ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ವ್ಯಕ್ತಿತ್ವ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅಗಾಧ'

Last Updated 6 ಸೆಪ್ಟೆಂಬರ್ 2013, 6:08 IST
ಅಕ್ಷರ ಗಾತ್ರ

ಧಾರವಾಡ: ಜಿಲ್ಲಾ ಪಂಚಾಯಿತಿ, ತಾಲ್ಲೂಕಾ ಪಂಚಾಯಿತಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ (ಧಾರವಾಡ ಗ್ರಾಮೀಣ)ದ ವತಿಯಿಂದ ಗುರುವಾರ ಇಲ್ಲಿನ ನೌಕರರ ಭವನದಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ವಿನಯ ಕುಲಕರ್ಣಿ, `ಪ್ರಜ್ಞಾವಂತ ನಾಗರಿಕರನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅಗಾಧವಾಗಿದೆ. ಎಳೆ ಮನಸ್ಸಿನಲ್ಲಿ ಜ್ಞಾನದ ಬೀಜ ಬಿತ್ತಿ ಅದಕ್ಕೆ ಪೋಷಣೆ ಮಾಡುವ ಜ್ಞಾನದ ಮಂಟಪ ಕಟ್ಟುವ ಕಾಯಕಯೋಗಿಗಳು ಶಿಕ್ಷಕರು. ಅಕ್ಷರ ಜ್ಞಾನ ನೀಡಿ, ಬದುಕು ರೂಪಿಸುವ ಸಂಸ್ಕಾರವನ್ನೂ ನೀಡುವ ಶಿಕ್ಷಕರ ಕಾಯಕ ಅನನ್ಯವಾದದು. ಅವರಿಂದಲೇ ಗ್ರಾಮಗಳು ಅಭಿವೃದ್ಧಿ ಹೊಂದಿ ದೇಶ ಉನ್ನತಿಯತ್ತ ಸಾಗಲು ಸಾಧ್ಯ. ಸಮಾಜದಲ್ಲಿ ಏನಾದರೂ ಬದಲಾವಣೆ ಆಗಬೇಕೆಂದರೆ ಅದು ಶಿಕ್ಷಕರಿಂದ ಮಾತ್ರ ಸಾಧ್ಯ. ಶಿಕ್ಷಕರೇ ಉತ್ತಮ ಸಮಾಜ ನಿರ್ಮಾಣಗೊಳಿಸುವ ರೂವಾರಿಗಳಾಗಿದ್ದಾರೆ' ಎಂದರು.

ಜಿ.ಪಂ.ಸದಸ್ಯೆ ಪ್ರೇಮಾ ಕೋಮಾರದೇಸಾಯಿ, ತಾ.ಪಂ.ಅಧ್ಯಕ್ಷೆ ಸುಮಂಗಲಾ ಕೌದೆಣ್ಣವರ, ಉಪಾಧ್ಯಕ್ಷ ಈರಪ್ಪ ಕರಲಿಂಗಣ್ಣವರ,
ತಾ.ಪಂ.ಸದಸ್ಯರಾದ ದಶರಥರಾವ್ ದೇಸಾಯಿ, ನೀಲವ್ವ ಏಳಲ್ಲಿ, ಶರೀಫಾ ನಾಯ್ಕರ್, ಸುಮಿತ್ರಾಬಾಯಿ ಗೋಸಲ, ಮಹಾದೇವಿ ಪಾಟೀಲ, ನೀಲವ್ವ ತರಗಾರ, ಮಂಜುಳಾ ಪವಾರ, ರಾಮಣ್ಣ ಘಾಟಿನ ಇದ್ದರು. ಬಿ.ಗಂಗಾಧರ ಸ್ವಾಗತಿಸಿದರು.

`ಆದರ್ಶ ವ್ಯಕ್ತಿತ್ವದವರಾಗಿರಲಿ'
`ನಡೆ ನುಡಿಯಲ್ಲಿ ಒಂದೆಯಾಗಿರುವುದು ಗುರುವಿನ ಆದ್ಯ ಕರ್ತವ್ಯವಾಗಿದೆ. ಗುರು ಆದವನು ವೃತ್ತಿಯಲ್ಲಿ, ವ್ಯಕ್ತಿತ್ವದಲ್ಲಿ ಆದರ್ಶಗಳನ್ನು ತುಂಬಿಕೊಂಡವನಾಗಿರಬೇಕು' ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಇಲ್ಲಿಯ ಜನತಾ ಶಿಕ್ಷಣ ಸಮಿತಿಯು ಗುರುವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
`ಇಂದು ಸಾಕಷ್ಟು ಅವಕಾಶಗಳು ನಿರ್ಮಾಣವಾಗಿವೆ, ಸ್ವಾತಂತ್ರ್ಯ ಪೂರ್ವದಲ್ಲಿದ್ದ ಆದರ್ಶಗಳು ಇಂದು ಮಾಯವಾಗಿವೆ. ಹಿಂದೆ ಆಸಕ್ತಿ ಇತ್ತು ಅವಕಾಶಗಳಿರಲಿಲ್ಲ. ಇಂದು ಅವಕಾಶಗಳಿವೆ ಆದರೆ ಆಸಕ್ತಿಯನ್ನು ಕಳೆದುಕೊಂಡಿದ್ದೇವೆ' ಎಂದು ವಿಷಾದಿಸಿದರು.

ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆ ಮಾತನಾಡಿ, `ಒಳ್ಳೆಯ ಶಿಕ್ಷಕ ವಿದ್ಯಾರ್ಥಿಗಳನ್ನು ಉತ್ತಮವಾಗಿ ಬೆಳೆಸಬಲ್ಲ, ಇಂದಿನ ಶಿಕ್ಷಕರು ವಿದ್ಯಾರ್ಥಿಗಳ ಬೆಳವಣಿಗೆಯನ್ನು ನಿರೀಕ್ಷಿಸಬೇಕಾದ ಅಗತ್ಯವಿದೆ' ಎಂದರು.

ಪ್ರೊ.ಅಬ್ದುಲ್ ಕರೀಂ ಅವರು ಡಾ.ರಾಧಾಕೃಷ್ಣನ್‌ರ ವ್ಯಕ್ತಿತ್ವವನ್ನು ಕುರಿತು ಮಾತನಾಡಿದರು. ಜೆಎಸ್‌ಎಸ್ ಸಂಸ್ಥೆಯ ಹಣಕಾಸು ಅಧಿಕಾರಿ ಡಾ.ಅಜಿತ ಪ್ರಸಾದ ಇದ್ದರು.

ಡಾ.ಅಜಿತ ಪ್ರಸಾದ ಸ್ವಾಗತಿಸಿದರು, ಡಾ.ಜಿನದತ್ತ ಹಡಗಲಿ ನಿರೂಪಿಸಿದರು, ಡಾ.ವೀಣಾ ಟೊಣಪಿ ವಂದಿಸಿದರು.

`ಶಿಕ್ಷಕರ ಪಾತ್ರ ಮಹತ್ವದ್ದು'
`ಇಂದಿನ ವಿದ್ಯಾರ್ಥಿಗಳನ್ನು ದೇಶದ ಬೆನ್ನೆಲುಬಾಗಿ ಪರಿವರ್ತನೆ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು' ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ವಿಜಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ಪ್ರೊ.ಕೆ.ಜಿ.ಕುಂದಣಗಾರ ಅಭಿಮಾನಿ ಸಂಘ ಹಾಗೂ ಬಂಗಾರ ಬಳಗವು ಗುರುವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಒಂದು ಕಲ್ಲನ್ನು ಕೆತ್ತಿ ಮೂರ್ತಿ ಮಾಡುವಂಥ ಕಲೆ ಕೇವಲ ಗುರುವಿಗೆ ಮಾತ್ರ ಇದೆ. ಅಂಥ ಗುರುವೇ ಶಿಕ್ಷಕರು. ಶಿಕ್ಷಕರು ತಮ್ಮ ಚಾತುರ್ಯತೆಯಿಂದ ವಿದ್ಯಾರ್ಥಿಗಳಿಗೆ ದಿನ ನಿತ್ಯದಲ್ಲಿ ವಿದ್ಯಾಭ್ಯಾಸ ಜೊತೆಗೆ ಸಮಾಜದಲ್ಲಿ ಒಳ್ಳೆಯ ಚಾರಿತ್ರ್ಯವನ್ನು ಕಲಿಸಿ ಒಳ್ಳೆಯ ನಾಗರಿಕರನ್ನಾಗಿ ಮಾಡಲು ಶಿಕ್ಷಕರ ವೃಂದವೇ ಕಾರಣ' ಎಂದರು.

ಇದೇ ಸಂದರ್ಭದಲ್ಲಿ ಪಾಲಿಕೆ ಸದಸ್ಯರು ಹಾಗೂ ಶಿಕ್ಷಕರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಪಾಲಿಕೆ ಸದಸ್ಯರು ಮತ್ತು ಶಿಕ್ಷಕರು ಮಾತನಾಡಿದರು. ಸಿದ್ದಪ್ಪ ಕಿಲ್ಲೇದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿಯರಾದ ಭಾಗ್ಯಜ್ಯೋತಿ ಲೋನಿಮಠ, ಬಿಳಗಿ, ಶೋಭಾ ಗಂಗಣ್ಣವರ ಸಾಹಿತಿ ಎಂ.ಸುದರ್ಶನರಾಜ ಪಾಲಿಕೆ ಸದಸ್ಯರಾದ ಸಂಜಯ ಕಪಟಕರ, ವಿಜಯಾನಂದ ಶೆಟ್ಟಿ, ರಾಜು ಅಂಬೋರೆ, ಪೂರ್ಣ ಪಾಟೀಲ, ಶೈಲಾ ಕಾಮರಡ್ಡಿ, ಸಂತೋಷ ನಾಗಮ್ಮನವರ ಮತ್ತಿತರರು ಇದ್ದರು. ಮೋಹನ ರಾಮದುರ್ಗ ಸ್ವಾಗತಿಸಿದರು. ಶಿವಪ್ಪ ದಾನಪ್ಪನವರ ನಿರೂಪಿಸಿದರು. ಲಾರೆನ್ ಝಳಕಿ ವಂದಿಸಿದರು.

`ಗುರುವಿಗೆ ದೊಡ್ಡ ಸ್ಥಾನವಿದೆ'
`ನಾಡಿನಲ್ಲಿ ದೇವರಿಗಿಂತಲೂ ಗುರುವಿಗೆ ಉನ್ನತ ಸ್ಥಾನವಿದೆ. ಓರ್ವ ಶಿಕ್ಷಕರು ದೇಶದ ಅತ್ಯನ್ನತ ಸ್ಥಾನಕ್ಕೇರಿರುವುದಕ್ಕೆ ಡಾ.ರಾಧಾಕೃಷ್ಣನ್ ಉದಾಹರಣೆಯಾಗಿದ್ದಾರೆ. ಆದ್ದರಿಂದ ಸಮಾಜದ ಒಳತಿಗಾಗಿ ಶಿಕ್ಷಕರು ಸದಾ ಪರಿಶ್ರಮಿಸಿ ದೇಶ ಕಟ್ಟುವ ಕಾರ್ಯದಲ್ಲಿ ಭಾಗಿಯಾಗಬೇಕು' ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು
.
ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಗುರುವಾರ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, `ಅತ್ಯಂತ ಉತ್ತಮ ಶಿಕ್ಷಕರು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಅಲ್ಲದೇ ಹೃದಯದಲ್ಲಿ ಸ್ಥಾನ ಗಳಿಸುತ್ತಾರೆ. ದೇಶ, ಸಮಾಜ ಕಟ್ಟುವ ಕೆಲಸ ಬರೀ ರಾಜಕಾರಣಿ ಅಥವಾ ಜನಪ್ರತಿನಿಧಿಗಳ ಗುತ್ತಿಗೆಯಲ್ಲ. ಪ್ರತಿಯೊಬ್ಬರು ಅದರಲ್ಲೂ ಶಿಕ್ಷಕರು ತಮ್ಮ ವೃತ್ತಿಯನ್ನು ಜವಾಬ್ದಾರಿಯಿಂದ ನಿರ್ವಹಿಸುವ ಮೂಲಕ ಆ ಕಾರ್ಯಕ್ಕೆ ಹೆಚ್ಚಿನ ಬಲ ನೀಡಬೇಕು' ಎಂದರು.

ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ಮಾತನಾಡಿ, `ರಾಧಾಕೃಷ್ಣನ್ ಅವರ ಜೀವನಾದರ್ಶಗಳ ಪಾಲನೆ ಮಾಡದಿದ್ದರೆ ದಿನಾಚರಣೆಗಳಿಗೆ ಅರ್ಥವಿರುವುದಿಲ್ಲ ಎಂಬ ಕಟುಸತ್ಯವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ತೆರೆಮರೆಯಲ್ಲಿ ಕಾರ್ಯನಿರ್ವಹಿಸುವ ತ್ಯಾಗಮಯಿ ಶಿಕ್ಷಕರುಗಳಿಂದಾಗಿ ಇಂದಿಗೂ ಶಿಕ್ಷಣ ವೃತ್ತಿಯ ಗೌರವ ಉಳಿದಿದೆ. ಹಿಂದೆಂದಿಗಿಂತಲೂ ಇಂದು ಪಾಠ ಪ್ರವಚನ ಕಠಿಣವಾಗಿದೆ. ಅಲ್ಲದೆ ಅತ್ತ ಬಹುತೇಕ ಪಾಲಕರು ಕೂಡಾ ದುಡ್ಡು ಕೊಟ್ಟರೆ ಎಲ್ಲಿಯಾದರೂ ಸೀಟು ದೊರಕುತ್ತದೆ ಎನ್ನುವ ಭ್ರಮೆಯಿಂದ ಇಂದಿನ ಶಿಕ್ಷಣ ವ್ಯವಸ್ಥೆ ಕುರಿತು ಬರೀ ದೂರುವುದನ್ನೇ ರೂಢಿಮಾಡಿಕೊಂಡಿರುವುದನ್ನು ನಾವು ಕಾಣುತ್ತೇವೆ' ಎಂದು ವಿಷಾದಿಸಿದರು.

ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಚ್.ಬಿ.ವಾಲೀಕಾರ ಮಾತನಾಡಿ, `ಇಂದಿನ ಶಿಕ್ಷಕರು ಕೇವಲ ಒಂದೇ ವಿಷಯವನ್ನು ಓದದೇ ಇನ್ನಿತರೇ ವಿಷಯಗಳ ಬಗ್ಗೆಯೂ ಅಭ್ಯಸಿಸಬೇಕು' ಎಂದು ಸಲಹೆ ನೀಡಿದರು.

ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಕಳೆದ ಸಾಲಿನಲ್ಲಿ ರಾಷ್ಟ್ರಪ್ರಶಸ್ತಿ ಪಡೆದ ಶಿಕ್ಷಕ ಡಾ.ರಾಮು ಮೂಲಗಿ, ಮಲ್ಲಮ್ಮ ಮುತ್ತಗಿ ಅವರನ್ನು ಹಾಗೂ ನಿವೃತ್ತ ಶಿಕ್ಷಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಪಿ.ಪಿ.ಬಾರಕೇರ, ಜಗುಚಂದ್ರ ಕೂಡ್ಲ, ಗುರುಸಿದ್ದಪ್ಪ ಗುಂಜಳ, ಶಿವನಗೌಡ ಪಾಟೀಲ, ಮಾರುತಿ ಭಜಂತ್ರಿ, ಅಶೋಕ ಬಿಸಿಕೊಟ್ಟಿ, ವೀರಪ್ಪ ಹಾದಿಮನಿ, ಶ್ಯಾಮ ಶೇರಖಾನೆ, ರೇಣುಕಾ ಭೋಸಲೆ, ಅನುಸೂಯಾ ಯಕ್ಕುಂಡಿ, ಮಂಜುಳಾ ಸಂಗಣ್ಣವರ ಹಾಗೂ ಪಕ್ಕೀರಗೌಡ ಹಿರೇಗೌಡರ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಾಸಕ ಎನ್.ಎಚ್.ಕೋನೆರಡ್ಡಿ ಜಿ.ಪಂ.ಅಧ್ಯಕ್ಷೆ ರತ್ನವ್ವ ಕಳ್ಳಿಮನಿ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಜಿ.ಬಾಲಣ್ಣವರ ಮತ್ತಿತರರು ಇದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಬಿ.ಕೆ.ಎಸ್.ವರ್ಧನ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT