ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಕುಂಠ ದ್ವಾರದಲ್ಲಿ ನಿಂತು...

Last Updated 9 ಜನವರಿ 2014, 19:30 IST
ಅಕ್ಷರ ಗಾತ್ರ

ಹೇಮಂತ ಋತು ಮುಗಿದು ಶಿಶಿರನ ಆಗಮನವಾಗಬೇಕು ಎನ್ನುವಾಗ ಒಂದೆಡೆ ಅಯ್ಯಪ್ಪ ಭಕ್ತರು ಶಬರಿಮಲೆ ಯಾತ್ರೆ ಪೂರೈಸುತ್ತಿದ್ದರೆ ವೈಷ್ಣವ ಸಮುದಾಯಕ್ಕೆ ವೈಕುಂಠ ಏಕಾದಶಿಯ ಸಡಗರ. ದಿನಪೂರ್ತಿ ಉಪವಾಸವಿದ್ದರೂ ವಿಷ್ಣು ನಾಮಸ್ಮರಣೆ ಮಾಡುತ್ತಾ, ದಶಮಿಯ ಮಧ್ಯರಾತ್ರಿಯಿಂದಲೇ ನೆಚ್ಚಿನ ದೇವರ ಸನ್ನಿಧಿಗೆ ಭೇಟಿ ಕೊಟ್ಟು ಅವನನ್ನು ಉಪಾಸನೆ ಮಾಡುವ ಸಂಭ್ರಮ.

ಈ ಬಾರಿ ಜ.11ರ ಶನಿವಾರ ವೈಕುಂಠ ಏಕಾದಶಿ. ಆದರೆ ಶುಕ್ರವಾರದ ನಡುರಾತ್ರಿಯಿಂದಲೇ ವೆಂಕಟೇಶ್ವರ ಸನ್ನಿಧಿಗಳಲ್ಲಿ ಜಾತ್ರೆಯೋಪಾದಿಯಲ್ಲಿ ಭಕ್ತಗಡಣ ನೆರೆಯುವ ಹೊತ್ತು. ರಸ್ತೆ, ಬೆಟ್ಟ, ಗುಡ್ಡ ಯಾವುದರ ಗೊಡವೆಯೂ ಇಲ್ಲದೆ ಭಗವಂತನ ಸ್ಮರಣೆ ಮಾಡುತ್ತಾ ಸರತಿ ಸಾಲಿನಲ್ಲಿ ನಿಂತ ಕಾಲುನೋವನ್ನೂ ಮರೆಯುತ್ತಾರೆ. ಶುಕ್ರವಾರದ ಮಧ್ಯರಾತ್ರಿ ಒಂದು, ಎರಡು ಗಂಟೆಗೇ ಸರತಿ ಸಾಲು ಶುರುವಾಗುವ ಕಾರಣ ಬಿಸಿಲು ಹರಿಯುವ ಆರು, ಏಳು ಗಂಟೆ ಹೊತ್ತಿಗೆ ದೇವರ ದರ್ಶನಕ್ಕೆ ಬಂದವರಿಗೆ ಅಚ್ಚರಿ ಮೂಡಿಸುತ್ತದೆ. ಆದರೂ ದೇವರಪ್ರೀತಿ ಗಿಟ್ಟಿಸಿಕೊಳ್ಳಲು ಸಿಕ್ಕಿದ ಅವಕಾಶವನ್ನು ಬಿಡುವುದುಂಟೆ?

ವೈಕುಂಠ ಏಕಾದಶಿಯಂದು ವೈಕುಂಠದ ಬಾಗಿಲು ತೆರೆದಿರುತ್ತದೆ. ಅಂದು ವಿಷ್ಣುವನ್ನು ಅವನ ಯಾವುದೇ ಅವತಾರದ ರೂಪದಲ್ಲಿ ಭಜಿಸಿದರೂ, ಸ್ತುತಿಸಿದರೂ ಅವನು ಸಂಪ್ರೀತಿಗೊಳ್ಳುತ್ತಾನೆ ಎಂಬುದು ನಂಬಿಕೆ. ಇದಕ್ಕೆ ಪುಷ್ಟಿಕೊಡುವಂತೆ ವಿಷ್ಣುವಿನ ದೇವಸ್ಥಾನಗಳು ಶನಿವಾರದ ನಸುಕಿನಲ್ಲಿ ಅಂದರೆ ಬ್ರಾಹ್ಮಿ ಮುಹೂರ್ತದ ಪೂಜೆಗೂ ಸಾಕಷ್ಟು ಮುಂಚಿತವಾಗಿಯೇ ತೆರೆದು ಭಕ್ತರನ್ನು ಸ್ವಾಗತಿಸುತ್ತವೆ. ಈ ಸುದಿನದಂದು ದೇವಸ್ಥಾನಗಳ ಉತ್ತರದ ಪ್ರವೇಶದ್ವಾರವನ್ನು ತೆರೆಯಲಾಗುತ್ತದೆ. ಈ ದ್ವಾರವನ್ನು ವೈಕುಂಠ ದ್ವಾರವೆಂದೆ ಕರೆಯಲಾಗುತ್ತದೆ.

ಇದು ಮೋಕ್ಷದ ದಾರಿಯಂತೆ. ಇಸ್ಕಾನ್‌, ಕೋಟೆ ವೆಂಕಟರಮಣ ದೇವಸ್ಥಾನ, ವಸಂತಪುರದ ವಸಂತ ವಲ್ಲಭರಾಯ ದೇವಸ್ಥಾನ, ಚುಂಚಘಟ್ಟ ಬಳಿಯ ಶ್ರೀನಿಧಿ ಶ್ರೀನಿವಾಸ ದೇವಸ್ಥಾನ, ಜೆ.ಪಿ.ನಗರ 2ನೇ ಹಂತದ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ, ಶ್ರೀನಗರ ವೆಂಕಟೇಶ್ವರ ದೇವಸ್ಥಾನ ಮುಂತಾದೆಡೆ ವೈಭವದ ಪೂಜೆ, ಜಾತ್ರಾ ಮಹೋತ್ಸವ ಹಾಗೂ ಪ್ರತಿವರ್ಷದಂತೆ ನಸುಕಿನಲ್ಲಿಯೇ ಪೂಜಾ ವಿಧಿವಿಧಾನಗಳು ಆರಂಭವಾಗುತ್ತವೆ.

ಸಾಕ್ಷಾತ್‌ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಭೇಟಿ ಕೊಡುವ ಭಕ್ತರ ಸಂಖ್ಯೆ ಲಕ್ಷ ದಾಟುತ್ತದೆ. ಕೋಲಾರ ಜಿಲ್ಲೆ ಮಾಲೂರು ಬಳಿಯ ಚಿಕ್ಕ ತಿರುಪತಿ ಕ್ಷೇತ್ರದಲ್ಲಿ ದರ್ಶನ ಪಡೆಯುವವರ ಸಂಖ್ಯೆಯೂ ಸಾವಿರಾರು. ಹೀಗೆ ವೈಕುಂಠ ಏಕಾದಶಿಯೆಂಬ ವರ್ಷದ ಪುಣ್ಯದಿನದಂದು ವೆಂಕಟೇಶ್ವರನ ಪ್ರೀತಿಗೆ ಪಾತ್ರರಾಗುವ ಕ್ಷಣಕ್ಕಾಗಿ ಆಸ್ತಿಕರು ಕ್ಷಣಗಣನೆ ಮಾಡುತ್ತಿದ್ದಾರೆ.

ದಾಸನಪುರದದಲ್ಲಿ
ನೆಲಮಂಗಲ ಸಮೀಪದ ರಾಷ್ಟ್ರೀಯ ಹೆದ್ದಾರಿ 4ರ ತುಮಕೂರು ರಸ್ತೆಯ ದಾಸನಪುರದ ಶ್ರೀ ರಾಮಾನುಜ ಪೀಠಂ ಉಭಯ ವೇದಾಂತ ವೈಷ್ಣವ ಸಭಾದ ಶ್ರೀ ಪದ್ಮಾವತಿ ಶ್ರೀನಿವಾಸ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಜನವರಿ 11 ಶನಿವಾರ ಬೆಳಗ್ಗೆ 5ರಿಂದ ಸಂಜೆವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

 ಬೆಳಗ್ಗೆ 5ಕ್ಕೆ ಸುಪ್ರಭಾತ, ಅಭಿಷೇಕ, ಪೂಲಂಗಿ ಅಲಂಕಾರ, ದಾಸನಪುರ ಶ್ರೀ ರಾಮಾನುಜ ವೇದ ಆಗಮ ಪಾಠಶಾಲೆಯ ವಿದ್ಯಾರ್ಥಿಗಳಿಂದ ವಿಷ್ಣು ಸಹಸ್ರನಾಮ ಪಾರಾಯಣ, 7ಕ್ಕೆ ಶ್ರೀ ಭೂನೀಳಾ ಸಮೇತ ಶ್ರೀನಿವಾಸ ಸ್ವಾಮಿಯ ಉತ್ಸವ, ಶ್ರೀನಿವಾಸ ಭಜನಾ ಮಂಡಳಿ ವತಿಯಿಂದ ಆಂಡಾಳ್‌ ಗೋಷ್ಠಿ, 8:30ಕ್ಕೆ ಅನುಜ್ಞೆ, ಋತ್ವಿಕಾವರಣ, ವಿಶ್ವಕ್ಸೇನ ಪೂಜೆ, ಪುಣ್ಯಾಹ, ಅನಿರ್ವಾಣ, ದೀಪಾರೋಹಣ, ಮೃತ್‌ ಸಂಗ್ರಹಣ, ಅಂಕುರಾರ್ಪಣ, ರಕ್ಷಾಬಂಧನ, ದ್ವಾರ – ಕುಂಭದೇವತಾ ಪೂಜೆ, ಮಹಾಸುದರ್ಶನ ಹೋಮ, ಶ್ರೀವಿಷ್ಣು ಸಹಸ್ರನಾಮ ಹೋಮ, ಪೂರ್ಣಾಹುತಿ, ಸಾಮೂಹಿಕ ಆರಾಧನೆ, ಶಾತ್ತುಮೊರೈ.

ಮಧ್ಯಾಹ್ನ 12.30ಕ್ಕೆ ಆರ್ಟ್‌ಆಫ್‌ ಲಿವಿಂಗ್‌ ತಂಡದಿಂದ ಭಜನೆ, 1.30ಕ್ಕೆ ಆದರ್ಶನಗರದ ಪಾಂಡುರಂಗ ಭಜನಾ ಮಂಡಳಿಯಿಂದ ಹರಿನಾಮ ಸಂಕೀರ್ತನೆ, 2.30ಕ್ಕೆ ಕನ್ನಡ ಗೆಳೆಯರ ಬಳಗದ ವಿಜಯೇಂದ್ರರಾವ್‌ ಅವರ ನೇತೃತ್ವದಲ್ಲಿ ‘ದಾಸರು ಕಂಡ ಶ್ರೀನಿವಾಸ’ ದಾಸರ ಪದಗಳು. 3:30ಕ್ಕೆ ಮಾತಾ ವಿಪ್ರಮಂಡಳಿ ಮತ್ತು ವಾಸವಿ ಮಹಿಳಾ ಮಂಡಳಿಯಿಂದ ದೇವರ ನಾಮಗಳು.

4.30ಕ್ಕೆ ಲಲಿತ ಸತ್ಸಂಗ, ಲಕ್ಷ್ಮೀರಮಣ ಭಜನಾ ಮಂಡಳಿಯಿಂದ ಲಲಿತಾ ಸಹಸ್ರನಾಮ ಮತ್ತು ಸೌಂದರ್ಯ ಲಹರಿ. ಸಂಜೆ 6ಕ್ಕೆ ಕಲಾಸಿಂಧು ನೃತ್ಯ ಶಾಲೆಯ ಅಪೂರ್ವ ಶ್ರೀನಿವಾಸ್‌ ಅವರಿಂದ ಭರತನಾಟ್ಯ ಕಾರ್ಯಕ್ರಮವಿದೆ ಎಂದು ಕಾರ್ಯದರ್ಶಿ ರಂಗಾಚಾರ್‌ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 9845540549/ 9845203041.

ವೈಯ್ಯಾಲಿಕಾವಲ್‌ನಲ್ಲಿ
ಜ. 11ರಂದು (ಶನಿವಾರ) ವೈಯಾಲಿ ಕಾವಲ್‌ನ ತಿರುಮಲ ತಿರುಪತಿ ದೇವಸ್ಥಾನದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ‘ಅಂದು ಬೆಳಿಗ್ಗೆ 4.30ಕ್ಕೆ ದೇವಸ್ಥಾನ ತೆರೆಯಲಿದ್ದು, ಮಧ್ಯರಾತ್ರಿವರೆಗೆ ಭಕ್ತರಿಗೆ ದರ್ಶನದ ಅವಕಾಶವನ್ನು ಒದಗಿಸಲಾಗುತ್ತದೆ. ಬೆಳಿಗ್ಗೆ ನಾದಸ್ವರ ಹಾಗೂ ಇಡೀ ದಿನ ಸಂಗೀತ ಕಾರ್ಯಕ್ರಮ ನಡೆಯಲಿದೆ. ಕಲಾವಿದರಾದ ಮೈಸೂರು ನಾಗರಾಜ್‌ ಮತ್ತು ಮೈಸೂರು ಮಂಜುನಾಥ್‌ ಸಂಜೆ 6ಕ್ಕೆ ವಿಶೇಷ ವಯೊಲಿನ್‌ ವಾದನ ಕಛೇರಿ ನೀಡಲಿದ್ದಾರೆ’ ಎಂದು ಹೇಳಿದರು.

‘ದೇವಸ್ಥಾನಕ್ಕೆ ಬರುವ ಭಕ್ತರಿಗೆ ತಿರುಪತಿಯಿಂದ ತರಿಸಿದ ಲಾಡು ವಿತರಿಸಲಾಗುವುದು. ವೃದ್ಧರು ಹಾಗೂ ಅಂಗವಿಕಲರಿಗೆ ನೇರವಾದ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಒಳಪ್ರವೇಶಿಸುವಲ್ಲಿ ವೈಕುಂಠ ದ್ವಾರವನ್ನು ನಿರ್ಮಿಸಲಾಗಿದೆ’ ಎಂದು ಟಿಟಿಡಿ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಪಿ. ಶ್ಯಾಮ್‌ ರಾಜು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT