ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯ ಸಂಸ್ಥೆ ಆಸ್ತಿ ಕಬಳಿಸಿದವರ ವಿರುದ್ಧ ಕ್ರಮ

Last Updated 26 ಸೆಪ್ಟೆಂಬರ್ 2011, 11:15 IST
ಅಕ್ಷರ ಗಾತ್ರ

ಮೈಸೂರು: `ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಆಸ್ತಿಯನ್ನು ಕಬಳಿಸಿ ದಾಖಲಾತಿಗಳನ್ನು ಮಾಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು~ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಇಲ್ಲಿ ಎಚ್ಚರಿಕೆ ನೀಡಿದರು.
ದಸರಾ ಪ್ರಯುಕ್ತ ವೈದ್ಯಕೀಯ ಕಾಲೇಜು ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ `ವೈದ್ಯಕೀಯ ಪ್ರದರ್ಶನ~ವನ್ನು ಉದ್ಘಾಟಿಸಿ ಮಾತನಾಡಿದರು.

`ಆಸ್ತಿಯನ್ನು ಕಬಳಿಸಿರುವುದಲ್ಲದೆ ಅದಕ್ಕೆ ನಕಲಿ ದಾಖಲಾತಿಗಳನ್ನು ಸೃಷ್ಟಿ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಬಂದಿದೆ. ಆಸ್ತಿ ಕಬಳಿಸಿದವರು ಎಷ್ಟೇ ದೊಡ್ಡವರಿದ್ದರೂ ಅವರ ವಿರುದ್ಧ ದಸರಾ ನಂತರ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು~ ಎಂದು ತಿಳಿಸಿದರು.

`ಪ್ರವಾಸೋದ್ಯಮ ಇಲಾಖೆಗೆ ನೀಡಲಾಗಿದ್ದ ವೈದ್ಯಕೀಯ ಸಂಸ್ಥೆಯ ಕಟ್ಟಡವನ್ನು ವಾರದಲ್ಲಿ ಖಾಲಿ ಮಾಡಿಸಿ ಸಂಸ್ಥೆಯ ಸುಪರ್ದಿಗೆ ನೀಡಲಾಗಿದೆ. ಖಾಲಿ ಇರುವ ಕಟ್ಟಡದಲ್ಲಿ ಶಾಶ್ವತ ವಸ್ತುಪ್ರದರ್ಶನ ಮಾಡುವ ಯೋಜನೆ ಇದೆ. ಅಲ್ಲದೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದಿನದ 24 ಗಂಟೆಗಳ ಡಿಜಿಟಲ್ ಲೈಬ್ರರಿ ಮಾಡುವ ಉದ್ದೇಶ ಇದೆ~ ಎಂದು ಹೇಳಿದರು.

`ಮಕ್ಕಳ ದಸರಾಕ್ಕೆ ಬರುವ ಸರ್ಕಾರಿ ಶಾಲೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ವೈದ್ಯಕೀಯ ಪ್ರದರ್ಶನಕ್ಕೆ ಕರೆತಂದು ವೈದ್ಯಕೀಯ ಕ್ಷೇತ್ರದ ಬಗ್ಗೆ ಅರಿವು ಮೂಡಿಸಲಾಗುವುದು. ಪ್ರಾತ್ಯಕ್ಷಿಕೆ, ವೀಡಿಯೊ ಪ್ರದರ್ಶನ ಮಾಡುವುದರಿಂದ ಮಕ್ಕಳಿಗೆ ಬೇಗನೆ ಅರಿವಾಗುತ್ತದೆ. ಸ್ನಾತಕೋತ್ತರ ವಿದ್ಯಾರ್ಥಿಗಳು ಪ್ರದರ್ಶನದಲ್ಲಿ ಇದ್ದು ವಿವರ ನೀಡಲಿದ್ದಾರೆ~ ಎಂದು ಹೇಳಿದರು.

ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಡಾ.ಗೀತಾ ಅವದಾನಿ, ಮೂಳೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಗೋಪಿನಾಥ್ ಇದ್ದರು.

ಮಾತನಾಡುವ ಅಸ್ತಿಪಂಜರ
ಮೈಸೂರು:
ಅಸ್ಥಿಪಂಜರ ಮಾತನಾಡುತ್ತದೆ! ಇದೇನಿದು ಎಂದು ಹುಬ್ಬೇರಿಸಬೇಡಿ. ಇದು ಸತ್ಯ. ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಅಸ್ಥಿಪಂಜರವನ್ನು ಸಹ ಮಾತನಾಡುವಂತೆ ಮಾಡಿದ್ದಾರೆ.

ವೈದ್ಯಕೀಯ ವಸ್ತುಪ್ರದರ್ಶನ ಉದ್ಘಾಟಿಸಿದ ಸಚಿವ ಎಸ್.ಎ.ರಾಮದಾಸ್ ಕತ್ತಲೆ ಕೋಣೆ ಒಳಹೋಗುತ್ತಿದ್ದಂತೆ ಮೂಲೆಯಲ್ಲಿದ್ದ ಅಸ್ಥಿಪಂಜರ ಸಚಿವರನ್ನು `ಬನ್ನಿ ಸಚಿವರೆ ಒಳಬನ್ನಿ~ ಎಂದು ಸ್ವಾಗತಿಸಿತು. ಅಸ್ಥಿಪಂಜರ ಬಾಯಿ ತೆರೆದು ಮಾತನಾಡಿದ್ದನ್ನು ಕಂಡು ಸಚಿವರು ಅವಕ್ಕಾದರು.

ಮಾತನ್ನು ಮುಂದುವರೆಸಿದ ಅಸ್ಥಿಪಂಜರ `ನೀವು ನಮಗೆ ಮೊದಲು ಸಚಿವರು, ನಂತರ ಜಿಲ್ಲಾ ಉಸ್ತುವಾರಿ ಸಚಿವರು, ಸಚಿವರಾಗಿ ವರ್ಷ ಪೂರೈಸಿದ ನಿಮಗೆ ಶುಭಾಶಯಗಳು. ವೈದ್ಯ ವೃಂದ ನೆನೆಯುವ ಕೆಲಸ ಮಾಡಿದ್ದೀರಿ. ನಮಗೆ ಇಲ್ಲಿ ಓದಲು ಅವಕಾಶ ಸಿಕ್ಕಿರುವುದು ನಮ್ಮ ಭಾಗ್ಯ. ನಿಮಗೆ ಧನ್ಯವಾದಗಳು, ಮತ್ತೆ ಬನ್ನಿ~ ಎಂದು ಮಾತು ಮುಗಿಸಿದಾಗ ಸಚಿವರ ಹರ್ಷಕ್ಕೆ ಪಾರವೇ ಇರಲಿಲ್ಲ.

ಮೈಕ್ರೊಪೋನ್ ಸಹಾಯದಿಂದ ವಿದ್ಯಾರ್ಥಿಗಳು ಅಸ್ಥಿಪಂಜರ ಮಾತನಾಡುವಂತೆ ಮಾಡಿದ್ದರು. ಮರೆಯಲ್ಲಿದ್ದ ವಿದ್ಯಾರ್ಥಿನಿ ಮೇಲಿನ ವಾಕ್ಯಗಳನ್ನು  ಮೈಕ್ರೊಪೋನ್ ಸಹಾಯದಿಂದ ಓದಿದರು.

ರಾಸಾಯನಿಕ ವಸ್ತುಗಳಿಂದ ಸಂರಕ್ಷಿಸಲಾಗಿದ್ದ ಮನುಷ್ಯನ ಹಳೆಯದಾದ ಮೃತದೇಹ `ಮಮ್ಮಿಫೈಡ್ ದೇಹ~, ಗರ್ಭಕೋಶ ಮತ್ತು ಭ್ರೂಣ, ಭ್ರೂಣದ ಬೆಳವಣಿಗೆ, ಮಿದುಳು, ಬೆನ್ನುಹುರಿ, ಮೂತ್ರಪಿಂಡಗಳು, ಒಕ್ಕಣ್ಣಿನ ಶಿಶು, ಸಯಾಮಿ (ಅವಳಿ-ಜವಳಿ)ಗಳು ಪ್ರದರ್ಶನದಲ್ಲಿ ಗಮನ ಸೆಳೆದವು. ಮೂಳೆ ವಿಭಾಗ, ಕಣ್ಣಿನ ವಿಭಾಗ, ಚರ್ಮ, ಮನಃಶಾಸ್ತ್ರ, ಎಚ್‌ಐವಿ ಸೇರಿದಂತೆ ಇತರೆ ವಿಭಾಗಗಳ ವಿಶೇಷತೆಗಳು ಪ್ರದರ್ಶನದಲ್ಲಿ ಎಲ್ಲರನ್ನು ಆಕರ್ಷಿಸಿದವು.
ಬೆಳಿಗ್ಗೆ 10 ರಿಂದ ರಾತ್ರಿ 8 ಗಂಟೆವರೆಗೆ ಪ್ರದರ್ಶನ ತೆರೆದಿರುತ್ತದೆ. ಅ.10 ರವರೆಗೆ ಪ್ರದರ್ಶನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT