ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಭವದ ವೀರಭದ್ರಸ್ವಾಮಿ ಕಾರ್ತೀಕೋತ್ಸವ

Last Updated 23 ನವೆಂಬರ್ 2011, 10:40 IST
ಅಕ್ಷರ ಗಾತ್ರ

ಚಳ್ಳಕೆರೆ: ಅನಾದಿ ಕಾಲದಿಂದಲೂ ಚಳ್ಳಕೆರೆ ಪಟ್ಟಣದಲ್ಲಿ ನೆಲೆಯೂರಿ ಅಪಾರ ಭಕ್ತ ಸಮೂಹವನ್ನು ಹೊಂದಿರುವ ವೀರಭದ್ರಸ್ವಾಮಿಗೆ ತಲತಲಾಂತರದಿಂದಲೂ ಪ್ರತೀ ವರ್ಷವೂ ಕಾರ್ತೀಕ ಮಾಸದಲ್ಲಿ ಮಾಡುವ ಕಾರ್ತೀಕೋತ್ಸವ ಈ ವರ್ಷವೂ ವೈಭವದಿಂದ ಜರುಗಿತು.

ನ. 21ರ ಸೋಮವಾರ ರಾತ್ರಿ ನೂರಾರು ಜನ ಭಕ್ತರು ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ಮಾಡಿಕೊಂಡ ಹರಕೆಗಳನ್ನು ತೀರಿಸಲು ಕಾರ್ತಿಕೋತ್ಸವದಲ್ಲಿ ದೀಪಕ್ಕೆ ಹರಳೆಣ್ಣೆ ಬಿಡುವ ಮೂಲಕ ಹರಕೆ ತೀರಿಸಿದರು.
ಚಳ್ಳಕೆರೆಯಮ್ಮ ಮತ್ತು ವೀರಭದ್ರಸ್ವಾಮಿಯನ್ನು ಪಟ್ಟಣ ಅಲ್ಲದೇ, ಗ್ರಾಮೀಣ ಪ್ರದೇಶಗಳ ಜನರೂ ಸೇರಿದಂತೆ ಸಾವಿರಾರು ಜನರು ಈ ಎರಡೂ ಆರಾಧ್ಯ ದೇವರುಗಳ ವಿಶೇಷ ಪೂಜೆ, ಜಾತ್ರೆ ಸಂದರ್ಭಗಳಲ್ಲಿ ಬಂದು ತಮ್ಮ ಭಕ್ತಿಯನ್ನು ಸಮರ್ಪಿಸುವುದುಂಟು.

ವೀರಭದ್ರಸ್ವಾಮಿ ಕಾರ್ತೀಕೋತ್ಸವ ಎಂದರೆ ಪ್ರತೀ ಮನೆಯ ಹೆಂಗಳೆಯರಲ್ಲಿ ಎಲ್ಲಿಲ್ಲದ ಸಂತಸ. ಮನೆಯ ನೆಲ ಸಾರಿಸಿ ಭಕ್ತಿಯಿಂದ ದೀಪ ಹಚ್ಚುವುದು. ದೇಗುಲಕ್ಕೆ ಬಂದು ದೇವರಿಗೆ ಎಣ್ಣೆ ಬಿಡುವ ಮೂಲಕ ತಮ್ಮ ಭಕ್ತಿಯ ಪರಾಕಾಷ್ಠೆ ಮೆರೆಯುವುದು ಸಾಮನ್ಯ.

ಪ್ರತೀ ಕಾರ್ತಿಕ ಮಾಸದಲ್ಲಿ ಒಂದ್ಹೊತ್ತು ಇರುವ ಮೂಲಕ ಸ್ವಾಮಿಗೆ ನಿಷ್ಟೆಯಿಂದ ಪೂಜಿಸುವ `ಪುರಂತಯ್ಯ~ ಎಂಬುವರ ಮನೆಗೆ ಪಂಜು ತೆಗೆದುಕೊಂಡು ಹೋಗಿ ಅವರನ್ನು ದೇಗುಲಕ್ಕೆ ಕರೆತರಲಾಗುತ್ತದೆ. ಆ ನಂತರ ಸ್ವಾಮಿಗೆ ರುದ್ರಾಭಿಷೇಕ ಮಾಡಲಾಗುತ್ತದೆ. ಕಾಶಿ ಕಟ್ಟುವುದು ಹಾಗೂ ಪುರಂತರ ನಾಟ್ಯ ಪ್ರದರ್ಶನ ನಡೆಯುತ್ತದೆ. ಇದನ್ನು ನೋಡಲು ಅಣ್ಣ-ತಮ್ಮಂದಿರು ಸೇರಿದಂತೆ ನಾನಾ ಕಡೆಗಳಲ್ಲಿ ನೆಲೆಸಿರುವ ಭಕ್ತರು ಆಗಮಿಸುವುದುಂಟು.

ಬುಡಕಟ್ಟು ಸಮುದಾಯವೂ ಒಳಗೊಂಡಂತೆ ಎಲ್ಲಾ ಜಾತಿ ಜನಾಂಗದ ಭಕ್ತರು ಕೂಡಿ ಮಾಡುವ ಕಾರ್ತೀಕೋತ್ಸವದಲ್ಲಿ ಹಿಂದಿನಿಂದ ನಡೆದುಕೊಂಡು ಬಂದಂತಹ ಅನೇಕ ಆಚರಣೆಗಳು ಇಂದಿಗೂ ನಡೆಯುತ್ತಿರುವುದನ್ನು ಕಾಣಬಹುದು.

ವೀರಭದ್ರಸ್ವಾಮಿ ದೊಡ್ಡ ಕಾಶಿ ಕಟ್ಟುವ ಮೂಲಕಕಾರ್ತೀಕೋತ್ಸವಪ್ರಾರಂಭವಾಗುತ್ತದೆ. ನಂತರ ಮಠದ ಐನೋರು ದೇಗುಲದಲ್ಲಿ ಮೊದಲ ಪೂಜೆ ಸಲ್ಲಿಸಿದ ನಂತರ ಉಳಿದ ಭಕ್ತಾಧಿಗಳು ಭಕ್ತಿ ಪ್ರದರ್ಶನ ಮಾಡುತ್ತಾರೆ. ಸಾವಿರಾರು ದೀಪಗಳನ್ನು ಹಚ್ಚಿ ಸಂಭ್ರಮಿಸುತ್ತಾರೆ.

ಈ ಸಂದರ್ಭದಲ್ಲಿ ವೀರದ್ರಸ್ವಾಮಿ, ಕಾಳಮ್ಮ ಹಾಗೂ ಸಿದ್ದರಾಮೇಶ್ವರ ದೇವರ ವಿಗ್ರಹಗಳನ್ನು ಸಣ್ಣ ಉಚ್ಚಯ್ಯ (ದೇವರನ್ನು ಕೊಂಡೊಯ್ಯುವ ಬಂಡಿ)ದಲ್ಲಿ ವೀರಭದ್ರಸ್ವಾಮಿ ದೇಗುಲದಿಂದ ಪಾದಗಟ್ಟೆವರೆಗೂ ಕರೆತರಲಾಗುತ್ತದೆ. ಈ ಸಂದರ್ಭದಲ್ಲಿ ಭಕ್ತರ ದಂಡೇ ನೆರೆದಿರುತ್ತದೆ.

ನಂತರ ಪಾದಗಟ್ಟೆಯಿಂದ ದೇವಸ್ಥಾನಕ್ಕೆ ಕರೆ ತಂದು ಗುಡಿದುಂಬಿಸಲಾಗುತ್ತದೆ ಎನ್ನುತ್ತಾರೆ ಈ ದೇಗುಲದ ತಳವಾರ ಪಿ. ತಿಪ್ಪೇಸ್ವಾಮಿ.ಕಾರ್ತಿಕೋತ್ಸವದಲ್ಲಿ ಎತ್ತುಗಳಿಗೆ ಸಿಂಗಾರಗೊಳಿಸಿ ದೇವಸ್ಥಾನಕ್ಕೆ ಕರೆತಂದು ಪೂಜೆ ಮಾಡಿಸುವುದು ವಾಡಿಕೆ.

ಮುಂಗಾರು ಬಿತ್ತನೆ ಆಗಿ ಬೆಳೆ ಕೊಯ್ಲಿಗೆ ಬರುವ ಮುಂಚೆ ನಡೆಯುವ ವೀರಭದ್ರಸ್ವಾಮಿ ಕಾರ್ತಿಕೋತ್ಸವದಲ್ಲಿ ಎತ್ತುಗಳಿಗೆ ಮೈ ತೊಳೆದು, ಕೊಂಬಿಗೆ ಬಣ್ಣ, ಮೈಗೆ ಜೂಲು ಕಟ್ಟಿ, ಚೆಂಡು, ಸೇವಂತಿಗೆ ಹೂವಿನಿಂದ ಸಿಂಗರಿಸಿ ಕಾರ್ತೀಕ ಪೂಜೆ ಮಾಡಿಸುವುದು ಇಲ್ಲಿನ ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT