ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಕ್ತಿ ಎದುರು ಸೋತ ಪಕ್ಷ !

Last Updated 6 ಜನವರಿ 2011, 7:00 IST
ಅಕ್ಷರ ಗಾತ್ರ

ಚಿಂತಾಮಣಿ:  ಚಿಂತಾಮಣಿ ಕ್ಷೇತ್ರ ಮೊದಲಿನಿಂದಲೂ ಪಕ್ಷ ಅಥವಾ ಬಿ-ಫಾರಂ  ಆಧಾರಿತ ಕ್ಷೇತ್ರವಲ್ಲ, ಇಲ್ಲಿ ವ್ಯಕ್ತಿ ಮುಖ್ಯವೇ ಹೊರತು ಪಕ್ಷವಲ್ಲ  ಎಂಬುದನ್ನು ಮತದಾರರು ಮತ್ತೊಮ್ಮೆ ತೋರಿಸಿದ್ದಾರೆ. ಇಲ್ಲಿ ವ್ಯಕ್ತಿ ಎದುರು ಪಕ್ಷ ಸೋತಿದೆ.  ಶಾಸಕರು ತಮ್ಮ ಬೆಂಬಲಿಗರಿಗೆ ಪಕ್ಷದ ಚಿನ್ನೆ ಇಲ್ಲದೆ ಪಕ್ಷೇತರರಾಗಿ ನಿಲ್ಲಿಸಿ ಜಿಲ್ಲಾ ಪಂಚಾಯಿತಿಯ ಎಲ್ಲ 5 ಸ್ಥಾನಗಳನ್ನು ಮತ್ತು ತಾಲ್ಲೂಕು ಪಂಚಾಯಿತಿ 18 ಸ್ಥಾನಗಳಲ್ಲಿ 15 ನ್ನು ಬಾಚಿಕೊಳ್ಳುವುದರ ಮೂಲಕ ಚಿಂತಾಮಣಿ ತಮ್ಮ ಭದ್ರಕೋಟೆಯನ್ನು ಮತ್ತಷ್ಟು ಭದ್ರಪಡಿಸಿಕೊಂಡಿದ್ದಾರೆ.

ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯ ಫಲಿತಾಂಶದ ಬಗ್ಗೆ ನಗರ ಹಾಗೂ ತಾಲ್ಲೂಕಿನ ಎಲ್ಲೆಡೆ ವಿಚಾರ ವಿಮರ್ಶೆ, ಚರ್ಚೆಗಳು ನಡೆಯುತ್ತಿರುವುದು ಸಾಮಾನ್ಯವಾಗಿದೆ. ನಾಲ್ಕು ಜನ ಸೇರಿದ ಕಡೆಯೆಲ್ಲ ಫಲಿತಾಂಶದ ಮಾತೇ ಪ್ರಧಾನವಾಗಿರುವುದು ಇಂದಿನ ವಿಶೇಷವಾಗಿತ್ತು. ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಒಂದು ಜಿಲ್ಲಾ ಪಂಚಾಯಿತಿ ಹಾಗೂ 3 ತಾಲ್ಲೂಕು ಪಂಚಾಯಿತಿ ಕ್ಷೆತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಿರಲಿಲ್ಲ.  ಜಿಲ್ಲಾ ಪಂಚಾಯಿತಿಯಲ್ಲಿ ಕಳೆದ ಬಾರಿ ಇದ್ದ ರೀತಿಯಲ್ಲೇ ಒಂದು ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಕಾಂಗ್ರೆಸ್ ಮತ್ತು 5 ಶಾಸಕರ ಕಾಂಗ್ರೆಸ್ ಅಭ್ಯರ್ಥಿಗಳಿದ್ದರು ಸ್ಥಾನಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ವಿಸರ್ಜಿತ ತಾಲ್ಲೂಕು ಪಂಚಾಯಿತಿಯಲ್ಲಿ 15 ಶಾಸಕರ ಬೆಂಬಲಿತ ಸದಸ್ಯರು 3 ಜನ ಕೇಂದ್ರ ಸಚಿವರ ಬೆಂಬಲಿಗ ಸದಸ್ಯರು ಹಾಗೂ 3 ಜೆಡಿಎಸ್ ಸದಸ್ಯರಿದ್ದರು ಈಗಲೂ ಶಾಸಕರ 15 ಬೆಂಬಲಿಗರು ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ 2 ಸ್ಥಾನಗಳನ್ನು ಜೆ.ಡಿ.ಎಸ್‌ನಿಂದ ಕಿತ್ತಕೊಂಡು ತನ್ನ ಸದಸ್ಯರ ಸಂಖ್ಯೆಯನ್ನು 5 ಕ್ಕೆ ಏರಿಸಿಕೊಂಡರೆ ಜೆ.ಡಿ.ಎಸ್ ಒಂದು ಸ್ಥಾನಕ್ಕೆ ಕುಸಿದಿದೆ.

ಶಾಸಕ ಡಾ.ಎಂ.ಸಿ.ಸುಧಾಕರ್ ಕೇಂದ್ರ ಸಚಿವರಿಗೆ ಸೆಡ್ಡು ಹೊಡೆದು ತನ್ನ ಬೆಂಬಲಿಗರನ್ನು ಪಕ್ಷೇತರನ್ನಾಗಿ ಕಣಕ್ಕೆ ಇಳಿಸಿ 15 ಸ್ಥಾನಗಳಲ್ಲಿ ಜಯಭೇರಿ ಭಾರಿಸಿ ತಾಲ್ಲೂಕು ಪಂಚಾಯಿತಿಯಲ್ಲಿ ತಮ್ಮ ಪ್ರಭುತ್ವ ಸಾಧಿಸಿದ್ದಾರೆ. ಕಾಂಗ್ರೆಸ್‌ನ ದಾಯಾದಿಗಳು  ತಮ್ಮ ಪರಿಸ್ಥಿತಿಯನ್ನು ಉತ್ತಮಪಡಿಸಿಕೊಂಡರೆ ಜೆಡಿಎಸ್ ಮತ್ತು ಬಿಜೆಪಿಗೆ ಮತದಾರರು ಬಲವಾದ ಹೊಡೆತ ನೀಡಿದ್ದಾರೆ. ರಾಜ್ಯದಲ್ಲಿ ಆಡಳಿತಾರೂಡ ಪಕ್ಷವಾದ ಬಿಜೆಪಿ ತಾಲ್ಲೂಕಿನಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.  ತಾಲ್ಲೂಕಿನಲ್ಲಿ ಬಲವಾದ ವಿರೋಧ ಪಕ್ಷವಾಗಿದ್ದ ಜೆ.ಡಿ.ಎಸ್‌ನ ಶಕ್ತಿ ಗಮನಾರ್ಹವಾಗಿ ಕುಗ್ಗಿದ್ದು  ಕೇವಲ ಒಂದು ಸ್ಥಾನವನ್ನು ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಎರಡನೇ ಸ್ಥಾನಕ್ಕೆ ದೂಡಲ್ಪಟ್ಟಿದೆ.

ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿ ಜೆ.ಕೆ.ಕೃಷ್ಣಾರೆಡ್ಡಿ ಕಳೆದ ಎರಡು ವರ್ಷಗಳಿಂದ ಕ್ಷೇತ್ರದಲ್ಲಿ ದಾನ, ಧರ್ಮದ ಜತೆಗೆ ವೈಯುಕ್ತಿಕವಾಗಿ ಹಣ ಹಂಚುವುದನ್ನು ಕಾಯಕ ಮಾಡಿಕೊಂಡಿದ್ದು ಈ ಬಾರಿ ತಾಲ್ಲೂಕಿನ ಚಿತ್ರಣವನ್ನೇ ಬದಲಾಯಿಸುವುದಾಗಿ ಬೀಗಿದ್ದರೂ ಮತದಾರರು ಅವರ ಲೆಕ್ಕಾಚಾರಗಳನ್ನು ತಲೆ ಕೆಳಗೆ ಮಾಡಿದ್ದಾರೆ. ಕಳೆದ ಬಾರಿ 3 ಸ್ಥಾನಗಳಿದ್ದುದು ಈ ಬಾರಿ ಸ್ಥಾನವನ್ನು ನೀಡುವುದರ ಮೂಲಕ ಜನತೆ ಅವರ ವಿರುದ್ದ ಮುನಿಸಿಕೊಂಡಿರುವುದು ಸ್ಪಷ್ಟವಾಗಿ ಗೋಚರಿಸಿದೆ.

ಚುನಾವಣೆಯಿಂದ ಚುನಾವಣೆಗೆ ಶಾಸಕರು ತಮ್ಮ ಶಕ್ತಿಯನ್ನು ಗಮನಾರ್ಹವಾಗಿ ಹೆಚ್ಚಿಸಿಕೊಂಡಿದ್ದಾರೆ. ಕೈವಾರ ಜಿಲ್ಲಾ ಪಂಚಾಯಿತಿಯ ಪ್ರಮುಖ ಅಭ್ಯರ್ಥಿ ಟಿ.ಎನ್.ರಾಜಗೋಪಾಲ್ ಮತ್ತು ಊಲವಾಡಿ ತಾಲ್ಲೂಕು ಪಂಚಾಯಿತಿಯ ವೈ.ಬಿ.ಅಶ್ವತ್ಥನಾರಾಯಣಬಾಬು ಅವರಿಗೆ ಹಿನ್ನಡೆ ನೀಡಿದ್ದಾರೆ. ತನ್ನ ಕ್ಷೇತ್ರದ ಜನತೆ ಆಸೆ, ಅಮಿಷಗಳಿಗೆ ಮತ್ತು ಕುತಂತ್ರ, ಕುಚೇಷ್ಟೆ ರಾಜಕೀಯಕ್ಕೆ ಮರುಳಾಗದೆ ಅಭಿವೃದ್ದಿ ರಾಜಕೀಯವನ್ನು ಬೆಂಬಲಿಸುತ್ತಾರೆ ಎಂದು ಶಾಸಕ ಡಾ.ಎಂ.ಸಿ.ಸುಧಾಕರ್ ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿಯ ಸೋಲು ಅತ್ಯಂತ ದಯನೀಯವಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧಿಸಿ ಆಡಳಿತಪಕ್ಷದ ಎಲ್ಲ ಸಾಮರ್ಥ್ಯವನ್ನು ಉಪಯೋಗಿಸಿಕೊಂಡು ಯಥೇಚ್ಚವಾಗಿ ಸಂಪನ್ಮೂಲವನ್ನು ಖರ್ಚ್ಚು ಮಾಡಿದರೂ ಒಂದು ಸ್ಥಾನವನ್ನು ಗಳಿಸಲು ಸಾಧ್ಯವಾಗದೆ ತೀವ್ರ ಮುಖಭಂಗವನ್ನು ಅನುಭವಿಸಿದೆ. ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ಜಿಲ್ಲಾ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಅನೇಕ ಮುಖಂಡರು ಪ್ರಚಾರ ನಡೆಸಿದರೂ ಗೆಲುವು ಮರೀಚಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT