ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯನ ಕೈ ಹಿಡಿದ ಕೋಕೊ

Last Updated 14 ಅಕ್ಟೋಬರ್ 2012, 7:40 IST
ಅಕ್ಷರ ಗಾತ್ರ

ಕೃಷಿಯು ಅನಂತ ಅವಕಾಶಗಳ ಆಗರವಾಗಿದ್ದು, ಮಾಹಿತಿ ಮತ್ತು ಸಂಪೂರ್ಣ ಶ್ರಮದಿಂದ ಮಹತ್ತರ ಸಾಧನೆ ಮಾಡಬಹುದು ಎನ್ನುವುದು ಮೂಲತಃ ದಂತ ವೈದ್ಯರಾದರೂ, ಅಪರಿಮಿತ ಉತ್ಸಾಹದಿಂದ ಕೃಷಿಯಲ್ಲಿ ತೊಡಗಿ ತಾಲ್ಲೂಕಿನಲ್ಲಿ ಮೊದಲ ಬಾರಿಗೆ ಕೋಕೊ ಬೆಳೆ ಬೆಳೆದ ಡಾ.ವಿವೇಕ್ ಅವರ ಅನುಭವದ ಮಾತು.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಬೆಳಗೋಡಿನ ಡಾ.ವಿವೇಕ್ ಬಯಲು ಸೀಮೆಯ ಎಮ್ಮೆದೊಡ್ಡಿ ಪ್ರದೇಶದಲ್ಲಿ ಹತ್ತು ವರ್ಷಗಳ ಹಿಂದೆ ಸುಮಾರು 35 ಎಕರೆ ಜಮೀನನ್ನು ಖರೀದಿಸಿ ಅಡಿಕೆ ಮತ್ತು ಬಾಳೆ ಬೆಳೆಯುವ ಸಾಹಸ ಮಾಡಿದರು. ಅಡಿಕೆ ಉತ್ತಮವಾಗಿ ಬಂದು ಬಾಳೆಯೂ ಕೈಹಿಡಿದಿತ್ತು. ಆದರೆ ಮೂರು ವರ್ಷಗಳ ಹಿಂದೆ ಸುರಿದ ಆಲಿಕಲ್ಲು ಮಳೆಗೆ ಬಾಳೆ ಹಾಳಾಗಿ ಮತ್ತೇನು ಬೆಳೆಯಬಹುದು ಎಂಬ ಯೋಚನೆಯಲ್ಲಿ ಇದ್ದಾಗ ಹೊಳೆದಿದ್ದೇ ಕೋಕೊ.

ಕೋಕೊ ರಾಜ್ಯದಲ್ಲಿ ಅಡಿಕೆ ತೋಟಗಳಲ್ಲಿ ಮಿಶ್ರಬೆಳೆಯಾಗಿ ಬೆಳೆಯುತ್ತಾರೆ. ಇದನ್ನು ಒಂದು ಪ್ರಯೋಗವಾಗಿ ಮಾಡಬೇಕೆಂದು ಬರಗಾಲದ, ಬಯಲುಸೀಮೆಯ ಕಡೂರು ತಾಲ್ಲೂಕಿನಲ್ಲಿ ಡಾ.ವಿವೇಕ್ ಮೂರು ವರ್ಷಗಳ ಹಿಂದೆ ಎಫ್-1 ಹೈಬ್ರಿಡ್ ತಳಿ ಪ್ರಯತ್ನ ಮಾಡಿ ಬಹುತೇಕ ಅದರಲ್ಲಿ ಯಶಸ್ಸನ್ನೂ ಕಂಡಿದ್ದಾರೆ.  

ಇತ್ತೀಚೆಗೆ ಅಡಿಕೆ ಹಲವಾರು ತಲ್ಲಣಗಳಿಂದ ಏರುಪೇರಿನ ಸ್ಥಿತಿ ಅನುಭವಿಸುತ್ತಿದ್ದು, ಕೇವಲ ಅಡಿಕೆ ನಂಬಿ ಏನೂ ಲಾಭವಿಲ್ಲ. ಬಾಳೆ ಸಾಕಷ್ಟು ಆರೈಕೆ ಬಯಸುತ್ತದೆ ಮತ್ತು ಪ್ರಕೃತಿಗೆ ಎದೆಯೊಡ್ಡಿ ನಿಲ್ಲಲಾರದು. ಕಡಿಮೆ ಖರ್ಚಿನಲ್ಲಿ ಹಲವಾರು ವರ್ಷಗಳ ಕಾಲ ಬೆಳೆ ನೀಡುವ ಮಿಶ್ರ ಬೆಳೆಯ ಹುಡುಕಾಟದಲ್ಲಿ ತೊಡಗಿದ್ದಾಗ ಅವರಿಗೆ ಗೋಚರಿಸಿದ್ದೇ ಕೋಕೊ ಬೆಳೆ. ಸಾಮಾನ್ಯವಾಗಿ ಮೂವತ್ತರಿಂದ ಮೂವತ್ತೈದು ವರ್ಷಗಳ ಕಾಲ ಕಡಿಮೆ ಆರೈಕೆಯಿಂದ ನಿರಂತರ ಫಲ ನೀಡುವ ಕೋಕೊ ಬೆಳೆಯೇ ಲಾಭದಾಯಕ ಎನಿಸಿ ಅವರು ಶಿವಮೊಗ್ಗದ ಸ್ನೇಹಿತರನ್ನು ಸಂಪರ್ಕಿಸಿ ಕೋಕೊ ಬೆಳೆಯಲು ಮನಸ್ಸು ಮಾಡಿದರು.

ಕೋಕೊ ಬೆಳೆಯಲ್ಲಿ ಎರಡು ತಳಿಗಳಿದ್ದು ಕ್ರಿಯೊಲ್ಲೋ ಮತ್ತು ಫಾರೆಸ್ಟೆರೊ ಈ ವಿಧಗಳಾಗಿವೆ. ಗಿಡಗಳಿಗೆ ಸಾಮಾನ್ಯವಾಗಿ ಬೇರು ಮತ್ತು ಕಾಂಡಗಳನ್ನು ಕೊರೆಯುವ ಕಪ್ಪು ಹುಳುಗಳ ಬಾಧೆ ಕಂಡು ಬರುವುದಿದ್ದು ಇದರ ಹತೋಟಿಗೆ ಅಥವಾ ರೋಗಪ್ರತಿಬಂಧಕವಾಗಿ ಬೋರ್ಡೆಕ್ಸ್ ಮಿಶ್ರಣವನ್ನು ಸಿಂಪಡಿಸಬೇಕು .ಇಲ್ಲಿ ವರ್ಷಕ್ಕೆ ಮೂರು ಬಾರಿ ಈ ದ್ರಾವಣವನ್ನು ಸಿಂಪಡಿಸಲಾಗುತ್ತಿದ್ದು, ಉತ್ತಮ ನಿರ್ವಹಣೆ ಇದ್ದರೆ ಹೆಚ್ಚಿನ ಖರ್ಚು ಬಾರದು ಎನ್ನುವುದು ಅವರ ಅಭಿಪ್ರಾಯ. 

 ಕೋಕೊ ಗಿಡಗಳನ್ನು ನಾಟಿ ಮಾಡಲು ಮೇ ಮತ್ತು ಜೂನ್ (ಮುಂಗಾರು ಹಂಗಾಮು) ಅಥವಾ ಸೆಪ್ಟೆಂಬರ್ ಉತ್ತಮ ಕಾಲ. ಎಕರೆಯಲ್ಲಿ 3/3ಮೀ ಅಳತೆಯಲ್ಲಿ ಗಿಡಗಳನ್ನು ನೆಡಬೇಕು. ಒಂದೂವರೆ ಅಡಿ ಆಳದ ಗುಂಡಿ ತೋಡಿ ಆರೋಗ್ಯವಂತ ಗಿಡಗಳನ್ನು ನಾಟಿ ಮಾಡಿ ಸಾವಯವ ಗೊಬ್ಬರ ಹಾಕಿ ನೀರು ಸಿಗುವ ವ್ಯವಸ್ಥೆ ಮಾಡಬೇಕು. ಕೋಕೊ ಬೆಳೆಯಲು ಫಲವತ್ತಾದ ಮತ್ತು ತೇವಾಂಶ 50 ಪ್ರತಿಶತ ಇರುವ ಜೇಡಿ ಅಥವಾ ಮರಳು ಮಿಶ್ರಿತ ಭೂಮಿ ಉತ್ತಮವಾಗಿದೆ. ಸರಾಸರಿ ಮಳೆಗಾಲದ ಅವಧಿಯಲ್ಲಿ ತಿಂಗಳಿನಲ್ಲಿ 90-100 ಮಿ.ಮೀ ಮಳೆಯಾಗುವ ಪ್ರದೇಶದಲ್ಲಿ, 15-39 ಡಿಗ್ರಿ ಉಷ್ಣಾಂಶದಲ್ಲಿ ಬೆಳೆಯುವ ಈ ಬೆಳೆಗೆ ಸೂರ್ಯನ ಬೆಳಕೂ ಅತ್ಯವಶ್ಯಕ. ಮಳೆ ಕಡಿಮೆಯಾದಲ್ಲಿ ನೀರಾವರಿ ಮೂಲಕ ನೀರು ಒದಗಿಸುವುದು ಸೂಕ್ತ ಎನ್ನುತ್ತಾರೆ ಡಾ.ವಿವೇಕ್.
 ಗಿಡ ಹೂವಾಗಿ ಐದು ತಿಂಗಳ ಅವಧಿಯಲ್ಲಿ ಹಣ್ಣು ಕೊಡುತ್ತದೆ. ನಂತರ ಹಣ್ಣನ್ನು ಬಿಡಿಸಿ ಅದರಲ್ಲಿನ ಬೀಜಗಳನ್ನು ಚೆನ್ನಾಗಿ ಒಣಗಿಸಿದರೆ ಒಂದು ಹಣ್ಣಿನಿಂದ ಸುಮಾರು 100 ಗ್ರಾಂ ಕೋಕೊಬೀಜ ದೊರೆಯುತ್ತದೆ. ಕಿಲೊ ಧಾರಣೆ ಈಗ 130-180 ರೂ ಇದ್ದು, ಎಕರೆ ಒಂದರಲ್ಲಿ ಸುಮಾರು ನಾಲ್ಕು ಕ್ವಿಂಟಲ್ ಕೋಕೊ ಉತ್ಪಾದನೆ ನಿರೀಕ್ಷಿಸಬಹುದಾಗಿದೆ. ಮೊದಲ ಬಾರಿಯ ನಂತರ ಕೇವಲ ನೀರು ಮತ್ತು ಸ್ವಲ್ಪ ಗೊಬ್ಬರ ಬಳಕೆ ಮಾಡಿದರೆ ಹೆಚ್ಚು ಇಳುವರಿಯೊಂದಿಗೆ ನಿರಂತರ ಲಾಭ ಗಳಿಸಬಹುದು ಎನ್ನುತ್ತಾರೆ ವಿವೇಕ್.

    ಡಾ.ವಿವೇಕ್ ಈ ಭೂಮಿಯಲ್ಲಿ ಒಂದು ಎಕರೆಗೆ 270 ಗಿಡಗಳಂತೆ ಸುಮಾರು 8500ಗಿಡಗಳನ್ನು ನಾಟಿ ಮಾಡಿದ್ದು, ಸಾಮಾನ್ಯವಾಗಿ ಮೂರು ವರ್ಷಕ್ಕೆ ಫಲ ನೀಡುವ ಕೋಕೊ ಗಿಡ ಉತ್ತಮ ಆರೈಕೆಯ ಫಲವಾಗಿ ಎರಡೂವರೆ ವರ್ಷಕ್ಕೇ ಫಲ ನೀಡಿದ್ದು ಈಗಾಗಲೇ ಕೊಯಿಲಿನ ಹಂತ ತಲುಪಿದೆ.    

 ಕೋಕೊ ಬೆಳೆಯುತ್ತಿದ್ದ ಶಿವಮೊಗ್ಗ ಮತ್ತು ತೀರ್ಥಹಳ್ಳಿಯ ಸ್ನೇಹಿತರ ಸಹಕಾರ ಮತ್ತು ಮಾರ್ಗದರ್ಶನದಿಂದ ಶಿವಮೊಗ್ಗದ ನರ್ಸರಿ ಒಂದರಿಂದ ಮತ್ತು ಕಡೂರು ತೋಟಗಾರಿಕಾ ಇಲಾಖೆ ಸಹಕಾರದಿಂದ ನಾಲ್ಕು ರೂ ವೆಚ್ಚದಲ್ಲಿ ಸಸಿ ಖರೀದಿಸಲಾಗಿದೆ. ಸಾಗಣೆ ವೆಚ್ಚ, ನಾಟಿ ಮಾಡಿದ ಖರ್ಚು ಮತ್ತು ಗೊಬ್ಬರ ಎಲ್ಲ ಸೇರಿ ಸಸಿಯೊಂದರ ನಾಟಿಗೆ ಸುಮಾರು 25-30ರೂ ವೆಚ್ಚ ತಗುಲಿದೆ. ಒಟ್ಟು ಮೂವತ್ತೈದು ಎಕರೆ ಪ್ರದೇಶದ ಬೆಳೆಯಿಂದ ಸುಮಾರು ಇಪ್ಪತ್ತು ಲಕ್ಷ ರೂ ಆದಾಯ ನಿರೀಕ್ಷಿಸಿದ್ದೇನೆ ಎನ್ನುತ್ತಾರೆ ಡಾ.ವಿವೇಕ್.
ಮಾಹಿತಿಗಾಗಿ ಡಾ.ವಿವೇಕ್  ಅವರನ್ನು ಸಂಪರ್ಕಿಸಬಹುದು. ದೂ: 9480028668 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT