ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಶಿಷ್ಟಪೂರ್ಣ ಕರಾವಳಿ ನಾಗಮಂಡಲ

Last Updated 23 ಏಪ್ರಿಲ್ 2011, 6:20 IST
ಅಕ್ಷರ ಗಾತ್ರ

ಬಂಟ್ವಾಳ: ಪರಶುರಾಮ ಸೃಷ್ಟಿಯ ತುಳುನಾಡಿನಲ್ಲಿ ನಾಗಾರಾಧನೆಯು ಕೃಷಿಯಾಧಾರಿತ ಸಂಪ್ರದಾಯವಾಗಿ ಬೇರೂರಿದೆ. ಇಲ್ಲಿನ ಮಣ್ಣಿನಲ್ಲಿ ನಾಗಬೀದಿ ಇಲ್ಲದ ಭೂಮಿಯಿಲ್ಲ ಎಂಬ ಮಾತಿದೆ.ನಾಗಮಂಡಲದಲ್ಲಿಯೂ ನಾಗಮಂಡಲ, ಬ್ರಹ್ಮಮಂಡಲ, ನಾಗಬ್ರಹ್ಮ ಮಂಡಲ ಹೀಗೆ ವಿವಿಧ ಪ್ರಕಾರಗಳಿವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಗದರ್ಶನ ಮತ್ತು ನಾಗಮಂಡಲ ಕಂಡು ಬಂದರೆ, ಉಡುಪಿ ಜಿಲ್ಲೆಯಲ್ಲಿ ನಾಗಮಂಡಲ, ಢಕ್ಕೆಬಲಿ ಹೀಗೆ ವಿಭಿನ್ನ ರೀತಿಯಲ್ಲಿ ನಾಗಾರಾದನೆ ನಡೆಯುತ್ತಿದೆ. ನಾಗನಿಗೆ ಪಂಚಾಮೃತ ಅಭಿಷೇಕ, ಶುದ್ಧಕಳಶ ಸ್ನಾನದ ಜತೆಗೆ ಹಾಲು, ಹಿಂಗಾರ ( ಅಡಿಕೆ ಮರದ ಹೂವು), ಕೆಂಬಣ್ಣದ  ಸೀಯಾಳ (ಇದನ್ನು ಕೆಂಪುತಳಿ ಅಥವಾ ಕೆಂದಳಿ ಎನ್ನಲಾಗುತ್ತಿದೆ), ಶ್ರೀಗಂಧ, ಸಂಪಿಗೆ, ಕೇದಗೆ ಮತ್ತಿತರ ಸುಗಂಧಭರಿತ ಸೊತ್ತು ಬಲು ಇಷ್ಟ ಎಂಬ ನಂಬಿಕೆಯಿದೆ.

ನಾಗಮಂಡಲ: ನಾಗಮಂಡಲದಲ್ಲಿ ಏಕಪವಿತ್ರ, ಚತುರ್‌ಪವಿತ್ರ, ಅಷ್ಟಪವಿತ್ರ ಮತ್ತು ಷೋಡಶ ಪವಿತ್ರ ನಾಗಮಂಡಲ ಎಂಬ ಪ್ರಕಾರಗಳಿವೆ. ಹಿಂಗಾರ ಹೂವು ಮತ್ತು ತೆಂಗಿನ ಗರಿಗಳಿಂದ ಅಲಂಕಾರಗೊಂಡ ಚಪ್ಪರದ ಮೇಲ್ಭಾಗದಲ್ಲಿ ಬಿಳಿವಸ್ತ್ರ, ನೆಲದ ಮಧ್ಯೆ ವೃತ್ತಾಕಾರದಲ್ಲಿ ಪಂಚವರ್ಣಗಳಿಂದ  `ಮಂಡಲ~ ರಚನೆ, ಹೆಡೆಯುಳ್ಳ ನಾಗನಚಿತ್ರವನ್ನು ಸುರುಳಿಯಾಕಾರದಲ್ಲಿ ಬರೆದು, ಪವಿತ್ರ ಗಂಟು ರಚಿಸಲಾಗುತ್ತದೆ. ಆ ಬಳಿಕ ನಾಗನ ಆವಾಹನೆ ಮಾಡಿ ಪ್ರತಿಷ್ಠೆಗೊಳಿಸುತ್ತಾರೆ.

 ಮಂಡಲದ ಸುತ್ತಲೂ ಬಾಳೆ ಎಲೆ ಹಾಕಿ ಬೆಳ್ತಿಗೆ ಅಕ್ಕಿ, ತೆಂಗಿನಕಾಯಿ, ಬಾಳೆಹಣ್ಣು, ವೀಳ್ಯದೆಲೆ, ಅಡಿಕೆ, ಹಿಂಗಾರ, ವಸ್ತ್ರ, ದೀಪ ಇಡುತ್ತಾರೆ. ಇದಕ್ಕೂ ಕೆಳಗೆ ಸುತ್ತಲೂ ಹಿಂಗಾರ ರಾಶಿ ಹಾಕಲಾಗುತ್ತದೆ.ನಾಗಮಂಡಲಕ್ಕೆ ಮೊದಲು ಆಶ್ಲೇಷ ಬಲಿ, ತನುಸೇವೆ, ನಾಗಬನದಲ್ಲಿ ಹಾಲಿಟ್ಟು ಸೇವೆ ನಡೆದು ಇಲ್ಲಿಂದ ಹಿಂಗಾರದೊಂದಿಗೆ ನಾಗಪಾತ್ರಿ ಮಂಟಪಕ್ಕೆ ಬರುತ್ತಾರೆ.

ನಾಗಪಾತ್ರಿಯೊಂದಿಗೆ ಅರ್ಧನಾರಿ ವೇಷ ಧರಿಸಿದ ವೈದ್ಯರು (ಶಿವಳ್ಳಿ ಬ್ರಾಹ್ಮಣ) ಡಮರು ಬಾರಿಸುತ್ತಾ ನರ್ತಿಸುತ್ತಾರೆ. ನಾಗಪಾತ್ರಿಯು ಕಣ್ಣರಳಿಸಿಕೊಂಡು ಹಿಂಗಾರವನ್ನು ಎರಡೂ ಕೈಯಲ್ಲಿ ಹಿಡಿದುಕೊಂಡು ಮುಖಕ್ಕೆ ಉಜ್ಜಿಕೊಳ್ಳುತ್ತಾ ನಾಗನಂತೆ ಭುಸುಗುಟ್ಟುತ್ತಾರೆ.

ಇದೇ ವೇಳೆ ಜಾನಪದ ಪಾಡ್ದನ ಮಾದರಿಯಲ್ಲಿ ವೈದ್ಯರ ತಂಡವು ಹಾಡುತ್ತಾ `ನಾಗ-ನಾಗಿಣಿ ಸಮಾಗಮ~ವಾದಂತೆ ನರ್ತಿಸುತ್ತಾ ಒಟ್ಟಾಗಿ ಬಳಿಕ ನಾಗಪಾತ್ರಿಯನ್ನು ಮತ್ತಷ್ಟು ಕುಣಿಸುತ್ತಾರೆ. ಇದೇ ರೀತಿ ರಾತ್ರಿ ಸುಮಾರು 11ಗಂಟೆಯಿಂದ ಬೆಳಿಗ್ಗೆ ವರೆಗೂ ಮುಂದುವರಿದು, ಅಗಾಧ ಪ್ರಮಾಣದ ಹಿಂಗಾರದ ರಾಶಿ ಬಳಕೆಯಾಗುತ್ತದೆ. ಮುಂಜಾನೆ ವೇಳೆ ಇದೇ ಹಿಂಗಾರ ಮತ್ತು ಅರಸಿನ ಪ್ರಸಾದವನ್ನು ಭಕ್ತರಿಗೆ ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT