.
‘ನಿರುದ್ಯೋಗವು ದೊಡ್ಡ ಸಮಸ್ಯೆಯಾಗಿದೆ. ಒಂದೆಡೆ ದೇಶದಲ್ಲಿ ನುರಿತ ಕಾರ್ಮಿಕರ ಬೇಡಿಕೆ ಹೆಚ್ಚಾಗಿದೆ. ಆದರೆ ಇನ್ನೊಂದೆಡೆ ನುರಿತ ಮಾನವ ಶಕ್ತಿ ಕೊರತೆ ಕಾಣುತ್ತಿದೆ. ಗುಜರಾತ್‌್ ನಲ್ಲಿ ಈ ದಿಸೆಯಲ್ಲಿ ಅನೇಕ ಕೆಲಸಗಳು ಆಗಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT