ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರ ಹೆಸರಿನಲ್ಲಿ ವಂಚನೆ

Last Updated 24 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಆಯುರ್ವೇದ ವೈದ್ಯರೆಂದು ಸುಳ್ಳು ಹೇಳಿಕೊಂಡು ಸಾರ್ವಜನಿಕರಿಗೆ ವಂಚಿಸುತ್ತಿದ್ದ ನಾಲ್ಕು ಮಂದಿಯನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

ಯಶವಂತಪುರ ಸಮೀಪದ ಮೋಹನ್‌ಕುಮಾರ್‌ನಗರ ನಿವಾಸಿಗಳಾದ ಆನಂದ ಉರುಫ್ ರಾಘವೇಂದ್ರ (24),ಶಿವ (32), ವಿರೂಪಾಕ್ಷ (30) ಮತ್ತು ರಾಜು (35) ಬಂಧಿತರು.

ಆರೋಪಿಗಳು ಕೋರಮಂಗಲ ಏಳನೇ ಹಂತದ ಒಂದನೇ ಅಡ್ಡರಸ್ತೆಯಲ್ಲಿ ಸಂಜೀವಿನಿ ಆಯುರ್ವೇದ ಹೆಸರಿನಲ್ಲಿ ಕ್ಲಿನಿಕ್ ನಡೆಸುತ್ತಿದ್ದರು. ಎಸ್ಸೆಸ್ಸೆಲ್ಸಿವರೆಗೆ ಓದಿದ್ದ ಅವರು ಆಯುರ್ವೇದ ವೈದ್ಯರೆಂದು ಸುಳ್ಳು ಹೇಳಿಕೊಂಡು ಹಲವು ವರ್ಷಗಳಿಂದ ಕ್ಲಿನಿಕ್ ನಡೆಸುತ್ತಿದ್ದರು. ಕೈ ಕಾಲು ನೋವು, ಹೃದಯ ಸಂಬಂಧಿ ಸಮಸ್ಯೆ ಮತ್ತಿತರ ಕಾಯಿಲೆಗಳಿಗೆ ನಕಲಿ ಆಯುರ್ವೇದ ಔಷಧಗಳನ್ನು ನೀಡಿ ಜನರಿಂದ ಹಣ ಪಡೆದು ವಂಚಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿ ಕ್ಲಿನಿಕ್ ಮೇಲೆ ದಾಳಿ ನಡೆಸಿ ಅವರೆಲ್ಲರನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರಿಂದ ಸುಮಾರು ಆರು ಲಕ್ಷ ರೂಪಾಯಿ ಮೌಲ್ಯದ ನಕಲಿ ಆಯುರ್ವೇದ ಔಷಧಗಳು, 50 ಸಾವಿರ ನಗದು, ನಾಲ್ಕು ಮೊಬೈಲ್ ಫೋನ್ ಮತ್ತಿತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಕೋರಮಂಗಲ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಬಂಧನ: ಕೊಲೆ ಮಾಡಲು ಹೊಂಚು ಹಾಕುತ್ತಿದ್ದ ರೌಡಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಮಾರಕಾಸ್ತ್ರಗಳು ಹಾಗೂ ಐದು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಶಂಕರಮಠ ಬಡಾವಣೆಯ ವೆಂಕಟೇಶ್ ಅಲಿಯಾಸ್ ಸ್ಲಂ ವೆಂಕಟೇಶ (20), ಪುರುಷೋತ್ತಮ (19), ಬಸವೇಶ್ವರನಗರದ ಎಂ.ಸಂಪತ್‌ರಾವ್ (20), ಜೆ.ಸಿ.ನಗರ ಕುರುಬರಹಳ್ಳಿಯ ಚರಣ್ (18), ಮೈಸೂರು ರಸ್ತೆಯ ರಂಜಿತ್ (23) ಮತ್ತು ಸಂತೋಷ ಉರುಫ್ ಅಪ್ಪು (21) ಬಂಧಿತರು.

ಆರೋಪಿಗಳು ನವೀನ್ ಅಲಿಯಾಸ್ ಕುಳ್ಳ ಎಂಬಾತನ ಸಹೋದರನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಈ ಉದ್ದೇಶಕ್ಕಾಗಿ ಅವರು ನಂದಿನಿಲೇಔಟ್‌ನ ಉದ್ಯಾನವೊಂದರ ಬಳಿ ಭಾನುವಾರ (ಜ.22) ರಾತ್ರಿ ಹೊಂಚು ಹಾಕುತ್ತಿದ್ದ ವೇಳೆ ಬಂಧಿಸಲಾಯಿತು. ಅವರ ಸಹಚರರಾದ ಮಣಿಕಂಠ, ಟೂರಿಸ್ಟ್ ಲೋಕಿ ಮತ್ತು ಪ್ರೀತಂ ಎಂಬುವರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಬಂಧಿತರ ವಿರುದ್ಧ ನಂದಿನಿಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನವೀನ್‌ನನ್ನು ಉದಯ್ ಎಂಬಾತ ರಾಜಗೋಪಾಲನಗರದ ಬಳಿ 2010ರಲ್ಲಿ ಕೊಲೆ ಮಾಡಿದ್ದ. ಈ ಪ್ರಕರಣದಲ್ಲಿ ಬಂಧಿತನಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಉದಯ್, ಮಣಿಕಂಠನನ್ನು ಸಂಪರ್ಕಿಸಿ ನವೀನ್‌ನ ಸಹೋದರನನ್ನು ಕೊಲೆ ಮಾಡುವಂತೆ ಸೂಚಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಬಂಧಿತರೆಲ್ಲ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳಾಗಿದ್ದಾರೆ. ಅವರ ವಿರುದ್ಧ ಬಸವೇಶ್ವರನಗರ, ನಂದಿನಿಲೇಔಟ್, ರಾಜಗೋಪಾಲನಗರ, ಸುಬ್ರಹ್ಮಣ್ಯನಗರ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ. ಬಸವೇಶ್ವರನಗರ ಠಾಣೆಯ ಕೊಲೆ ಪ್ರಕರಣವೊಂದರಲ್ಲಿ ಬಂಧಿತನಾಗಿ ಜೈಲು ಸೇರಿದ್ದ ಸಂಪತ್‌ರಾವ್ ಎರಡು ಬಾರಿ ತಪ್ಪಿಸಿಕೊಂಡು ಪರಾರಿಯಾಗಿದ್ದ. ತಲೆಮರೆಸಿಕೊಂಡಿರುವ ಮಣಿಕಂಠನ ವಿರುದ್ಧ ರಾಮಮೂರ್ತಿನಗರ, ಮಾಗಡಿ ರಸ್ತೆ, ಬಸವೇಶ್ವರನಗರ, ವೈಯಾಲಿಕಾವಲ್, ಸಿಲ್ವರ್‌ಜ್ಯುಬಿಲಿ ಪಾರ್ಕ್, ಸುಬ್ರಹ್ಮಣ್ಯನಗರ ಠಾಣೆಯಲ್ಲಿ ಒಂಬತ್ತಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಸರಗಳವು ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆತ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಏಳು ವಾರೆಂಟ್‌ಗಳು ಜಾರಿಯಾಗಿದ್ದವು ಎಂದು ಪೊಲೀಸರು ಹೇಳಿದ್ದಾರೆ.

ವೇಶ್ಯಾವಾಟಿಕೆ ಬಂಧನ: ಯುವತಿಯರನ್ನು ಗೃಹ ಬಂಧನದಲ್ಲಿಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಶಿವಸ್ವಾಮಿ (29) ಮತ್ತು ಚಿಕ್ಕಮಗಳೂರು ಜಿಲ್ಲೆಯ ಸಾಗರ್ (28) ಎಂಬುವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಮೂರು ಮೊಬೈಲ್ ಹಾಗೂ 500 ರೂ.  ಜಪ್ತಿ ಮಾಡಿದ್ದಾರೆ.

ಆರೋಪಿಗಳು ಸಂಜಯನಗರ ಸಮೀಪದ ಬಸವೇಶ್ವರಲೇಔಟ್‌ನ ಅಪಾರ್ಟ್‌ಮೆಂಟ್ ಒಂದರ ಫ್ಲಾಟ್‌ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿ ಅವರನ್ನು ಬಂಧಿಸಲಾಯಿತು. ಪ್ರಕರಣದ ಮತ್ತೊಬ್ಬ ಆರೋಪಿ ಕುಮಾರ್ ಎಂಬಾತ ಪರಾರಿಯಾಗಿದ್ದಾನೆ. ಬಂಧಿತರ ವಿರುದ್ಧ ಸಂಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT