ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಜ್ಞಾನಿಕ ಬೆಲೆ ನಿಗದಿಗೆ ಆಗ್ರಹ: ಪ್ರತಿಭಟನೆ

Last Updated 14 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಚಿತ್ರದುರ್ಗ: ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ನಗರದ ರೈಲು ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರ ರೈತರಿಗೆ ಕೃಷಿ ವಲಯಕ್ಕೆ ಪ್ರತ್ಯೇಕ ಬಜೆಟ್ ಮಂಡಿಸಬೇಕು. ಕೃಷಿ ಸಚಿವರಾಗಿ ರೈತರ ಹಿತಾಸಕ್ತಿ ಕಾಪಾಡುವಲ್ಲಿ ಶರದ್ ಪವಾರ್ ವಿಫಲವಾಗಿದ್ದಾರೆ. ಪ್ರತ್ಯೇಕ ಕೃಷಿ ಬಜೆಟ್‌ಗೂ ವಿರೋಧ ವ್ಯಕ್ತಪಡಿಸಿರುವ ಶರದ್ ಪವಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ರೈತರ ಆತ್ಮಹತ್ಯೆಯನ್ನು ತಡೆಯಲು, 2000ನೇ ಇಸ್ವಿಯಿಂದ ಇದುವರೆಗೆ ತೆಗೆದುಕೊಂಡಿರುವ ಎಲ್ಲ ರೀತಿಯ ಸಾಲಗಳನ್ನು ಸರ್ಕಾರವೇ ಭರಿಸಿ ರೈತರನ್ನು ಸಾಲದಿಂದ ಮುಕ್ತಿಗೊಳಿಸಬೇಕು. ರೈತರಿಗೆ ಕೃಷಿ ಅಭಿವೃದ್ಧಿ ಬ್ಯಾಂಕ್‌ಗಳಲ್ಲಿ ಸಾಲ ನೀಡಬೇಕು. ಅನಗತ್ಯ ದಾಖಲೆಗಳಿಗೆ ಒತ್ತಾಯಿಸಿ ರೈತರಿಗೆ ಕಿರುಕುಳ ನೀಡದೆ ಸರಳ ದಾಖಲೆಗಳೊಂದಿಗೆ ಸಾಲ ವಿತರಿಸಬೇಕು ಎಂದು ಬೇಡಿಕೆಗಳನ್ನು ಮಂಡಿಸಿದರು.

ಜಿಲ್ಲೆಯಲ್ಲಿ ಶೇಂಗಾ, ಈರುಳ್ಳಿ, ಹತ್ತಿ, ರಾಗಿ ಬೆಳೆಗಳು ಪ್ರಕೃತಿ ವಿಕೋಪದಿಂದ ನಾಶವಾಗಿವೆ.ಸತತವಾಗಿ ಕಳೆದ 5-6 ವರ್ಷಗಳಿಂದ ರೈತರು ಬೆಳೆ ನಷ್ಟಕ್ಕೆ ಸಿಲುಕಿದ್ದಾರೆ. ಆದರೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಯಾವುದೇ ರೀತಿ ಪರಿಹಾರ ರೈತರಿಗೆ ದೊರೆತಿಲ್ಲ.ಸರ್ಕಾರ ಈಗಲಾದರೂ ಸ್ಪಂದಿಸಿ ರೈತರಿಗೆ ಪರಿಹಾರ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಜಿಲ್ಲಾ ಘಟಕದ ಅಧ್ಯಕ್ಷ ತಿಮ್ಮಪ್ಪಯ್ಯನಹಳ್ಳಿ ರಾಜಣ್ಣ, ಮುಖಂಡರಾದ ಎಸ್. ರವಿಕುಮಾರ್, ಕೆ.ಬಿ. ಬೋರಯ್ಯ, ಬಾಗೇನಾಳ್ ಕೊಟ್ರಬಸಪ್ಪ, ಡಿ. ಚಂದ್ರಶೇಖರ್ ನಾಯ್ಕ, ಬೆಳಗಲ್ ಈಶ್ವರಯ್ಯ ಸ್ವಾಮಿ, ಡಿ.ಬಿ. ಕೃಷ್ಣಮೂರ್ತಿ, ಗುಂಡ್ಲೂರು ತಿಮ್ಮಪ್ಪ, ಹುಣಸೆಕಟ್ಟೆ ರಾಜಣ್ಣ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT