ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಕ್ತಿ: ಬಂಧನದಲ್ಲಿ ಬಾಪೂ

Last Updated 1 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನೋಟಿಗಾಗಿ ವೋಟು ಪ್ರಕರಣದಲ್ಲಿ ಆರೋಪಿಯಾಗಿ ಈಗ ತಿಹಾರ್ ಜೈಲಿನಲ್ಲಿ ಬಂದಿಯಾಗಿರುವ ಬಿಜೆಪಿಯ ಸುಧೀಂದ್ರ ಕುಲಕರ್ಣಿ ಕನ್ನಡಿಗರು. ಮನೆಯವರು ಹಾಗೂ ಅವರ ಹುಟ್ಟೂರಿನ ಪ್ರತಿಯೊಬ್ಬರೂ ಅವರನ್ನು ಬಾಪೂ ಎಂದೇ ಕರೆಯುತ್ತಾರೆ. ಅವರು ಹುಟ್ಟಿದ್ದು 1957ರ ಫೆಬ್ರುವರಿ 17ರಂದು. ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಕೃಷ್ಣಾ ನದಿ ದಂಡೆಯಲ್ಲಿರುವ ಸತ್ತಿ ಎಂಬ ಪುಟ್ಟ ಗ್ರಾಮದಲ್ಲಿ. ತಂದೆ ದಿವಂಗತ ಮಧ್ವ ಶ್ರೀನಿವಾಸ ಕುಲಕರ್ಣಿ, ತಾಯಿ ಭಾರತಿ. ಉತ್ತರಾದಿ ಮಠದ ಮಾಧ್ವ ಪರಂಪರೆಯ ಸಂಪ್ರದಾಯಸ್ಥ ಮನೆತನದಲ್ಲಿ ಹುಟ್ಟಿದರೂ ಕರ್ಮಠ ಆಚರಣೆಗಳಿಂದ ಗಾವುದ ಅಂತರ ಕಾಪಾಡಿಕೊಂಡವರು ಮಧ್ವ ಶ್ರೀನಿವಾಸರು.

ಮಧ್ವ ಶ್ರೀನಿವಾಸರ ಆರು ಜನ ಮಕ್ಕಳಲ್ಲಿ ಸುಧೀಂದ್ರ ಐದನೆಯವರು. ಸುಧೀಂದ್ರರ ಅಕ್ಕ ಎಲ್ಲರಿಗಿಂತ ಹಿರಿಯಾಕೆ. ಉಳಿದವರೆಲ್ಲ ಗಂಡು ಮಕ್ಕಳೇ. ಸತ್ತಿ ಗ್ರಾಮ ಸುಧೀಂಧ್ರರ ಅಜ್ಜನ ಊರು. ತಾಯಿ ನಿಪ್ಪಾಣಿಯವರು. ಹಳ್ಯಾಳ ಸಮೀಪದ ಅವರಖೋಡ್ ಸರಹದ್ದಿನಲ್ಲಿ ತಂದೆಯವರ ಪಿತ್ರಾರ್ಜಿತ ಜಮೀನು ಹಾಗೂ ಒಂದಿಷ್ಟು ಚರಾಸ್ತಿ ಇತ್ತು. ಮಧ್ವ ಶ್ರೀನಿವಾಸ  ಕುಲಕರ್ಣಿ ಯವರು ಬಿಎಸ್ಸಿ ಕೃಷಿ ಪದವೀಧರರು. ದುಡಿಯುವ ಹಂಬಲದಲ್ಲಿ ಹುಬ್ಬಳ್ಳಿಗೆ ಬಂದು ಆಯಿಲ್ ಎಂಜಿನ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ವ್ಯಾಪಾರ ಚೆನ್ನಾಗಿಯೇ ನಡೆಯುತ್ತಿತ್ತು. ಕುಟುಂಬ ಸುಖವಾಗಿತ್ತು. ಸುಧೀಂದ್ರ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸ ವನ್ನು ಮುಗಿಸಿದ್ದು ಘಂಟಿಕೇರಿಯ ಸರ್ಕಾರಿ ಕನ್ನಡ ಶಾಲೆಯಲ್ಲಿ. ಈ ವೇಳೆಯಲ್ಲೇ ಮಧ್ವ ಶ್ರೀನಿವಾಸರು ಕಾರು ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡರು.

ನೋಡನೋಡುತ್ತಿದ್ದಂತೆ ವ್ಯಾಪಾರ ನೆಲಕಚ್ಚಿತು. ಕೆಲವೇ ದಿನಗಳಲ್ಲಿ ಅವರ ಕುಟುಂಬದ ಬದುಕು ದುರ್ಭರವಾಯಿತು. ಕಷ್ಟಗಳು ಒಂದರ ಹಿಂದೆ ಒಂದರಂತೆ ಮುಕುರಿ ಕೊಂಡಾಗ ಅವರ ಕುಟುಂಬ ಅದುರಿಹೋಯಿತು. ನಿರ್ವಾಹವಿಲ್ಲದೆ ಸುಧೀಂದ್ರ ಮತ್ತು ಅವರ ಅಕ್ಕ ಅಥಣಿಗೆ ಬಂದರು. ಇನ್ನುಳಿದ ಸೋದರರು ತಾಯಿಯ ಜೊತೆ ತವರು ಮನೆ ನಿಪ್ಪಾಣಿ ಬಳಿಯ ಅಕ್ಕೋಳಕ್ಕೆ ತೆರಳಿದರು. ಶ್ರೀನಿವಾಸರಿಗೆ ಅಥಣಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಜೀವನ ನಡೆಸಬೇಕಾದಂತಹ ದುಃಸ್ಥಿತಿ ಬಂತು. ಅರಗಿಸಿಕೊಳ್ಳಲಾಗದ ಬಡತನದ ನಡುವೆಯೇ ಕುಟುಂಬ ಕೃಷಿಗೆ ಶರಣಾಯಿತು. ಮನೆಯಲ್ಲಿ  ಒಂದು ಹೊತ್ತಿನ ಊಟಕ್ಕೂ ತತ್ವಾರ. ಬಾಲಕ ಸುಧೀಂದ್ರರಿಗೆ ಯಾರಾದರೂ ಹಳೆಯ ಅಂಗಿ ಕೊಟ್ಟರೆ ಅದನ್ನೇ ತೊಟ್ಟುಕೊಳ್ಳಬೇಕಾದಂತಹ ದಟ್ಟದಾರಿದ್ರ್ಯ. ಇಂತಹ ಪರಿಸ್ಥಿತಿಯಲ್ಲೇ ಸುಧೀಂದ್ರ ಸುಮಾರು ಮೂರು ವರ್ಷಗಳನ್ನು ಅವಡುಕಚ್ಚಿ ಸಹಿಸಿ ಕೊಂಡರು. ಎಸ್‌ಎಸ್‌ಎಲ್‌ಸಿವರೆಗಿನ ಶಿಕ್ಷಣವನ್ನು ಅಥಣಿಯ ಜಾಧವ್‌ಜಿ ಆನಂದ್‌ಜಿ ಹೈಸ್ಕೂಲಿನಲ್ಲಿ ಮುಗಿಸಿದರು. ತರುವಾಯ ಪಿಯು ವಿಜ್ಞಾನ ಶಿಕ್ಷಣವನ್ನೂ ಅಲ್ಲಿನ ಎಸ್‌ಎಂಎಸ್ ಕಾಲೇಜಿನಲ್ಲಿ ಪೂರೈಸಿದರು. ಪ್ರಥಮ ಪಿಯುಸಿಯಲ್ಲಿ ರಾಜ್ಯಕ್ಕೆ ಐದನೇ ರ‌್ಯಾಂಕ್ ಬಂದರೆ, ದ್ವಿತೀಯ ವರ್ಷ ರಾಜ್ಯಕ್ಕೆ ಎರಡನೇ ರ‌್ಯಾಂಕ್ ಗಳಿಸಿ ತಮ್ಮ ಪ್ರತಿಭೆ ಏನೆಂಬುದನ್ನು ಬಾಹ್ಯ ಪ್ರಪಂಚಕ್ಕೆ ತೋರಿಸಿದರು. ಮುಂದೆ ಮುಂಬೈನ ಐಐಟಿಯಲ್ಲಿ ಬಿ.ಟೆಕ್ ಪದವಿಗೆ ಸಲೀಸಾಗಿ ಸೇರ್ಪಡೆ. ಈ ದಿನಗಳಲ್ಲಿ ಎಡಪಂಥೀಯ ವಿಚಾರಧಾರೆಗಳಿಗೆ ಮನಸೋತರು. ಸುಧೀಂದ್ರ ಎಷ್ಟರ ಮಟ್ಟಿಗೆ ಮಾರ್ಕ್ಸಿಸ್ಟ್ ಆದರೆಂದರೆ ಬಿ.ಟೆಕ್ ಓದು ಅರ್ಧಕ್ಕೇ ನಿಲ್ಲಿಸಿ 1980- 81ರಲ್ಲಿ ವಾಪಸ್ ಕರ್ನಾಟಕಕ್ಕೆ ಹಿಂದಿರುಗಿದರು. ಹುಬ್ಬಳ್ಳಿಯನ್ನು ಕಾರ್ಯಕ್ಷೇತ್ರ ಮಾಡಿಕೊಂಡು ರಾಜ್ಯದಾದ್ಯಂತ ತಮ್ಮನ್ನು ಕಾರ್ಮಿಕ ಚಳವಳಿಯಲ್ಲಿ ತೊಡಗಿಸಿಕೊಂಡರು. ಮನಸ್ಸಿಗೆ ಏನನ್ನಿಸಿತೋ ಏನೋ ಬಂದ ರಭಸದಲ್ಲೇ ಮತ್ತೆ ಮುಂಬೈಗೆ ಮರಳಿದರು. ಅರ್ಧಕ್ಕೇ ನಿಲ್ಲಿಸಿದ್ದ ಸಿವಿಲ್ ಎಂಜಿನಿಯರಿಂಗ್ ಪದವಿ ಪೂರೈಸಿದರು. ಆದರೆ ಎಂಜಿನಿಯರ್ ಆಗಿ ಒಂದು ದಿನವೂ ಕೆಲಸ ಮಾಡಲೇ ಇಲ್ಲ. ಚಿಕ್ಕಂದಿನಿಂದಲೂ ಓದಿನಲ್ಲಿ  ಕುಡುಮಿಯಂತಿದ್ದ ಸುಧೀಂದ್ರ ಸ್ವಭಾವತಃ ಉತ್ತಮ ವಾಗ್ಮಿ. ಬಿ.ಟೆಕ್ ಮುಗಿಯುತ್ತಿದ್ದಂತೆಯೇ ಮುಂಬೈನಲ್ಲೇ ಇಂಗ್ಲಿಷ್ ಮಾಸ ಪತ್ರಿಕೆ `ಸೈನ್ಸ್ ರಿಪೋರ್ಟರ್~ ನಲ್ಲಿ ಪತ್ರಕರ್ತನಾಗಿ ವೃತ್ತಿಜೀವನ ಆರಂಭಿಸಿದರು. ಮುಳುಂದ್‌ನಲ್ಲಿ ಅವರ ಠಿಕಾಣಿ. ತದನಂತರ `ಸಂಡೇ ಅಬ್ಸರ್ವರ್~ ಪತ್ರಿಕೆ ಸೇರಿದರು. ಅಲ್ಲಿಂದ ರಸ್ಸಿ ಕರಾಂಜಿಯಾ ಸಂಪಾದಕತ್ವದ `ಬ್ಲಿಟ್ಜ್~ ಪತ್ರಿಕಾ ಬಳಗದ್ಲ್ಲಲೊಬ್ಬರಾಗಿ ಪ್ರವರ್ಧಮಾನಕ್ಕೆ ಬಂದರು. ಖ್ವಾಜಾ ಅಹಮದ್ ಅಬ್ಬಾಸ್ ಬ್ಲಿಟ್ಜ್‌ನಲ್ಲಿ ಬರೆಯುತ್ತಿದ್ದ ಜನಪ್ರಿಯ `ಲಾಸ್ಟ್ ಪೇಜ್~ ಅಂಕಣವನ್ನು ಅವರ ನಿಧನಾನಂತರ ಸಮರ್ಥವಾಗಿ ಅವರು ನಿಭಾಯಿಸಿದರು.

ಆಗ ಎಲ್.ಕೆ.ಅಡ್ವಾಣಿಯವರ 1990-91ರ ರಥ ಯಾತ್ರೆ ಸಮಯ. ಅದೇನನ್ನಿಸಿತೊ? ಯಾವ ಕಾರಣಕ್ಕಾಗಿ ವಿಚಾರಗಳ ಮಜಲು ಅವರ ಮೆದುಳಿನಲ್ಲಿ ಮಗ್ಗುಲು ಬದಲಿಸಿತೋ ಗೊತ್ತಿಲ್ಲ. ಎಡಪಂಥೀಯ ಚಿಂತನಾ ಸರಣಿಗಳಿಂದ ವಿಮುಖರಾದ ಸುಧೀಂದ್ರ ಛಂಗನೆ ಸಂಘ ಪರಿವಾರಕ್ಕೆ ನೆಗೆದರು. ಅಡ್ವಾಣಿ ರಥಯಾತ್ರೆಯುದ್ದಕ್ಕೂ ಅವರ ಜೊತೆಗಿದ್ದು ಬಿಜೆಪಿಗೆ ನಿಕಟವಾದರು. ಬೆಳಗಾಗುವುದರೊಳಗೆ ಅಡ್ವಾಣಿಯ ಬಲಗೈ ಬಂಟನಾಗಿಬಿಟ್ಟರು.
ತಮ್ಮ ಬೌದ್ಧಿಕ ಪ್ರೌಢಿಮೆ ಹಾಗೂ ಸಾರ್ವಜನಿಕ ಜೀವನದ ಪ್ರಾಮಾಣಿಕತೆಯಿಂದಾಗಿ ಮುಂದೆ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಭಾಷಣಗಳನ್ನೂ ಬರೆದು ಕೊಡುವ ಹಂತಕ್ಕೆ ತಲುಪಿದರು.  ದೆಹಲಿ-ಲಾಹೋರ್ ಮಧ್ಯೆ ಬಸ್ ಸಂಚಾರದ ವಾಜಪೇಯಿ ಕನಸನ್ನು ನನಸು ಮಾಡಲು ಸಹಕರಿಸಿದರು. `ಭಾರತ ಪ್ರಕಾಶಿಸುತ್ತಿದೆ~ ಎಂಬ ಉದ್ಘೋಷವನ್ನು ಬಿಜೆಪಿಯ ಬಾಯಿಗೆ ಹಾಕಿದವರು ಸುಧೀಂದ್ರರೇ. ಒಂದು ರೀತಿ ಅಧಿಕಾರದ ಮೊಗಸಾಲೆಗೆ ಬಯಸಿಯೇ ಪ್ರವೇಶ ಪಡೆದುಕೊಂಡರೇನೊ ಎಂಬಂತೆ ಹಟಕ್ಕೆ ಬಿದ್ದು ಬದುಕತೊಡಗಿದರು. ಈ ವೇಳೆಯಲ್ಲೇ ಅವರು ಬಿಜೆಪಿಯ ಚಿಂತಕರ ಚಾವಡಿಯಲ್ಲಿ ಎಷ್ಟು ಪ್ರಮುಖರಾದರೆಂದರೆ ಗೋವಿಂದಾಚಾರ್ಯರೂ ನೇಪಥ್ಯಕ್ಕೆ ಸರಿಯಬೇಕಾಯಿತು.

ಸುಧೀಂದ್ರ ಕುಲಕರ್ಣಿ ಬಿಜೆಪಿಗೆ ಏಕೆ ಬಂದರು ಎಂಬುದೇ ಒಂದು ಒಗಟು. ಹುಬ್ಬಳ್ಳಿಯಲ್ಲಿ ತಂದೆ ಮಧ್ವ ಶ್ರೀನಿವಾಸರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ದಿನವೇ ಅವರು ಬದಲಾಗಿದ್ದರು. ಮುಂಜಿಯನ್ನೇ ಮಾಡಿಸಿಕೊಳ್ಳದೆ ದೇವರು ದಿಂಡರಿಂದ ದೂರಸರಿದು ನಿರೀಶ್ವರವಾದಿಯಾದರು. ಗೊಡ್ಡು ಸಂಪ್ರದಾಯಗಳನ್ನು ಪ್ರಶ್ನಿಸುತ್ತ, ಸನಾತನ ಆಚರಣೆಗಳನ್ನು ಧಿಕ್ಕರಿಸುತ್ತಲೇ ಗಂಭೀರವಾದ ಮತ್ತು ಎಡಪಂಥೀಯ ಹೊದಿಕೆಯ ಬದುಕನ್ನು ತಮ್ಮದಾಗಿಸಿಕೊಂಡಿದ್ದರು. ಅಥಣಿಯಂತಹ ಪುಟ್ಟ ಪಟ್ಟಣದಲ್ಲಿ ಇದ್ದುಕೊಂಡೇ ತಮ್ಮ ಜ್ಞಾನ, ಭಾಷೆ ಹಾಗೂ ಅರಿವಿನ ಹರಹನ್ನು ಏಕಲವ್ಯನಂತೆ ವಿಸ್ತರಿಸಿಕೊಂಡು ಬಂದರು.  ಸುಧೀಂದ್ರರನ್ನು ಒಬ್ಬ ಗಂಭೀರ ಮನುಷ್ಯನನ್ನಾಗಿ ರೂಪಿಸಿದ್ದು ಅವರ ಬಡತನ, ಪ್ರೌಢಶಾಲೆಯಲ್ಲಿ ಅವರ ಗಣಿತದ ಮೇಷ್ಟ್ರಾಗಿದ್ದ ಕೆ.ಬಿ. ಫಡಕೆಯವರ ಆದರ್ಶ ಹಾಗೂ ಸೋದರ ಮಾವ ಸಖಾರಾಂ ಗುಳಾಣಿಯವರ ಅಚ್ಚಳಿಯದ ವ್ಯಕ್ತಿತ್ವ.

ಕೊಲ್ಲಾಪುರದ ಪನ್ಹಾಳ ಬಳಿಯ ನೇಬಾಪುರ ಗ್ರಾಮದಲ್ಲಿ ಗಾಂಧಿವಾದಿ ಸಖಾರಾಂ ಗುಳಾಣಿ ಅವರು ಆ  ದಿನಗಳ್ಲ್ಲಲೇ ಶಾಲೆ ತೆರೆದು ಎಲ್ಲ ಜಾತಿ, ವರ್ಗಗಳ ಮಕ್ಕಳಿಗೆ ಪಾಠ ಹೇಳಿದ ಸಾಹಸಿ. ಶತಾಯುಷಿಯಾದ ಸಖಾರಾಂ ಮೂರು ವರ್ಷಗಳ ಹಿಂದೆ ತೀರಿಕೊಂಡರು. ಫಡಕೆ ಯವರದಂತೂ ಮಾದರಿಯ ಜೀವನ. ಅಂಥವರ ಮಾರ್ಗದರ್ಶನದಲ್ಲಿ ಬದುಕನ್ನು ರೂಪಿಸಿಕೊಂಡ ಸುಧೀಂದ್ರ ಅವರಿಗೆ ಸಾರ್ವಜನಿಕ ಜೀವನದಲ್ಲಿ  ಆಸಕ್ತಿ ಎಂದೂ ಕಡಿಮೆ ಆಗಲೇ ಇಲ್ಲ. ಬಡ ಬಗ್ಗರ ಬಗ್ಗೆ ಅವರಿಗೆ ಅಪಾರ ಪ್ರೀತಿ. ಒಪ್ಪಿಕೊಂಡ ಕೆಲಸವನ್ನು ಪ್ರಾಮಾಣಿಕವಾಗಿ ಬೆನ್ನತ್ತಿ ಮಾಡುವ ಛಲ. ಎಲ್ಲರೊಡನೆಯೂ ಮುಕ್ತವಾಗಿ ಬೆರೆಯುವ ಅಂತಃಕರಣ ಅವರದು. ಸರಳ ಜೀವನ, ಯಾವುದೇ ಪರಿಸ್ಥಿತಿಗೂ ಹೊಂದಿಕೊಂಡು ಹೋಗುವ ಮುಕ್ತ ಮನಸ್ಸು ಸುಧೀಂದ್ರರದು.

ಅಥಣಿಯಲ್ಲಿದ್ದಾಗಲೇ ತಮ್ಮ ಕಿರಿಯ ಸಹಪಾಠಿಯನ್ನು ಪ್ರೀತಿಸಿ (26ನೇ ವಯಸ್ಸಿನಲ್ಲಿ) ಮದುವೆಯಾದರು. ಅವರದು ಅಂತರ್ಜಾತೀಯ ವಿವಾಹ. ಪತ್ನಿ ಕಾಮಾಕ್ಷಿ ಭಾಟೆ ವೃತ್ತಿಯಲ್ಲಿ ವೈದ್ಯೆ. ಈಗ ಅವರು ಮುಂಬೈನ ಕಿಂಗ್ ಎಡ್ವರ್ಡ್ ಸ್ಮಾರಕ ಆಸ್ಪತ್ರೆಯ ವೈದ್ಯಕೀಯ ಕಾಲೇಜಿನಲ್ಲಿ  ಸೇವೆ ಸಲ್ಲಿಸುತ್ತಿದ್ದಾರೆ. ಪುಟ್ಟ ಫ್ಲಾಟೊಂದರಲ್ಲಿ ಅತ್ತೆ, ಪತಿ ಹಾಗೂ ಏಕೈಕ ಪುತ್ರಿ ತಪಸ್ ಜೊತೆ ಅವರ ವಾಸ. ತಪಸ್ ಮೊನ್ನೆಮೊನ್ನೆಯಷ್ಟೇ ತನ್ನ ಪಿಯು ಶಿಕ್ಷಣ ಮುಗಿಸಿ ಅಮೆರಿಕದಲ್ಲಿ ಬಿ.ಎ. ಪದವಿ ತರಗತಿಗೆ ಸೇರಿದ್ದಾರೆ. ಮುದ್ದಿನ ಮಗಳನ್ನು ಅಮೆರಿಕದ ಪಶ್ಚಿಮ ಕರಾವಳಿಯ ಮೌಂಟ್ ಹಾಲಿಯೋಕ್ ಕಾಲೇಜಿನಲ್ಲಿ ಭರ್ತಿ ಮಾಡಿಸಲಿಕ್ಕೆಂದೇ ಸುಧೀಂದ್ರ ಕುಲಕರ್ಣಿ ನ್ಯೂಯಾರ್ಕಿಗೆ ಹೋಗಿದ್ದರು. ಭಾರತಕ್ಕೆ ಬರುತ್ತಿದ್ದಂತೆಯೇ ವೋಟಿಗಾಗಿ ನೋಟು ಪ್ರಕರಣದ ಆರೋಪದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ತಿಹಾರ್ ಜೈಲು ಸೇರಿದ್ದಾರೆ. ಜೈಲು ಸೇರಿದ್ದಕ್ಕೆ ಸುಧೀಂದ್ರ ಅವರಲ್ಲಿ ವೈಯಕ್ತಿಕವಾಗಿ ಯಾವುದೇ ಅಳುಕಿಲ್ಲ. ಅದರಿಂದ ಅವರಿಗೆ ಯಾವುದೇ ನಷ್ಟವೂ ಇಲ್ಲ.

ಆದರೆ ಬಿಜೆಪಿ ಅವರ ಬಂಧನವನ್ನು ಗಂಭೀರವಾಗಿ ಪರಿಗಣಿಸಿದೆ. ಸ್ವತಃ ಅಡ್ವಾಣಿ ಅವರೇ ತಿಹಾರ್ ಜೈಲಿಗೆ ಹೋಗಿ ಸುಂಧೀಂದ್ರರನ್ನು ಭೇಟಿ ಮಾಡಿ ಬಂದಿದ್ದಾರೆ. ಅಡ್ವಾಣಿ ಮತ್ತೆ ರಥ ಯಾತ್ರೆಗೆ ಸನ್ನದ್ಧರಾಗಿದ್ದಾರೆ. ಯಾತ್ರೆ ಆರಂಭವಾಗುವ ಹೊತ್ತಿಗೆ ಸುಧೀಂಧ್ರ ಜೈಲಿನಿಂದ ಹೊರಕ್ಕೆ ಬರಬಹುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT