ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೋಟಿನಾಟ: ಮಠದಲ್ಲಿ ಕಂಡ ಮುಖ

Last Updated 15 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ದಾವಣಗೆರೆ: ಹರಿಹರ ತಾಲ್ಲೂಕಿನ ಹೊಳೆಸಿರಿಗೆರೆ ಕ್ರಾಸ್ ಸಮೀಪಿಸುವಷ್ಟರಲ್ಲಿ ತಮಟೆ ಸಪ್ಪಳ ಕೇಳಿಸಿತು. ಒಂದಷ್ಟು ಮಂದಿ ಯುವಕರು ಜೋಷ್‌ನಲ್ಲಿದ್ದರು. ಹಲಗೆ ಏಟಿಗೆ ಲಯಬದ್ಧವಾಗಿ ಕುಣಿಯುತ್ತಿದ್ದರು. ಅವರಲ್ಲದೆ ನೂರು, ಇನ್ನೂರು ಮಂದಿ ಗುಂಪುಗೂಡಿದ್ದರು. ಯಡಿಯೂರಪ್ಪ ಭಾವಚಿತ್ರವಿದ್ದ ಕೊರಳುಪಟ್ಟಿ ಕೆಲವರ ಕುತ್ತಿಗೆಗೆ ಜೋತಾಡುತ್ತಿತ್ತು.

ನಾಮಪತ್ರ ಸಲ್ಲಿಕೆಯ ಉಮೇದು ಈ ರೂಪದಲ್ಲಿ ಜೋರು ಪಡೆದಿತ್ತು. `ವೋಟಿನ ಆಟ'ಕ್ಕೆ ಹೆಸರು ದಾಖಲಿಸಲು ಹೊರಟಿದ್ದ ಕೆಜೆಪಿಯ ಬಿ.ಪಿ.ಹರೀಶ್‌ಗೆ ಸಾಥ್ ನೀಡಲು ಬೇರೆ ಬೇರೆ ಊರುಗಳಿಂದ ಜನರು ಬಂದು ಸೇರಿಕೊಳ್ಳುತ್ತಿದ್ದರು. ಇಡೀ ಗುಂಪಿಗೆ ಗುಂಪೇ ಮಾತಿನಲ್ಲಿ ಮೈಮರೆತಿತ್ತು. ಎನ್ ಬ್ರ್ಯಾಂಡ್, ಎಸ್ ಬ್ರ್ಯಾಂಡ್ ಅಂತ ಏನೇನೋ ಲೆಕ್ಕಾಚಾರ.

ವಿಚಾರಿಸಿದರೆ, ನೊಣಬ (ನೊಳಂಬ) ಲಿಂಗಾಯತರನ್ನು `ಎನ್ ಬ್ರ್ಯಾಂಡ್' ಎಂದೂ ಸಾಧು ಲಿಂಗಾಯತರನ್ನು `ಎಸ್ ಬ್ರ್ಯಾಂಡ್' ಅಂತಲೂ ನಮೂನೆಕರಿಸಿರುವುದು ಗೊತ್ತಾಯಿತು. ಚುನಾವಣೆ ಎನ್ನುವುದು ಗ್ರಾಮೀಣ ಭಾಗದಲ್ಲಿ ಊರುಹಬ್ಬವೂ ಹೌದು. (ಮತ) ಬೇಟೆಯೂ ಹೌದು. ಹಬ್ಬದ ಸಡಗರ, ಬೇಟೆಯ ಕುತೂಹಲ ಎರಡನ್ನೂ ಒಳಗೊಂಡಿದೆ ಈ ಆಟ. ಎಲ್ಲ ಮಿತಿಗಳ ನಡುವೆ ಜನರ ತೊಡಗುವಿಕೆ ಖುಷಿ ಕೊಡುತ್ತದೆ.

ತುಸು ಮುಂದಕ್ಕೆ ಹೋಗುತ್ತಲೇ ನಂದಿಗುಡಿ ಎದುರಾಯಿತು. ಅಲ್ಲಿ ವೃಷಭಪುರಿ ಮಹಾಸಂಸ್ಥಾನ ಬೃಹನ್ಮಠ ಇದೆ. ನೊಳಂಬರಿಗೆ ಸೇರಿದ ಮಠ. ಮಠದ ಎದುರುಗಿನ ಮನೆಯ ಜಗುಲಿ ಮೇಲೆ ಕುಳಿತು ಆ ಮನೆಯವರೊಂದಿಗೆ ಹರಟುತ್ತಿದ್ದೆವು. ಮಟ ಮಟ ಮಧ್ಯಾಹ್ನ. ನೆತ್ತಿಸುಡುವ ಬಿಸಿಲು. 1.15ಕ್ಕೆ ಸರಿಯಾಗಿ ಮೂರು ವಾಹನಗಳು ಬಂದು ದೂಳೆಬ್ಬಿಸಿದವು. ಅದರಲ್ಲಿ ಒಂದು ಹೊಚ್ಚ ಹೊಸತು- ಪಜೇರೊ ಸ್ಪೋರ್ಟ್. ನೇಮ್‌ಪ್ಲೇಟ್ ಇರಲಿಲ್ಲ. ಮುಂದೆ ಸಂಖ್ಯೆಯುಳ್ಳ ಒಂದು ಸಣ್ಣ ಚೀಟಿ ಅಂಟಿಸಿದ್ದರು. ವಾಹನಗಳು ಮಠದ ಆವರಣದೊಳಗೆ ಹೋದವು. ಜನರು ಕೆಳಗೆ ಇಳಿದರು. 20 ಮಂದಿಯ ಗುಂಪು. `ರೇಣುಕಾ ಸ್ವಾಮಿ'ಗಳೂ ಹೊರಬಂದರು.

ಎಂ.ಪಿ.ರೇಣುಕಾಚಾರ್ಯರು, ಕ್ಷೇತ್ರದಲ್ಲಿ ರೇಣುಕಾ ಸ್ವಾಮಿ ಎಂದೇ ಚಿರಪರಿಚಿತ. ವಾಹನದಿಂದ ಇಳಿದವರೇ ಗದ್ದುಗೆಗೆ ಪೂಜೆ ಸಲ್ಲಿಸಿದರು. ಬಳಿಕ ಚಕಚಕನೆ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳ ಕೊಠಡಿಗೆ ತೆರಳಿದರು. ಸ್ವಾಮಿಗಳಿಗೆ ಅಡ್ಡಬಿದ್ದರು. ಅವರ ಮುಂದೆ ಮಂಡಿಯೂರಿ ಕುಳಿತರು. ಜತೆಗಿದ್ದ ಬೆಂಬಲಿಗರನ್ನು ಒಬ್ಬೊಬ್ಬರನ್ನೇ ಹೆಸರು ಹಿಡಿದು ಕರೆದರು. ಸ್ವಾಮಿಗಳಿಗೆ ಅವರನ್ನು ಪರಿಚಯಿಸಿದರು.

ಮೊಣಕಾಲು ಮೇಲೆ ಹತ್ತು ನಿಮಿಷ ಹಾಗೇ ಕುಳಿತಿದ್ದರು. ಅರಾಮಾಗಿ ಕೂರುವಂತೆ ಯಾರೋ ಸೂಚಿಸಿದರು. ಯೋಗದ ಅಭ್ಯಾಸ ಇದೆ. ಕಷ್ಟ ಇಲ್ಲ ಎಂದರು. ಚುನಾವಣೆ ಓಡಾಟ ಕಾರಣ 20 ದಿನಗಳಿಂದ ಯೋಗ, ವಾಕಿಂಗ್ ಇಲ್ಲ ಎಂದು ಮುಖ ಸಪ್ಪಗೆ ಮಾಡಿಕೊಂಡರು. `ನಿಮ್ಮ ಆಶೀರ್ವಾದ ಬೇಕು' ಎಂದು ಸ್ವಾಮಿಗಳನ್ನು ಬೇಡಿದರು. `ಖಂಡಿತ, ಸಂಶಯ ಬೇಡ' ಎಂದು ಹೆಗಲು ಸವರುತ್ತಾ ಮೂರೇ ಶಬ್ದಗಳಲ್ಲಿ ಅವರು ಭರವಸೆಯ ಅಭಯ ನೀಡಿದರು.

ಕೆಜೆಪಿಯ ರೇಣುಕಾಚಾರ್ಯರ ಕ್ಷೇತ್ರ ಹೊನ್ನಾಳಿ. ಹರಿಹರ ತಾಲ್ಲೂಕಿನಲ್ಲಿ ಇರುವ ಮಠಕ್ಕೆ ಬಂದು ಆಶೀರ್ವಾದ ಪಡೆದಿದ್ದರು. ಅವರ ಬೆಂಬಲಿಗರನ್ನು ವಿಚಾರಿಸಿದರೆ, ಹೊನ್ನಾಳಿಯಲ್ಲಿ ನೊಣಬ ಲಿಂಗಾಯತರ ಸಂಖ್ಯೆ ಗಣನೀಯವಾಗಿದೆ ಎಂದರು. ಜಿಗಳಿ ಗ್ರಾಮಕ್ಕೆ ಕಾರ್ಯನಿಮಿತ್ತ ಕಾಗಿನೆಲೆ ಶ್ರೀಗಳು ಬಂದಿದ್ದರು. ನಂದಿಗುಡಿಗೆ ಬರುವ ಮೊದಲೇ ಜಿಗಳಿಯಲ್ಲಿ ಆ ಸ್ವಾಮಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದರು.

ಮುಂದಿನ ನಡೆ ಎಲ್ಲಿಗೆ ಎಂದು ಕೇಳಿದ್ದಕ್ಕೆ ರಾಜನಹಳ್ಳಿಗೆ ಎಂದರು. ಅದೂ ಹರಿಹರ ತಾಲ್ಲೂಕಿಗೇ ಸೇರುತ್ತದೆ. ನಾವೂ ಹಿಂಬಾಲಿಸಿದೆವು. ಅವರ ವಾಹನಗಳು ಹೆಚ್ಚು ವೇಗವಾಗಿ ಮುಂದೆ ಸಾಗಿದ್ದವು. ನಾವು ಅಲ್ಲಿಗೆ ತಲುಪುವಷ್ಟರಲ್ಲಿ ಬೆಂಬಲಿಗರ ಕೈಯಲ್ಲಿ ತಾಟುಗಳಿದ್ದವು. ಬೀಟ್‌ರೂಟ್ ಸಾರಿನ ಬಣ್ಣ ದೂರಕ್ಕೇ ಎದ್ದು ಕಾಣಿಸುವಂತಿತ್ತು. ಅದು ವಾಲ್ಮೀಕಿ ಗುರುಪೀಠದ ಆವರಣ. ರೇಣುಕಾಚಾರ್ಯರು ಮಠದ ಮೊದಲ ಮಹಡಿಯ ಕೋಣೆಯಲ್ಲಿ ಸ್ವಾಮಿಗಳ ಜತೆ ಇದ್ದರು. ಆಶೀರ್ವಾದ ಪಡೆದ ಮೇಲೆ ಅವರೂ ಅಲ್ಲೇ ಊಟ ಮಾಡಿದರು.

ಬೆಂಬಲಿಗರೊಬ್ಬರು ಅವತ್ತಿನ ಹಾದಿ ನಕ್ಷೆಯನ್ನು ಮಾತುಗಳಲ್ಲೇ ಬಿಡಿಸಿಟ್ಟರು. ಅವರ ಮುಂದಿನ ಪಯಣ ಸಿರಿಗೆರೆ, ಬಳಿಕ ಸಾಣೆಹಳ್ಳಿಗೆ ಎಂದು ಗೊತ್ತಾಯಿತು. ಈ ಮಠಗಳು ಪಕ್ಕದ ಚಿತ್ರದುರ್ಗ ಜಿಲ್ಲೆಯಲ್ಲಿವೆ. ಮೊದಲು ದಾವಣೆಗೆರೆಯೂ ಚಿತ್ರದುರ್ಗ ಜಿಲ್ಲೆಯ ಭಾಗವೇ ಆಗಿತ್ತು. ಕುತೂಹಲದಿಂದ ಎಲ್ಲೆಲ್ಲಿಗೆ ಹೋಗುವಿರಿ ಎಂದರೆ, ಭೋವಿ ಗುರುಪೀಠ, ಗೊಲ್ಲರ ಗುರುಪೀಠ ಅಂತ ವಿವಿಧ ಜಾತಿ, ಸಮುದಾಯಗಳ ಒಂಬತ್ತು ಮಠಗಳ ಪಟ್ಟಿ ಒಪ್ಪಿಸಿದರು.

ಹೊಳಲ್ಕೆರೆ ಕ್ಷೇತ್ರದ ಕಾಂಗ್ರೆಸ್ ಹುರಿಯಾಳು ಎಚ್.ಆಂಜನೇಯ ಚಿತ್ರದುರ್ಗದಲ್ಲಿ ಮಾತಿಗೆ ಸಿಕ್ಕಿದ್ದರು. ಎಲ್ಲೆಲ್ಲಿ ಸುತ್ತಾಡಿದಿರಿ ಎಂದು ಕೇಳಿದ್ದಕ್ಕೆ, ಸಿರಿಗೆರೆ ಮಠದಿಂದಲೇ ಮಾತು ಶುರುವಾಯಿತು. `ಚಿತ್ರದುರ್ಗ ಜಿಲ್ಲೆಯ ಅಷ್ಟೂ ಮಠಗಳಿಗೆ ಹೋಗಿ ಆಶೀರ್ವಾದ ಪಡೆದಿದ್ದೇನೆ' ಎಂದರು. ಹರಪನಹಳ್ಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಕರುಣಾಕರ ರೆಡ್ಡಿ ಅವರೂ ಹಿರಿಯೂರು ತಾಲ್ಲೂಕಿನ ಕೋಡಿಹಳ್ಳಿಯ ಆದಿಜಾಂಬವ ಮಠ ಸೇರಿದಂತೆ ವಿವಿಧ ಮಠಗಳಿಗೆ ಭೇಟಿ ಕೊಟ್ಟಿದ್ದರು.

ಮತದಾರರನ್ನು ಅನೇಕ ಅಂಶಗಳು, ಸಂಸ್ಥೆಗಳು ಪ್ರಭಾವಿಸುತ್ತವೆ. ಅದರಲ್ಲಿ ಮಠಗಳೂ ಸೇರಿವೆಯೇ? ಸೇರಿದ್ದರೆ ಅವುಗಳ ಪಾಲು ಎಷ್ಟು? ಪ್ರಭಾವಿಸುವ ಬಗೆ ಹೇಗೆ ಎಂಬುದು ಕುತೂಹಲಕಾರಿ. ಮಠಗಳ ಜತೆ ಒಡನಾಟ ಉಳ್ಳವರಿಂದ ಇಂತಹವರಿಗೆ ಮತ ನೀಡಿ ಎಂಬ ಸಂದೇಶಗಳು ಗುಟ್ಟಾಗಿ ರವಾನೆಯಾಗುತ್ತವೆ ಎಂದು ಕೆಲವರು ಹೇಳುತ್ತಾರೆ.

ಹಿಂದೊಮ್ಮೆ ಪ್ರಭಾವಿ ಮಠಾಧೀಶರೊಬ್ಬರು ಇಂತಿಂಥವರನ್ನೇ ಗೆಲ್ಲಿಸಬೇಕು ಎಂದು ಸೂಚನೆ ನೀಡಿದ್ದರಂತೆ. ಇನ್ನೇನು ಚುನಾವಣೆ ಘೋಷಣೆಯಾಗಲಿದೆ ಎನ್ನುವ ಹಂತದಲ್ಲಿ ಜಾತಿ ಸಂಘಟನೆಗೆ ಪೂರಕವಾಗಿ ಸ್ವಾಮಿಗಳು ಕರೆ ಕೊಟ್ಟಿರುವ ನಿದರ್ಶನಗಳಿವೆ. ಎದುರಾಗಬಹುದಾದ ಒಳಹೊಡೆತಗಳಿಂದ ತಪ್ಪಿಸಿಕೊಳ್ಳುವ ಹುನ್ನಾರವಾಗಿಯೂ ರಾಜಕಾರಣಿಗಳು ಮೊದಲೇ ಮಠಗಳ ಮೊರೆ ಹೋಗುತ್ತಾರೆ. ಮಠದ ಜತೆ ಸತ್ಸಂಬಂಧ ಇದೆ ಎಂದು ತೋರಿಸಿಕೊಳ್ಳುವುದಕ್ಕಾಗಿ ಕೆಲವರು ಭೇಟಿ ನೀಡಬಹುದು ಎಂದು ಎರಡನೇ ಹಂತದ ಮುಖಂಡರೊಬ್ಬರು ಸಾಧ್ಯತೆಗಳನ್ನು ಪಟ್ಟಿ ಮಾಡಿದರು.

`ನಾವು ರಾಜಕೀಯದಿಂದ ದೂರ'
>ಚುನಾವಣೆ ವೇಳೆ ರಾಜಕಾರಣಿಗಳು ಮಠಗಳಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ವೃಷಭಪುರಿ ಮಹಾಸಂಸ್ಥಾನ ಬೃಹನ್ಮಠದ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿ ಅವರನ್ನು ಮಾತನಾಡಿಸಿದಾಗ ಶ್ರೀಗಳು, `ನಾವು ರಾಜಕೀಯದಿಂದ ದೂರ' ಎಂದೇ ಮಾತು ಆರಂಭಿಸಿದರು.

`ಮಠಕ್ಕೆ ಬಂದವರಿಗೆ ಆಶೀರ್ವಾದ ಮಾಡುತ್ತೇವೆ. ಚುನಾವಣೆಗೆ ಸಂಬಂಧಿಸಿದಂತೆ ಭಕ್ತರಿಗೆ ಯಾವುದೇ ಸೂಚನೆ ನೀಡುವುದಿಲ್ಲ. ಮಾರ್ಗದರ್ಶನವನ್ನೂ ಮಾಡುವುದಿಲ್ಲ. ಸರ್ಕಾರದಿಂದ ನಾವು ಏನನ್ನೂ ಅಪೇಕ್ಷಿಸುವುದಿಲ್ಲ. ಸರ್ಕಾರ ನಮ್ಮ ಮಠಕ್ಕೆ ಏನನ್ನೂ ನೀಡಿಲ್ಲ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT