ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರ ಎಡವಟ್ಟು- ಯುವಕನಿಗೆ ನರಕಯಾತನೆ

Last Updated 25 ಏಪ್ರಿಲ್ 2013, 19:39 IST
ಅಕ್ಷರ ಗಾತ್ರ

ಬೆಂಗಳೂರು: ರೋಗಿಗಳ ಪ್ರಾಣ ಉಳಿಸುವ ವೈದ್ಯರು ದೇವರಿಗೆ ಸಮಾನ ಎನ್ನುವ ಮಾತಿದೆ. ಆದರೆ ಇಲ್ಲೊಬ್ಬ ವೈದ್ಯರು ಮಾಡಿದ ಎಡವಟ್ಟು ಯುವಕನನ್ನು ಸಾವಿನ ದವಡೆಗೆ ತಳ್ಳುವ ಜತೆಗೆ ಇಡೀ ಕುಟುಂಬವನ್ನೇ ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ.

ರಾಜರಾಜೇಶ್ವರಿ ನಗರದ ಬಿ.ಎಚ್.ಎಂ.ಎಲ್. ಬಡಾವಣೆ ನಿವಾಸಿ, ರಿಯಲ್ ಎಸ್ಟೇಟ್ ಉದ್ಯಮಿ 34 ವರ್ಷದ ಎಂ.ಜಯಪ್ರಕಾಶ್ ಅವರು ಕಳೆದ ಎರಡು ವರ್ಷಗಳಿಂದ ಮಲಗಿದಲ್ಲೇ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಅವರ ಚಿಕಿತ್ಸೆಗೆ ರೂ. 1.25 ಕೋಟಿ ವೆಚ್ಚ ಮಾಡಿದರೂ ಹೆಚ್ಚಿನ ಪ್ರಯೋಜನವಾಗಿಲ್ಲ. ಈ ನರಕಯಾತನೆಗೆ ಸದಾಶಿವನಗರದ ನೋವಾ ಆಸ್ಪತ್ರೆಯ ಸಂದರ್ಶಕ ವೈದ್ಯ ಡಾ.ನಾಗೇಶ್ ಎಂಬುದು ಜಯಪ್ರಕಾಶ್ ಕುಟುಂಬದ ನೇರ ಆರೋಪ. 

ಸುಂದರ ಸಂಸಾರದ ಕನಸನ್ನು ಹೊತ್ತು ಜಯಪ್ರಕಾಶ್ ಅವರು 2010ರಲ್ಲಿ ಎಂಜಿನಿಯರಿಂಗ್ ಪದವೀಧರೆ ಪಿ.ಸೌಮ್ಯ ಅವರನ್ನು ವಿವಾಹವಾಗಿದ್ದರು. 2011ರಲ್ಲಿ ಇದ್ದಕ್ಕಿದ್ದಂತೆ ಜಯಪ್ರಕಾಶ್‌ಗೆ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿತು. ಮಣಿಪಾಲ್ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿಸಿ, ಅದರ ವರದಿಯನ್ನು ಪರಿಚಯವಿದ್ದ  ವೈದ್ಯ ಡಾ.ನಾಗೇಶ್ ಅವರಿಗೆ ತೋರಿಸಿದ್ದರು. ಆಗ ಪಿತ್ತಕೋಶದಲ್ಲಿ ಕಲ್ಲು ಇರುವುದನ್ನು ಡಾ.ನಾಗೇಶ್ ಪತ್ತೆ ಹಚ್ಚಿ, ನೋವಾ ಆಸ್ಪತ್ರೆಗೆ ಜಯಪ್ರಕಾಶ್‌ರನ್ನು ಕರೆಸಿ, ರೂ. 80 ಸಾವಿರ ಪಡೆದು ಶಸ್ತ್ರಚಿಕಿತ್ಸೆ ಮಾಡಿದ್ದರು.

ಅದಾದ ಬಳಿಕ ಡಾ.ನಾಗೇಶ್ ಎರಡು ದಿನವಾದರೂ ಆಸ್ಪತ್ರೆಯತ್ತ ತಲೆ ಹಾಕಲೇ ಇಲ್ಲ. ಶಸ್ತ್ರಚಿಕಿತ್ಸೆ ಮಾಡಿದ ಎರಡನೇ ದಿನ ಜಯಪ್ರಕಾಶ್ ಅವರ ಸ್ಥಿತಿ ಚಿಂತಾಜನಕವಾದ್ದರಿಂದ ತಕ್ಷಣ ಹೆಚ್ಚಿನ ಚಿಕಿತ್ಸೆಗಾಗಿ ಅಪೋಲೊ ಆಸ್ಪತೆಗೆ ದಾಖಲಿಸಲಾಯಿತು. ಅಲ್ಲಿನ ವೈದ್ಯರು ಪರೀಕ್ಷೆ ನಡೆಸಿದಾಗ ಕುಟುಂಬಕ್ಕೆ ಆಘಾತಕಾರಿ ಅಂಶ ಕಾದಿತ್ತು.

`ಈ ಹಿಂದೆ ಚಿಕಿತ್ಸೆ ನೀಡಿದ್ದ ವೈದ್ಯರು ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಪಿತ್ತಕೋಶವನ್ನೇ ತೆಗೆದು ಹಾಕಿದ್ದರು. ಅಲ್ಲದೇ ಕರುಳನ್ನು ಹರಿದು ಹಾಕಿದ್ದರು. ಶಸ್ತ್ರ ಚಿಕಿತ್ಸೆಯಿಂದ ಉಂಟಾದ ಸ್ರಾವವು ಹೃದಯ, ಶ್ವಾಸಕೋಶ, ಮೂತ್ರಕೋಶ, ಜಠರ ಮತ್ತು ಕರುಳಿಗೆ ಹರಡಿ ಸೋಂಕು ತಗುಲಿದೆ. ಶಸ್ತ್ರ ಚಿಕಿತ್ಸೆ ಮಾಡಿದರೂ, ಪ್ರಾಣ ಉಳಿಯುವ ಸಾಧ್ಯತೆ ಕಡಿಮೆ'  ಎಂದು ವೈದ್ಯರು ಹೇಳಿದ್ದರು.

`ದಿಕ್ಕು ತೋಚದ ನಾವು ಅಪೋಲೊ ಆಸ್ಪತ್ರೆಯಲ್ಲಿ ಮತ್ತೆ ಶಸ್ತ್ರಚಿಕಿತ್ಸೆ ಒಳಗಾಗಗಲು ಒಪ್ಪಿಕೊಂಡೆವು.  ಐದು ತಿಂಗಳ ಅವಧಿಯಲ್ಲಿ ನಾಲ್ಕು  ಶಸ್ತ್ರಚಿಕಿತ್ಸೆಯನ್ನು ಮಾಡಲಾಯಿತು. 1 ತಿಂಗಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಹಾಗೂ ನಾಲ್ಕು ತಿಂಗಳು ತೀವ್ರ ನಿಗಾ ಘಟಕದಲ್ಲಿ  ಜಯಪ್ರಕಾಶ್ ಇದ್ದರು. ಇಷ್ಟಾದರೂ ಡಾ.ನಾಗೇಶ್ ಮಾತ್ರ ರೋಗಿಯನ್ನು ವಿಚಾರಿಸುವ ಕನಿಷ್ಠ ಸೌಜನ್ಯ ಕೂಡ ತೋರಲಿಲ್ಲ.

ಕೊನೆಗೆ ತಮ್ಮಿಂದಾದ ತಪ್ಪಿಗೆ ಕ್ಷಮೆ ಕೋರಿ, ಚಿಕಿತ್ಸೆಯ ಎಲ್ಲಾ ಖರ್ಚನ್ನು ತಾನೇ ಭರಿಸುವ ಭರವಸೆಯನ್ನು ನೀಡಿದ್ದರು. ಕೆಲ ದಿನಗಳ ಬಳಿಕ ನಾವು ಹಣ ಕೇಳಿದಾಗ ತಗಾದೆ ತೆಗೆದ ಡಾ.ನಾಗೇಶ್, ತನ್ನ ಸಂಬಂಧಿಕ ಅಧಿಕಾರಿಯೊಬ್ಬರ ಮೂಲಕ ಬೆದರಿಕೆ ಹಾಕಿದ್ದರು. ಅಲ್ಲದೆ ಬೆದರಿಕೆ ಹಾಕಿ ನಮ್ಮ ವಿರುದ್ಧ  ಕೆಂಗೇರಿ ಪೊಲೀಸ್ ಠಾಣೆಯಲ್ಲಿ  ದೂರು ನೀಡಿದ್ದರು. ಅದಕ್ಕೆ ಪ್ರತಿಯಾಗಿ ನಾನು  ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿದ್ದ ಡಾ.ನಾಗೇಶ್ ಮತ್ತು ಡಾ.ರವೀಂದ್ರ ವಿರುದ್ಧ ದೂರು ನೀಡ್ದ್ದಿದೆ. ಇಷ್ಟಾದರೂ ಯಾವುದೇ ಕ್ರಮ ಕೈಗೊಳ್ಳದಿದ್ದಾಗ ನ್ಯಾಯಕ್ಕಾಗಿ ನೋವಾ ಆಸ್ಪತ್ರೆ ಮುಂದೆ ಪ್ರತಿಭಟನೆ ಮಾಡಿದ್ದೆವು' ಎನ್ನುತ್ತಾರೆ ಸೌಮ್ಯ. 

`ನಮ್ಮ ಪ್ರತಿಭಟನೆಗೆ ಮಣಿದು ನೋವಾ ಆಸ್ಪತ್ರೆಯ ಮುಖ್ಯಸ್ಥ ಸುರೇಶ್ ಸೋನಿ ಅವರ ಉಪಸ್ಥಿತಿಯಲ್ಲಿ ಸಂಧಾನ ಮಾತುಕತೆ ನಡೆದಾಗ, ಜಯಪ್ರಕಾಶ್ ಅವರ ಚಿಕಿತ್ಸೆಗೆ ತಗಲುವ ಎಲ್ಲಾ ಖರ್ಚನ್ನು  ಭರಿಸುವುದಾಗಿ ಸುರೇಶ್ ಸೋನಿ  ಭರವಸೆ ನೀಡಿದ್ದರು. ಆದರೆ ಹಣವನ್ನು ನಮ್ಮ ಕೈಗೆ ನೀಡದೆ, ನೇರವಾಗಿ ಅಪೋಲೊ ಆಸ್ಪತ್ರೆಗೆ ನೀಡಲಾಗುವುದು ಎಂದು ಹೇಳಿದ್ದರು. ಇದೀಗ ಆಸ್ಪತ್ರೆಯ ಬಿಲ್ಲು ರೂ. 65 ಲಕ್ಷ ಮೀರಿದೆ. ನೋವಾ ಆಸ್ಪತ್ರೆಯವರು ರೂ. 40 ಲಕ್ಷ ನೀಡಿ ಕೈಚೆಲ್ಲಿದ್ದಾರೆ' ಎನ್ನುವುದು ಸೌಮ್ಯ ಅವರ ಅಳಲು.
 
`ಅಪೋಲೊ ಆಸ್ಪತ್ರೆಯಿಂದ ಜಯಪ್ರಕಾಶ್ ಅವರನ್ನು ಇದೀಗ ಮನೆಗೆ ಸ್ಥಳಾಂತರಿಸಲಾಗಿದೆ. ಆದರೆ, ಅವರ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ.  ಹೊಟ್ಟೆಯ ಭಾಗಕ್ಕೆ ಶಸ್ತ್ರಚಿಕಿತ್ಸೆ ಮಾಡಿದ ರಂಧ್ರ ಇನ್ನೂ ಜೋಡಣೆಯಾಗಿಲ್ಲ. ತಿಂದ ಆಹಾರ ರಂಧ್ರದ ಮೂಲಕ ಹೊರಬರುತ್ತಿದೆ. ದಿನಕ್ಕೆ ನಾಲ್ಕು ಬಾರಿ ಮನೆಯಲ್ಲೇ ಡ್ರೆಸ್ಸಿಂಗ್ ಮಾಡುತ್ತಿದ್ದೇನೆ. ಇನ್ನೂ ಹೆಚ್ಚಿನ ಚಿಕಿತ್ಸೆಗೆ ಕೋಟ್ಯಂತರ ಹಣ ಬೇಕು. ಈ ನಡುವೆ ರಂಧ್ರ ಮುಚ್ಚಲು ಮಾಡಿದ ಪ್ಲಾಸ್ಟಿಕ್ ಸರ್ಜರಿ ಕೂಡ ಪ್ರಯೋಜನವಾಗಲಿಲ್ಲ.

ನಾವು ಜವಾಬ್ದಾರರಲ್ಲ
`ಜಯಪ್ರಕಾಶ್ ಅವರ ಚಿಕಿತ್ಸೆಯ ವೆಚ್ಚ ರೂ. 40 ಲಕ್ಷವನ್ನು ನಾವು ಮಾನವೀಯತೆಯಿಂದ ನೇರವಾಗಿ ಅಪೋಲೊ ಆಸ್ಪತ್ರೆಗೆ ಸಂದಾಯ ಮಾಡಿದ್ದೇವೆ. ಕಾನೂನು ಪ್ರಕಾರ ಹೋಗಿದ್ದರೆ ಒಂದು ರೂಪಾಯಿ ಕೊಡ ಬೇಕಾಗಿರಲಿಲ್ಲ. ಇನ್ನು ನಮ್ಮಿಂದ ಯಾವುದೇ ಹಣಕಾಸಿನ ನೆರವನ್ನು ನೀಡಲು ಸಾಧ್ಯವಿಲ್ಲ. ಈ ಅನಾಹುತಕ್ಕೆ ನಾವು ಹೊಣೆಗಾರರಲ್ಲ. ಇದರ ಜವಾಬ್ದಾರಿಯನ್ನು ಡಾ.ನಾಗೇಶ್ ತೆಗೆದುಕೊಳ್ಳಬೇಕು. ಇದೀಗ ನಮ್ಮ ಆಸ್ಪತ್ರೆಯಲ್ಲಿ ಡಾ.ನಾಗೇಶ್ ಕರ್ತವ್ಯ ನಿರ್ವಹಿಸುತ್ತಿಲ್ಲ'.
-ಎಂ.ಜಿ.ಭಟ್, ಮೆಡಿಕಲ್ ನಿರ್ದೇಶಕ, ನೋವಾ ಆಸ್ಪತ್ರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT