ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಶಿಕ್ಷಣದ ಕರ್ಮಕಾಂಡ

Last Updated 3 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು ಪೊಲೀಸರು ಬಯಲು ಮಾಡಿರುವ ರಾಜ್ಯದ ವೈದ್ಯಕೀಯ ಶಿಕ್ಷಣ ಕ್ಷೇತ್ರದ ಹಗರಣ ಬೆಚ್ಚಿಬೀಳಿಸುವಂತಿದೆ. ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಮಟ್ಟದಲ್ಲಿಯೇ ಪ್ರಾರಂಭವಾಗುವ ಈ ಅಕ್ರಮದ ಜಾಲ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ದೊರಕಿಸಿಕೊಡುವವರೆಗೆ ಚಾಚಿದೆ.

ವೈದ್ಯಕೀಯ ಕಾಲೇಜುಗಳ ಆಡಳಿತಗಾರರು, ಪ್ರಾಧ್ಯಾಪಕರು, ಅಧಿಕಾರಿಗಳು ಮತ್ತು ಅಪರಾಧ ಜಗತ್ತಿನ ಕುಖ್ಯಾತರೆಲ್ಲರೂ ಇದರಲ್ಲಿ ಷಾಮೀಲಾಗಿದ್ದಾರೆ. ಈ ಜಾಲಕ್ಕೆ ಸಂಬಂಧಿಸಿ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ರಾಜಕಾರಣಿಗಳ ಹೆಸರು ಇಲ್ಲಿಯ ವರೆಗೆ ನೇರವಾಗಿ ಕಾಣಿಸಿಕೊಳ್ಳದಿದ್ದರೂ ರಾಜಕೀಯ ಆಶೀರ್ವಾದ ಇಲ್ಲದೆ ಇಂತಹ ಅಕ್ರಮಗಳು ನಡೆಯಲು ಸಾಧ್ಯ ಇಲ್ಲ ಎನ್ನುವುದನ್ನು ಈ ವರೆಗಿನ ಅನುಭವ ಹೇಳುತ್ತದೆ.

ರಾಜ್ಯದಲ್ಲಿ ಸಿಇಟಿ ಜಾರಿಗೆ ಬಂದಾಗ, ಇದು ಉನ್ನತ ಶಿಕ್ಷಣ ಕ್ಷೇತ್ರಕ್ಕೆ ತಗಲಿರುವ ಎಲ್ಲ ರೋಗಗಳನ್ನು ನಿವಾರಣೆ ಮಾಡಲಿದೆ ಎಂದೇ ಎಲ್ಲರೂ ನಂಬಿದ್ದರು. ಹೊಸ ವ್ಯವಸ್ಥೆ ಶಿಕ್ಷಣದ ವ್ಯಾಪಾರೀಕರಣವನ್ನು ನಿಯಂತ್ರಿಸಿ ಸಾಮಾನ್ಯ ಕುಟುಂಬಗಳ ವಿದ್ಯಾರ್ಥಿಗಳೂ ಉನ್ನತ ಶಿಕ್ಷಣವನ್ನು ಪಡೆಯುವ ಅವಕಾಶ ಕಲ್ಪಿಸಲಿದೆ ಎಂಬ ನಿರೀಕ್ಷೆ ಇತ್ತು. ಪ್ರಾರಂಭದ ವರ್ಷಗಳಲ್ಲಿ ಈ ನಿರೀಕ್ಷೆ ಸಾಕಾರಗೊಂಡಿದ್ದು ಕೂಡಾ ನಿಜ.

ಆದರೆ ರಾಜ್ಯಸರ್ಕಾರದ ಇತ್ತೀಚಿನ ಕೆಲವು ನಿರ್ಧಾರಗಳಿಂದಾಗಿ ಸಿಇಟಿ ಗೊಂದಲದ ಗೂಡಾಗಿ ಹೋಗಿ ವಿದ್ಯಾರ್ಥಿಗಳು ಬವಣೆಪಡುವಂತಾಗಿದೆ. ಈ ನಡುವೆ ಸಿಇಟಿ ವ್ಯವಸ್ಥೆಯನ್ನೇ ರದ್ದು ಮಾಡುವ ಪ್ರಯತ್ನವನ್ನೂ ಸರ್ಕಾರ ಮಾಡಿತ್ತು. ಈಗ ಅದರಲ್ಲಿಯೂ ಅಕ್ರಮಗಳು ನಡೆಯುತ್ತಿರುವುದು ಬೆಳಕಿಗೆ ಬಂದಿದೆ.

ವೃತ್ತಿಶಿಕ್ಷಣದ ಕೋರ್ಸ್‌ಗಳ ಪ್ರವೇಶದಲ್ಲಿ ನಡೆಯುತ್ತಿದ್ದ ಅಕ್ರಮ ಮತ್ತು ಸುಲಿಗೆಯನ್ನು ತಡೆಯಲಿಕ್ಕಾಗಿಯೇ ರಾಜ್ಯದಲ್ಲಿ ಬಂದ ವ್ಯವಸ್ಥೆ ಸಿಇಟಿ. ಇದಕ್ಕೆ ಸುಪ್ರೀಂ ಕೋರ್ಟ್ ತೀರ್ಪಿನ ಬೆಂಬಲವೂ ಇದ್ದ ಕಾರಣ ವೃತ್ತಿಶಿಕ್ಷಣ ಕಾಲೇಜುಗಳ ಒಡೆಯರು ಅನಿವಾರ‌್ಯವಾಗಿ ಅದನ್ನು ಒಪ್ಪಿಕೊಳ್ಳಬೇಕಾಯಿತು.

ಆದರೆ ಇದರಿಂದಾಗಿ ತಮ್ಮ ಹಣದ ಚೀಲಕ್ಕೆ ತೂತಾಗುತ್ತಿರುವುದನ್ನು ಕಂಡ ಅವರು ಸಿಇಟಿ ವ್ಯವಸ್ಥೆಯನ್ನು ವಿಫಲಗೊಳಿಸಲು ನಿರಂತರವಾಗಿ ಪ್ರಯತ್ನ ನಡೆಸುತ್ತಾ ಬಂದಿದ್ದಾರೆ. ಈಗ ಬಯಲಾಗಿರುವ ಹಗರಣ ಕೂಡಾ ಇದೇ ಸಾಲಿಗೆ ಸೇರಿದ್ದಾಗಿದೆ. ಇದು ಕೇವಲ ಭ್ರಷ್ಟಾಚಾರದ ಹಗರಣ ಅಲ್ಲ, ಅರ್ಹತೆ ಇಲ್ಲದೆ ಕೇವಲ ದುಡ್ಡಿನ ಬಲದಿಂದ ವೈದ್ಯರಾಗುವವರ ಕೈಗೆ ಸಿಕ್ಕ ರೋಗಿಗಳ ಬದುಕಿನ ಪ್ರಶ್ನೆಯೂ ಇದರಲ್ಲಿದೆ.

ಅಡಿಯಿಂದ ಮುಡಿವರೆಗೆ ಭ್ರಷ್ಟರೇ ತುಂಬಿಕೊಂಡಿರುವ ವ್ಯವಸ್ಥೆಯಲ್ಲಿ ಎಲ್ಲರೂ ಅಕ್ರಮ ಗಳಿಕೆಯಲ್ಲಿ ಪಾಲುದಾರರಾಗಿದ್ದಾರೆ. ವೈದ್ಯಕೀಯ ಶಿಕ್ಷಣದ ಕಾರ್ಯನಿರ್ವಹಣೆಯ ಮೇಲೆ ನಿಗಾ ಇಡಬೇಕಾಗಿರುವ `ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ~ಯ ಕೆಲವು ವೈದ್ಯರು ಕೂಡಾ ಇದರಲ್ಲಿ ಕೈಜೋಡಿಸಿರುವುದು ಆಘಾತಕಾರಿ ಬೆಳವಣಿಗೆ.
 
ರಾಜಕೀಯದ ಜತೆ ಪ್ರತ್ಯಕ್ಷ ಮತ್ತು ಪರೋಕ್ಷ ಸಂಬಂಧ ಇರುವವರೇ ರಾಜ್ಯದಲ್ಲಿ ಹೆಚ್ಚಿನ ವೃತ್ತಿಶಿಕ್ಷಣದ ಕಾಲೇಜುಗಳನ್ನು ನಡೆಸುತ್ತಿರುವುದರಿಂದ ತಪ್ಪಿತಸ್ಥರಿಗೆ ಶಿಕ್ಷೆಯಾಗಬಹುದೆಂಬ ಭರವಸೆ ಜನತೆಗಿಲ್ಲ.

ಈ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿ ಹಗರಣದಲ್ಲಿ ಷಾಮೀಲಾದವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವ ಸಂಸ್ಥೆಗಳೂ ಇದರಲ್ಲಿ ಸೇರಿಕೊಂಡಿರುವುದರಿಂದ ಅಗತ್ಯ ಬಿದ್ದರೆ ತನಿಖೆಗಾಗಿ ಸಿಬಿಐ ನೆರವು ಪಡೆಯಲು ಕೂಡಾ ಹಿಂಜರಿಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT