ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಾಧಿಕಾರಿ ಎತ್ತಂಗಡಿ: ಸಿಬ್ಬಂದಿ ದಿಢೀರ್ ಮುಷ್ಕರ

Last Updated 4 ಅಕ್ಟೋಬರ್ 2012, 5:20 IST
ಅಕ್ಷರ ಗಾತ್ರ

ಕುಷ್ಟಗಿ:  ಇಲ್ಲಿಯ ಸಾರ್ವಜನಿಕ ಆಸ್ಪತ್ರೆಯ ಆಡಳಿತಾತ್ಮಕ ವೈದ್ಯಾಧಿಕಾರಿ ಡಾ.ಕೆ.ಎಸ್.ರೆಡ್ಡಿ ಅವರನ್ನು ಆಸ್ಪತ್ರೆಯಿಂದ ತಕ್ಷಣ ಎತ್ತಂಗಡಿ ಮಾಡುವಂತೆ ತಾಲ್ಲೂಕು ಆರೋಗ್ಯಾಧಿಕಾರಿಯನ್ನು ಒತ್ತಾಯಿಸಿದ ಆರೋಗ್ಯ ರಕ್ಷಾ ಸಮಿತಿ ಕೆಲ ಸದಸ್ಯರ ವರ್ತನೆಗೆ ಬೇಸತ್ತ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಬುಧವಾರ ದಿಢೀರ್ ಪ್ರತಿಭಟನೆಗೆ ಮುಂದಾದ ಘಟನೆ ನಡೆಯಿತು.

ಈ ಮಧ್ಯೆ ತಮ್ಮನ್ನು ಬಿಡುಗಡೆ ಮಾಡುವಂತೆ ಡಾ.ಕೆ.ಎಸ್.ರೆಡ್ಡಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಆನಂದ ಗೋಟೂರು ಅವರಿಗೆ ಹೇಳಿದ ವಿಷಯ ತಿಳಿದು ಟಿಎಚ್‌ಒ ಕಚೇರಿಗೆ ಧಾವಿಸಿದ ಡಿ ದರ್ಜೆ ನೌಕರರು, ಸ್ಟಾಫ್‌ನರ್ಸ್ ಸೇರಿದಂತೆ ಎಲ್ಲರೂ, ಸಮಿತಿಯ ಸದಸ್ಯರಾದ ಅಡಿವೆಪ್ಪ ಕೊನಸಾಗರ ಮತ್ತು ನಬಿಸಾಬ್ ಕೊಳ್ಳಿ ಅವರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದರಲ್ಲದೇ `ಇಂದು ಡಾ.ರೆಡ್ಡಿ ಬೇಡವೆನ್ನುತ್ತಾರೆ, ನಾಳೆ ಇನ್ನೊಬ್ಬರಿಗೂ ಅದೇ ರೀತಿ ಹೇಳುತ್ತಾರೆ, ನಿತ್ಯ ಕಿರುಕುಳ ಅನುಭವಿಸುವುದಕ್ಕಿಂತ ಹೋಗುವುದೇ ಮೇಲು, ನಮ್ಮನ್ನೂ ಬಿಡುಗಡೆ ಮಾಡಿ~ ಎಂದು ಡಾ.ಗೋಟೂರು ಅವರನ್ನು ಒತ್ತಾಯಿಸತೊಡಗಿದರು.

ಕೆಲಸ ಸ್ಥಗಿತಗೊಳಿಸಿದ್ದರಿಂದ ಸುಮಾರು ಒಂದು ತಾಸಿನವರೆಗೂ ಆಸ್ಪತ್ರೆಯಲ್ಲಿ ರೋಗಿಗಳು ಪರದಾಡು ವಂತಾಯಿತು. ರೋಗಿಗಳ ಸಂಬಂಧಿಕರು, ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿದ್ದರಿಂದ ಗೊಂದಲದ ಪರಿಸ್ಥಿತಿ ಉಂಟಾಗಿತ್ತು. ಘಟನೆ ಹಿನ್ನೆಲೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಮಹದೇವ ಪಂಚಮುಖಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಸ್ಥಿತಿ ತಿಳಿಗೊಳಿಸಿದರು.

ಇದೇ ಸಂದರ್ಭದಲ್ಲಿ ತಳುವಗೇರಾ ಗ್ರಾಮಕ್ಕೆ ಸೇರಿದ ಮಹಿಳೆಯೊಬ್ಬರಿಗೆ ವಿಷ ಪ್ರಾಶನವಾಗಿದ್ದರಿಂದ ಕೆಲಹೊತ್ತು ಚಿಕಿತ್ಸೆದೊರೆಯದೇ ತೊಂದರೆ ಉಂಟಾಗಿತ್ತು. ಪ್ರತಿಭಟನೆಗಿಳಿದ ವೈದ್ಯರು ಮತ್ತು ಸಿಬ್ಬಂದಿಯನ್ನು ಸಮಾಧಾನಪಡಿಸಿದ ಡಾ. ಗೋಟೂರು ಮತ್ತೆ ಕೆಲಸಕ್ಕೆ ಕಳುಹಿಸುವಲ್ಲಿ ಯಶಸ್ವಿಯಾದರು.

ಆಗಿದ್ದೇನು:
ಬುಧವಾರ ಬೆಳಿಗ್ಗೆ ಟಿಎಚ್‌ಓ ಡಾ.ಗೋಟೂರು ಅವರನ್ನು ಭೇಟಿ ಮಾಡಲು ಕಚೇರಿಗೆ ಬಂದ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಅಡಿವೆಪ್ಪ ಕೊನಸಾಗರ, ನಬಿಸಾಬ್ ಕೊಳ್ಳಿ ಮತ್ತು ಕಾಂಗ್ರೆಸ್ ಕಾರ್ಯಕರ್ತ ಅನ್ವರ್ ಅತ್ತಾರ, ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಅಮರೇಗೌಡ ಬಯ್ಯಾಪುರ ಅವರು ಡಾ.ರೆಡ್ಡಿಯವರನ್ನು ರಿಲಿವ್ ಮಾಡಿ ಎಂದು ಹೇಳಿದರೂ ಏಕೆ ಇಟ್ಟುಕೊಂಡಿದ್ದೀರಿ, ಈಗಲೇ ಬಿಡುಗಡೆ ಮಾಡಿ ಎಂದು ಪಟ್ಟು ಹಿಡಿದಿದ್ದರು.

ಅದಕ್ಕೆ ನಿರಾಕರಿಸಿದ ಡಾ.ಗೋಟೂರು, ಸಭೆಯ ನಂತರ ಸ್ವತಃ ಶಾಸಕರೇ ವೈದ್ಯರೊಂದಿಗೆ ಸಭೆ ನಡೆಸಿದ್ದಾರೆ, ನ್ಯೂನತೆಗಳನ್ನು ಸರಿಪಡಿಸಿಕೊಳ್ಳಿ, ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದಿದ್ದಾರೆ ಅಲ್ಲದೇ ಡಾ.ರೆಡ್ಡಿ ಅವರನ್ನು ಬಿಡುಗಡೆ ಮಾಡದಂತೆ ಸೂಚಿಸಿದ್ದಾರೆ ಎಂದು ಹೇಳಿದರು. ಆದರೂ ಅಡಿವೆಪ್ಪ ಮತ್ತು ನಬಿಸಾಬ್, ಅನ್ವರ್ ಅತ್ತಾರ ಪಟ್ಟು ಸಡಿಲಿಸಲಿಲ್ಲ, ಈ ಹಂತದಲ್ಲಿ ಡಾ.ರೆಡ್ಡಿ ಅಲ್ಲಿಗೆ ಆಗಮಿಸಿದಾಗ ಮತ್ತಷ್ಟು ಗೊಂದಲ ಸೃಷ್ಟಿಯಾಗಿತ್ತು.

ವೈದ್ಯಾಧಿಕಾರಿಯನ್ನು ಬಿಡುಗಡೆ ಮಾಡುವಂತೆ ಸದಸ್ಯರು ಒತ್ತಡ ಹೇರಿದ ಮತ್ತು ಆಸ್ಪತ್ರೆ ಆವರಣದಲ್ಲಿ ಗೊಂದಲ ಸೃಷ್ಟಿಯಾಗಿದ್ದನ್ನು ಡಾ.ಗೋಟೂರು ಗಮನಕ್ಕೆ ತಂದಾಗ, ಬಿಡುಗಡೆ ಮಾಡದಂತೆ ಶಾಸಕ ಬಯ್ಯಾಪುರ ಮತ್ತೆ ಸೂಚಿಸಿದ್ದಾರೆ.

ಹಿನ್ನೆಲೆ: ಅ.1ರಂದು ಶಾಸಕ ಬಯ್ಯಾಪುರ ಅಧ್ಯಕ್ಷತೆಯಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿಯಲ್ಲೇ ಈ ಇಬ್ಬರು ಸದಸ್ಯರು ಮತ್ತು ಡಾ.ಕೆ.ಎಸ್.ರೆಡ್ಡಿ ನಡುವೆ ಚಕಮಕಿ ನಡೆದಿತ್ತು. ಸದಸ್ಯರು ಸಭೆಯಲ್ಲೇ ವೈದ್ಯರ ವಿರುದ್ಧ ಧಿಕ್ಕಾರ ಕೂಗಿ ಎತ್ತಂಗಡಿಗೆ ಪಟ್ಟು ಹಿಡಿದು ಧರಣಿ ಕುಳಿತಿದ್ದರು. ನಂತರ ಶಾಸಕರೇ ಇಬ್ಬರಿಗೂ ಎಚ್ಚರಿಕೆ ನೀಡಿ ಸಮಾಧಾನಪಡಿಸಿದ್ದರು ಎನ್ನಲಾಗಿದೆ. ಆದರೆ `ಡಾ.ರೆಡ್ಡಿಯವರನ್ನು ರಿಲೀವ್ ಮಾಡಿಬಿಡಿ~ ಎಂದು ಎಚ್ಚರಿಕೆ ನೀಡುವಂತೆ ಟಿಎಚ್‌ಒ ಅವರಿಗೆ ಹೇಳಿದ್ದನ್ನೇ ಮುಂದೆಮಾಡಿ ಸದಸ್ಯರು ರೆಡ್ಡಿ ಎತ್ತಂಗಡಿಗೆ ಟಿಎಚ್‌ಒ ಬಳಿ ಪಟ್ಟು ಹಿಡಿದು ಕುಳಿತಿದ್ದರು ಎಂದು ತಿಳಿದಿದೆ.

ಟಿಎಚ್‌ಒ ಹೇಳಿಕೆ: ವಿವರ ನೀಡಿದ ಡಾ.ಗೋಟೂರು, ಡಾ.ಕೆ.ಎಸ್.ರೆಡ್ಡಿಯವರ ಬಗ್ಗೆ ಯಾವುದೇ ದೂರುಗಳಿಲ್ಲ, ನಿಗದಿಗಿಂತಲೂ ಹೆಚ್ಚಿನ ಅವಧಿ ಕೆಲಸ ನಿರ್ವಹಿಸುತ್ತಿದ್ದಾರೆ. ರೋಗಿಗಳು ಸಹ ಡಾ.ರೆಡ್ಡಿಯವರೇ ನೋಡಬೇಕು ಎಂದು ಬಯಸುತ್ತಿರುವುದರಿಂದ ಕೆಲ ಸಂದರ್ಭದಲ್ಲಿ ತೊಂದರೆಯಾಗಿರಬಹುದು ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT