ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಶ್ಯಾವಾಟಿಕೆ ನಡೆಯುತ್ತಿಲ್ಲ: ಪೊಲೀಸ್ ಇಲಾಖೆ!

Last Updated 12 ಜನವರಿ 2012, 7:50 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲೆಯಲ್ಲಿ ವೇಶ್ಯಾವಾಟಿಕೆ ಮತ್ತು ಮಾದಕ ವಸ್ತು ಮಾರಾಟವಾಗಲಿ, ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆ ನಡೆಯುತ್ತಿಲ್ಲ!. ಹೀಗೆಂದು ಜಿಲ್ಲಾ ಪೊಲೀಸ್ ಇಲಾಖೆ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆಗೆ ಸುಳ್ಳು ಮಾಹಿತಿ ನೀಡಿದ ಘಟನೆ ನಡೆಯಿತು.

ಪೊಲೀಸ್ ಇಲಾಖೆ ಸುಳ್ಳು ವರದಿ ನೀಡಿದರೂ ಈ ಬಗ್ಗೆ ವಿಚಾರಣೆ ನಡೆಸುವ ಗೋಜಿಗೆ ಹೋಗದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಅವರನ್ನು  ಸಭೆಯ ಬಳಿಕ ಸುದ್ದಿಗಾರರು ಪ್ರಶ್ನಿಸಿದಾಗ, ಪೊಲೀಸ್ ಇಲಾಖೆ ನೀಡಿರುವ ವರದಿಯನ್ನು ಖಂಡಿತಾ ನಾನು ಒಪ್ಪುವುದಿಲ್ಲ, ವೇಶ್ಯಾವಾಟಿಕೆ ನಡೆಯುತ್ತಿರುವುದು ಬಹಿರಂಗ ಸತ್ಯ ಎಂದರು.

ಜಿಲ್ಲೆಯ ಜಮಖಂಡಿ ಮತ್ತು ಮುಧೋಳದ ಕೆಲವು ಓಣಿಯಲ್ಲಿ ಹಲವಾರು ವರ್ಷದಿಂದ ಹಗಲು ಹೊತ್ತಿನಲ್ಲೇ ರಾಜಾರೋಶವಾಗಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಹಾಗೂ ಇಲಾಖೆ ಸಿಬ್ಬಂದಿ ಹಲವಾರು ಬಾರಿ ಈ ಅಡ್ಡೆಗಳ ಮೇಲೆ ದಾಳಿ ನಡೆಸಿದ್ದರೂ ದಂಧೆಯನ್ನು ಸಂಪೂರ್ಣ ಬಂದ್ ಮಾಡಲಾಗದೇ ಹತಾಶವಾಗಿದೆ. ಇಷ್ಟಾದರೂ ತನ್ನ ವರದಿಯಲ್ಲಿ ಮಾತ್ರ ವೇಶ್ಯಾವಾಟಿಕೆ ನಡೆಯುತ್ತಿಲ್ಲ ಎಂಬ ಸುಳ್ಳು ವರದಿ ನೀಡಿರುವುದು ಸಭೆಯಲ್ಲಿ ಪಾಲ್ಗೊಂಡವರನ್ನು ತಬ್ಬಿಬ್ಬುಗೊಳಿಸಿತು.

ಸ್ಕ್ಯಾನಿಂಗ್ ಸೆಂಟರ್ ತಪಾಸಣೆಗೆ ಸೂಚನೆ: ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಸ್ಕ್ಯಾನಿಂಗ್ ಸೆಂಟರ್ ಮತ್ತು ನರ್ಸಿಂಗ್ ಹೋಂಗಳನ್ನು ಪ್ರತೀ ತಿಂಗಳು ಕಟ್ಟುನಿಟ್ಟಾಗಿ ತಪಾಸಣೆ ನಡೆಸಬೇಕೆಂದು ಅಧಿಕಾರಿಗಳಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಸೂಚನೆ ನೀಡಿದರು.

ಜಿಲ್ಲೆಯಲ್ಲಿ 144 ಸ್ಕ್ಯಾನಿಂಗ್ ಸೆಂಟರ್ ಇರುವ ಮಾಹಿತಿ ಪಡೆದುಕೊಂಡ ಅವರು, ಇಷ್ಟೊಂದು ಸ್ಕ್ಯಾನಿಂಗ್ ಸೆಂಟರ್ ಇರುವ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿ, ಈ ಸ್ಕ್ಯಾನಿಂಗ್ ಸೆಂಟರ್ ಮತ್ತು ನರ್ಸಿಂಗ್ ಹೋಂಗಳಲ್ಲಿ  ಲಿಂಗ ಪತ್ತೆ, ಭ್ರೂಣಹತ್ಯೆಯಂತಹ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿದ್ದರೆ ಶಿಸ್ತುಕ್ರಮ ಕೈಗೊಳ್ಳುವಂತೆ ತಿಳಿಸಿದರು.

 ರಾಜ್ಯದಲ್ಲಿ ಹದಿಹರೆಯದ ಯುವತಿಯರ ಮತ್ತು ಮಹಿಳೆಯ ನಾಪತ್ತೆ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿರುವುದರಿಂದ ಮಹಿಳಾ ಸುರಕ್ಷತೆ ಬಗ್ಗೆ ಆಯೋಗ ಹೆಚ್ಚಿನ ಆದ್ಯತೆ ನೀಡಿದೆ ಎಂದರು.

ರಾಜ್ಯದಲ್ಲಿ ಯುವತಿಯರ ನಾಪತ್ತೆ ಪ್ರಕರಣದ ಬಗ್ಗೆ ಅಧ್ಯಯನ ನಡೆಸಲು ಮೈಸೂರು ವಿಶ್ವವಿದ್ಯಾಲಯಕ್ಕೆ ಜವಾಬ್ದಾರಿ ವಹಿಸಲಾಗಿದ್ದು, ಈ ಸಂಬಂಧ ವಿವಿ ನಡೆಸಿರುವ ಸಮೀಕ್ಷಾ ವರದಿಯನ್ನು ಆಯೋಗಕ್ಕೆ ನೀಡಿದೆ ಎಂದು ಹೇಳಿದರು.

ಕೌಟುಂಬಿಕ ಕಾರಣ, ಸಮೂಹ ಮಾಧ್ಯಮಗಳ ಪ್ರಭಾವ, ಜಾಗತಿಕರಣದ ಹಿನ್ನೆಲೆಯಲ್ಲಿ ನಾಪತ್ತೆ ಪ್ರಕರಣ ಹೆಚ್ಚುತ್ತಿರುವುದಾಗಿ ಅಲ್ಲದೇ ಜಿಲ್ಲಾವಾರು ಸುಮಾರು 50ರಿಂದ 100 ಯುವತಿಯರು ಕಾಣೆಯಾಗುತ್ತಿರುವುದಾಗಿ ವಿಶ್ವವಿದ್ಯಾಲಯ ವರದಿಯಲ್ಲಿ ತಿಳಿಸಿದೆ ಎಂದರು.

ತಾವು ಆಯೋಗದ ಅಧ್ಯಕ್ಷೆಯಾಗಿ ವರ್ಷವಾಗುತ್ತಿದ್ದು, ಕೌಟುಂಬಿಕ ಕಿರುಕುಳ, ವರದಕ್ಷಿಣೆ ಪ್ರಕರಣ, ಲೈಂಗಿಕ ದೌರ್ಜನ್ಯ ಸೇರಿದಂತೆ ಮತ್ತಿತರ ಮಹಿಳಾ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಇದುವರೆಗೆ 14ಸಾವಿರ  ಪ್ರಕರಣವನ್ನು ಸ್ವೀಕರಿಸಿರುವುದಾಗಿ ಹೇಳಿದರು.

ಕಾರ್ಯಾಗಾರ: ಕಳೆದ 15 ವರ್ಷದಿಂದೀಚೆಗೆ ದೇವದಾಸಿ ಪದ್ಧತಿಗೆ ಒಳಗಾಗಿರುವ ಪ್ರಕರಣ ನಡೆದಿಲ್ಲ ಎಂದ ಅವರು, ದೇವದಾಸಿ ಪದ್ಧತಿ ನಿರ್ಮೂಲನೆ ಸಂಬಂಧಪಟ್ಟಂತೆ ವಿಜಾಪುರ ಮಹಿಳಾ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಫೆಬ್ರುವರಿಯಲ್ಲಿ ವಿಶೇಷ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ನಡೆಯುವ ಆಕ್ರಮಣ, ಕಿರುಕುಳವನ್ನು ತಡೆಯಲು ವಿಶೇಷ ಆದ್ಯತೆ ನೀಡುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದ ಅವರು ಜಿಲ್ಲೆಯ ಕೊಳಚೆ ಪ್ರದೇಶ ಮತ್ತು ಬಸ್ ನಿಲ್ದಾಣದಲ್ಲಿ ಸಂಜೆ ವೇಳೆ ಪೊಲೀಸರು ಗಸ್ತು ತಿರುಗಬೇಕು ಎಂದು ಹೇಳಿದರು.

ಸಾಂತ್ವನ, ಉಜ್ವಲ, ಸ್ವಾಧಾರ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿದ ಅಧ್ಯಕ್ಷೆ, ಜಿಲ್ಲೆಯಲ್ಲಿರುವ ಎಚ್‌ಐವಿ ಪೀಡಿತರ ವಿವರ, ಕೈಕೊಂಡಿರುವ ಕ್ರಮದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಬಳಿಕ ಅಂಗನವಾಡಿ ನೌಕರರ ದೂರು-ದುಮ್ಮಾನ ಆಲಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ, ಜಿ.ಪಂ. ಮುಖ್ಯಕಾರ್ಯನಿರ್ವಾಹಣಾಧಿಕಾರಿ ಎಸ್.ಜಿ.ಪಾಟೀಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ಎಚ್.ಪಾಟೀಲ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಪಂಚಮುಖಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT