ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಭವದ ದುರ್ಗಾಂಬಿಕಾ ಜಾತ್ರಾ ಮಹೋತ್ಸವ

Last Updated 29 ಫೆಬ್ರುವರಿ 2012, 7:45 IST
ಅಕ್ಷರ ಗಾತ್ರ

ದಾವಣಗೆರೆ: ನಗರದೇವತೆ ದುರ್ಗಾಂಬಿಕಾ ದೇವಿಯ ಜಾತ್ರೆಯಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ಸಾವಿರಾರು ಭಕ್ತರು ದೇವಿ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಸೋಮವಾರ ಆರಂಭವಾದ ಜಾತ್ರೆಯ ಎರಡನೇ ದಿನವಾದ ಇಂದು ಬೆಳಿಗ್ಗೆಯಿಂದಲೇ ದೇವಿಗೆ ಉಡಿ ತುಂಬುವ, ಹರಕೆ ಸಲ್ಲಿಸುವ ಕಾರ್ಯಕ್ರಮ ನಡೆಯಿತು.

ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಉರುಳು ಸೇವೆ, ದೀಡು ನಮಸ್ಕಾರ, ಬೇವಿನ ಉಡುಗೆ ಸೇವೆ ಹಾಗೂ ಭಾರಿ ಸಂಖ್ಯೆಯ ಪ್ರಾಣಿಬಲಿ ವಿಶೇಷ. ಮುಂಜಾನೆಯಿಂದಲೇ ದೇವಿಗೆ ಉದೋ ಉದೋ ಘೋಷಣೆಯೊಂದಿಗೆ ದೇವಸ್ಥಾನದ ಆವರಣದಲ್ಲಿ ಮಹಿಳೆಯರು, ಪುರುಷರು, ಪುಟ್ಟ ಮಕ್ಕಳೂ ಉರುಳು ಸೇವೆ ನಡೆಸಿದರು.

ಮಧ್ಯಾಹ್ನದ ವೇಳೆಗೆ ವಿವಿಧ ಧಾರ್ಮಿಕ ವಿಧಿಗಳು ನಡೆದವು. ಇದೇ ವೇಳೆಗೆ ಭಕ್ತರ ಮೆರವಣಿಗೆಯೂ ನಡೆಯಿತು. ಬೃಹತ್ ಖಡ್ಗಧಾರಿಯೊಬ್ಬರು ಮಡಿಯುಟ್ಟು ದೇವಸ್ಥಾನದ ಮುಖ್ಯ ಪ್ರವೇಶದ್ವಾರದಿಂದ ಆವರಣದವರೆಗೆ ಮೆರವಣಿಗೆಯಲ್ಲಿ ಸಾಗಿ ಬಂದು ದೇವಿಗೆ ಪೂಜೆ ಸಲ್ಲಿಸಿದರು. ಕುಂಬಾರ ಜನಾಂಗದವರು ಚರಗ ಬೇಯಿಸುವ ಗಡಿಗೆಗಳನ್ನು ಕುಂಬಾರರ ಕೇರಿಯಿಂದ ಮೆರವಣಿಗೆಯಲ್ಲಿ ತಂದು ಬನ್ನಿ ಕಾಳಮ್ಮ ದೇವಸ್ಥಾನದಲ್ಲಿ ಇರಿಸಿದರು. ದೇವಸ್ಥಾನ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಝಗಮಗಿಸುತ್ತಿದೆ.

ದೇವಸ್ಥಾನದಲ್ಲಿ ಪ್ರತಿ ಉತ್ಸವದ ಸಂದರ್ಭ ಕೋಣ ಬಲಿ ನಡೆಸಲಾಗುತ್ತಿದೆ. ಈ ಬಾರಿ ಬಲಿ ನಡೆಯದಂತೆ ತಡೆಯಲು ದೇವಸ್ಥಾನದ ಸುತ್ತ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಭಾರೀ ಸಂಖ್ಯೆಯಲ್ಲಿ ಪೊಲೀಸರೂ ಬಂದೋಬಸ್ತ್ ನಿರತರಾಗಿದ್ದಾರೆ. ಭಕ್ತರು ಕಿಲೋಮೀಟರ್ ಉದ್ದಕ್ಕೂ ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ಎಲ್ಲ ಭಕ್ತರಿಗೂ ಪ್ರಸಾದ, ಮಜ್ಜಿಗೆ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT