ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಕುಂಠ `ದರ್ಶನ' ಮಾಡಿದ ಭಕ್ತರ ದಂಡು

Last Updated 23 ಡಿಸೆಂಬರ್ 2012, 20:07 IST
ಅಕ್ಷರ ಗಾತ್ರ

ಬೆಂಗಳೂರು: ವೈಯಾಲಿ ಕಾವಲ್‌ನ ತಿರುಮಲ ತಿರುಪತಿ, ರಾಜರಾಜೇಶ್ವರಿನಗರದ ವೆಂಕಟರಮಣಸ್ವಾಮಿ ದೇವಸ್ಥಾನಗಳೂ ಸೇರಿದಂತೆ ನಗರದ ವಿವಿಧ ಮಂದಿರಗಳಲ್ಲಿ `ವೈಕುಂಠ ಏಕಾದಶಿ'ಯನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು. ಎಲ್ಲ ದೇವಾಲಯಗಳು ಕಿಕ್ಕಿರಿದು ತುಂಬಿದ್ದವು. ದೇವರ ದರ್ಶನಕ್ಕೆ ನಸುಕಿನ ವೇಳೆಯಲ್ಲೇ ಉದ್ದನೆ ಸರದಿಗಳು ಕಂಡುಬಂದವು.

ನಗರದ ವಿವಿಧ ಬಡಾವಣೆಗಳ ತಿಮ್ಮಪ್ಪನ ಮಂದಿರಗಳಂತೂ ಕಾಲಿಡಲು ಜಾಗ ಇಲ್ಲದಂತೆ ಭರ್ತಿಯಾಗಿದ್ದವು. ರಜಾ ದಿನವೇ ಈ ಏಕಾದಶಿ ಬಂದಿದ್ದರಿಂದ ದಟ್ಟಣೆ ಮತ್ತಷ್ಟು ಹೆಚ್ಚಾಗಿತ್ತು. `ವೈಕುಂಠ ಏಕಾದಶಿ ದಿವಸ ವೆಂಕಟೇಶ್ವರನ ದರ್ಶನ ಪಡೆದರೆ ಒಳಿತಾಗುತ್ತದೆ' ಎನ್ನುವ ಅಚಲ ವಿಶ್ವಾಸ ಸರದಿಯಲ್ಲಿ ನಿಂತಿದ್ದ ಎಲ್ಲ ಭಕ್ತರಲ್ಲಿ ಇತ್ತು. ತಿಮ್ಮಪ್ಪನ ದರ್ಶನಕ್ಕೆ ಬಂದ ಭಕ್ತರಿಗೆ ಹಲವು ದೇವಳಗಳಲ್ಲಿ ಲಡ್ಡು ಪ್ರಸಾದದ `ಆತಿಥ್ಯ' ಕಾದಿತ್ತು.

ವೈಯಾಲಿ ಕಾವಲ್‌ನ ತಿರುಮಲ ತಿರುಪತಿ ದೇವಸ್ಥಾನದಲ್ಲಿ ವೆಂಕಟಗಿರಿ ತದ್ರೂಪವೇ ನಿರ್ಮಾಣವಾಗಿತ್ತು. ಧಾರ್ಮಿಕ ವಿಧಿಗಳನ್ನು ಸಹ ಅಲ್ಲಿನಂತೆಯೇ ನೆರವೇರಿಸಲಾಯಿತು. ಭಕ್ತರು `ವೈಕುಂಠ ದ್ವಾರ'ದ ಮೂಲಕವೇ ದೇವರ ದರ್ಶನಕ್ಕೆ ತೆರಳಿದರು. ಶ್ರೀನಗರದ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ವಿಶ್ವರೂಪ ದರ್ಶನದ ವ್ಯವಸ್ಥೆ ಮಾಡಲಾಗಿತ್ತು.

ಮಹಾಲಕ್ಷ್ಮಿಪುರದ ಶ್ರೀನಿವಾಸ ಮಂದಿರದಲ್ಲಿ ದೇವರಿಗೆ ವಜ್ರದ ಕವಚ ಹಾಕಲಾಗಿತ್ತು. ಮಲ್ಲೇಶ್ವರದ ಆರ್ಯವೈಶ್ಯ ಸಂಘ `ವೈಕುಂಠ ದ್ವಾರ'ದ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಕೊತ್ತನೂರಿನ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಕಲಾವಿದರು `ಸಂಗೀತ ಸುಧೆ' ಹರಿಸಿದರು.

ಎಲ್ಲ ದೇವಾಲಯಗಳಲ್ಲಿ ವಿಷ್ಣು ಸಹಸ್ರನಾಮ ಪಠಣ ಮಾಡಲಾಯಿತು. ದೊಮ್ಮಲೂರು, ಗಿರಿನಗರ, ಮಾಗಡಿ ರಸ್ತೆ, ಮಲ್ಲತ್ತಹಳ್ಳಿ ಮತ್ತಿತರ ಪ್ರದೇಶಗಳ ವೆಂಕಟೇಶ್ವರ ದೇವಸ್ಥಾನಗಳು `ವೈಕುಂಠ ಏಕಾದಶಿ' ಸಂಭ್ರಮದಲ್ಲಿ ಮುಳುಗಿದ್ದವು. ಸಿರಿವಂತ ದೇವರೆನಿಸಿದ ತಿಮ್ಮಪ್ಪ, ಪ್ರತಿ ಮಂದಿರದಲ್ಲೂ ವಜ್ರ ಮತ್ತು ಬಂಗಾರದ ಆಭರಣಗಳಿಂದ ಕಂಗೊಳಿಸಿದ. ದೇವರ ಅಲಂಕಾರದಲ್ಲಿ ಆಭರಣಗಳಿಗೆ ಬಗೆ-ಬಗೆಯ ಹೂವುಗಳು ಪೈಪೋಟಿ ಒಡ್ಡಿದ್ದವು.

ನಗರದ ಪಶ್ಚಿಮ ಕಾರ್ಡ್ ರಸ್ತೆಯ ಇಸ್ಕಾನ್ ದೇವಾಲಯದಲ್ಲಿ ವಿಶೇಷ ಪೂಜಾ ವಿಧಿ ನೆರವೇರಿಸಲಾಯಿತು. ಸಂಜೆ ಪ್ರಸಿದ್ಧ ಕಲಾವಿದರು ಸಂಗೀತದ ಔತಣ ನೀಡಿದರು. ನಸುಕಿನಿಂದ ಮಧ್ಯರಾತ್ರಿವರೆಗೆ ಸಾವಿರಾರು ಭಕ್ತರು ಗಂಟೆಗಟ್ಟಲೆ ಸರದಿಯಲ್ಲಿ ನಿಂತು ದರ್ಶನ ಪಡೆದರು. ಜಯನಗರ ಎರಡನೇ ಹಂತದ ವೆಂಕಟರಮಣಸ್ವಾಮಿ ದೇವಸ್ಥಾನವೂ ತುಂಬಿ ತುಳುಕುತ್ತಿತ್ತು. ಜೆ.ಪಿ.ನಗರ ಎರಡನೇ ಹಂತದ ವೆಂಕಟೇಶ್ವರ ದೇವಾಲಯದಲ್ಲಿ ದಿನಪೂರ್ತಿ ಧಾರ್ಮಿಕ ಕಾರ್ಯಗಳು ಜರುಗಿದವು.

ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಕೆಲವು ದೇವಾಲಯಗಳಲ್ಲಿ ಲಡ್ಡು ವಿತರಿಸುವ ವ್ಯವಸ್ಥೆ ಮಾಡಿದ್ದರು. ಅದಕ್ಕಾಗಿ ನಾಲ್ಕು ದಿನಗಳ ಹಿಂದೆಯೇ ಲಕ್ಷಾಂತರ ಲಡ್ಡುಗಳನ್ನು ಅವರು ಮಾಡಿಸಿದ್ದರು. ಮುಜರಾಯಿ ಇಲಾಖೆಗೆ ಸೇರಿದ ಮಂದಿರಗಳಲ್ಲೂ ಲಡ್ಡುಗಳನ್ನು ವಿತರಿಸಲಾಯಿತು. ಮಿಕ್ಕ ಮಂದಿರಗಳಲ್ಲಿ ಆಡಳಿತ ಮಂಡಳಿಗಳು ಪ್ರಸಾದದ ವ್ಯವಸ್ಥೆ ಮಾಡಿದ್ದವು. ಕೆಲವೆಡೆ ರಥೋತ್ಸವ ಜರುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT