ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಜ್ಞಾನಿಕ ನಾಡಹಬ್ಬಕ್ಕೆ ಸಲಹೆ

Last Updated 19 ಅಕ್ಟೋಬರ್ 2012, 4:45 IST
ಅಕ್ಷರ ಗಾತ್ರ

ಬಳ್ಳಾರಿ: ದೇಶದಾದ್ಯಂತ ತಲೆದೋರಿರುವ ಜ್ವಲಂತ ಸಮಸ್ಯೆಗಳಿಗೆ ಜಾಗತೀಕರಣವೇ ಕಾರಣ ಎಂಬ ಹೇಳಿಕೆಯು ಕ್ಲೀಷೆಯಾಗಿ ಪರಿಣಮಿಸಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಹಿ.ಚಿ. ಬೋರಲಿಂಗಯ್ಯ ಅಭಿಪ್ರಾಯಪಟ್ಟರು.

ಲೋಹಿಯಾ ಪ್ರಕಾಶನ ಹಾಗೂ ನಾಡಹಬ್ಬ ಸಮಿತಿಗಳ ಸಹಯೋಗದಲ್ಲಿ ನಗರದಲ್ಲಿ ಮೂರು ದಿನಗಳ ಕಾಲ ನಡೆದ ಕನ್ನಡ ನಾಡಹಬ್ಬದ ಸಮಾರೋಪ ಸಮಾರಂಭದಲ್ಲಿ ಗುರುವಾರ ಅವರು ಮಾತನಾಡಿದರು. ಜಾಗತೀಕರಣದ ದುಷ್ಪರಿಣಾಮಗಳನ್ನು ವೈಜ್ಞಾನಿಕವಾಗಿ ಪರಿಹರಿಸುವ ಪ್ರಯತ್ನ ಮಾಡಬೇಕು. ಸಾಂಪ್ರದಾಯಿಕ ಪೂಜೆಗಳೊಂದಿಗೆ ನಾಡದೇವಿಯ ಹಬ್ಬವನ್ನು ಆಚರಿಸದೆ, ವೈಜ್ಞಾನಿಕವಾಗಿ ನಾಡಹಬ್ಬ ಆಚರಿಸಬೇಕಿದೆ ಎಂದು ಸಲಹೆ ನೀಡಿದರು.

ಕೈಗಾರಿಕೀಕರಣ, ವಿಶೇಷ ಆರ್ಥಿಕ ವಲಯ, ರೆಸಾರ್ಟ್ ಮತ್ತಿತರ ಕಾರಣಗಳಿಗಾಗಿ ರೈತರ ಫಲವತ್ತಾದ ಕೃಷಿ ಭೂಮಿ ಕಬಳಿಸುತ್ತ, ಕೃಷಿ ಭೂಮಿ ಕಡಿಮೆಯಾಗುತ್ತಿದೆ. ಇದರಿಂದಾಗುಗಿ ಮುಂದೊಂದು ದಿನ ಆಹಾರ- ಧಾನ್ಯಗಳಿಗಾಗಿ  ಪರದಾಡುವ ಸ್ಥಿತಿ ಬರಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ರೈತರ ಭೂಮಿಯನ್ನು ಮೂಲ ಉದ್ದೇಶಕ್ಕೆ, ಕೇವಲ ಕೃಷಿಗಾಗಿ ಮೀಸಲಿಡುವ ರೀತಿಯಲ್ಲಿ ನಿಯಮ ರೂಪಿಸಬೇಕು ಎಂದು ಅವರು ಒತ್ತಾಯಿಸಿದರು.ಓಡಿಶಾದ ಪೂರಿ ಜಗನ್ನಾಥ ಬುಡಕಟ್ಟು ಜನ ದೈವವಾಗಿದ್ದು, ಆತನಿಗೆ ನಿತ್ಯವೂ ವಿಭಿನ್ನ ಬತ್ತದ ತಳಿಯಿಂದ ಸಿದ್ಧಗೊಂಡ ಅಕ್ಕಿಯ ಅನ್ನವನ್ನು ನೈವೇದ್ಯ ಮಾಡಲಾಗುತ್ತಿತ್ತು. ಆ ಬುಡಕಟ್ಟು ಜನತೆ 365ಕ್ಕೂ ಅಧಿಕ ಬತ್ತದ ತಳಿಗಳನ್ನು ಸಂರಕ್ಷಿಸಿರುವುದು ಮಾದರಿ ಎಂದು ಅವರು ಹೇಳಿದರು.

ಈ ಹಿಂದೆ ದಕ್ಷಿಣ ಭಾರತದಲ್ಲಿ ಸಾವಿರಕ್ಕೂ ಅಧಿಕ ಮಾದರಿಯ ಬತ್ತದ ತಳಿಗಳಿದ್ದವು. ಜಾಗತೀಕರಣದ ಪ್ರಭಾವಕ್ಕೆ ಸಿಲುಕಿ ಕೇವಲ ಬೆರಳೆಣಿಕೆಯ ತಳಿಗಳು ಉಳಿದಿವೆ ಎಂದು ಬೋರಲಿಂಗಯ್ಯ ವಿವರಿಸಿದರು.
ಅಳಿವಿನ ಅಂಚಿನ ದೇಶೀ ಭಾಷೆಗಳ ಪೈಕಿ ಕನ್ನಡವೂ ಒಂದಾಗಿದ್ದು, ಪ್ರಾಚೀನ ಪರಂಪರೆಯ ಕನ್ನಡವು 200 ವರ್ಷಗಳ ಕಾಲ ಸಂಸ್ಕೃತ ಭಾಷೆಯ ದಾಳಿಯಿಂದ ನಲುಗಿದೆ. ನಂತರದ ದಿನಗಳಲ್ಲಿ ಬ್ರಿಟಿಷರಿಂದಾಗಿ ಸಂಕಷ್ಟ ಅನುಭವಿಸಿದೆ ಎಂದು ಅವರು ತಿಳಿಸಿದರು.

ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ ವಿರಚಿತ `ಮಹಾಕ್ರಾಂತಿ~ ನಾಟಕ ಕೃತಿಯನ್ನು ಇದೇ ಸಂದರ್ಭ ಅವರು ಬಿಡುಗಡೆ ಮಾಡಿದರು. ಕನ್ನಡ ವಿದ್ವಾಂಸ ಡಾ.ಜಿ.ಎಸ. ಸಿದ್ದಲಿಂಗಯ್ಯ, ಪ್ರೊ.ಅಲ್ಲಮಪ್ರಭು ಬೆಟದೂರ, ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ ಉಪಸ್ಥಿತರಿದ್ದರು. ಲೋಹಿಯಾ ಪ್ರಕಾಶನ ಸಿ.ಚೆನ್ನಬಸವಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು.

ನಂತರ ಚಿತ್ರದುರ್ಗದ ಮುರುಘಾ ಮಠದ `ಜಮುರಾ~ ಸುತ್ತಾಟ ತಂಡದಿಂದ ವೈ.ಡಿ.ಬಾದಾಮಿ ನಿರ್ದೇಶನದಲ್ಲಿ `ಮಹಾಕ್ರಾಂತಿ~ ನಾಟಕದ ಪ್ರದರ್ಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT