ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಾಧಿಕಾರಿ, ಸಿಬ್ಬಂದಿ ವಿರುದ್ಧ ಸಾರ್ವಜನಿಕ ದೂರು

ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆರೋಗ್ಯ ಸಚಿವರ ಭೇಟಿ
Last Updated 11 ಸೆಪ್ಟೆಂಬರ್ 2013, 11:18 IST
ಅಕ್ಷರ ಗಾತ್ರ

ಕೊಯಿಲ (ಉಪ್ಪಿನಂಗಡಿ): ಆರೋಗ್ಯ ಸಚಿವ ಯು.ಟಿ. ಖಾದರ್ ಮಂಗಳವಾರ ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದರು. ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಇರುವುದಿಲ್ಲ, ಇದ್ದರೂ ನಾನಾ ಕಾರಣಗಳನ್ನು ಹೇಳಿ ರೋಗಿಗಳಿಗೆ ಚಿಕಿತ್ಸೆ ನೀಡದೆ  ಪುತ್ತೂರು, ಮಂಗಳೂರು ಹೋಗುವಂತೆ ಕಳುಹಿಸುತ್ತಾರೆ ಮೊದಲಾದ ಅಳಲುಗಳನ್ನು ಸ್ಥಳೀಯರು ಸಚಿವರ ಮುಂದೆ ತೋಡಿಕೊಂಡರು.

ಆಸ್ಪತ್ರೆಯಲ್ಲಿ ವೈದ್ಯರ ಗೈರು ಹಾಜರಿಯನ್ನು ಗಮನಿಸಿದ ಸಚಿವರು, ತಾಲ್ಲೂಕು ವೈದ್ಯಾಧಿಕಾರಿ­ಗಳಿಂದ ಸ್ಪಷ್ಟನೆ ಕೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಾಲ್ಲೂಕು ವೈದ್ಯಾಧಿಕಾರಿ ಡಾ ಬದ್ರುದ್ದೀನ್, ಇಲ್ಲಿನ ವೈದ್ಯರು ವೈಯಕ್ತಿಕ ಸಮಸ್ಯೆಯಿಂದ
ರಜೆ ಹಾಕಿದ್ದಾರೆ ಎಂದು ಸಚಿವರಿಗೆ ತಿಳಿಸಿದರು. ಅವರ ವೈಯಕ್ತಿಕ ಸಮಸ್ಯೆಗಳಂತೆ ಸಾರ್ವಜನಿಕರ ಸಮಸ್ಯೆ­ಗಳನ್ನು ಅರ್ಥಮಾಡಿಕೊಳ್ಳಲು ವೈದ್ಯರಿಗೆ ತಿಳಿಸಿ ಎಂದ ಸಚಿವರು, ವೈದ್ಯರು ಜನತೆಯಿಂದ ದೂರು­ಗಳು ಬಾರದ ರೀತಿಯಲ್ಲಿ ಕೆಲಸ ನಿರ್ವಹಿಸುವಂತೆ ಸೂಚನೆ ನೀಡಬೇಕು ಎಂದು ತಾಲ್ಲೂಕು ವೈದ್ಯಾಧಿಕಾರಿಗೆ ತಾಕೀತು ಮಾಡಿ­ದರು.

ಹೆರಿಗೆ ಮಾಡಿಸುವುದಿಲ್ಲ: ಈ ಆಸ್ಪತ್ರೆಯಲ್ಲಿ ಈ ಹಿಂದೆ ತಿಂಗಳಿಗೆ 25ರಿಂದ 30 ಹೆರಿಗೆಗಳು ಆಗುತ್ತಿದ್ದವು. ಗ್ರಾಮೀಣ ಪ್ರದೇಶದ ಬಡ ಜನತೆ ಹೆರಿಗಾಗಿ ಈ ಆಸ್ಪತ್ರೆಯನ್ನು ಅವಲಂಬಿಸಿದ್ದರು. ಆದರೆ ಈದೀಗ ಬಂದಿರುವ ವೈದ್ಯರು ಹೆರಿಗೆಗೆ ಬಂದವರನ್ನು ಏನಾದರೊಂದು ಕಾರಣ ಹೇಳಿ ಪುತ್ತೂರಿಗೆ ಹೋಗುವಂತೆ ಕಳುಹಿಸಿ­ಕೊಡುತ್ತಾರೆ ಎಂದು ಗಾ್ರಮಸ್ಥರು ದೂರಿದರು. ಇತರ ಹಲವು ಸಮಸ್ಯೆಗಳನ್ನೂ ಸಚಿವರ ಗಮನಕ್ಕೆ ತರ­ಲಾಯಿತು. ಗ್ರಾಮಸ್ಥರ ದೂರು ಆಲಿಸಿದ ಸಚಿವರು, ’ಈ ಬಗ್ಗೆ ತನಿಖೆ ನಡೆಸಲು ತಾಲ್ಲೂಕು ವೈದ್ಯಾಧಿಕಾರಿಯವರಿಗೆ ಸಂಪೂರ್ಣ ಅಧಿಕಾರ ನೀಡಲಾಗುವುದು. ಇಲ್ಲಿ ಆಸ್ಪತ್ರೆ ಸುಸಜ್ಜಿತ­ವಾಗಿದ್ದರೂ ಸಿಬ್ಬಂದಿಗಳ ನಿರ್ಲಕ್ಯದಿಂದ ರೋಗಿ­ಗಳಿಗೆ ಸಮರ್ಪಕ ರೀತಿಯ ಸೌಲಭ್ಯ ದೊರೆಯುತ್ತಿಲ್ಲ. ಈ ಬಗ್ಗೆ ಮುಂದೆ ಈ ರೀತಿ ವೈದ್ಯರು ವರ್ತಿಸಿದಲ್ಲಿ ನನಗೆ ತಿಳಿಸಿ ಸೂಕ್ತ ಕ್ರಮಕೈಗೊಳ್ಳುತ್ತೇನೆ’ ಎಂದರು.

ಆಸ್ಪತ್ರೆಯಲ್ಲಿನ ಔಷಧಿ ದಾಸ್ತಾನು ಕೊಠಡಿ ಪರಿಶೀಲಿಸಿದ ಅವರು, ಅಲ್ಲಿ ದಾಸ್ತಾನು ಇದ್ದ ಅವಧಿ ಮೀರಿದ ಔಷಧಿಯೊಂದನ್ನು ನೋಡಿ ತಕ್ಷಣ ಬದಲಿಸುವಂತೆ ಆರೋಗ್ಯ ಸಹಾಯಕಿಗೆ ಸೂಚನೆ ನೀಡಿದರು.

ಆಸ್ಪತ್ರೆ ಭೇಟಿ ವೇಳೆ ಜಿಲ್ಲಾ ಪಂಚಾಯಿತಿ ಸದಸ್ಯ ಬಾಲಕೃಷ್ಣ ಬಾಣಜಾಲು, ಕ್ಯಾನ್ಸರ್ ತಜ್ಞ ಡಾ ರಘು, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಪಿ. ವರ್ಗಿಸ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಕೆ. ಶಾಹುಲ್ ಹಮೀದ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ರಾಯ್ ಅಬ್ರಾಹಂ, ಕೆ.ಎ. ಸುಲೈಮಾನ್, ಸಿರಾಜುದ್ದೀನ್, ನೀರಜ್ ಕುಮಾರ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಅಬ್ದುಲ್ ರಹಿಮಾನ್, ಆದಂ, ಸ್ಥಳೀಯ ಪ್ರಮುಖರಾದ ಫಾರೂಕ್ ಅಮೈ, ದೇವಿಪ್ರಸಾದ್ ನೀರಾಜೆ, ಪೊಡಿಕುಂಞ್ ನೀರಾಜೆ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT