ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಶ್ಯೆಯರ ನೋವಿಗೆ ಸ್ಪಂದಿಸುವವರು ವಿರಳ

Last Updated 3 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಹೊಟ್ಟೆಪಾಡಿಗಾಗಿ ದೇಹ ಮಾರಿಕೊಳ್ಳುವ ಹೆಂಗಸರು ವೇಶ್ಯೆಯರಾದಂತೆ, ಶೋಕಿಗಾಗಿ ಪರ ಸ್ತ್ರೀಯರ  ಸಂಗ ಬಯಸುವ ಗಂಡಸರು ವೇಶ್ಯೆಯರಾಗದೇ ಸಮಾಜದಲ್ಲಿ ಉನ್ನತ ಸ್ಥಾನ-ಮಾನವನ್ನು ಅನುಭವಿಸುತ್ತಾರೆ. ಸುಮಾರು ಮೂವತ್ತೈದು ವರ್ಷಗಳಿಂದ ಲೈಂಗಿಕ ಕಾರ್ಯಕರ್ತೆಯಾಗಿ ದುಡಿ ದಿದ್ದೇನೆ.

ಅನುಕಂಪ ತೋರಿಸುವವರ ನಡುವೆಯೂ ನಿಜವಾದ ಕಾಳಜಿಯಿಂದ ವೇಶ್ಯಾ ಸಮುದಾಯದ ನೋವಿಗೆ ಸ್ಪಂದಿಸುವವರು ತೀರಾ ವಿರಳ~ ಎಂದು ಕೇರಳದ ಲೈಂಗಿಕ ಕಾರ್ಯಕರ್ತೆ ನಳಿನಿ ಜಮೀಲಾ ಅವರು ನೋವಿನಿಂದ ನುಡಿದರು.

ಸೃಷ್ಟಿ ಪಬ್ಲಿಕೇಷನ್ಸ್ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರೊ.ಶಿವರಾಮಯ್ಯ ಅವರ `ವೇಶ್ಯೆಯರು ಮತ್ತು ಲೈಂಗಿಕ ಅಲ್ಪಸಂಖ್ಯಾತರು ನಡೆದು ಬಂದ ದಾರಿ~ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

`ಪುರಾಣ, ಇತಿಹಾಸವನ್ನು ಅವಲೋಕಿಸಿದರೆ ಎಲ್ಲ  ಕಾಲಘಟ್ಟದಲ್ಲೂ ವೇಶ್ಯೆಯರು ಕಂಡು ಬರುತ್ತಾರೆ. ಆದರೆ ರಾಜಾಡಳಿತದಲ್ಲಿ ಅವರಿಗೆಲ್ಲ ಸೂಕ್ತ ಸ್ಥಾನಮಾನವನ್ನು ನೀಡಲಾಗಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವೇಶ್ಯೆಯರಿದ್ದರೂ ಅವರಿಗೆ ಯಾವುದೇ ಸ್ಥಾನಮಾನ ನೀಡಿಲ್ಲ. ವೇಶ್ಯೆಯಾಗಿದ್ದುಕೊಂಡು ಲೈಂಗಿಕ ಕಾರ್ಯಕರ್ತರ ಜೀವನದ ಕುರಿತು ಪುಸ್ತಕ ಬರೆದೆ. ಈ ವೃತ್ತಿಗೆ ಇಳಿದ ಹಿಂದಿನ ಕತೆಯನ್ನು ಕೇಳದೇ ಈ ಸಮಾಜ ಪ್ರತಿ ಹೆಜ್ಜೆಯಲ್ಲೂ ಅವಮಾನ ಮಾಡುತ್ತಿದೆ~ ಎಂದು ವಿಷಾದಿಸಿದರು.

ಲೈಂಗಿಕ ಕಾರ್ಯಕರ್ತೆ ಎ.ರೇವತಿ, `ಲೈಂಗಿಕ ಕಾರ್ಯಕರ್ತೆ ಹಾಗೂ ಲೈಂಗಿಕ ಅಲ್ಪಸಂಖ್ಯಾತರಿಗೂ ಇತರರಂತೆ ಬದುಕುವ ಹಕ್ಕಿದೆ. ಹಣ ಮತ್ತು ಶೋಕಿಗಾಗಿ ಸಿನಿಮಾಗಳಲ್ಲಿ ಮೈ ತೋರಿಸುವ ನಟಿಯರಿಗೆ ರಾಜ ಮಾರ್ಯಾದೆ ನೀಡಲಾಗುತ್ತದೆ. ಆದರೆ, ಎಲ್ಲೂ ಕೆಲಸ ದೊರೆಯದ ಕಾರಣಕ್ಕೆ ತುತ್ತಿಗಾಗಿ ಲೈಂಗಿಕ ಕಾರ್ಯಕರ್ತೆಯರಾಗಿ ಕಾರ್ಯನಿರ್ವಹಿಸುವ ನಮ್ಮನ್ನು ಸಮಾಜದಿಂದ ದೂರ ಇಡಲಾಗುತ್ತಿದೆ. ಇಂತಹ ತಾರತಮ್ಯವೇಕೆ~ ಎಂದು ಪ್ರಶ್ನಿಸಿದರು.

`ವೇಶ್ಯೆ ಎಂಬ ಪದ ಪ್ರಯೋಗವೇ ನಮಗೆ ನೋವುಂಟು ಮಾಡುತ್ತದೆ. ಲೈಂಗಿಕ ಅಲ್ಪಸಂಖ್ಯಾತರು ಮತ್ತು ಕಾರ್ಯಕರ್ತರ ಬಗ್ಗೆ ಮಾತನಾಡಲು ಮಡಿವಂತಿಕೆ ತೋರಿಸುವ ಸಮಾಜದ ಧೋರಣೆ ಬದಲಾಗಬೇಕಿದ್ದು, ಈ ಸಮುದಾಯಕ್ಕೆ ಇರುವ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ~ ಎಂದು ಹೇಳಿದರು.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್, ` ಹಿಂದುಳಿದ ಆಯೋಗದ ಚೌಕಟ್ಟಿನಲ್ಲಿಯೇ ಲೈಂಗಿಕ ಅಲ್ಪಸಂಖ್ಯಾತರು, ವೇಶ್ಯೆಯರು, ದೇವದಾಸಿಯರು ಮತ್ತು ಅವರ ಮಕ್ಕಳಿಗೆ ದೊರೆಯಬೇಕಾದ ಮೀಸಲಾತಿ ಕುರಿತು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೆ. ಹೃದಯ, ಮಿದುಳು ಯಾವುದನ್ನೂ ಹೊಂದಿರದ ಸರ್ಕಾರ ವರದಿಯನ್ನು ಅಚ್ಚುಕಟ್ಟಾಗಿ ಕಡತದಲ್ಲಿಟ್ಟು ಬೇಜವಾಬ್ದಾರಿ ಮೆರೆದಿದೆ~ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಈ ಮೊದಲು ಮಾತನಾಡಿದ ಲೇಖಕ ಪ್ರೊ.ಶಿವರಾಮಯ್ಯ, ` ಈ ಪುಸ್ತಕದಲ್ಲಿ ವೇಶ್ಯೆಯೆಂಬ ಪದವನ್ನು ಎಲ್ಲೂ ಉದ್ದೇಶಪೂರ್ವಕವಾಗಿ ಬಳಸಿಲ್ಲ. ಇತಿಹಾಸ, ಸಾಹಿತ್ಯಿಕ.. ಹೀಗೆ ಹಲವು ವಲಯದಲ್ಲಿ ವೇಶ್ಯೆಯರು ವಿವಿಧ ಪಾತ್ರಗಳಾಗಿ ಬಂದು ಹೋಗುತ್ತಾರೆ. ಅವರಿಗೆ ಸಮಾಜ ನೀಡಿರುವ ಈ ಹೆಸರನ್ನು ಉಲ್ಲೇಖಿಸದೇ ಬೇರೆ ವಿಧಿಯಿಲ್ಲ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT