ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರಲ್ಲಿ ಸೇವಾ ಬದ್ಧತೆ ಕಣ್ಮರೆ

ಅಕ್ಷರ ಗಾತ್ರ

ವೈದ್ಯರಿಗೆ ಮೊದಲು ಸೇವಾಬದ್ಧತೆ ಇರಬೇಕು. ರೋಗಿಯ ಜೀವ ಕಾಪಾಡುವುದೇ ವೈದ್ಯವೃತ್ತಿಯ ಧ್ಯೇಯ. ಜೀವ ತೆಗೆಯುವ ಹಕ್ಕು ಇಲ್ಲ. ಪ್ರಸ್ತುತ ವೃತ್ತಿಬದ್ಧತೆ ಕಡಿಮೆಯಾಗುತ್ತಿದೆ.

ಹೀಗಾಗಿ, ಸಣ್ಣಪುಟ್ಟ ಸಮಸ್ಯೆ ಮುಂದಿಟ್ಟುಕೊಂಡು ವೈದ್ಯರು ಮುಷ್ಕರಕ್ಕೆ ಇಳಿಯುತ್ತಾರೆ. ಸರ್ಕಾರಿ ವೈದ್ಯಾಧಿಕಾರಿಗಳಿಗೆ ರಾಜ್ಯ ಸರ್ಕಾರ ಸಾಕಷ್ಟು ಸೌಲಭ್ಯ ನೀಡಿದೆ. ಈ ನಡುವೆಯೂ ಮುಷ್ಕರ ನಡೆಸಿ ರೋಗಿಗಳಿಗೆ ತೊಂದರೆ ನೀಡಿದ್ದು, ದೊಡ್ಡ ತಪ್ಪು.

2000ದಿಂದ 2003ರವರೆಗೆ ರಾಜ್ಯ ಸರ್ಕಾರ ರಚಿಸಿದ್ದ `ಆರೋಗ್ಯ ಕಾರ್ಯಪಡೆ'ಗೆ ನಾನು ಅಧ್ಯಕ್ಷನಾಗಿದ್ದೆ. ಆರೋಗ್ಯ ಕ್ಷೇತ್ರದ ಸುಧಾರಣೆ ಸಂಬಂಧ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೆ. ಇದರಲ್ಲಿ ಶೇ. 80ರಷ್ಟು ಶಿಫಾರಸುಗಳು ಅನುಷ್ಠಾನಗೊಂಡಿವೆ.
 
ಪ್ರಸ್ತುತ ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವ 10 ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗಳನ್ನು ಮರಳಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ನೀಡಬೇಕು ಎಂದು ವೈದ್ಯರು ಪ್ರಮುಖ ಬೇಡಿಕೆ ಮುಂದಿಟ್ಟಿದ್ದಾರೆ. ಆದರೆ, ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘವೇ ಈ ಹಿಂದೆ ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಜಿಲ್ಲಾ ಆಸ್ಪತ್ರೆ ಸೇರ್ಪಡೆಗೊಳಿಸಬೇಕು ಎಂಬ ಒತ್ತಾಯ ಮಂಡಿಸಿತ್ತು.

ಈಗ ಆಸ್ಪತ್ರೆಗಳನ್ನು ಆರೋಗ್ಯ ಇಲಾಖೆ ವ್ಯಾಪ್ತಿಗೆ ನೀಡಬೇಕೆಂದು ವಾದ ಮಂಡಿಸುತ್ತಿರುವುದು ವಿಪರ್ಯಾಸ! ಸಕಾಲದಲ್ಲಿ ಸಂಬಳ ನೀಡಬೇಕು ಎಂಬುದು ಮುಷ್ಕರನಿರತರಾಗಿದ್ದ ವೈದ್ಯರ ಮತ್ತೊಂದು ಬೇಡಿಕೆ. ಇದಕ್ಕೂ ಸರ್ಕಾರ ಸ್ಪಂದಿಸಿದೆ. ರಾಷ್ಟ್ರೀಯ ವೈದ್ಯಕೀಯ ಮಂಡಳಿಯ ನಿಯಮಾವಳಿ ಅನ್ವಯ, ಜಿಲ್ಲಾ ಆಸ್ಪತ್ರೆಯು ವೈದ್ಯಕೀಯ ಕಾಲೇಜಿನ ಅಧೀನದಲ್ಲಿರಬೇಕು.

ಇದು ವೈದ್ಯಕೀಯ ವಿದ್ಯಾರ್ಥಿಗಳ ಕಲಿಕಾ ದೃಷ್ಟಿಯಿಂದ ಒಳ್ಳೆಯದು. ಆದರೆ, ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಸೇರಿದರೆ ನಮಗೆ ವೃತ್ತಿಯಲ್ಲಿ ಬಡ್ತಿ ಸಿಗುವುದಿಲ್ಲ ಎಂಬ ಆತಂಕ ಈಗ ಸರ್ಕಾರಿ ವೈದ್ಯರಿಗೆ ಕಾಡುತ್ತಿದೆ.

ಆರೋಗ್ಯ ಕಾರ್ಯಪಡೆ ಸಲ್ಲಿಸಿರುವ ವರದಿಯಲ್ಲಿಯೇ ಇದಕ್ಕೆ ಪರಿಹಾರ ಕೂಡ ಸೂಚಿಸಲಾಗಿದೆ. ಬೋಧನಾ ವೈದ್ಯರನ್ನು ಮಾತ್ರವೇ ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಸೇರಿಸಬೇಕು. ಉಳಿದ ವೈದ್ಯರು ಸೇರಿದಂತೆ ವೈದ್ಯಕೀಯೇತರ ಎಲ್ಲ ಸಿಬ್ಬಂದಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿಯೇ ಉಳಿಸಿಕೊಳ್ಳಬೇಕು ಎಂದು ಶಿಫಾರಸು ಮಾಡಲಾಗಿದೆ.

ಜತೆಗೆ, ವೈದ್ಯಕೀಯ ಶಿಕ್ಷಣ ಇಲಾಖೆಗೆ ಕಾರ್ಯದರ್ಶಿ ಇರುತ್ತಾರೆ. ಆರೋಗ್ಯ ಇಲಾಖೆಯ ಉನ್ನತ ಸ್ಥಾನದಲ್ಲಿ ಪ್ರಧಾನ ಕಾರ್ಯದರ್ಶಿ ಇರುತ್ತಾರೆ. ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯು, ಆರೋಗ್ಯ ಇಲಾಖೆಯಡಿಯೇ ಕಾರ್ಯ ನಿರ್ವಹಿಸಬೇಕು. ಆಗ ಸಮಸ್ಯೆ ತಲೆದೋರುವುದಿಲ್ಲ. ಕಾರ್ಯಪಡೆ ಸಲ್ಲಿಸಿರುವ ವರದಿ ಸಮರ್ಪಕವಾಗಿ ಜಾರಿಯಾಗಿದ್ದರೆ ವೈದ್ಯರ ಮುಷ್ಕರದ ಸಮಸ್ಯೆ ಉದ್ಭವಿಸುತ್ತಿರಲಿಲ್ಲ.

ಆರೋಗ್ಯ ಇಲಾಖೆಯ ಪ್ರಧಾನ ಹಂತದಲ್ಲಿ ಭ್ರಷ್ಟತೆ ಇಣುಕಬಾರದು. ಪ್ರಸ್ತುತ ವೈದ್ಯರ ವರ್ಗಾವಣೆಯಲ್ಲಿ ಪಾರದರ್ಶಕತೆ ಇದೆ. ಈಗಿನ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಈ ನಿಟ್ಟಿನಲ್ಲಿ ಉತ್ತಮವಾಗಿಯೇ ಕಾರ್ಯ ನಿರ್ವಹಿಸುತ್ತಿದ್ದಾರೆ.

ವೈದ್ಯಕೀಯ ಶಿಕ್ಷಣ, ಆರೋಗ್ಯ ಸಚಿವರು ಪ್ರಾಮಾಣಿಕರಾಗಿರಬೇಕು. ಒಟ್ಟಾರೆ ಆರೋಗ್ಯ ಇಲಾಖೆಯು ಭ್ರಷ್ಟಾಚಾರದಿಂದ ಮುಕ್ತವಾಗಿರಬೇಕು. ಯಾವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪ್ರಾಮಾಣಿಕರಾಗಿ ಇರುತ್ತಾರೋ ಆ ಜಿಲ್ಲೆಯಲ್ಲಿ ಆರೋಗ್ಯ ಸಮಸ್ಯೆ ಇರುವುದಿಲ್ಲ. ಉನ್ನತಮಟ್ಟದಲ್ಲಿ ಲೋಪವಿದ್ದರೆ ಕೆಳಹಂತದ ಅಧಿಕಾರಿಗಳು ಕೂಡ ಹಿಡಿತಕ್ಕೆ ಸಿಗುವುದಿಲ್ಲ.

ಪ್ರಸ್ತುತ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುವ ವೈದ್ಯರಿಗೆ ಮಾಸಿಕ ಗ್ರಾಮೀಣ ಭತ್ಯೆ ನೀಡಲಾಗುತ್ತಿದೆ. ಹೀಗಾಗಿ, ವೈದ್ಯರು ಕೇಂದ್ರಸ್ಥಾನದಲ್ಲಿಯೇ ವಾಸ್ತವ್ಯ ಇರಬೇಕು. ಆದರೆ, ಈ ನಿಯಮದ ಉಲ್ಲಂಘನೆ ಹೆಚ್ಚುತ್ತಿದೆ. ಕೆಲವು ಜಿಲ್ಲೆಗಳಲ್ಲಿ ಗ್ರಾಮೀಣ ಭತ್ಯೆ ದುರುಪಯೋಗವಾಗಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಮುಷ್ಕರ ಮಾಡುವಾಗ ಈ ಬಗ್ಗೆಯೂ ವೈದ್ಯರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಆಗ ವೃತ್ತಿಧರ್ಮದ ಮಹತ್ವ ಅರಿವಿಗೆ ಬರುತ್ತದೆ.

ರಾಜ್ಯ ಸರ್ಕಾರ ಮಂಡಿಸುವ ಒಟ್ಟು ಬಜೆಟ್‌ನಲ್ಲಿ ಶೇ. 7ರಷ್ಟು ಹಣವನ್ನು ಆರೋಗ್ಯ ಕ್ಷೇತ್ರಕ್ಕೆ ಮೀಸಲು ಇಡ ಬೇಕಾಗಿದೆ. ಕಾರ್ಯಪಡೆ ಸಲ್ಲಿಸಿರುವ ವರದಿಯಲ್ಲಿ ಈ ಬಗ್ಗೆ ಪ್ರಧಾನವಾಗಿ ಒತ್ತಿ ಹೇಳಲಾಗಿದೆ. ಆದರೆ, ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಶೇ. 4ರಷ್ಟು ಅನುದಾನ ಮೀಸಲಿಟ್ಟರೆ ಪುಣ್ಯ ಎನ್ನುವಂತಾಗಿದೆ.

ಕೇರಳ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಒಟ್ಟು ಬಜೆಟ್‌ನಲ್ಲಿ ಶೇ. 7ರಷ್ಟು ಹಣ ನಿಗದಿಪಡಿಸುತ್ತದೆ. ಸಕಾಲದಲ್ಲಿ ಆ ಅನುದಾನ ಬಿಡುಗಡೆ ಆಗುತ್ತದೆ. ಹೀಗಾಗಿ, ಆ ರಾಜ್ಯದಲ್ಲಿ ಆರೋಗ್ಯ ಕ್ಷೇತ್ರ ಸಾಕಷ್ಟು ಸುಧಾರಣೆ ಕಂಡಿದೆ. ಅಂತಹ ವಾತಾವರಣ ಕರ್ನಾಟಕದಲ್ಲಿ ಸೃಷ್ಟಿಯಾದರೆ ಚೆನ್ನ.
 
ಜತೆಗೆ, ಕೇರಳದಲ್ಲಿ ಪ್ರತ್ಯೇಕ `ಸಾರ್ವಜನಿಕ ಆರೋಗ್ಯ ವ್ಯವಸ್ಥೆ'ಯಿದೆ. ಈ ವ್ಯವಸ್ಥೆಯಡಿ ಆರೋಗ್ಯ ಕ್ಷೇತ್ರದ ವಿವಿಧ ಹಂತದ ಹುದ್ದೆಗಳಿಗೆ ಸಮರ್ಥ ಅಧಿಕಾರಿಗಳ ನೇಮಕಕ್ಕೆ ಅವಕಾಶವಿದೆ. ಇಂತಹ ವ್ಯವಸ್ಥೆ ರಾಜ್ಯದಲ್ಲಿಯೂ ಜಾರಿಯಾಗಬೇಕು. ಈ ಬಗ್ಗೆಯೂ ಕಾರ್ಯಪಡೆ ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ಎಲ್ಲ ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಡರೋಗಿಗಳಿಗೆ ಖಾಸಗಿ ಅಂಗಡಿಯಲ್ಲಿ ಔಷಧಿ ಖರೀದಿಸುವಂತೆ ವೈದ್ಯರು ಸೂಚಿಸುತ್ತಾರೆ. ಈ ಪದ್ಧತಿಗೆ ತಿಲಾಂಜಲಿ ನೀಡಬೇಕಿದೆ. ಹೀಗಾಗಿ, ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಹಣ ಮೀಸಲಿಡಬೇಕಿದೆ. ಉತ್ತಮವಾಗಿ ಸೇವೆ ಸಲ್ಲಿಸುವ ವೈದ್ಯರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಅಂತಹವರಿಗೆ ನೀಡುವ ಸಂಬಳದಲ್ಲಿ ತಾರತಮ್ಯ ಸಲ್ಲದು.

ಪ್ರಸ್ತುತ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಪಡೆಯಲು ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುತ್ತಿರುವುದು ಸರ್ವೇಸಾಮಾನ್ಯ. ಹಣ ನೀಡಿ ವೈದ್ಯಕೀಯ ಶಿಕ್ಷಣ ಪಡೆದ ವೈದ್ಯನಿಂದ ಸಮಾಜ ಸೇವೆ ನಿರೀಕ್ಷಿಸುವುದು ಕಷ್ಟಕರ. ಕಾಲೇಜು ಹಂತದಲ್ಲಿಯೇ ವೈದ್ಯವೃತ್ತಿಯ ಮಹತ್ವ ಕುರಿತು ವಿದ್ಯಾರ್ಥಿಗಳಿಗೆ ತಿಳಿವಳಿಕೆ ಮೂಡಿಸಬೇಕಿದೆ.

ಈ ನಿಟ್ಟಿನಲ್ಲಿ ಪ್ರಯತ್ನವೇ ನಡೆಯುತ್ತಿಲ್ಲ. ಹೀಗಾಗಿ, ಗ್ರಾಮೀಣ ಪ್ರದೇಶಕ್ಕೆ ಹೋಗಿ ಸೇವೆ ಸಲ್ಲಿಸುವ ವೈದ್ಯರ ಸಂಖ್ಯೆ ಕಡಿಮೆ. ಬೆರಳೆಣಿಕೆಯಷ್ಟು ವೈದ್ಯರು ಕಡುಬಡವರ ಸೇವೆಗೆ ಜೀವನ ಮೀಸಲಿಡುತ್ತಾರೆ. ಅಂತಹವರ ಸಂಖ್ಯೆ ಹೆಚ್ಚಾಗಲಿ ಎನ್ನುವುದು ನನ್ನ ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT