ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ವಲಯದಲ್ಲಿ ಇ-ಬೋಧನೆ

Last Updated 13 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ವೈದ್ಯಕೀಯ ರಂಗದ ಬಿಡುವಿಲ್ಲದ ದುಡಿಮೆಯ ಪರಿಣಾಮವಾಗಿ ವೈದ್ಯರಿಗೆ ತಮ್ಮ ವರ್ಷಾನುಗಟ್ಟಲೆಯ ಅನುಭವವನ್ನು ಬೋಧಿಸಲು ಹಾಗೂ ಮುಂದಿನ ಪೀಳಿಗೆಗೆ ವರ್ಗಾಯಿಸಲು ಸಾಕಷ್ಟು ಸಮಯದ ಅಭಾವ ಉಂಟಾಗುತ್ತದೆ. ಇದರಿಂದ ತರಬೇತುದಾರರ, ಮುಖ್ಯವಾಗಿ ಸೂಪರ್ ಸ್ಪೆಷಾಲಿಟಿ ವೈದ್ಯಕೀಯ ತರಬೇತಿ ವಿಭಾಗದಲ್ಲಿ ಪರಿಣತರ ಕೊರತೆ ಕಾಡುತ್ತದೆ. ಭಾರತದಲ್ಲಿ ಈ ವಿಭಾಗದಲ್ಲಿ ಕೊರತೆಗೆ ಹಲವಾರು ಕಾರಣಗಳು ಇವೆ. ಅವುಗಳು ಇಂತಿವೆ.

ತರಬೇತಿ ಹೊಂದಿರುವ ಸೂಪರ್ ಸ್ಪೆಷಲಿಸ್ಟ್‌ಗಳು ಬೋಧನೆ ಮಾಡುವ ಆಸಕ್ತಿ ಹೊಂದಿರುವುದು ವಿರಳವಾಗಿದೆ.

ಒಂದುವೇಳೆ ತರಬೇತಿ ನೀಡುವ ಉತ್ಸಾಹವಿದ್ದರೂ, ಅವರಿಗೆ ಕ್ಲಿನಿಕಲ್ ಕೆಲಸ, ತರಗತಿಗಳನ್ನು ನಡೆಸಲು ಬೇಕಾದ ಸಮಯವನ್ನು ಹೊಂದಿಸುವುದು ಸವಾಲಾಗಿ ಪರಿಣಮಿಸುತ್ತದೆ.

ನಾನಾ ಸಂಸ್ಥೆಗಳಲ್ಲಿ ವಿಭಿನ್ನ ಶಿಷ್ಟಾಚಾರ, ಸಂಪ್ರದಾಯ, ಗುಣಮಟ್ಟ ಇರುತ್ತದೆ. ಆದ್ದರಿಂದ ದೇಶದಾದ್ಯಂತ ಏಕ ದರ್ಜೆಯ ಚಿಕಿತ್ಸೆ ಇರುವುದಿಲ್ಲ.
 
ಜಗತ್ತಿಗೆ ಪಾಶ್ಚಿಮಾತ್ಯ ರಾಷ್ಟ್ರಗಳ ಅತಿ ದೊಡ್ಡ ಕೊಡುಗೆ ಯಾವುದೆಂದರೆ ಅವುಗಳಲ್ಲಿನ ವಿಶ್ವವಿದ್ಯಾಲಯಗಳು ಹಾಗೂ ತರಬೇತಿ ಸಂಸ್ಥೆಗಳು. ಏಲ್ ವಿಶ್ವ ವಿದ್ಯಾಲಯದಲ್ಲಿ ಅಂತಹ ಗುಣಾತ್ಮಕ ತರಬೇತಿಯನ್ನು ನಾನು ಪಡೆದಿದ್ದೇನೆ.

ದಶಕದ ಹಿಂದೆ  ಭಾರತಕ್ಕೆ ಹಿಂತಿರುಗಿ ನಾನು ಕೆಲಸ ಮಾಡಿದ ಆಸ್ಪತ್ರೆಗಳಲ್ಲಿ ಪೀಡಿಯಾಟ್ರಿಕ್ ಕಾರ್ಡಿಯಾಲಜಿಸ್ಟ್ ವಲಯದ ನಾನಾ ಶಾಖೆಗಳಲ್ಲಿ ತರಬೇತಿ ಪಡೆದಿದ್ದೇನೆ. ಇದೇ ರೀತಿಯ ವೈದ್ಯಕೀಯ ತಿಳಿವಳಿಕೆ ದೇಶದಾದ್ಯಂತ ಲಭ್ಯವಾಗುತ್ತಿಲ್ಲ ಎಂಬ ಅರಿವು ನನಗಿತ್ತು. ಒಬ್ಬರಿಂದ ಸೂಪರ್ ಸ್ಪೆಷಾಲಿಟಿ ತರಬೇತಿಯನ್ನು ಭಾರತದಲ್ಲಿ ವಿಸ್ತರಿಸುವುದು ಹೇಗೆ ಸಾಧ್ಯ ?

ಈಗ ಭಾರತದಲ್ಲಿ ತಾಂತ್ರಿಕ ಸೌಲಭ್ಯ ಹಾಗೂ ಬ್ರಾಡ್‌ಬ್ಯಾಂಡ್ ಅನುಕೂಲ ಸಾರ್ವತ್ರಿಕವಾಗಿದೆ. ಒಬ್ಬ ಬೋಧಕ ತಾಂತ್ರಿಕತೆಯನ್ನು ಬಳಸಿ ದೇಶದಾದ್ಯಂತ ತರಗತಿಗಳ ಮೂಲಕ ಅನೇಕ ಮಂದಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಬಹುದು. ಭಾರತದ ವೈದ್ಯಕೀಯ ಮತ್ತು ಆರೋಗ್ಯ ವಲಯದ ತರಬೇತಿ ವಿಭಾಗದಲ್ಲಿನ ಅಡಚಣೆಗಳನ್ನು ನಿವಾರಿಸಬಹುದು.

‘ ಇ’ ಕಲಿಕೆ, ತರಬೇತಿ ವ್ಯವಸ್ಥೆಯ ಮೂಲಕ ವೈದ್ಯಕೀಯ ವಿದ್ಯಾರ್ಥಿಗಳಿಗೆ ತರಬೇತಿ ನೀಡಬಹುದು. ಸೂಪರ್ ಸ್ಪೆಷಲಿಸ್ಟ್‌ಗಳು ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದಾರೆ. ವೆಬ್‌ಸೈಟ್, ಬ್ಲಾಗ್, ವಿಕಿಪೀಡಿಯಾ ಮತ್ತು ಡಿವಿಡಿ/ಸಿಡಿ ವಿತರಣೆ ಮೂಲಕ ಪ್ರಯತ್ನ ಮಾಡಿದ್ದಾರೆ. ಇಲ್ಲಿ ವಿದ್ಯಾರ್ಥಿ ಮತ್ತು ಬೋಧಕರ ನಡುವೆ ನೇರ ಸಂವಹನ ಇರುವುದಿಲ್ಲ. ಹೀಗಿದ್ದರೂ ಸದಾ ಇದು ಸಮಸ್ಯೆಯಾಗುವುದಿಲ್ಲ. ಕೆಲವು ಸಮೂಹ ಚರ್ಚೆಗಳ ವೆಬ್‌ಸೈಟ್‌ಗಳು ಲಭ್ಯ. ಇದು ವೆಬ್ ಚಾಟ್ ಆಧಾರಿತವಾಗಿರುತ್ತವೆ. ಡಾ. ರಾವ್ ಪ್ರಕಾರ, ವೆಬ್-ಆಧಾರಿತ ಮಲ್ಟಿಮೀಡಿಯಾ ಕಲಿಕೆಯು ಸಾಂಪ್ರದಾಯಿಕ ಬೋಧನೆಯ ಹಲವು ಅಂಶಗಳಿಗೆ ಸುಲಭವಾಗಿ ಸಮವಾಗದಿದ್ದರೂ, ಹಲವಾರು ಸಾಧ್ಯತೆಗಳನ್ನು ಒಳಗೊಂಡಿದೆ. ಹಲವು ಸ್ಟುಡಿಯೊಗಳು ಸಾಂಪ್ರದಾಯಿಕ ತರಗತಿಗಳ ಬದಲಿಗೆ ಇ-ಕಲಿಕಾ ತರಗತಿಗಳತ್ತ ಒಲವು ವ್ಯಕ್ತಪಡಿಸಿದ್ದರೂ, ಗಣನೀಯ ಸುಧಾರಣೆ ಆಗಿಲ್ಲ.

ವೀಡಿಯೊ ಕಾನ್ಫರೆನ್ಸ್ ನೇರ ತರಗತಿಗಳ ಪದ್ಧತಿಗಳಲ್ಲೊಂದು. ಪಾನ್ ಆಫ್ರಿಕಾ ಟೆಲಿ-ಎಜ್ಯುಕೇಶನ್ ನೆಟ್‌ವರ್ಕ್ ಅಂತಹ ಯಶಸ್ವಿ ಉದಾಹರಣೆ. ಇದರಲ್ಲಿ ತರಗತಿಗಳು ನೇರ ಪ್ರಸಾರವಾಗಿದ್ದು, ಪ್ರಶ್ನೋತ್ತರಗಳು ಇರುತ್ತವೆ.

ಅನಾನುಕೂಲವೆಂದರೆ ಬೋಧಕರು ಮತ್ತು ವಿದ್ಯಾರ್ಥಿಗಳು ಕಾನ್ಫರೆನ್ಸ್ ಕೊಠಡಿಯಲ್ಲಿ ಖುದ್ದು ಇರಬೇಕಾಗುತ್ತದೆ. ಅಲ್ಲಿಂದ ಉಪಗ್ರಹ ಆಧಾರಿತ ವ್ಯವಸ್ಥೆಯಲ್ಲಿ ಕಲಿಕೆ ಮುಂದುವರಿಯುತ್ತದೆ.

ಒಂದು ಆದರ್ಶವಾದ ಇ-ಕಲಿಕೆ ವ್ಯವಸ್ಥೆಯು ವಿದ್ಯಾರ್ಥಿ ಮತ್ತು ಬೋಧಕರ ನಡುವೆ ಸಂವಹನಕ್ಕೆ ಅವಕಾಶ ಕಲ್ಪಿಸುತ್ತದೆ. ಡಾಟಾ ಕಾರ್ಡ್ ಒಳಗೊಂಡಿರುವ ಲ್ಯಾಪ್‌ಟಾಪ್‌ನಿಂದ ಇದು ಸಾಧ್ಯ. ಇಂತಹ ವೇದಿಕೆಗೆ ಕೆಳಕಂಡ ಅಗತ್ಯಗಳಿವೆ.

ಬಳಕೆಗೆ ಸುಲಭವಾಗಿರಬೇಕು. ಯಾಕೆಂದರೆ ಬಹುತೇಕ ವೈದ್ಯರು ತಾಂತ್ರಿಕವಾಗಿ ಸೀಮಿತ ಅರಿವು ಹೊಂದಿದ್ದಾರೆ.

ಸುಲಭವಾಗಿ ಲಭ್ಯವಿರುವ, ದುಬಾರಿಯಲ್ಲದ ಬ್ಯಾಂಡ್‌ವಿಡ್ತ್ ಅಗತ್ಯ

ವೆಬ್ ಆಧಾರಿತವಾಗಿರಬೇಕು. ಇದರಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಎಲ್ಲಿ, ಯಾವಾಗ ಬೇಕಾದರೂ ಲಾಗ್ ಆಗಬಹುದು. ಪ್ರತ್ಯೇಕ ಸ್ಥಳಕ್ಕೆ ಹೋಗಬೇಕಾದ ಅಗತ್ಯ ಇರುವುದಿಲ್ಲ.

ಪವರ್ ಪಾಯಿಂಟ್ ಪ್ರೆಸೆಂಟೇಶನ್ ಮಾಡಲು ಸಾಧ್ಯವಾಗುವಂತಿರಬೇಕು. ಡ್ರಾಯಿಂಗ್ ಬೋರ್ಡ್‌ನಂತೆಯೂ ಇರಬೇಕು

ಧ್ವನಿ ಮುದ್ರಿತ ವ್ಯವಸ್ಥೆ ಇರಬೇಕು. ಇದರಿಂದ ತರಗತಿಗಳ ಮರುಪ್ರಸಾರ ಸಾಧ್ಯ

ಪ್ರಶ್ನೋತ್ತರ ಅನುಕೂಲ ಇರಬೇಕು.
2010ರ ಮೇ ನಿಂದ ಲಾಭ ರಹಿತ ಸೇವಾ ಸಂಸ್ಥೆಯಾದ ‘ಹಾರ್ಟ್ ಸ್ಟ್ರಿಂಗ್ಸ್, ಎ ಪೀಪಲ್4ಪೀಪಲ್ ಇನಿಶಿಯೇಟಿವ್’ ಎಂಬ ಸಂಸ್ಥೆಯನ್ನು ಸಿಸ್ಕೊ ಸಿಸ್ಟಮ್ಸ್ ಸಹಭಾಗಿತ್ವದಲ್ಲಿ ನಡೆಸಲಾಗುತ್ತಿದೆ.

ಇದರ ಮೂಲಕ ಮಕ್ಕಳ ಹೃದ್ರೋಗ ಕುರಿತ ಪ್ರಾಯೋಗಿಕ ನೇರ ಪ್ರಸಾರದ ಬೋಧನೆಯನ್ನು ಆರಂಭಿಸಲಾಗಿದೆ. ಸಿಸ್ಕೊ ರಿಮೋಟ್ ಎಜ್ಯುಕೇಶನ್ ಸೆಂಟರ್ ಪ್ಲಾಟ್‌ಫಾರ್ಮ್ ಸಂಪೂರ್ಣ ಅಂತರ್ಜಾಲ ಆಧಾರಿತವಾಗಿದ್ದು, ವಿಶೇಷ ಸಾಧನ ಅಥವಾ ಸಾಫ್ಟ್‌ವೇರ್‌ನ ಅಗತ್ಯ ಇರುವುದಿಲ್ಲ. ಲೈವ್ ಆಡಿಯೊ, ವೀಡಿಯೊ, ಬಿಳಿ ಬೋರ್ಡ್ ಮತ್ತು ವಿಚಾರ ಮಂಡನೆಯ ಮೂಲಕ ತರಗತಿ ನಡೆಯುತ್ತದೆ. ಕಂಪ್ಯೂಟರ್ ಮತ್ತು ವೆಬ್ ಕ್ಯಾಮೆರಾ ಮತ್ತು ಆಪ್ಶನಲ್ ಡಿಜಿಟಲ್ ನೋಟ್‌ಪ್ಯಾಡ್ ಬೋಧಕರಿಗೆ ಇದ್ದರೆ ಸಾಕು. ವಿದ್ಯಾರ್ಥಿಗಳಲ್ಲಿ ಕಂಪ್ಯೂಟರ್, ಇಂಟರ್‌ನೆಟ್, ವೆಬ್‌ಕ್ಯಾಮ್, ಮೈಕ್ರೊಫೋನ್, ಸ್ಪೀಕರ್ ಮತ್ತು ಪ್ರಾಜೆಕ್ಟರ್ ಇದ್ದರೆ ಸಾಕು. ಬೋಧಕರು ಸುಲಭವಾಗಿ ಬೋಧನೆ ಮಾಡಬಹುದು.

2010ರ ಮೇ ತಿಂಗಳಿನಿಂದ 2010 ಡಿಸೆಂಬರ್ ತನಕ, ಈ ವರದಿಯನ್ನು ಸಿದ್ಧಪಡಿಸುವ ತನಕ 60 ಇ-ತರಗತಿಗಳನ್ನು ಏರ್ಪಡಿಸಲಾಗಿತ್ತು. ಬೆಂಗಳೂರು, ಕೋಲ್ಕತಾ, ಚೆನ್ನೈ, ದಿಲ್ಲಿ, ಭೋಪಾಲ್, ಮುಂಬಯಿ ಮತ್ತು ನೈಜೀರಿಯಾದಲ್ಲಿ ಪೀಡಿಯಾಟ್ರಿಕ್ ಕಾರ್ಡಿಯೋಲಜಿ ಬಗ್ಗೆ ಇ-ತರಗತಿಗಳನ್ನು ನಡೆಸಲಾಗಿತ್ತು.
ಇದರಿಂದ ದೊರೆಯುವ ಪ್ರಯೋಜನಗಳು ಹಲವು :

ಒಬ್ಬ ತರಬೇತುದಾರ/ಬೋಧಕ ಹಲವಾರು ವಿದ್ಯಾರ್ಥಿಗಳಿಗೆ ಬೋಧಿಸಬಹುದು.

ದೇಶದ/ವಿಶ್ವದ ಅತ್ಯುತ್ತಮ ಶಿಕ್ಷಕರು ಬೋಧನೆಯಲ್ಲಿ ಭಾಗವಹಿಸಬಹುದು. ಬೋಧನೆಯ ಗುಣಮಟ್ಟ ಹೆಚ್ಚಿಸಬಹುದು.

ಒಂದೇ ವಿಷಯವನ್ನು ಎಲ್ಲ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಬೋಧಿಸಬಹುದು. ರಾಷ್ಟ್ರೀಯ ಮಟ್ಟದಲ್ಲಿ ಒಮ್ಮತದ ಬೋಧನಾ ವ್ಯವಸ್ಥೆಯನ್ನು, ಸೂಪರ್ ಸ್ಪೆಷಾಲಿಟಿ ತರಬೇತಿಯನ್ನು ಒದಗಿಸಬಹುದು.

ಇ-ತರಗತಿಗಳನ್ನು ಧ್ವನಿ ಮುದ್ರಿಸಿಕೊಳ್ಳಬಹುದು. ಬೇಕಾದಾಗ ಅಂತರ್ಜಾಲದ ಮೂಲಕ ಪುನರ್‌ಮನನ, ವೀಕ್ಷಣೆ ಮಾಡಿಕೊಳ್ಳಬಹುದು. 

ಸಹಜ ತರಗತಿಯಲ್ಲಿರುವಂತೆ ಪ್ರಶ್ನೋತ್ತರ ಅವಕಾಶ ಮಾಡಿಕೊಳ್ಳಬಹುದು.

ಸಂಪೂರ್ಣ ಇಂಟರ್‌ನೆಟ್ ಆಧಾರಿತವಾದ್ದರಿಂದ ಹೆಚ್ಚುವರಿ ಖರ್ಚು ಇರುವುದಿಲ್ಲ.

ಆದ್ದರಿಂದ ಇತ್ತೀಚಿನ ತಾಂತ್ರಿಕತೆಯನ್ನು ಬಳಸಿಕೊಂಡು ಒಬ್ಬ ಶಿಕ್ಷಕ ದೇಶದಾದ್ಯಂತ ಹಲವಾರು ವಿದ್ಯಾರ್ಥಿಗಳಿಗೆ ವೆಬ್ ಆಧಾರದಲ್ಲಿ ಏಕ ಕಾಲದಲ್ಲಿ ಬೋಧನೆ ಮಾಡಬಹುದು. ಈ ವಿನೂತನ ವ್ಯವಸ್ಥೆಯನ್ನು ಕೇವಲ ಪೀಡಿಯಾಟ್ರಿಕ್ ಕಾರ್ಡಿಯೋಲಜಿಗೆ ಮಾತ್ರವಲ್ಲದೆ, ಸೂಪರ್ ಸ್ಪೆಷಲಿಸ್ಟ್  ವೈದ್ಯಕೀಯ ವಿಭಾಗಗಳ ಇತರ ಶಾಖೆಗಳಲ್ಲಿಯೂ ಬಳಸಬಹುದು. ನರ್ಸಿಂಗ್, ಔಷಧ ವಿಭಾಗದಲ್ಲಿಯೂ ಬಳಸಬಹುದು. ತಾಂತ್ರಿಕ ಅನುಕೂಲತೆಯಿಂದ ಇದು ಸಾಧ್ಯವಾಗುತ್ತದೆ.

(ಲೇಖಕಿ ಹಿರಿಯ ಸಮಾಲೋಚಕರು, ಮಕ್ಕಳ ಹೃದ್ರೋಗ ವೈದ್ಯರು. ಆರೋಗ್ಯವಲಯದಲ್ಲಿ ತಾಂತ್ರಿಕ ಸೌಲಭ್ಯಗಳನ್ನು ಬಳಸುವುದರಲ್ಲಿ ಹಲವಾರು ವರ್ಷಗಳ ಅನುಭವವನ್ನು ಹೊಂದಿದ್ದು, ಭಾರತದ ಮೊದಲ ಅತಿ ದೊಡ್ಡ ಟೆಲಿರೇಡಿಯೋಲಜಿ ಬಳಗವನ್ನು ಸ್ಥಾಪಿಸಿದ್ದಾರೆ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT