ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಚಾರಿಕ ಹೊಳಪು ಮೂಡಿಸಿದ ಶೂದ್ರ ತಪಸ್ವಿ

Last Updated 24 ಜನವರಿ 2011, 12:20 IST
ಅಕ್ಷರ ಗಾತ್ರ

ಇಳಕಲ್: ನೀನಾಸಂ ತಂಡ ಪ್ರದರ್ಶಿಸಿದ ಕುವೆಂಪು ವಿರಚಿತ ‘ಶೂದ್ರ ತಪಸ್ವಿ’ ನಾಟಕ ಮತ್ತಷ್ಟು ವೈಚಾರಿಕ ಹೊಳಪಿನೊಂದಿಗೆ ಯಶಸ್ವಿಯಾಗಿ ಪ್ರದರ್ಶನ ಕಂಡಿತು.ಶೂದ್ರನಾದ ಶಂಭೂಕ ಮಾಡುವ ತಪಸ್ಸು, ಬ್ರಾಹ್ಮಣರಲ್ಲಿ ಉಂಟಾದ ಅಸಹನೆಯನ್ನು ಕೇಂದ್ರವಾಗಿಟ್ಟುಕೊಂಡ ರಾಮಾಯಣದ ಘಟನೆಯೊಂದನ್ನು ಕುವೆಂಪು ಅವರು ವಿಶ್ವ ಮಾನವ ಸಂದೇಶದನುಸಾರ ಪುನರ್ ವ್ಯಾಖ್ಯಾನಿಸಿ, ಶುದ್ಧೀಕರಿಸಿ ಬರೆದ ‘ಶೂದ್ರ ತಪಸ್ವಿ’ ನಾಟಕ ಪ್ರೇಕ್ಷಕರನ್ನು ಸೆಳೆಯಿತು.

ವಾಲ್ಮೀಕಿ ರಾಮಾಯಣದಲ್ಲಿ ತಪಸ್ಸು ಮಾಡಿದ ತಪ್ಪಿಗೆ ಶಂಭೂಕನು ರಾಮನಿಂದ ವಧಿಸಲ್ಪಟ್ಟರೇ, ಶೂದ್ರ ತಪಸ್ವಿಯಲ್ಲಿ ಶಂಭೂಕನ ವಧೆಗೆ ರಾಮನಲ್ಲಿ ಪಟ್ಟು ಹಿಡಿದ ಬ್ರಾಹ್ಮಣನ ಮನ ಪರಿವರ್ತನೆಯಾಗುತ್ತದೆ. ಜಂಗಮೇತರರು ಎನ್ನುವ ಕಾರಣಕ್ಕೆ ಅಂದು ಗುರು ಮಹಾಂತ ಸ್ವಾಮೀಜಿಯ ಪಟ್ಟಾಭಿಷೇಕಕ್ಕೆ ವಿರೋಧಿಸಿದವರು ಇಂದು ಅವರನ್ನು ಅಪಾರವಾಗಿ ಇಷ್ಟಪಡುವಂತೆ !. ಹೀಗೆ ‘ಶೂದ್ರ ತಪಸ್ವಿ’ ನಾಟಕ ಇಳಕಲ್ ಡಾ.ಮಹಾಂತ ಸ್ವಾಮೀಜಿ ಅವರ ಅನೇಕ ವಿಚಾರಗಳೊಂದಿಗೆ ಸಾಮ್ಯೀಕರಿಸಿ ಮುಂದುವರಿಯುತ್ತದೆ.

ಶೂದ್ರನಾದ ಶಂಭೂಕ ತಪಸ್ಸು ಮಾಡುತ್ತಿರುವದರಿಂದ ಧರ್ಮಕ್ಕೆ ಚ್ಯುತಿ ಬಂದು, ಬ್ರಾಹ್ಮಣ ಬಾಲಕನೊಬ್ಬ ಅಸುನೀಗಿದ್ದಾನೆ ಎಂಬ ದೂರು ರಾಮನಿಗೆ ಬರುತ್ತದೆ. ರಾಮನು ಶಂಭೂಕನ ಸಾಧನೆ ಕಂಡು ಸ್ವತಃ ಗೌರವ ಸೂಚಿಸುತ್ತಾನೆ. ದೂರು ಕೊಟ್ಟ ಬ್ರಾಹ್ಮಣನಿಗೆ ಶಂಭೂಕನನ್ನು ವಿರೋಧಿಸದಿರಲು ರಾಮ ಸಲಹೆ ನೀಡುತ್ತಾನೆ. ಆದರೆ ಆತ ಒಪ್ಪದೇ ಹೋದಾಗ ರಾಮನು ‘ಯಾರು ತಪ್ಪಿತಸ್ಥರೋ ಅವರನ್ನು ದಂಡಿಸಲಿ’ ಎಂದು ಬಾಣ ಬಿಟ್ಟಾಗ ಅದು ಶಂಭೂಕನಿಗೆ ನಮಸ್ಕರಿಸಿ, ಬ್ರಾಹ್ಮಣನತ್ತಲೇ ಬರುತ್ತದೆ. ಈ ಘಟನೆ ಬ್ರಾಹ್ಮಣನಲ್ಲಿ ಜ್ಞಾನೋದಯವನ್ನುಂಟು ಮಾಡಿತು.

ನಿರ್ದೇಶಕ ಮಂಜುನಾಥ ಬಡಿಗೇರ ಅವರು ಶಂಭೂಕನನ್ನು ಪ್ರೇಕ್ಷಕರಿಗೆ ಮುಖಾಮುಖಿಯಾಗಿಸದೇ, ಅವನನ್ನೇ ನಾಟಕದ ಕೇಂದ್ರವಾಗಿ ಕಲ್ಪಿಸಿಕೊಳ್ಳುವಂತೆ ಉತ್ತಮವಾಗಿ ದೃಶ್ಯ ಸಂಯೋಜನೆ ಮಾಡಿದ್ದಾರೆ. ನಾಟಕದ ಉಪಾಂತ್ಯದಲ್ಲಿ ‘ಅರೇ ದಪ್ಪ ಕನ್ನಡಕದ ಶಂಭೂಕನೇ’! ಎನ್ನುವ ಪ್ರಶ್ನೆ ಮೂಡುತ್ತಿದ್ದಂತೆ ವಿಶ್ವ ಮಾನವ ಸಂದೇಶ ಸಾರುವ ಕುವೆಂಪು ನಾಟಕದ ಭಾಗವಾಗಿರುತ್ತಾರೆ.   

ಹೀಗೆ ಪೌರಾಣಿಕ ಘಟನೆಗಳನ್ನು ವರ್ತಮಾನದ ಆದರ್ಶಕ್ಕೆ ಹೊಂದುವಂತೆ ತಿದ್ದುವ ಮೂಲಕ ಭವಿಷತ್‌ನಲ್ಲಿ ಘಟಿಸಬಹುದಾದ ಸಂಘರ್ಷಗಳನ್ನು ಕುವೆಂಪು ಅವರ ತಪ್ಪಿಸಿದ್ದಾರೆ ಎನ್ನುವ ಗುರು ಮಹಾಂತ ಸ್ವಾಮೀಜಿ ಅವರ ಅಭಿಪ್ರಾಯದಲ್ಲಿ ಅತಿಶೋಕ್ತಿಯೇನು ಇಲ್ಲ. ರಾಮನ ಪಾತ್ರವನ್ನು ಸ್ವಲ್ಪ ಹೆಚ್ಚು ವಿಜೃಂಭಿಸಲಾಗಿದೆ ಎಂದು ಭಾಸವಾಗುತ್ತದೆ.ನಾಟಕದ ಭಾಷೆ ಹಳಗನ್ನಡವಾಗಿದ್ದರೂ ನೀನಾಸಂ ಕಲಾವಿದರ ಸಮರ್ಥ ಅಭಿವ್ಯಕ್ತಿಯು ನಾಟಕದ ಸದಾಶಯವನ್ನು ಪ್ರೇಕ್ಷಕರಿಗೆ ತಲುಪಿಸಲು ಸಹಾಯ ಮಾಡುತ್ತದೆ. ಪ್ರತಿಮೆಗಳನ್ನು ನಾಟಕವನ್ನು ಪ್ರೇಕ್ಷಕರಿಗೆ ಸಂವಹನ ಮಾಡಲು ಯಶಸ್ವಿಯಾಗಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT