ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈವಿಧ್ಯಮಯ ಸಂಗೀತ ಸಮ್ಮೇಳನ

Last Updated 19 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು ಗಾಯನ ಸಮಾಜದ 43ನೇ ಸಂಗೀತ ಸಮ್ಮೇಳನ ಪ್ರಧಾನವಾಗಿ ಎರಡು ವಿಭಾಗಗಳಲ್ಲಿ ನಡೆಯುತ್ತಿದೆ. ಕಛೇರಿಗಳಲ್ಲಿ ಪ್ರಖ್ಯಾತರಲ್ಲದೆ ಉದಯೋನ್ಮುಖ ಕಲಾವಿದರಿಗಾಗಿ ಒಂದು ಪ್ರತ್ಯೇಕ ಸರಣಿಯನ್ನೇ ಏರ್ಪಡಿಸಿರುವುದು ಅಭಿನಂದನೀಯ.

ಬೆಳಗಿನ ವೇಳೆ ವಿದ್ವತ್ ಗೋಷ್ಠಿಗಳಲ್ಲಿ ವೈವಿಧ್ಯಮಯ ವಿಷಯಗಳನ್ನು ಹಮ್ಮಿಕೊಳ್ಳಲಾಗಿದೆ. ಹೀಗೆ ರಂಜನೆ, ಚಿಂತನೆಗಳೆರಡೂ ಸಮ್ಮೇಳನದಲ್ಲಿ ಮೇಳೈಸಿದೆ.

ಇಲ್ಲಿ ಚೊಚ್ಚಲ ಕಛೇರಿ ಮಾಡಿದ ಮಲ್ಲಾಡಿ ಸಹೋದರರು ಸಂಗೀತಾಭಿಮಾನಿಗಳ ದೊಡ್ಡ ವರ್ಗವನ್ನೇ ಆಕರ್ಷಿಸಿದ್ದು ಸಹಜವೇ. ಸಾಂಪ್ರದಾಯಿಕವಾಗಿ ವರ್ಣದಿಂದ ಪ್ರಾರಂಭಿಸಿ, ಗಣೇಶನಿಗೆ `ಶ್ರಿ ಮಹಾಗಣಪತಿಂ~ ಮೂಲಕ ವಂದಿಸಿ, ಘನವಾದ ಕಛೇರಿಯ ಮುನ್ಸೂಚನೆ ನೀಡಿದರು.
 
ರೀತಿಗೌಳ ರಾಗದ ಕೃತಿಯ ನಂತರ ಕಲ್ಯಾಣವಸಂತ ರಾಗದ ತ್ಯಾಗರಾಜರ ಕೀರ್ತನೆ ವಿಳಂಬದಲ್ಲಿ ಭಾವಪೂರ್ಣವಾಗಿ ಹೊಮ್ಮಿತು. ಗಾಢ ಕೃತಿ ಮೀನಾಕ್ಷಿ ಮೇಮುದಂ~ ಆಲಾಪನೆ, ನೆರವಲ್, ಸ್ವರ ಪ್ರಸ್ತಾರಗಳಿಂದ ಬೆಳಗುವಂತೆ ಮಾಡಿದರು.

27ನೇ ಮೇಳಕರ್ತರಾಗ `ಸರಸಾಂಗಿ~ಯನ್ನು ರಾಗಾಲಾಪನೆ, ಬಿಗಿ ಹಂದರದ ತಾನಗಳಿಂದ ಸಬಲವಾಗಿ ಚಿತ್ರಿಸಿ, ಪಲ್ಲವಿಯನ್ನು ಗಾಢವಾಗಿ ಕಟ್ಟಿದರು. ಚತುಶ್ರ ಜಾತಿ ಝಂಪೆ ತಾಳದ ಪಲ್ಲವಿ (ಶ್ರಿ ರಾಜರಾಜೇಶ್ವರಿ ನೀ ಪಾದಮುಲೆ)ಗೆ ಎರಡು ಕಂಠಗಳಲ್ಲಿ ಒತ್ತಾಸೆ ಬಂದು ಪರಿಣಾಮಕಾರಿಯಾಗಿ ಹೊಮ್ಮಿತು.

ಆದರೆ ರಾಗಮಾಲಿಕೆ ಸ್ವರವನ್ನು ಅಷ್ಟು ಬೇಗ ತೆಗೆದುಕೊಳ್ಳುವ ಮೊದಲು, ಮೂಲ ರಾಗದಲ್ಲಿ ಇನ್ನೂ ಕೆಲ ಆವರ್ತ ಸ್ವರಪ್ರಸ್ತಾರ ಮಾಡಿದ್ದರೆ ಇನ್ನೂ ಚೆನ್ನಿತ್ತು! ಕೊನೆಯಲ್ಲಿ ಭದ್ರಾಚಲ ರಾಮದಾಸರು, ನಾರಾಯಣತೀರ್ಥ, ಅಣ್ಣಮಾಚಾರ್ಯರ ಪದಗಳು ಮುದಕೊಟ್ಟವು.
 
ಒಟ್ಟಿನಲ್ಲಿ ಕೇಳುಗರಿಗೆ ಒಂದು ಘನವಾದ ಕಛೇರಿ ಕೇಳಿದ ಅನುಭವ ಉಂಟಾದುದು ಸಹಜವೇ. ಈ ಯಶಸ್ಸಿನಲ್ಲಿ ಪಕ್ಕವಾದ್ಯಗಾರರೂ ಪಾಲುದಾರರು. ಪಿಟೀಲಿನಲ್ಲಿ ಎಂ.ಎ. ಸುಂದರೇಶನ್, ಮೃದಂಗದಲ್ಲಿ ಎಂ.ಎಲ್.ಎನ್ ರಾಜು ಹಾಗೂ ಘಟದಲ್ಲಿ ಎಂ.ಎ. ಕೃಷ್ಣಮೂರ್ತಿ ಪೂರಕವಾಗಿ ನುಡಿಸಿದರು.

ಜನಪ್ರಿಯ ಗಾಯಕಿ
ಸಮ್ಮೇಳನದ ಎರಡನೆಯ ದಿನ ಹಾಡಿದ ಎಂ.ಎಸ್. ಶೀಲಾ ಇಂದಿನ ಜನಪ್ರಿಯ ಕಲಾವಿದರಲ್ಲಿ ಒಬ್ಬರು. ನಳಿನಾ ಮೋಹನ್ (ಪಿಟೀಲು), ಅರ್ಜುನ್ ಕುಮಾರ್ (ಮೃದಂಗ) ಹಾಗೂ ಭಾರದ್ವಾಜ್ ಸಾತವಳ್ಳಿ (ಮೋರ್ಚಿಂಗ್) ಅವರ ಪಕ್ಕವಾದ್ಯಗಳೊಂದಿಗೆ ಭಿನ್ನ ರಾಗಗಳ ಕೃತಿಗಳನ್ನು ಸಾದರ ಪಡಿಸಿದರು.

ತೋಡಿ ರಾಗದ  `ಕರುಣಾನಿಧಿ ಇಲಲೊ~  ಶ್ಯಾಮಾಶಾಸ್ತ್ರಿಗಳ ಉತ್ತಮ ರಚನೆಗಳಲ್ಲಿ ಒಂದು. ಆಲಾಪನೆ, ನೆರವಲ್ (ಕೋಮಲ ಮೃದು ಭಾಷಿಣಿ) ಮತ್ತು ಸ್ವರಪ್ರಸ್ತಾರಗಳಿಂದ ರಾಗ-ಕೃತಿಗಳೆರಡೂ ಬೆಳಗುವಂತೆ ಮಾಡಿದರು. ಜಯಚಾಮರಾಜೇಂದ್ರ ಒಡೆಯರ್‌ರ `ಸರಸ್ವತಿಂ ಭಗವತಿಂ~ ಹಾಗೂ ವಿಳಂಬದಲ್ಲಿ ಮುತ್ತಯ್ಯ ಭಾಗವತರ  `ಸಾರಸ ದಳನಯನೆ~  ಭಾವಪೂರ್ಣವಾಗಿ ಹಾಡಿ, ಪಲ್ಲವಿಗೆ ಸಿದ್ಧವಾದರು.

ಸರ್ವ ಜನಪ್ರಿಯ ಮೋಹನ ರಾಗವನ್ನು ಆಲಾಪಿಸಿ, ತಾನದಿಂದ ಬೆಳೆಸಿ, ತಿಶ್ರತ್ರಿಪುಟ ಪಲ್ಲವಿಯನ್ನು (ದೇವ ದೇವ ಪರಮೇಶ್ವರ) ಖಂಡನಡೆಯಲ್ಲಿ ಪ್ರೌಢವಾಗಿ ನಿರೂಪಿಸಿದರು.  `ವ್ಯರ್ಥವಲ್ಲವೆ ಜನ್ಮ  ಹಾಗೂ  ಹರಿ ಆಡಿದನೆ~ ಎರಡೂ ದೇವರನಾಮಗಳು ಸಹ ಕೇಳುಗರಿಗೆ ಪ್ರಿಯವಾಯಿತು.

ವಿಚಾರಪೂರಿತ ವಿದ್ವತ್ ಗೋಷ್ಠಿ
ಸಮ್ಮೇಳನಾಧ್ಯಕ್ಷ ನೇದನೂರಿ ಕೃಷ್ಣಮೂರ್ತಿ ಅವರು ವಿದ್ವತ್ ಗೋಷ್ಠಿಯ ಪ್ರಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿ `ತ್ರಿಮೂರ್ತಿಗಳ ರಚನೆಗಳೇ ರಾಗದ ವಿವಿಧ ಮುಖಗಳಿಗೆ ಅತ್ಯುತ್ತಮ ಉದಾಹರಣೆ~ ಎಂದರು. ರಾಗದ 13 ಲಕ್ಷಣಗಳು, ಕಲ್ಪಿತ ಸಂಗೀತ, ಮನೋಧರ್ಮ ಸಂಗೀತ,   ರಾಗಾಲಾಪನದ ಪಂಚ ವಿಧಗಳು ಮುಂತಾದವುಗಳನ್ನು ಸ್ವಾರಸ್ಯಕರವಾಗಿ, ಅನುಭವಪೂರಿತ ನುಡಿಗಳಿಂದ ಹೇಳಿದರು.

ಮಧುವಂತಿ ಮತ್ತು ಅಣ್ಣಮಾಚಾರ್ಯರ ಎರಡು ಪದಗಳ ಗಾಯನದೊಂದಿಗೆ ಪ್ರಾರಂಭವಾದ ವಿದ್ವತ್ ಗೋಷ್ಠಿಯಲ್ಲಿ ಗಣ್ಯ ವಿದ್ವಾಂಸ ಡಾ. ಪಪ್ಪು ವೇಣುಗೋಪಾಲರಾವ್, ಅಣ್ಣಮಯ್ಯನನ್ನು ಕುರಿತ ಸ್ವಾರಸ್ಯಕರ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
 
ಅವರ 13 ಸಾವಿರ ಪದಗಳಲ್ಲಿ ಕೇವಲ 400ಕ್ಕೆ ರಾಗಸಂಯೋಜನೆ ಮಾಡಲಾಗಿದೆ. ಅವುಗಳಲ್ಲಿ ಬಹಳಕ್ಕೆ ನೇದನೂರಿ ಅವರು ವರ್ಣಮಟ್ಟು ಹಾಕಿ, ಪ್ರಸಾರ ಮಾಡಿದ್ದಾರೆ ಎಂದರು. ನೇದನೂರಿ ಕೃಷ್ಣಮೂರ್ತಿ ಅವರೇ ಹಾಡಿರುವ ಅನೇಕ ಪದಗಳನ್ನು (ಸಿ.ಡಿ.) ಕೇಳಿಸಿ ಸಭೆಯ ಅಭಿನಂದನೆಗೆ ಪಾತ್ರರಾದರು. `ಸಕಲ ಶಾಂತಿ ಕರಮುಲು (ರಾಗ - ಬಹುದಾರಿ), ಏಮೋಚಿಗುರೊಡಲ, ಪೊಲಟಿಜವೈನಮುನ~  ಮುಂತಾದವು ಗಮನ ಸೆಳೆದವು. ಡಾ. ಎಂ.ಎಸ್. ಸುಬ್ಬುಲಕ್ಷ್ಮಿ ಕಂಠದ `ನಾನಾಟಿ ಬದುಕು~ ಎಂದೂ ಪ್ರಿಯವಾದುದು.

ರಾಗವೈಭವ
ಎರಡನೆಯ ದಿನದ ಗೋಷ್ಠಿ ಸುಮನಾ ಚಂದ್ರಶೇಖರ್ ಅವರ ಗಾಯನದಿಂದ (ನಾರಾಯಣತೀರ್ಥರ ರಚನೆ) ಪ್ರಾರಂಭವಾಯಿತು. ತ್ರಿಮೂರ್ತಿಗಳ ರಚನೆಗಳಲ್ಲಿ  ರಾಗವೈಭವ  ಕುರಿತ ಪ್ರಾತ್ಯಕ್ಷಿಕೆ ನಡೆಯಿತು. ಜನಪ್ರಿಯ ಗಾಯಕ ಆರ್.ಕೆ. ಪದ್ಮನಾಭ ಅವರು ದೀಕ್ಷಿತರ ರಚನೆಗಳಲ್ಲಿ ರಾಗ ವೈವಿಧ್ಯತೆ ಕುರಿತು ಮಾತನಾಡಿ, ಹಾಡಿ ನಿರೂಪಿಸಿದರು.
 
ಅಭೇರಿ ರಾಗದ ಎರಡು ಮುಖಗಳು, ದೇವಗಾಂಧಾರಿ, ದ್ವಿಜಾವಂತಿ, ನಾಯಕಿ, ಯಮನ್ ಕಲ್ಯಾಣ್, ಸುರುಟಿ   ಮುಂತಾದವನ್ನು ವಿವರಿಸಿದರು.

ಗಣ್ಯ ವಿದುಷಿ ಡಾ. ಟಿ.ಎಸ್. ಸತ್ಯವತಿ ಅವರು ಶ್ಯಾಮಾಶಾಸ್ತ್ರಿಗಳ ರಾಗ ರಸದ ಔತಣ ಕುರಿತು ವಿದ್ವತ್‌ಪೂರ್ಣವಾಗಿ ವಿಶ್ಲೇಷಿಸಿದರು. ಅದಕ್ಕಾಗೇ ಹಿಮಾದ್ರಿಸುತೆ, ಕಾಮಾಕ್ಷೀ ಅಂಬಾ, ಪಾಲಿಂಚು ಕಾಮಾಕ್ಷೀ, ಬ್ರೋವಮ್ಮ, ದೇವಿಬ್ರೋವ   ಮುಂತಾದ ಕೃತಿಗಳಲ್ಲಿ ಶ್ಯಾಮಾಶಾಸ್ತ್ರಿಗಳ ಭಕ್ತಿಯ ಆರ್ತತೆಯನ್ನು ಗುರ್ತಿಸಿ ರಾಗ ಸೌಂದರ್ಯವನ್ನು ವಿವರಿಸಿದರು. ಶನಿವಾರದವರೆಗೂ ವಿದ್ವತ್ ಗೋಷ್ಠಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT