ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಕ್ತಿ: ಪವಾಡ ಈಗ ನಡೆದೀತೆ?

Last Updated 25 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

1995ರ ಜೂನ್ ತಿಂಗಳು. ಬಹುಜನ ಸಮಾಜ ಪಕ್ಷದ ನಾಯಕಿ ಕುಮಾರಿ ಮಾಯಾವತಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. `ಇದು ಪ್ರಜಾಪ್ರಭುತ್ವದ ಪವಾಡ~ ಆಗ ಪ್ರಧಾನಿಯಾಗಿದ್ದ ಪಿ.ವಿ. ನರಸಿಂಹ ರಾವ್ ಬಾಯಿಂದ ಹೊರಟ ಉದ್ಗಾರ ಅದು.

ಪಿವಿಎನ್ ಅವರ ಆ ಮಾತು ಖಂಡಿತಾ ಅತಿಶಯೋಕ್ತಿಯಲ್ಲ. ಮಾಯಾವತಿ ಅವರ ಮೂರು ದಶಕಗಳ ರಾಜಕೀಯ ಏಳುಬೀಳುಗಳು, ಸಾಮಾನ್ಯ ಶಾಲಾ ಶಿಕ್ಷಕಿಯಾಗಿದ್ದ ಅವರು ರಾಜಕೀಯ ಪಕ್ಷವೊಂದಕ್ಕೆ ಕಾಲಿಟ್ಟು ದೇಶದ ಅತಿ ದೊಡ್ಡ ರಾಜ್ಯವೊಂದರ ಮುಖ್ಯಮಂತ್ರಿ ಗಾದಿಯನ್ನು ಸ್ವಂತ ಸಾಮರ್ಥ್ಯದಿಂದ  ಏರುವವರೆಗೆ ಅವರು ನಡೆಸಿದ ಹೋರಾಟ, ಅವರಲ್ಲಿರುವ ಅದಮ್ಯ ಛಲ, ಬೂದಿಯಿಂದ ಎದ್ದು ಬರುವಂತಹ ಫಿನಿಕ್ಸ್ ಹಕ್ಕಿಯಂತೆ ಮತ್ತೆ ಮತ್ತೆ ಹುಟ್ಟುವ ಗುಣವನ್ನು ನೋಡಿದಾಗಲೆಲ್ಲ ಅವರ ಬೆಳವಣಿಗೆ `ಪವಾಡ~ದಂತೆ ಕಾಣುತ್ತದೆ.

ಬಡ ದಲಿತ ಕುಟುಂಬದಲ್ಲಿ ಹುಟ್ಟಿದ ಮಾಯಾವತಿ, ದೇಶದ ದೊಡ್ಡ ರಾಜಕೀಯ ಪಕ್ಷಗಳನ್ನು ನಡುಗಿಸುವಷ್ಟು ಅಗಾಧವಾಗಿ ಬೆಳೆದಿರುವುದನ್ನು ಅವಲೋಕಿಸಿದಾಗ ಭಾರತದ ಪ್ರಜಾಪ್ರಭುತ್ವಕ್ಕಿರುವ ಶಕ್ತಿಯೂ ಮನದಟ್ಟಾಗುತ್ತದೆ. ಆದರೆ, ಪ್ರಸ್ತುತ  ಉತ್ತರ ಪ್ರದೇ ವಿಧಾನಸಭಾ ಚುನಾವಣೆ ಅಂತಿಮ ಘಟ್ಟ ತಲುಪಿರುವ ಈ ಸಂದರ್ಭದಲ್ಲಿ ಮಾಯಾವತಿ ಅವರ ರಾಜಕೀಯ ಭವಿಷ್ಯದ ಕುರಿತು ಖಚಿತವಾಗಿ ಏನೂ ಹೇಳಲು ಸಾಧ್ಯವಿಲ್ಲದ ವಾತಾವರಣವಿದೆ.

ಅವರು ಈ ಹಿಂದೆ ಮಾಡಿಕೊಂಡ ಅವಾಂತರಗಳನ್ನು ಬದಿಗಿಟ್ಟು ದಲಿತ ಪರ ಕಾಳಜಿಯ ಆಶಯವನ್ನು ಭದ್ರವಾಗಿಟ್ಟುಕೊಂಡು ಚತುರ ರಾಜಕೀಯ ಹೆಜ್ಜೆ ಇಡುತ್ತ ಹೋದಲ್ಲಿ, ಒಂದಲ್ಲ ಒಂದು ದಿನ ಪ್ರಧಾನಿ ಗದ್ದುಗೆ ಏರುವ ಅರ್ಹತೆ ಅವರ ವ್ಯಕ್ತಿತ್ವಕ್ಕೆ ಇದೆ ಎಂದು ನಿಶ್ಚಿತವಾಗಿ ಹೇಳಬಹುದು.

ಪ್ರಧಾನಿ ಸ್ಥಾನಕ್ಕೆ ಮಾಯಾವತಿ ಮಾತ್ರವಲ್ಲ ಅವರ ಹಾಗೆ ಅರ್ಹತೆ ಮತ್ತು ಮಹತ್ವಾಕಾಂಕ್ಷೆ ಇಟ್ಟುಕೊಂಡಿರುವ ಇನ್ನಿಬ್ಬರು ಮಹಿಳಾ ರಾಜಕಾರಣಿಗಳೆಂದರೆ ತಮಿಳುನಾಡಿನ  `ಅಮ್ಮ~ ಜಯಲಲಿತಾ, `ಬಂಗಾಳದ ಹುಲಿ~ ಮಮತಾ ಬ್ಯಾನರ್ಜಿ. ಈ ಇಬ್ಬರ ರಾಜಕೀಯ ಹಾಗೂ ವೈಯಕ್ತಿಕ ಜೀವನಕ್ಕೂ ಉತ್ತರ ಪ್ರದೇಶದ ಮೆಚ್ಚಿನ `ಬೆಹನ್‌ಜೀ~ಯ ಜೀವನಕ್ಕೂ ಅಸಾಧಾರಣ ಹೋಲಿಕೆಯಿದೆ.

ಮಮತಾ ಬ್ಯಾನರ್ಜಿ ಅವರಂತೆಯೇ ಮಾಯಾವತಿ ಸಹ ಬೇರು ಮಟ್ಟದ ರಾಜಕಾರಣ ಮಾಡಿ ಮೇಲೆ ಬಂದವರು. ಬೀದಿಬದಿಯಲ್ಲಿ, ಬಿರು ಬಿಸಿಲಲ್ಲಿ ನಿಂತು ಹೋರಾಟ ಮಾಡಿದವರು. ಬಂಗಾಳದ ಮೂರು ದಶಕಗಳ ಕಮ್ಯುನಿಸ್ಟ್ ಸರ್ಕಾರವನ್ನು ಮಮತಾ ತಮ್ಮ `ತೃಣ ಮೂಲ~ ಶಕ್ತಿಯಿಂದಲೇ ಕಿತ್ತೊಗೆದರೆ, ಉತ್ತರ ಪ್ರದೇಶದಲ್ಲಿ ಹಿಂದುಳಿದವರ, ಮುಸ್ಲಿಮರ ಮತಗಳನ್ನೇ ನೆಚ್ಚಿಕೊಂಡಿದ್ದ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳನ್ನು ಮಾಯಾವತಿ `ಜಾತಿ ಹೊಂದಾಣಿಕೆ ರಾಜಕಾರಣ~ದ ತಂತ್ರದಿಂದಲೇ ಬುಡಮೇಲು ಮಾಡಿದ್ದರು.

ಆದರೆ ಒಮ್ಮೆ ಅಧಿಕಾರದ ಏಣಿ ಏರಿದ ಮೇಲೆ ಮಾಯಾವತಿ ಜಯಲಲಿತಾ ಅವರಂತೆಯೇ ಆದರು. `ವ್ಯಕ್ತಿ ಆರಾಧನೆ~ಯ ಗೀಳಿಗೆ ಬಲಿಯಾದರು. ಪಕ್ಷದ ಕಾರ್ಯಕರ್ತರು, ಸಚಿವರು, ಶಾಸಕರಿಂದ ಕಾಲು ಮುಟ್ಟಿ ನಮಸ್ಕರಿಸುವುದನ್ನು ಇಷ್ಟಪಡತೊಡಗಿದರು. ಬೆಂಬಲಿಗರಿಂದ ನೋಟಿನ ಹಾರ ಹಾಕಿಸಿಕೊಂಡರು!

ಇಂತಹ `ಅವಾಂತರ~ಗಳು ಒಂದೆರಡಲ್ಲ. ಆಡಳಿತದ ವಿಚಾರದಲ್ಲೂ ಜಯಲಲಿತಾ ಅವರನ್ನು ಅನುಸರಿಸಿದ ಮಾಯಾವತಿ ಪಕ್ಷದ ಕಾರ್ಯಕರ್ತರು, ಶಾಸಕರು, ಸಚಿವರನ್ನೂ ಹತ್ತಿರ ಬಿಟ್ಟುಕೊಳ್ಳದೇ ಆಪ್ತ ಸಲಹಾ ಕೂಟದ ಮೂಲಕ ಕಾರ್ಯನಿರ್ವಹಿಸತೊಡಗಿದರು. ಮಾಧ್ಯಮಗಳನ್ನೂ ದೂರವಿಟ್ಟರು. ಜಯಾ ಅವರಂತೆಯೇ ಸುಖಲೋಲುಪ ಜೀವನದತ್ತ ಆಕರ್ಷಿತರಾದರು.

ಉತ್ತರ ಪ್ರದೇಶದಾದ್ಯಂತ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ತಮ್ಮ ಪಕ್ಷದ ಚಿಹ್ನೆಯಾದ ಆನೆ, ತಮ್ಮ ಗುರು ಕಾನ್ಶೀರಾಂ ಮತ್ತು ತಮ್ಮದೇ ಪ್ರತಿಮೆಗಳನ್ನು ಮಾಯಾ ನಿಲ್ಲಿಸಿದರು. ದಲಿತರಲ್ಲಿ ಆತ್ಮಾಭಿಮಾನ, ಹೆಮ್ಮೆ ಮೂಡಿಸಲು ಇದು ಸಹಕಾರಿ ಎಂಬುದು ಅವರ ಬೆಂಬಲಿಗರ ಅನಿಸಿಕೆ.

ದಲಿತ ಶಕ್ತಿಯಿಂದ ಅಧಿಕಾರದ ಗದ್ದುಗೆ ಏರಿದ ಅವರು ಆ ಸಮುದಾಯದ ಹಿತಾಸಕ್ತಿಗಳನ್ನೇ ನಿರ್ಲಕ್ಷ್ಯಿಸಿದರು ಎಂಬ ದೂರು ಈಗ ವ್ಯಾಪಕವಾಗಿ ಕೇಳಿಬಂದಿದೆ. ಮಾಯಾವತಿ ಅವರ ಐದು ವರ್ಷದ ಆಡಳಿತದಲ್ಲಿ ಉತ್ತರ ಪ್ರದೇಶದಲ್ಲಿ ದಲಿತರ ಮೇಲೆ ಸವರ್ಣೀಯರು ನಡೆಸಿದ ದೌರ್ಜನ್ಯ, ದಲಿತ ಹೆಣ್ಣು ಮಕ್ಕಳ ಮೇಲೆ ನಡೆದ ಅತ್ಯಾಚಾರ, ಮೇಲುವರ್ಗದ ಯುವತಿಯರನ್ನು ಪ್ರೀತಿಸಿದ ತಪ್ಪಿಗೆ ಕೊಲೆಯಾಗಿ ಹೋದ ದಲಿತ ಯುವಕರು ಸಾಕಷ್ಟಿದ್ದಾರೆ. ದಲಿತ ನಾಯಕಿಯ ಆಡಳಿತದಲ್ಲಿ ದಲಿತರಿಗೆ ನ್ಯಾಯ ಸಿಕ್ಕಲಿಲ್ಲ ಎಂದ ಆರೋಪಗಳಿವೆ.

ಈ ಐದು ವರ್ಷಗಳ ಅವಧಿಯಲ್ಲಿ ಮಾಯಾ ವಿರುದ್ಧ ಭ್ರಷ್ಟಾಚಾರದ ನೇರ ಆರೋಪ ಇಲ್ಲದಿದ್ದರೂ, ಬಿಎಸ್‌ಪಿಯ ಹಲವು ಸಚಿವರು ಭ್ರಷ್ಟಾಚಾರದ ಸುಳಿಯಲ್ಲಿ ಸಿಕ್ಕಿಹಾಕಿಕೊಂಡರು. ಆ ಪಕ್ಷದ ಕೆಲ ಶಾಸಕರ ಮೇಲೆ ಕೊಲೆ, ಸುಲಿಗೆ ಆರೋಪ ಕೇಳಿಬಂದಿತ್ತು.
 
ಭ್ರಷ್ಟಾಚಾರಿಗಳು, ಅಪರಾಧದ ಹಿನ್ನೆಲೆಯುಳ್ಳವರಿಗೆ ಈ ಬಾರಿ ಅವರು ಬಿಲ್‌ಕುಲ್ ಟಿಕೆಟ್ ನಿರಾಕರಿಸಿದ್ದಾರೆ. ಹಾಗಿದ್ದರೂ ಈಗ  ಮಾಯಾ `ಮ್ಯಾಜಿಕ್~ ಕೆಲಸ ಮಾಡುವುದು ಅನುಮಾನ ಎನ್ನುತ್ತಾರೆ ರಾಜಕೀಯ ಪಂಡಿತರು. ರಾಹುಲ್ ಗಾಂಧಿ ವರ್ಚಸ್ಸು, ಎಸ್‌ಪಿಯ ಅಖಿಲೇಶ್ ಯಾದವ್ ಪ್ರಭಾವವೂ ಮಾಯಾ ಮತಗಳನ್ನು ಕಸಿಯಬಹುದು ಎನ್ನಲಾಗುತ್ತಿದೆ.

ಉತ್ತರ ಪ್ರದೇಶ ಚುನಾವಣೆಯ ಫಲಿತಾಂಶ ಏನೇ ಆದರೂ ಮಾಯಾವತಿ ಕುಗ್ಗುವುದಿಲ್ಲ. ಅವರದ್ದು ಅವರ ಪಕ್ಷದ ಚಿಹ್ನೆಯಾದ ಆನೆಯಂತಹ ನಡೆ ಎನ್ನುತ್ತಾರೆ ಅವರನ್ನು ಹತ್ತಿರದಿಂದ ಬಲ್ಲವರು. 35 ವರ್ಷಗಳ ಹಿಂದೆ ಅಪ್ಪನ ವಿರೋಧ ಲೆಕ್ಕಿಸದೇ ಆಗ ಸಣ್ಣ ನಾಯಕರಾಗಿದ್ದ ಕಾನ್ಶೀರಾಂ ಹಿಂದೆ ಹೊರಟ ಮಾಯಾವತಿ, ಈ ಮಟ್ಟದ ನಾಯಕಿಯಾಗಿ ಬೆಳೆಯುವವರೆಗೆ ಅವರ ವ್ಯಕ್ತಿತ್ವ ಅಷ್ಟೇ ಘನೀಕರಿಸಿದೆ. `ಪವರ್ ಪಾಲಿಟಿಕ್ಸ್~ನ ತಂತ್ರಗಳೆಲ್ಲ ಈಗ ಅವರಿಗೆ ಕರಗತ.

ದೇಶದ ರಾಜಕಾರಣಕ್ಕೆ ತಿರುವು ಕೊಡಬಲ್ಲ ಉತ್ತರ ಪ್ರದೇಶದ ಚುಕ್ಕಾಣಿ ಹಿಡಿದಿದ್ದ  ಮಾಯಾವತಿ ತಮ್ಮ ಜವಾಬ್ದಾರಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಬಹುದಿತ್ತು. ಆ ರಾಜ್ಯಕ್ಕಿಂತ ಹದಗೆಟ್ಟಿದ್ದ ಪಕ್ಕದ ಬಿಹಾರವನ್ನು ನಿತೀಶ್ ಕುಮಾರ್ ಪರಿವರ್ತಿಸಿರುವಾಗ,ಅದು ಮಾಯಾಗೂ ಸಾಧ್ಯವಾಗುತ್ತಿರಲಿಲ್ಲವೇ ಎಂದು ಪ್ರಶ್ನಿಸುವವರೂ ಇದ್ದಾರೆ.

2008ರ ಚುನಾವಣೆಯಲ್ಲಿ ಮಾಯಾ ಸಾಧಿಸಿದ ಗೆಲುವು ಕೇವಲ ಅವರ ವೈಯಕ್ತಿಕ ಗೆಲುವಾಗಿರಲಿಲ್ಲ. ಅದು ಬರೀ ಉತ್ತರ ಪ್ರದೇಶದ ದಲಿತರ ಗೆಲುವಾಗಿರಲಿಲ್ಲ. ಇಡೀ ದೇಶದ ಬಹುಜನ ಸಮಾಜದ ಅಂತಃಶಕ್ತಿ ಬಡಿದೆಬ್ಬಿಸುವ ಚೈತನ್ಯ ಆ ಗೆಲುವಿಗಿತ್ತು.
 
ಅಷ್ಟು ವರ್ಷಗಳ ಕಾಲ ರಾಜಕೀಯ ಪಕ್ಷಗಳು ವೋಟ್ ಬ್ಯಾಂಕ್ ಆಗಿ ಮಾತ್ರ ನೋಡುತ್ತಿದ್ದ ದಲಿತರು, ನಾವು ಸಹ ಅಧಿಕಾರ ಹಿಡಿಯಬಲ್ಲೆವು ಎಂದು ದೇಶಕ್ಕೆ ಸಾರಿದ್ದ ಗೆಲುವು ಅದಾಗಿತ್ತು. ಅಧಿಕಾರದ ಮದದಲ್ಲಿ ಮೆರೆದ ಮಾಯಾ ಅಂತಹ ಗೆಲುವಿನ ಘನತೆ ಕಾಯ್ದುಕೊಳ್ಳಲು ವಿಫಲರಾದರೆ ಎಂಬ ಅನುಮಾನ ಈಗ ಉದ್ಭವಿಸುತ್ತಿದೆ.

ಐಎಎಸ್ ಕನಸು

ಮಾಯಾವತಿ ಹುಟ್ಟಿದ್ದು (ಜನವರಿ 15, 1956) ನೋಯ್ಡಾ ಸಮೀಪದ ಬಾದಲ್‌ಪುರ ಗ್ರಾಮದ ಜಾಟವಾ (ಚಮ್ಮಾರ) ಕುಟುಂಬದಲ್ಲಿ. ತಂದೆ ಪ್ರಭು ದಾಸ್ ಅಂಚೆ ಕಚೇರಿಯ ನೌಕರರು. ಮಾಯಾವತಿ ಮತ್ತಿಬ್ಬರು ಸೋದರಿಯರ ನಂತರ ಪ್ರಭುದಾಸ್‌ಗೆ ಆರು ಗಂಡು ಮಕ್ಕಳು ಹುಟ್ಟಿದ್ದರು. ಸಾಲಾಗಿ ಮೂರು ಹೆಣ್ಣು ಮಕ್ಕಳು ಹುಟ್ಟಿದ್ದಕ್ಕೆ ತಾಯಿ ರಾಮ್‌ರತಿಯನ್ನು ಬಿಟ್ಟು ಮತ್ತೊಂದು ಮದುವೆಯಾಗಲು ಹೊರಟಿದ್ದ ತಂದೆಯ ಬಗ್ಗೆ ಮಾಯಾವತಿಗೆ ಅಸಮಾಧಾನವಿತ್ತು. ತಮ್ಮಂದಿರ ಶಿಕ್ಷಣಕ್ಕೆ ಅಪ್ಪ ಆದ್ಯತೆ ನೀಡುವುದು ಅವರಿಗೆ ಅಸಹನೆ ಮೂಡಿಸಿತ್ತು.

ಮನೆಯ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಲೇಬೇಕು ಎಂದು ಪಟ್ಟು ಹಿಡಿದಿದ್ದ ಅಜ್ಜ ಮಂಗಲ್ ಸೇನ್ (ತಂದೆಯ ತಂದೆ) ಅಂದರೆ ಮಾಯಾಗೆ ಮೊದಲಿನಿಂದಲೂ ಪ್ರೀತಿ. ಓದುವುದರಲ್ಲಿ ಜಾಣೆಯಾಗಿದ್ದ ಮಾಯಾ ಪದವಿ ನಂತರ ಎಲ್‌ಎಲ್‌ಬಿ, ಬಿ. ಎಡ್ ಓದಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದರು. ತಮ್ಮ ಸಮಾಜದ ಜನರಿಗೆ ನ್ಯಾಯ ದೊರಕಿಸಿಕೊಡುವುದಕ್ಕಾಗಿ ಕಲೆಕ್ಟರ್ ಆಗಬೇಕು ಎಂದು ಐಎಸ್‌ಎ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು. ಹಾಗೆ ಪುಸ್ತಕ ಗುಡ್ಡೆ ಹಾಕಿಕೊಂಡು ಅಭ್ಯಾಸ ನಿರತರಾಗಿದ್ದಾಗ 1977ರ ಚಳಿಗಾಲದ ಒಂದು ರಾತ್ರಿ ಬಹುಜನ ಸಮಾಜ ಪಕ್ಷದ ಸಂಸ್ಥಾಪಕ ಕಾನ್ಶೀರಾಂ ಮಾಯಾ ಮನೆಯ ಬಾಗಿಲು ತಟ್ಟಿದ್ದರು.

ನೂರಾರು ಐಎಎಸ್ ಅಧಿಕಾರಿಗಳು ಸಲಾಂ ಹೊಡೆಯುವಷ್ಟು ಎತ್ತರಕ್ಕೆ ಬೆಳೆಸುತ್ತೇನೆ ಎಂದು ಮಾತು ನೀಡಿದರು. ಅದರಂತೆ ಮಾಯಾವತಿಯನ್ನು ಈ ಎತ್ತರಕ್ಕೆ ಬೆಳೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT