ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಕ್ತಿತ್ವ ವಿಕಸನಕ್ಕೆ ಶಿಖಾಮಣಿ

Last Updated 25 ಜನವರಿ 2011, 11:30 IST
ಅಕ್ಷರ ಗಾತ್ರ

ಬಳ್ಳಾರಿ: ‘ಸಿದ್ಧಾಂತ ಶಿಖಾಮಣಿ ಗ್ರಂಥವು ದಾರ್ಶನಿಕ ಕ್ಷೇತ್ರದ ಮುಕುಟಮಣಿಯಾಗಿದ್ದು. ಮನೋ ವಿಕಾಸದ ನೂರೊಂದು ಮೆಟ್ಟಿಲನ್ನು ಬೋಧಿಸುತ್ತದೆ’ ಎಂದು ಕಾಶಿ ಪೀಠದ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು. ನಗರದ ಎಸ್.ಜಿ. ಪದವಿಪೂರ್ವ ಕಾಲೇಜಿನಲ್ಲಿ ಭಾನುವಾರ ರಾತ್ರಿ ಏರ್ಪಡಿಸಲಾಗಿದ್ದ ಸಿದ್ಧಲಿಂಗ ಭಗವತ್ಪಾದರ ಲಿಂಗ ಬೆಳಗಿನ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಅಶೀರ್ವಚನ ನೀಡಿದರು.

‘ಆಧ್ಯಾತ್ಮಿಕ ಮಾರ್ಗದಲ್ಲಿ ಮುನ್ನಡೆಯಬೇಕಾದರೆ ಮನಸ್ಸಿನ ಪರಿಶುದ್ಧತೆಯೇ ಮೊದಲ ಹೆಜ್ಜೆ. ಈ ಗ್ರಂಥದ ಮೊದಲನೇ ಪಿಂಡಸ್ಥಲದಲ್ಲಿ ಮನಸ್ಸಿನ ಪರಿಶುದ್ಧಿಯ ಅನೇಕ ವಿಚಾರಗಳು ಪ್ರತಿಪಾದಿತವಾಗಿವೆ’ ಎಂದರು. ‘ಮನಸ್ಸಿನ ಪರಿಶುದ್ಧಿಯ ನಂತರ ವಿವೇಕ, ವೈರಾಗ್ಯಾದಿ ಸದ್ಗುಣಗಳು ಪ್ರಸ್ತಾಪವಾದಾಗ ಗುರುವಿನ ಕಾರುಣ್ಯ ರೂಪವಾದ ದೀಕ್ಷಾ ಸಂಸ್ಕಾರವನ್ನು ಸಾಧಕನು ಪಡೆದುಕೊಳ್ಳುತ್ತಾನೆ’ ಎಂದು ಅವರು ತಿಳಿಸಿದರು.

‘ದೀಕ್ಷೆಯಲ್ಲಿ ಪ್ರಸ್ತಾಪವಾದ ಇಷ್ಠಲಿಂಗ ಅನುಷ್ಠಾನದಿಂದ ಸಾಧಕನು ಅಂತರ್ಮುಖಿಯಾಗಿ ಕ್ರಮೇಣ ಪ್ರಾಣಲಿಂಗ ಮತ್ತು ಭಾವಲಿಂಗಗಳ ಅನುಸಂಧಾನದಿಂದ ಜೀವಾತ್ಮನು ಪರಶಿವನ ಸ್ವರೂಪವನ್ನು ಪಡೆದು ಕೊಳ್ಳುತ್ತಾನೆ. ಹೀಗೆ ಸಿದ್ಧಾಂತ ಶಿಖಾಮಣಿಯಲ್ಲಿ ಮನೋವಿಕಾಸದ ಮಾರ್ಗವು ಭೋದಿತವಾಗಿದೆ’ ಎಂದು ಅವರು ತಿಳಿಸಿದರು.

‘ಮನುಷ್ಯನ ಅಧಃಪತನ ಮತ್ತು ವಿಕಾಸಕ್ಕೆ ಮನವೇ ಕಾರಣವಾಗಿರುತ್ತದೆ. ಸುಸಂಸ್ಕೃತವಾದ ಮನಸ್ಸು ವಿಕಾಸ ಹೊಂದುವುದು. ಆದರೆ, ಅಸಂಸ್ಕೃತವಾದ ಮನಸ್ಸು ಅಧಃಪತನಕ್ಕೆ ಕಾರಣವಾಗುವುದು. ಸಿದ್ಧಾಂತ ಶಿಖಾಮಣಿಯು ನೂರೊಂದು ಸ್ಥಲದಲ್ಲಿ ಉತ್ತಮ ಸಂಸ್ಕಾರ ಬೋಧಿಸುವುದರಿಂದ ಇದು ವ್ಯಕ್ತಿತ್ವ ವಿಕಾಸದ ಮಹಾನ್ ಗ್ರಂಥ ಎಂಬ ವಿಚಾರವನ್ನು ಪ್ರಸ್ತಾಪಿಸಿದೆ’ ಎಂದು ಅವರು ತಿಳಿಸಿದರು.

ಶ್ರೀಗಳು ಸಿದ್ಧಪಡಿಸಿದ ಪಾರಾಯಣ ಗ್ರಂಥವನ್ನು ಆನೆಯ ಮೇಲಿನ ಅಂಬಾರಿ ಇರಿಸಿ ಮೆರವಣಿಗೆ ಮಾಡಲಾಯಿತು. ನಂತರ ಗಣ್ಯರ ಮಧ್ಯೆ ಲೋಕಾರ್ಪಣೆ ಮಾಡಲಾಯಿತು. ವಿಧಾನ ಪರಿಷತ್ ಸದಸ್ಯ ಎನ್. ತಿಪ್ಪಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಾಮದೇವ ಮಹಾಂತ ಶಿವಾಚಾರ್ಯ, ಎಚ್.ಎಂ. ವೀರಭದ್ರ ಶರ್ಮ, ಎಚ್.ಎಂ. ಗುರುಸಿದ್ಧಸ್ವಾಮಿ, ಬಿಚ್ಚಾಲಿ ವೀರಭದ್ರ ಶಿವಾಚಾರ್ಯ, ವಿವೀ ಸಂಘದ ಅಧ್ಯಕ್ಷ ಸಂಗನಕಲ್ ಇಂದುಶೇಖರ್, ಅಲ್ಲಂ ಗುರುಬಸವರಾಜ, ಉಡೇದ ಬಸವರಾಜ, ಟಿ.ಎಂ. ಚಂದ್ರಶೇಖರಯ್ಯ, ಎಚ್.ಕೆ. ಸಿದ್ಧಯ್ಯ ಸ್ವಾಮಿ, ಅಕ್ಕಿ ಶಿವಕುಮಾರ, ಮಲ್ಲಿಕಾರ್ಜುನ ಸ್ವಾಮಿ, ಯೋಗಿರಾಜ, ಗೊಗ್ಗ ಶರಭಯ್ಯ, ಸಾಹುಕಾರ ಸತೀಶಬಾಬು, ಕೆ.ಎಂ. ಉಮಾಶಂಕರ, ಎಚ್.ಕೆ. ಗೌರಿಶಂಕರ, ಎಸ್.ಎಂ. ಭೀಮಲಿಂಗಯ್ಯ ಸ್ವಾಮಿ, ಕಾರ್ಯಕ್ರಮದ ಕಾರ್ಯಾಧ್ಯಕ್ಷ ಮಹಾಲಿಂಗಯ್ಯ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT