ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಜ್ಞಾನಿಕ ಕಬ್ಬು ನಾಟಿಯಿಂದ ಅಧಿಕ ಇಳುವರಿ

Last Updated 2 ಫೆಬ್ರುವರಿ 2011, 11:15 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ‘ವೈಜ್ಞಾನಿಕವಾಗಿ ಕಬ್ಬು ನಾಟಿ ಮಾಡುವುದರಿಂದ ಅಧಿಕ ಇಳುವರಿ ದೊರೆಯುವುದರ ಜೊತೆಗೆ ಹೆಚ್ಚಿನ ಆದಾಯವೂ ಬರುತ್ತದೆ’ ಎಂದು ಮಹಾರಾಷ್ಟ್ರದ ವಸಂತದಾದಾ ಸಕ್ಕರೆ ಸಂಸ್ಥೆ ನಿರ್ದೇಶಕ ಹಾಗೂ ಕಬ್ಬು ಬೆಳೆ ತಜ್ಞ ಡಾ. ಡಿ.ಜಿ. ಹಾಪ್ಸೆ ಅಭಿಪ್ರಾಯಪಟ್ಟರು.

ಇಲ್ಲಿಗೆ ಸಮೀಪದ ಎಂ.ಕೆ. ಹುಬ್ಬಳ್ಳಿ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಸಭಾಭವನದಲ್ಲಿ ಮಂಗಳವಾರ ನಡೆದ ಕಬ್ಬು ಬೆಳೆ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
‘ಒಂದು ಬೀಜದಿಂದ ಮತ್ತೊಂದು ಬೀಜ ನಾಟಿ ಮಾಡುವಾಗ ಸಮರ್ಪಕ ಅಂತರವನ್ನು ಕಾಯ್ದುಕೊಳ್ಳಬೇಕು. ಬೀಜ ಮೊಳಕೆಯೊಡೆದಾಗ ಅವುಗಳಿಗೆ ಸರಿಯಾದ ಗಾಳಿ ಮತ್ತು ಬಿಸಿಲು ತಟ್ಟುವಂತಿರಬೇಕು’ ಎಂದು ವಿವರಿಸಿದರು.

‘ಕಬ್ಬಿನ ಬೆಳೆಗೆ ಮಣ್ಣಿನ ಫಲವತ್ತತೆ ಹಾಗೂ ನೀರು ಅತ್ಯವಶ್ಯ. ಮಣ್ಣಿನ ಪರೀಕ್ಷೆ ಮಾಡಿ ಅದರ ಅಗತ್ಯಕ್ಕೆ ತಕ್ಕಂತೆ ಪೋಷಕಾಂಶ ನೀಡಬೇಕು. ಕಾಂಪೋಸ್ಟ್ ಗೊಬ್ಬರ ಹಾಕುವುದರಿಂದ ಆರ್ದ್ರತೆ ಹಿಡಿದಿಡುವ ಶಕ್ತಿ ಬರುತ್ತದೆ. ಭೂಮಿಯ ಕ್ಷಮತೆಯೂ ಹೆಚ್ಚುತ್ತದೆ’ ಎಂದು ವಿಶ್ಲೇಷಿಸಿದರು.

‘ಕಾರ್ಖಾನೆಗೆ ಕಬ್ಬು ಪೂರೈಕೆಯಾದ ನಂತರ ಒಣಗಿದ ಗರಿಕೆಯನ್ನು ಸುಡಬಾರದು. ಅದಕ್ಕೆ ಬೆಂಕಿ ಹಚ್ಚುವುದರಿಂದ ಭೂಮಿಯಲ್ಲಿಯ ಸೂಕ್ಷ್ಮ ಜೀವಕೋಶಗಳು ಬೆಂದು ಹೋಗುತ್ತವೆ. ಇದರಿಂದ ಧರಣಿಯ ಒಡಲು ಸುಟ್ಟಂತೆ’ ಎಂದು ಎಚ್ಚರಿಸಿದರು.‘ಬೀಜದಿಂದ ಬೀಜದ ಅಂತರ ಕಾಯ್ದುಕೊಂಡಂತೆಯೇ ಸಾಲಿನ ಅಂತರವನ್ನೂ ಕಾಯ್ದುಕೊಳ್ಳಬೇಕು. ಸಾಲಿನಿಂದ ಸಾಲಿಗಿರುವ ಅಂತರದ ನಡುವಿನ ಜಾಗೆಯಲ್ಲಿ ಅಲ್ಪಾವಧಿ ಬೆಳೆ ಕೂಡ ಬೆಳೆಯಬಹುದು’ ಎಂದು ಸಲಹೆ ನೀಡಿದರು.

‘ಕಬ್ಬು ಬೆಳೆಗೆ ಅತ್ಯಂತ ಶ್ರೇಷ್ಠ ವಾತಾವರಣವಿರುವ ಈ ಭಾಗದ ಎಕರೆ ಭೂಪ್ರದೇಶದಲ್ಲಿ ಕನಿಷ್ಠ ಐವತ್ತು ಮೆಟ್ರಿಕ್ ಟನ್ ಆದರೂ ಇಳುವರಿ ತೆಗೆಯಬೇಕು. ಅಂದರೆ ಮಾತ್ರ ರೈತರ ಬದುಕು ಸುಖ ಜೀವನವಾಗಲು ಸಾಧ್ಯ’ ಎಂದು ಡಾ. ಹಾಪ್ಸೆ ಹೇಳಿದರು.

ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಹಾಗೂ ಮಲಪ್ರಭಾ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಡಿ.ಬಿ. ಇನಾಮದಾರ ಅವರು, ‘ಕಬ್ಬು ಬೆಳೆಯ ತಜ್ಞರು ಇದರಲ್ಲಿ ಭಾಗವಹಿಸಿದ್ದಾರೆ. ಅವರು ನೀಡುವ ಸಲಹೆ, ಸೂಚನೆಗಳನ್ನು ಕಬ್ಬು ಕೃಷಿಯಲ್ಲಿ ಅಳವಡಿಸಿಕೊಂಡು ಬೆಳೆಗಾರ ಹೆಚ್ಚಿನ ಆದಾಯ ಗಳಿಸಲು ಪ್ರಯತ್ನಿಸಬೇಕು’ ಎಂದು ನುಡಿದರು.

ಮಾಜಿ ಶಾಸಕ ಎ.ಬಿ. ದೇಸಾಯಿ, ವಸಂತದಾದಾ ಸಕ್ಕರೆ ಸಂಸ್ಥೆ ಮತ್ತೊಬ್ಬ ನಿರ್ದೇಶಕ ಡಿ.ಜಿ. ಸುಭಾಷ್, ನಿರ್ದೇಶಕರಾದ ವಿ.ಬಿ. ಸಾಣಿಕೊಪ್ಪ, ಪಿ.ಜಿ. ಕಿಲ್ಲೇದಾರ, ಸಿ.ಸಿ. ಗಡಾದ, ಟಿ.ಎ. ಬಜೆಣ್ಣವರ, ಎಂ.ಬಿ. ಸಂಬರಗಿ, ಎಸ್.ವಿ. ಮೂಲಿಮನಿ, ಬಿ.ಎಸ್. ಅಷ್ಟಪುತ್ರಿ, ವಿ.ಬಿ. ಸಾಧುನವರ, ಎಸ್.ಎನ್. ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ಎಂ.ಡಿ. ಮಲ್ಲೂರ ಹಾಗೂ ಅಧಿಕಾರಿ ಹಂಜಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT