ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಕ್ತಿ ಸ್ಮರಣೆ: ಕಠಿಣ ನೋಟದ ಕರುಣಾಮಯಿ!

Last Updated 13 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಉಗ್ರ ಮುಖಭಾವ. ನಡೆ ನುಡಿ ನೇರ. ನಿರ್ದಾಕ್ಷಿಣ್ಯ ನಿಲುವು. ಮಾತು ತುಸು ಒರಟು. ಅಪರೂಪಕ್ಕೊಮ್ಮೆ ನಕ್ಕರೆ ಆಪ್ತರಿಗೇ ಅಚ್ಚರಿ! ಆದರೆ ಮನಸು ಮಾತ್ರ `ಕಲ್ಲಿನ ಪೆಟ್ಟಿಗೆಯೊಳಗಿರುವ ಮಲ್ಲಿಗೆ ಹೂ~. ಸಿಟ್ಟು ಕಾರುವ ಕಣ್ಣುಗಳಲ್ಲೂ ಕಾಣುವ ಅಂತಃಕರಣ. ಸಹೋದ್ಯೋಗಿಗಳಿಗೆ ಮಾರ್ಗದರ್ಶಿಯಾಗಿ, ನೋವು-ನಲಿವುಗಳಿಗೆ ಸ್ಪಂದಿಸುವಂಥ ಔದಾರ್ಯತೆ.

ದೇಶದ ಮೊದಲ ಭದ್ರತಾ ಸಲಹೆಗಾರ ಎಂಬ ಹೆಗ್ಗಳಿಕೆ  ಹೊತ್ತಿದ್ದ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಪ್ರಧಾನ ಕಾರ್ಯದರ್ಶಿಯಾಗಿದ್ದ ಬ್ರಜೇಶ್ ಮಿಶ್ರಾ ವ್ಯಕ್ತಿತ್ವ ಅವರು ನಿಭಾಯಿಸಿದ್ದ ಹುದ್ದೆಯಷ್ಟೇ ಸಂಕೀರ್ಣ.

ಸೆ 28ರಂದು ಹೃದಯಾಘಾತದಿಂದ ನಿಧನರಾದ ಮಿಶ್ರಾ ದೇಶ ಕಂಡ ಅಪರೂಪದ ರಾಜತಂತ್ರಜ್ಞ. ಎನ್‌ಡಿಎ ಆಡಳಿತದಲ್ಲಿ ರಾಷ್ಟ್ರೀಯ ಭದ್ರತಾ ವ್ಯವಸ್ಥೆಗೆ ಸಾಂಸ್ಥಿಕ ಚೌಕಟ್ಟು ನೀಡಿದ ಧೀಮಂತ. ವಾಜಪೇಯಿ ಅವರ ದೂರದೃಷ್ಟಿಯುಳ್ಳ ವಿದೇಶಿ ನೀತಿ ಜಾರಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಚಾಣಾಕ್ಷ.

1998ರ ನವೆಂಬರ್‌ನಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ನೇಮಕಗೊಂಡ ಅವರು ನಿವೃತ್ತಿಯಾದದ್ದು 2004ರ ಮೇನಲ್ಲಿ. ಆ ಅವಧಿಯಲ್ಲಿ ಭಾರತವನ್ನು ಅಂತರರಾಷ್ಟ್ರೀಯ ವ್ಯವಹಾರಗಳಲ್ಲಿ ಮುಂಚೂಣಿಗೆ ತಂದು ನಿಲ್ಲಿಸಿದ ಹಿರಿಮೆ ಅವರದ್ದು. 

 1998ರಷ್ಟು ಹಿಂದಕ್ಕೆ ಹೋಗೋಣ. ದೇಶದಲ್ಲಿ ಎರಡನೇ ಬಾರಿ ಪೋಖ್ರಾನ್‌ನಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆದಿತ್ತು. ಆಗ ವಿದೇಶಿ ನೀತಿಯನ್ನು ಆಮೂಲಾಗ್ರವಾಗಿ ಬದಲಾಯಿಸುವ ತುರ್ತು ಎದುರಾಯಿತು. ಅಂಥದ್ದೊಂದು ಸಂಕಟದ ಸಂದರ್ಭದಲ್ಲಿ ಅಮೆರಿಕ, ಪಾಕಿಸ್ತಾನ ಹಾಗೂ ಚೀನಾ ಜತೆಗಿನ ಸಂಬಂಧವನ್ನು ಪುನರ್‌ರೂಪಿಸುವಲ್ಲಿ ಮಿಶ್ರಾ ನಿರ್ಣಾಯಕ ಪಾತ್ರ ವಹಿಸಿದ್ದರು.

ಉತ್ತರ ಪ್ರದೇಶ ಮೂಲದ ಮಿಶ್ರಾ ಹುಟ್ಟಿದ್ದು 1928ರ ಸೆಪ್ಟೆಂಬರ್ 29ರಂದು ಮಧ್ಯಪ್ರದೇಶದಲ್ಲಿ. 1951ರಲ್ಲಿ ಭಾರತೀಯ ವಿದೇಶಾಂಗ ಸೇವೆಗೆ (ಐಎಫ್‌ಎಸ್)ಸೇರ್ಪಡೆ.
1962ರ ಚೀನಾ-ಭಾರತ ಯುದ್ಧದ ಬಳಿಕ ತಾತ್ಕಾಲಿಕವಾಗಿ ಬೀಜಿಂಗ್‌ನಲ್ಲಿ ಭಾರತದ ರಾಯಭಾರಿಯಾಗಿ ಕಾರ್ಯ ನಿರ್ವಹಿಸಿದ ಅವರು 1979ರ ಜೂನ್‌ನಿಂದ 1981ರ ಏಪ್ರಿಲ್‌ವರೆಗೆ ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿಯಾಗಿದ್ದರು. ಇಂಡೋನೇಷ್ಯಾದಲ್ಲಿಯೂ  ರಾಯಭಾರಿಯಾಗಿದ್ದರು.

ಐಎಫ್‌ಎಸ್ ಸೇರುವುದಕ್ಕೆ ಮುನ್ನ ಮಿಶ್ರಾ ಕೆಲಕಾಲ ರಾಜಕೀಯದಲ್ಲಿಯೂ ಸಕ್ರಿಯರಾಗಿದ್ದರು. 1991ರಲ್ಲಿ ಬಿಜೆಪಿ ಸೇರಿದ್ದ ಅವರು ಪಕ್ಷದ ವಿದೇಶಿ ನೀತಿ ಘಟಕದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ಹಾಗೆ ನೋಡಿದರೆ ಮಿಶ್ರಾ ಅವರಿಗೆ ರಾಜಕೀಯ ಹೊಸದೇನೂ ಆಗಿರಲಿಲ್ಲ. ತಂದೆ ದ್ವಾರಕಾ ಪ್ರಸಾದ್ ಮಿಶ್ರಾ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಕಟ್ಟಾ ಕಾಂಗ್ರೆಸ್ಸಿಗರಾಗಿದ್ದ ಅವರು ಗಾಂಧಿ ಕುಟುಂಬಕ್ಕೆ ಆಪ್ತರಾಗಿಯೂ ಗುರುತಿಸಿಕೊಂಡಿದ್ದರು. ಕೊನೆಗೆ ನಂಬಿದವರೇ ಅವರನ್ನು ಆಚೆ ಹಾಕಿದ್ದು ಬೇರೆ ಮಾತು.

ಇದನ್ನು ಮಿಶ್ರಾ ಅದೃಷ್ಟ ಎಂದಾದರೂ ಕರೆಯಬಹುದು, ಅವಕಾಶ ಎಂತಲೂ ಭಾವಿಸಬಹದು. ಅರೆ ಮನಸ್ಸಿನಿಂದಲೇ ರಾಜಕೀಯ ಪಡಸಾಲೆಯಲ್ಲಿ ಓಡಾಡಿಕೊಂಡಿದ್ದ ಅವರಿಗೆ ಏಕಾಏಕಿ ಅವಕಾಶಗಳ ಹೆಬ್ಬಾಗಿಲು ತೆರೆದುಕೊಂಡಿತು.
 
1998ರ ಮಾರ್ಚ್‌ನಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಿದ ಬಳಿಕ ಆಗಿನ ಪ್ರಧಾನಿ ವಾಜಪೇಯಿ ಅವರಿಗೆ ಪ್ರಧಾನ ಕಾರ್ಯದರ್ಶಿಯಾಗುವ ಯೋಗ ಒಲಿದು ಬಂತು. ವಾಜಪೇಯಿ ಅಧಿಕಾರಾವಧಿಯಲ್ಲಿ ವಿದೇಶಿ ನೀತಿಯ ಪ್ರೇರಕ ಶಕ್ತಿಯಾಗಿದ್ದರು. ಪ್ರಧಾನ ವಕ್ತಾರರಾಗಿದ್ದರು. ಪ್ರಧಾನಿ ಕಚೇರಿಯಲ್ಲಿ ಎಂದೂ ನೋಡಿರದಂಥ ಪ್ರಭಾವಶಾಲಿ ಪ್ರಧಾನ ಕಾರ್ಯದರ್ಶಿಯಾಗಿ ಜನಪ್ರಿಯರಾಗಿದ್ದರು.

90ರ ದಶಕದ ಆರಂಭದಲ್ಲಿ ಭಾರತವು ರಾಷ್ಟ್ರೀಯ ಭದ್ರತಾ ಮಂಡಳಿ (ಎನ್‌ಎಸ್‌ಸಿ) ಸ್ಥಾಪಿಸಲು ಪ್ರಯತ್ನಿಸಿತ್ತು. ಕೊನೆಗೂ ಅದು ಅಸ್ತಿತ್ವಕ್ಕೆ ಬಂದದ್ದು 1998ರಲ್ಲಿ; ವಾಜಪೇಯಿ ಆಡಳಿತದಲ್ಲಿ. ಇದರ ಹುಟ್ಟಿನಲ್ಲಿಯೂ ಮಿಶ್ರಾ ಪರಿಶ್ರಮವಿದೆ. ದೇಶದ ಭದ್ರತೆ ಕೇವಲ ರಕ್ಷಣೆ, ಸೇನಾ ವ್ಯವಹಾರಗಳಿಗೆ  ಸೀಮಿತವಲ್ಲ ಎನ್ನುವುದು ಗೊತ್ತಾಗಿದ್ದೇ ಎನ್‌ಎಸ್‌ಸಿ ಸ್ಥಾಪನೆಯಿಂದ. ದಿ.ಕೆ.ಸುಬ್ರಹ್ಮಣ್ಯಂ ನೇತೃತ್ವದಲ್ಲಿ ರಚನೆಯಾದ ಮೊದಲ ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿ (ಎನ್‌ಎಸ್‌ಎಬಿ) ದೇಶದ ಪರಮಾಣು ಕರಡು ನೀತಿ ತಯಾರಿಸಿತು. ಎನ್‌ಎಸ್‌ಎಬಿ ಶಿಫಾರಸುಗಳ ಜಾರಿಗೆ ಶ್ರಮಿಸಿದ ಮಿಶ್ರಾ ಅವರಿಗೆ ತಾವಿಟ್ಟ ಹೆಜ್ಜೆಗಳ ಕುರಿತು ಸ್ಪಷ್ಟತೆ ಇತ್ತು.

ಕಾರ್ಗಿಲ್ ಪುನರ್‌ಪರಿಶೀಲನಾ ಸಮಿತಿಯಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದರು. ರಾಷ್ಟ್ರೀಯ ಮಾಹಿತಿ ಮಂಡಳಿ, ತಾಂತ್ರಿಕ ಸಂಶೋಧನಾ ಸಂಸ್ಥೆ (ಎನ್‌ಟಿಆರ್‌ಒ), ರಕ್ಷಣಾ ಬೇಹುಗಾರಿಕೆ ಸಂಸ್ಥೆ (ಡಿಐಎ), ಸಮಗ್ರ ರಕ್ಷಣಾ ಸಿಬ್ಬಂದಿ (ಐಡಿಎಸ್)ಹಾಗೂ ಕಂಪ್ಯೂಟರ್ ತುರ್ತು ಪ್ರತಿಕ್ರಿಯಾ ತಂಡ ( ಸಿಇಆರ್‌ಟಿ)ಸೇರಿದಂತೆ  ಮಿಶ್ರಾ ಸಾರಥ್ಯದಲ್ಲಿ ಹಲವಾರು ಸಂಸ್ಥೆಗಳು ಜನ್ಮತಳೆದವು. ಬೇಹುಗಾರಿಕಾ ಸಂಸ್ಥೆಗಳು ಹಾಗೂ ಅರೆ ಸೇನಾಪಡೆಗಳಲ್ಲಿ ಮಹತ್ವದ ಸುಧಾರಣೆಗಳಾದವು. ಆಡಳಿತದಲ್ಲಿ ಸೂಕ್ಷ್ಮ ದೃಷ್ಟಿ ಹಾಗೂ ಪ್ರಧಾನಿಗೆ ಆಪ್ತರಾಗಿದ್ದರ ಫಲವಾಗಿ ಈ ಕೆಲಸಗಳೆಲ್ಲ ಹೂ ಎತ್ತಿದಷ್ಟು ಸಲೀಸಾಯಿತು.

ದೇಶದ ಭದ್ರತಾ ಕಾರ್ಯನೀತಿಯ ಮಹತ್ವದ ಭಾಗವಾದ ಅಣ್ವಸ್ತ್ರ ಪರೀಕ್ಷೆ ಹಾಗೂ ಅಳವಡಿಕೆಯ ಮೇಲ್ವಿಚಾರಣೆ ಹೊತ್ತಿದ್ದ ಮಿಶ್ರಾ, ಅಮೆರಿಕ, ರಷ್ಯಾ, ಯೂರೋಪ್, ಮಧ್ಯ ಏಷ್ಯಾದ ಅನೇಕ ಮುಖಂಡರ ಜತೆ ವೈಯಕ್ತಿಕ ಒಡನಾಟ ಇಟ್ಟುಕೊಂಡಿದ್ದರು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ಸಂಪರ್ಕ ಸಾಧಿಸುವಲ್ಲಿ ಅಧಿಕಾರವನ್ನು ಸಮರ್ಥವಾಗಿ ಬಳಸಿಕೊಂಡ ವ್ಯಕ್ತಿ ಬಹುಶಃ ಇನ್ನೊಬ್ಬರು ಇರಲಿಕ್ಕಿಲ್ಲ.

ಮಿಶ್ರಾ ಅವರನ್ನು ವಿವಾದಗಳೂ ಅಂಟಿಕೊಂಡಿದ್ದವು. ಭದ್ರತಾ ಸಲಹೆಗಾರ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಏಕಕಾಲದಲ್ಲಿ ಎರಡು ಜವಾಬ್ದಾರಿಗಳನ್ನು ಹೊತ್ತಿದ್ದಕ್ಕೆ ಆಕ್ಷೇಪಗಳು ವ್ಯಕ್ತವಾಗಿದ್ದವು. ಕಂದಹಾರ್ ವಿಮಾನ ಅಪಹರಣ ಪ್ರಕರಣವನ್ನು ಸರಿಯಾಗಿ ನಿರ್ವಹಿಸಲಿಲ್ಲವೆಂಬ ಟೀಕೆಗಳೂ ಕೇಳಿ ಬಂದಿದ್ದವು.

ಭಾರತ-ಅಮೆರಿಕ ನಾಗರಿಕ ಪರಮಾಣು ಸಹಕಾರ ಒಪ್ಪಂದಕ್ಕೆ ಆರಂಭದಲ್ಲಿ ಮಿಶ್ರಾ ವಿರೋಧ ವ್ಯಕ್ತಪಡಿಸಿದ್ದರು. ಆಗ ಸ್ವತಃ ಮನಮೋಹನ್ ಸಿಂಗ್ ಅವರೇ ಮಿಶ್ರಾ ಜತೆ ಸಮಾಲೋಚನೆ ನಡೆಸಿ ಆತಂಕ ದೂರಮಾಡಿದರು. ನಂತರ ಮಿಶ್ರಾಪಟ್ಟು ಸಡಿಲಿಸಿದರು. ಇದಕ್ಕಾಗಿ ಅವರು ಬಿಜೆಪಿಯಿಂದ ಟೀಕೆಗಳನ್ನೂ ಕೇಳಬೇಕಾಯಿತು.

`ನಂಬಿಕೆಗೆ ದ್ರೋಹ ಮಾಡಬಾರದು. ಸ್ವಹಿತಕ್ಕಾಗಿ ಒಂದೊಂದು ದೇಶದಲ್ಲಿ ಒಂದೊಂದು ಹೇಳಿಕೆ ನೀಡಬಾರದು. ಯಾವತ್ತಿದ್ದರೂ ಸತ್ಯ ಬಹಿರಂಗವಾಗಲೇಬೇಕು. ದೇಶದ ಹಿತಾಸಕ್ತಿಗೆ ಬದ್ಧರಾಗಿ ಕೆಲಸ ಮಾಡಿ~ -ಇದು ಸಹೋದ್ಯೋಗಿಗಳಿಗೆ ಅವರು ಆಗಾಗ ಹೇಳುತ್ತಿದ್ದ ಬುದ್ಧಿಮಾತು.
 
ನಿವೃತ್ತಿಯ ಬಳಿಕವೂ ಅವರಲ್ಲಿ ಕರ್ತವ್ಯ ಪ್ರಜ್ಞೆ  ಕಡಿಮೆ ಆಗಿರಲಿಲ್ಲ. `ಭದ್ರತಾ ಸಲಹೆ ವ್ಯವಸ್ಥೆಯನ್ನು ಪುನರ್‌ರೂಪಿಸಬೇಕು~ ಎಂದು ಹೇಳುತ್ತಲೇ ಇದ್ದರು. ಯುವ ಸಂಶೋಧಕರೊಂದಿಗೆ ಅನುಭವಗಳನ್ನು ಹಂಚಿಕೊಳ್ಳುತ್ತ ಅವರಿಗೆ ಒತ್ತಾಸೆಯಾಗಿ ನಿಲ್ಲುತ್ತಿದ್ದರು. ರಾಷ್ಟ್ರೀಯ ಭದ್ರತೆಯಲ್ಲಿನ ಅನನ್ಯ ಸಾಧನೆಗಾಗಿ 2011ರಲ್ಲಿ ಮಿಶ್ರಾ ಅವರನ್ನು ಪದ್ಮವಿಭೂಷಣ ಅರಸಿ ಬಂದಿದೆ. ಅವರ ಪತ್ನಿ ಪುಷ್ಪಾ. ಮಕ್ಕಳು ರಾಕೇಶ್ ಹಾಗೂ ಜ್ಯೋತ್ಸ್ನಾ.

ಉತ್ತರ ಭಾರತದಲ್ಲಿ ಕನ್ಯಾಕುಬ್ಜ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರದ್ದೊಂದು ಗುಣವಿಶೇಷಣವಿದೆ. ಅವರದ್ದು ಕಾತ್ಯಾಯನ ಗೋತ್ರ. ಕ್ಷತ್ರಿಯನಾಗಿದ್ದ ವಿಶ್ವಾಮಿತ್ರ ಬ್ರಾಹ್ಮಣನಾದನಲ್ಲ; ಅವನು ಆ ಗೋತ್ರದ ಮೂಲಪುರುಷ. ಮಿಶ್ರಾ ಕೂಡ ಅದೇ ಗೋತ್ರದವರು.
 
ಶಕ್ತಿದೇವತೆಯ ಆರಾಧಕರಾದ ಈ ಗೋತ್ರದವರು ಮದುವೆಯ ಸಂದರ್ಭದಲ್ಲಿ ಆಡಿನ ಮಾಂಸವನ್ನು ಗಾರ್ಗಿದೇವಿಯ ಪ್ರಸಾದ ಎಂದು ಸ್ವೀಕರಿಸುತ್ತಾರೆ. ಹಾಗಾಗಿ ಕ್ಷತ್ರಿಯ ಸಹಜವಾದ ನೋಟ ಈ ಗೋತ್ರದವರಲ್ಲಿ ಇದ್ದೇ ಇರುತ್ತದೆ ಎಂಬ ಮಾತಿದೆ. ಅದಕ್ಕೇ ಇರಬೇಕು; ಮಿಶ್ರಾ ಹಾಗಿದ್ದರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT