ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಕ್ತಿ: ಸಮಾಜಮುಖಿ ಕಾವಿಧಾರಿ

Last Updated 18 ಜೂನ್ 2011, 19:30 IST
ಅಕ್ಷರ ಗಾತ್ರ

ಮೊನ್ನೆ ಅಣ್ಣಾ ಹಜಾರೆ ಲೋಕಪಾಲ ಮಸೂದೆಯ ಕುರಿತು ಅರಿವು ಮೂಡಿಸಲು ಗುಜರಾತ್‌ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲು ನಿಂತಿದ್ದರು. ಅಹಮದಾಬಾದ್‌ನ ವೇದಿಕೆ. ಅವರ ಜೊತೆ ಸ್ವಾಮಿ ಅಗ್ನಿವೇಶ್ ಕೂಡ ಇದ್ದರು.

ವೇದಿಕೆಯ ಒಂದು ಪಕ್ಕದಲ್ಲಿ ಮಹಂತ ನಿತ್ಯಾನಂದ ದಾಸ್ ಬಂದು ನಿಂತು ಅಗ್ನಿವೇಶ್ ಅವರ ಜತೆಯಲ್ಲಿ ಮಾತನಾಡಲು ಬಯಸಿರುವುದಾಗಿ ಅಲ್ಲಿದ್ದ ಕಾರ್ಯಕರ್ತರಿಗೆ ಹೇಳಿ ಕಳುಹಿಸಿದರು. ಅಲ್ಲಿಗೆ ಬಂದ ಅಗ್ನಿವೇಶರು ವೇದಿಕೆಯ ಕೆಳಗಿದ್ದವರ ಜತೆಯಲ್ಲಿ ಮಾತನಾಡಲು ಬಾಗಿದರು. ನಿತ್ಯಾನಂದ ದಾಸ್ ಫಟೀರನೆ ಅಗ್ನಿವೇಶ್ ಕಪಾಳಕ್ಕೆ ಜೋರಾಗಿ ಬಿಗಿದರು. ತಕ್ಷಣ ಅಲ್ಲಿದ್ದ ಪೊಲೀಸರು ನಿತ್ಯಾನಂದರನ್ನು ವಶಕ್ಕೆ ತೆಗೆದುಕೊಂಡರು.

ಕೆಲವು ದಿನಗಳ ಹಿಂದೆ ಶ್ರೀನಗರದಲ್ಲಿ ಭಾಷಣ ಮಾಡುತ್ತಾ ಅಗ್ನಿವೇಶ್, `ಅಮರನಾಥ ಯಾತ್ರೆ ಒಂದು ಧಾರ್ಮಿಕ ಕಪಟತನ. ಅಲ್ಲಿರುವ ಶಿವನ ಹಿಮಪ್ರತಿಮೆ ಕೃತಕವಾಗಿ ನಿರ್ಮಿಸಿದ್ದು~ ಎಂದು ಹೇಳಿ ಅನೇಕರ ಟೀಕಾಂಬುಗಳನ್ನು ಎದುರಿಸಿದ್ದರು. ನಿತ್ಯಾನಂದ ದಾಸ್ ಪ್ರಹಾರ ಮಾಡಿದ್ದೂ ಅಂಥ ಟೀಕಾಸ್ತ್ರವನ್ನೇ. ಉಳಿದವರೆಲ್ಲಾ ಮಾತಿನ ಬಾಣ ಬಿಡುತ್ತಿದ್ದರೆ ನಿತ್ಯಾನಂದ ಹೊಡೆಯುವಷ್ಟು ಭಾವಾವೇಶದಿಂದಿದ್ದರು. ಅಗ್ನಿವೇಶ್ ಅವರತ್ತ ಬೂಟನ್ನು ತೂರುವ ಧೈರ್ಯಶಾಲಿಗೆ 51 ಸಾವಿರ ರೂಪಾಯಿ ಬಹುಮಾನ ಕೊಡುವುದಾಗಿಯೂ ಇದೇ ನಿತ್ಯಾನಂದರು ಕೆಲವೇ ದಿನಗಳ ಮೊದಲು ಘೋಷಿಸಿದ್ದರು. ಹಿಂದೂ ಸಂಘಟನೆಯೊಂದು ಅಗ್ನಿವೇಶ್ ಅವರನ್ನು ಶಿಕ್ಷಿಸುವವರಿಗೆ 20 ಲಕ್ಷ ಬಹುಮಾನ ನೀಡುವುದಾಗಿ ಪ್ರಕಟಿಸಿತ್ತು.

ಇಂಥ ಯಾವ ಆಕಸ್ಮಿಕ, ಅಚ್ಚರಿಗಳಿಗೂ ಅಂಜದ ಅಗ್ನಿವೇಶ್ ಹೆಸರಿಗೆ ತಕ್ಕಂತೆ ಧರ್ಮದ ಕುರಿತು ಮೊದಲಿನಿಂದಲೂ ಮಾತಿನ ಬೆಂಕಿಯನ್ನು ಉಗುಳುತ್ತಾ ಬಂದವರು. ಭಾರತದಲ್ಲಿ 50 ಲಕ್ಷ ಸಾಧು-ಸಂತರಿದ್ದಾರೆ. ಆದರೆ, ಸ್ವಾಮಿ ಅಗ್ನಿವೇಶ್ ಭಿನ್ನ ನೆಲೆಯಿಂದ ಗುರುತಾದವರು. ಬಡವರ, ಶೋಷಿತರ ಪರ ಹಲವಾರು ದಶಕಗಳಿಂದ ಕೆಲಸ ಮಾಡುವ ಮೂಲಕ ಅವರು `ಆಡದೇ ಮಾಡುವವನು ಉತ್ತಮನು~ ಎಂಬುದನ್ನು ಸಾರಿದವರು. ತಮ್ಮ ಇಡೀ ಬದುಕನ್ನು ನೊಂದವರ ಉದ್ಧಾರಕ್ಕೆ ಮುಡಿಪಾಗಿಟ್ಟ ಅವರದ್ದು ಧರ್ಮಕ್ಕೆ ಸಂಬಂಧಿಸಿದಂತೆ ತಮಗೆ ಅನ್ನಿಸಿದ್ದನ್ನು ಹಿಂದೆ ಮುಂದೆ ನೋಡದೆ ಹೇಳುವ ಧಾರ್ಷ್ಟ್ಯದ ವ್ಯಕ್ತಿತ್ವ. ಕಾವಿ ತೊಟ್ಟ ಅವರಂಥ ರಾಜಕಾರಣಿ ತುಂಬಾ ಅಪರೂಪ.

ಅಗ್ನಿವೇಶ್ ಅವರ ಮೂಲ ಹೆಸರು ವೇಪಾ ಶ್ಯಾಮರಾವ್. ಛತ್ತೀಸಗಢದ ಸಕ್ತಿ ಎಂಬಲ್ಲಿ 1939, ಸೆಪ್ಟೆಂಬರ್ 21ರಂದು ಹುಟ್ಟಿದ್ದರು. ಆಂಧ್ರಪ್ರದೇಶದ ಸಾಂಪ್ರದಾಯಿಕ ಕುಟುಂಬದ ಅವರು ಕಾನೂನು ಹಾಗೂ ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು.

1963ರಿಂದ ಐದು ವರ್ಷ ಕೋಲ್ಕತ್ತೆಯ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ವಿಷಯದ ಪಾಠ ಮಾಡಿದರು. ಆರ್ಯ ಸಮಾಜದ ತತ್ವಗಳಿಂದ ಪ್ರಭಾವಿತರಾದ ಅವರು 1970ರಲ್ಲಿ `ಆರ್ಯ ಸಭಾ~ ಎಂಬ ರಾಜಕೀಯ ಪಕ್ಷವನ್ನು ಹುಟ್ಟುಹಾಕಿದರು. ಸನ್ಯಾಸ ದೀಕ್ಷೆ ತೆಗೆದುಕೊಂಡಿದ್ದೂ ಆಗಲೇ. ನಾಲ್ಕು ವರ್ಷಗಳ ನಂತರ ಅವರು ಬರೆದ `ವೈದಿಕ್ ಸಮಾಜ್~ ಎಂಬ ಪುಸ್ತಕವು ಅವರು ನಂಬಿದ ಆರ್ಯ ಸಮಾಜದ ತತ್ವಗಳನ್ನು ಒಳಗೊಂಡಿತ್ತು. ಬಂಡವಾಳಶಾಹಿ ಹಾಗೂ ಕಮ್ಯುನಿಸ್ಟ್ ಮಾದರಿಗಳನ್ನು ಧಿಕ್ಕರಿಸಿದ ಈ ತತ್ವಗಳು ಸಾಮಾಜಿಕ ಅಧ್ಯಾತ್ಮವನ್ನು ಪ್ರತಿಪಾದಿಸಿದ್ದವು.

ಹರಿಯಾಣ ವಿಧಾನಸಭೆಗೆ ಸದಸ್ಯರಾಗಿ ಅವರು ಆಯ್ಕೆಯಾಗಿದ್ದು 1977ರಲ್ಲಿ. 1979ರಿಂದ ಮೂರು ವರ್ಷ ಆ ರಾಜ್ಯದ ಶಿಕ್ಷಣ ಸಚಿವರಾಗಿಯೂ ಕೆಲಸ ಮಾಡಿದರು. ಸಚಿವರಾಗಿದ್ದಾಗಲೇ, 1981ರಲ್ಲಿ `ಜೀತಪದ್ಧತಿ ಮುಕ್ತಿ ಮೋರ್ಚಾ~ ಕಟ್ಟಿದರು. ದೆಹಲಿ, ರಾಜಸ್ತಾನ, ಹರಿಯಾಣ ಮೊದಲಾದೆಡೆ ಗಣಿಗಾರಿಕೆಯಲ್ಲಿ ಕೆಲಸ ಮಾಡುವ ಜೀತದಾಳುಗಳಿಗೆ ಸ್ವಾತಂತ್ರ್ಯ ಕೊಡಿಸಲು ಅವರು ಇನ್ನಿಲ್ಲದಂತೆ ಹೋರಾಡಿದರು.

ಉತ್ತರಪ್ರದೇಶದ ಮಿಜಾಪುರ್-ಬಂಡೋದ ಕಾರ್ಪೆಟ್ ಗ್ರಾಮೋದ್ಯೋಗ, ಫಿರೋಜಾಬಾದ್‌ನ ಗಾಜಿನ ಬಳೆಗಳ ಉದ್ಯಮ, ತಮಿಳುನಾಡಿನ ಕೊಡೈಕೆನಾಲ್ ಅರಣ್ಯ, ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕು ಮೊದಲಾದೆಡೆ ರಾಜಾರೋಷವಾಗಿ ನಡೆಯುತ್ತಿದ್ದ ಜೀತಪದ್ಧತಿಯ ವಿರುದ್ಧ ಅವರು ದನಿಯೆತ್ತಿದರು. ಕಳೆದ 30 ವರ್ಷಗಳಲ್ಲಿ ಸುಮಾರು ಒಂದೂಮುಕ್ಕಾಲು ಲಕ್ಷ ಜೀತದಾಳುಗಳಿಗೆ ಅವರು ಮುಕ್ತಿ ಕೊಡಿಸಿದ್ದಾರೆ.

ಇವರಲ್ಲಿ ಕೆಲ ಬಾಲ ಕಾರ್ಮಿಕರೂ ಇ್ದ್ದದ್ದರೆಂಬುದು ಮುಖ್ಯ. `ಜೀತಪದ್ಧತಿ ಮುಕ್ತಿ ಮೋರ್ಚಾ~ದ ಅಧ್ಯಕ್ಷರಾಗಿ ಅವರು ಈಗಲೂ ಕಾರ್ಯನಿರ್ವಹಿಸುತ್ತಿದ್ದಾರೆ.

ಸತಿ ಪದ್ಧತಿ ಹಾಗೂ ಹೆಣ್ಣು ಭ್ರೂಣಹತ್ಯೆಯನ್ನು ವಿರೋಧಿಸಿ ನಡೆದ ಚಳವಳಿಗಳಲ್ಲೂ ತೊಡಗಿದ ಅಗ್ನಿವೇಶ್, ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ದೇಶದ ಉದ್ದಗಲದಲ್ಲಿ ಸಂಚರಿಸಿದರು. ಭೂಮಿ, ನೀರು, ಅರಣ್ಯ ಹಾಗೂ ಮೀನುಗಾರಿಕೆ ವಿವಾದಗಳ ವಿರುದ್ಧ ದನಿಯೆತ್ತಿದ್ದೇ ಅಲ್ಲದೆ ಶೋಷಿತರಿಗೆ ನ್ಯಾಯ ದೊರಕಿಸಿಕೊಡುವ ಯತ್ನಗಳನ್ನೂ ಮಾಡಿದರು. ಮಹಿಳೆಯರು ಮದ್ಯಪಾನ ವಿರೋಧಿ ಪ್ರತಿಭಟನೆಗಳಲ್ಲಿ ಪಾಲ್ಗೊಂಡಾಗ ಅವರಿಗೆ ಸಾಥ್ ನೀಡಿದರು.

1999ರಲ್ಲಿ `ಸಾಮಾಜಿಕ ನ್ಯಾಯಕ್ಕಾಗಿ ಧರ್ಮಗಳು~ ಎಂಬ ಸಂಘಟನೆ ತಲೆ ಎತ್ತಿತು. ಅದರ ಹುಟ್ಟಿನಲ್ಲೂ ಅಗ್ನಿವೇಶ್ ಪಾತ್ರವಿದೆ. ಬೇರೆ ಧರ್ಮಗಳನ್ನು  ಅರ್ಥೈಸಿಕೊಳ್ಳುವಿಕೆ ಹಾಗೂ ಸಹಿಷ್ಣುತೆಯ ಬಗ್ಗೆ ಜನಜಾಗೃತಿ ಮೂಡಿಸುವುದು ಈ ಸಂಘಟನೆಯ ಉದ್ದೇಶವಾಗಿತ್ತು. `ಧರ್ಮ, ರಾಜಕೀಯ ಹಾಗೂ ಸಾಮಾಜಿಕ ಕ್ರಿಯೆಗಳನ್ನು ಪ್ರತ್ಯೇಕವಾಗಿ ನೋಡುವುದು ನನ್ನಿಂದ ಸಾಧ್ಯವಿಲ್ಲ. ಸಾಮಾಜಿಕ ಸಂಬಂಧಗಳ ಪರಿಧಿಯಲ್ಲೇ ಎಲ್ಲವೂ ಒಂದಕ್ಕೊಂದು ಮಿಳಿತವಾಗಿವೆ. ಧರ್ಮದಲ್ಲಿನ ಒಳ್ಳೆಯ ಅಂಶಗಳು ರಾಜಕೀಯದಲ್ಲಿ   ಬಿಂಬಿತವಾಗಬೇಕು~ ಎಂದು ಅಗ್ನಿವೇಶ್ ಪ್ರತಿಪಾದಿಸಿದ್ದರು.

ಇಂದಿರಾಗಾಂಧಿ ಅವರ ಹತ್ಯೆಯಾದ ನಂತರ 1984ರಲ್ಲಿ ಸಿಖ್ಖರ ವಿರುದ್ಧ ವ್ಯಾಪಕ ಹಿಂಸಾಚಾರ ನಡೆಯಿತು. ಇದಕ್ಕೆ ಅಗ್ನಿವೇಶ್ ಸಾಕ್ಷಿಯಾಗಿದ್ದರು. ಮುಗ್ಧ ಸಿಖ್ಖರ ಹತ್ಯೆಗಳು ನಡೆದು, ಅವರ ಕುಟುಂಬದವರು ಕಷ್ಟಕ್ಕೆ ಸಿಲುಕಿದಾಗ ಅವರೆಲ್ಲರಿಗೆ ಪರಿಹಾರ ಕೊಡಿಸಲು ಮುಂದಾದರು. `ಇದನ್ನೇ ಕೋಮುವಾದದ ಕರಾಳ ಮುಖವೆನ್ನುವುದು~ ಎಂದು ಆಗ ಅಗ್ನಿವೇಶ್ ಬೇಸರದ ಉಸಿರನ್ನು ಹೊರಹಾಕಿದ್ದರು.

1999ರಲ್ಲಿ ಒರಿಸ್ಸಾದ ಮನೋಹರಪುರದಲ್ಲಿ ರೆವರೆಂಡ್ ಗ್ರಹಾಂ ಸ್ಟೇನ್ಸ್ ಹತ್ಯೆಯಾದಾಗ ಅವರಿಗೆ ಸಂತಾಪ ಸೂಚಕವಾಗಿ ಬಹುಧರ್ಮೀಯರ ಯಾತ್ರೆಯನ್ನು ಅಗ್ನಿವೇಶ್ ಆಯೋಜಿಸಿದರು. ಅದಾದ ಮೂರು ವರ್ಷಗಳ ನಂತರ ಗುಜರಾತ್‌ನಲ್ಲಿ ಮುಸ್ಲಿಮರ ಸಾಲುಸಾಲು ಹತ್ಯೆ ನಡೆದಾಗಲೂ ಅದನ್ನು ಪ್ರತಿಭಟಿಸಿ ಇಂಥದ್ದೇ ಯಾತ್ರೆ ಆಯೋಜಿಸಿದರು.

ಕೋಮುವಾದಕ್ಕೆ ಕುಮ್ಮಕ್ಕು ಕೊಡುವ, ಸಂಕೀರ್ಣವಾದ ಸಮಸ್ಯೆಗಳನ್ನು ಸೃಷ್ಟಿಸುವ ಧರ್ಮವನ್ನು ಮೊದಲಿನಿಂದಲೂ ಅಗ್ನಿವೇಶ್ ವಿರೋಧಿಸುತ್ತಲೇ ಬಂದಿದ್ದಾರೆ.

ಧರ್ಮಗಳು ಒಂದಕ್ಕೊಂದು ಸಂವಾದಿಸುತ್ತಾ ಜಗತ್ತನ್ನು ಒಗ್ಗೂಡಿಸಬೇಕು ಎಂಬುದು ಅವರ ಉಮೇದು. ಅದಕ್ಕೆಂದೇ ಅವರು ಧರ್ಮಗಳು ಪ್ರತಿಪಾದಿಸುವ ಒಳಿತನ್ನಷ್ಟೇ ತಮ್ಮ ಉಪನ್ಯಾಸಗಳಲ್ಲಿ ಹೇಳುತ್ತಾ ಬಂದಿರುವುದು. ದಲಿತರು, ಹರಿಜನರು ಹಾಗೂ ಹಿಂದುಳಿದ ವರ್ಗಗಳ ಉದ್ಧಾರಕ್ಕೂ ಅಗ್ನಿವೇಶ್ ಶ್ರಮಿಸಿರುವುದಕ್ಕೆ ಉದಾಹರಣೆಗಳಿವೆ. ಪುರಿ ಜಗನ್ನಾಥ ದೇವಾಲಯಕ್ಕೆ ಸಕಲ ಧರ್ಮೀಯರಿಗೂ ಪ್ರವೇಶ ಕಲ್ಪಿಸಬೇಕೆಂದು ವಾದಿಸಿ 2005ರಲ್ಲಿ ಪುರೋಹಿತ ವರ್ಗದ ಟೀಕಾಪ್ರಕಾರಕ್ಕೂ ಅವರು ಗುರಿಯಾಗಿದ್ದರು.

ಸಮಕಾಲೀನ ಜೀತಪದ್ಧತಿ ನಿರ್ಮೂಲನೆಗೆಂದು ಇರುವ ವಿಶ್ವಸಂಸ್ಥೆಯ `ಟ್ರಸ್ಟ್ ಫಂಡ್~ನ ಅಧ್ಯಕ್ಷರಾಗಿ 1994ರಿಂದ 2004ರವರೆಗೆ ಕಾರ್ಯ ನಿರ್ವಹಿಸಿರುವ ಸ್ವಾಮಿ ಅಗ್ನಿವೇಶ್ ಅವರಿಗೆ ಶಾಂತಿಸ್ಥಾಪನೆಯ ಯತ್ನಕ್ಕಾಗಿ ಸ್ವೀಡನ್‌ನ `ರೈಟ್ ಲೈವ್ಲಿಹುಡ್~ ಪ್ರಶಸ್ತಿಯ ಗೌರವ ಸಂದಿದೆ.

`ಕೆಲವೇ ಕೆಲವು ಅಪರಾಧಿಗಳು ಇದ್ದ ಮಾತ್ರಕ್ಕೆ ಅವರು ಪ್ರತಿನಿಧಿಸುವ ಧರ್ಮದ ಎಲ್ಲರನ್ನೂ ಅಪರಾಧಿಗಳೆನ್ನುವುದು ತರವಲ್ಲ. ನನ್ನ ಪ್ರಕಾರ ಅಮೆರಿಕ ನಂಬರ್ ಒನ್ ಭಯೋತ್ಪಾದಕ. ಭ್ರಾತೃತ್ವದ ಮಹತ್ವ ಸಾರುವ ಕುರಾನ್ ಹಾಗೂ ಇಸ್ಲಾಂ ಧರ್ಮದ ಬಗ್ಗೆ ಹಗುರವಾಗಿ ಮಾತನಾಡುವುದು ನಿಜಕ್ಕೂ ಅಪರಾಧ~ ಎಂದೂ ಅಗ್ನಿವೇಶ್ ತಮ್ಮ ಉಪನ್ಯಾಸಗಳಲ್ಲಿ ಪದೇಪದೇ ಹೇಳಿದ್ದಾರೆ. ಮುಸ್ಲಿಮರ ಪರವಾದ ಅವರ ಈ ಮಾತಿನಿಂದಾಗಿ ಅನೇಕ ಹಿಂದೂ ಸಂಘಟನೆಗಳು ಅವರನ್ನು `ಸ್ವಧರ್ಮ ವಿರೋಧಿ~ ಎಂದು ಟೀಕಿಸಿದ್ದೂ ಇದೆ.

`ಕಾವಿ ನನ್ನ ಸಮವಸ್ತ್ರ. ಅದು ಸಮಾಜೋ-ಅಧ್ಯಾತ್ಮದ ಸಂಕೇತ. ಶೋಷಿತರ ವಿರುದ್ಧ ದನಿಯೆತ್ತುವ ಧೈರ್ಯವನ್ನು ಅದು ತುಂಬುತ್ತದೆ. ಅದು ತ್ಯಾಗದ ಬಿಂಬ~ ಎನ್ನುವ ಅಗ್ನಿವೇಶ್ ಈಗ ಭ್ರಷ್ಟಾಚಾರದ ವಿರುದ್ಧ ಎದ್ದಿರುವ ಆಂದೋಲನದ ಭಾಗವಾಗಿದ್ದಾರೆ. ಕೊಳ್ಳುಬಾಕ ಸಂಸ್ಕೃತಿ ಹಾಗೂ ಅಭಿವೃದ್ಧಿಯ ಪಾಶ್ಚಿಮಾತ್ಯ ಮಾದರಿಯ ವಿರುದ್ಧ ದನಿಯೆತ್ತುವುದನ್ನು ಮುಂದುವರಿಸಿದ್ದಾರೆ.

`ರಿಲಿಜನ್ ರೆವೊಲ್ಯೂಷನ್ ಅಂಡ್ ಮಾರ್ಕ್ಸಿಸಮ್~, `ಹಿಂದೂಯಿಸಮ್ ಇನ್ ದಿ ನ್ಯೂ ಏಜ್~, `ಹಾರ್ವೆಸ್ಟ್ ಆಫ್  ಹೇಟ್: ಗುಜರಾತ್ ಅಂಡರ್‌ಸೀಜ್~, `ರಿಲಿಜನ್, ಸ್ಪಿರಿಚ್ಯುಆಲಿಟಿ ಅಂಡ್ ಸೋಷಿಯಲ್ ಆಕ್ಷನ್: ನ್ಯೂ ಅಜೆಂಡಾ ಫಾರ್ ಹ್ಯುಮಾನಿಟಿ~ ಇವು ಅಗ್ನಿವೇಶ್ ಬರೆದಿರುವ ಕೃತಿಗಳು.

ಒಂದೊಮ್ಮೆ ಅಗ್ನಿವೇಶ್ ಫಿಲಿಪ್ಪೀನ್ಸ್‌ನ ಮಿಂಡನಾವೋ ದ್ವೀಪಕ್ಕೆ ಹೋಗಿದ್ದರು. ಕಾವಿ ತೊಟ್ಟವರನ್ನು ಅಲ್ಲಿ ಹುನ್ನಾರ ಹೂಡುವವರು ಎಂದೇ ಪರಿಗಣಿಸುತ್ತಾರೆ ಎಂದು ಅನೇಕರು ಹೇಳಿದ್ದೇ ತಡ, ಜೀನ್ಸ್ ಪ್ಯಾಂಟು-ಅಂಗಿ ತೊಟ್ಟು ಎಲ್ಲರೊಡನೆ ಬೆರೆತರು.

ಅಲ್ಲಿಂದ ಹೊರಬಂದ ಮೇಲೆ ಮತ್ತದೇ ಕಾವಿ. `ಕಾವಿ ಸಾಂಕೇತಿಕ. ನನ್ನದು ಹೆಸರಿಗೆ ತಕ್ಕಂತೆ ಅಗ್ನಿ ವೇಷ~ ಎಂದು ಅವರಾಗ ಹೇಳಿದ್ದರಲ್ಲೂ ಅನೇಕ ಅರ್ಥಗಳು ಹುದುಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT